ಇರ್ದೆ: ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ, ಧಾರ್ಮಿಕ ಸಭೆ

0

  • ಸಂಸ್ಕಾರ-ಸಂಸ್ಕೃತಿಯ ಪಾಲನೆಯಲ್ಲಿ ತಾಯಿಯ ಹೊಣೆ ಮಹತ್ವದ್ದು – ಕವಿತಾ ಅಡೂರು
  • ಭಗವತ್ ಸಾಕ್ಷಾತ್ಕಾರಕ್ಕೆ ಧಾರ್ಮಿಕ ಶಿಕ್ಷಣ ಅಗತ್ಯ – ಡಾ| ವಿಜಯ ಸರಸ್ವತಿ

ಬೆಟ್ಟಂಪಾಡಿ: ಶ್ರೀ ವರಮಹಾಲಕ್ಷ್ಮಿ ವೃತ ಪೂಜಾ ಸಮಿತಿ ಬೆಟ್ಟಂಪಾಡಿ ವಲಯ, ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಇರ್ದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಕಾರದೊಂದಿಗೆ 14ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಆ. 5ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯಿತು.

ರಾಧಾಕೃಷ್ಣ ಭಟ್ ಕಕ್ಕೂರು ರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಧಾರ್ಮಿಕ ಸಭೆಯನ್ನು ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷೆ ಚೈತ್ರಾ ಪೇರಲ್ತಡ್ಕ ವಹಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ಪುತ್ತೂರು ನೆಹರುನಗರ ಸುದಾನ ವಸತಿಯುತ ಶಾಲೆಯ ಶಿಕ್ಷಕಿ ಕವಿತಾ ಅಡೂರುರವರು ಮಾತನಾಡಿ ‘ಧರ್ಮ ಉಳಿಯಬೇಕಾದರೆ ನಮ್ಮಲ್ಲಿ ಸಂಸ್ಕಾರ-ಸಂಸ್ಕೃತಿ ನಿಯಮಬದ್ದವಾಗಿ ಪಾಲನೆಯಾಗಬೇಕು. ನಮ್ಮಿಂದ ಮುಂದಿನ ಜನಾಂಗಕ್ಕೆ ಈ ಸಂಸ್ಕೃತಿಯನ್ನು ಯಥಾವತ್ತಾಗಿ ಪಾಲಿಸುವಲ್ಲಿ ತಾಯಂದಿರಾದ ನಮಗೆ ಮಹತ್ತರವಾದ ಜವಾಬ್ದಾರಿಯಿದೆ’ ಎಂದರು.

ಧಾರ್ಮಿಕ ಶಿಕ್ಷಣದ ಬಗ್ಗೆ ಮಾತನಾಡಿದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿಯವರು ಮಾತನಾಡಿ ‘ಭಗವಂತನಿಗೆ ಅರ್ಪಿಸುವ ಹೂವಿನ ದಾರದಂತೆ ನಾವು ದೇವರಲ್ಲಿ ಸಾಕ್ಷಾತ್ಕಾರಗೊಳ್ಳಬೇಕಾದರೆ ನಮ್ಮ ಆಚಾರ, ಆಚರಣೆಗಳು, ಸಂಸ್ಕಾರಯುತವಾದ ಜೀವನ, ಸದ್ಗುಣ ಸನ್ನಡತೆ ಅವಶ್ಯಕ. ಇದನ್ನು ಕಲಿಸುವುದೇ ಧಾರ್ಮಿಕ ಶಿಕ್ಷಣದ ಅಗತ್ಯತೆಯಾಗಿದೆ’ ಎಂದರು.

ಮುಖ್ಯ ಅತಿಥಿಗಳಾಗಿದ್ದ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಡಿ., ಹರಿಣಾಕ್ಷಿ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ವಿಠಲ ರೈ ಬೈಲಾಡಿ, ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಎನ್. ಉಪಸ್ಥಿತರಿದ್ದರು.
ಶ್ರೀ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಹರಿಪ್ರಕಾಶ್ ಬೈಲಾಡಿಯವರು ಸಂದರ್ಭೋಚಿತವಾಗಿ ಮಾತನಾಡಿದರು.

ಸುಜಾತ ಮತ್ತು ಭಾರತಿ ಪ್ರಾರ್ಥಿಸಿದರು. ಸಮಿತಿಯ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಎಸ್. ರೈ ಚೆಲ್ಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೇವಾ ಪ್ರತಿನಿಧಿ ಭಾರತೀ ಸ್ವಾಗತಿಸಿ, ಅಜ್ಜಿಕಲ್ಲು ಸೇವಾ ಪ್ರತಿನಿಧಿ ತ್ರಿವೇಣಿ ವಂದಿಸಿದರು. ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಲೀಲಾವತಿ, ಪ್ರಶೀತಾ, ಜಯಶ್ರೀ, ಲೀಲಾವತಿ ಡಿ., ಶೇಷಮ್ಮ, ಮಮತಾ, ಸರೋಜ ಅಜ್ಜಿಕಲ್ಲು, ಮಮತಾ, ಕೃಷ್ಣ, ದಾಮೋದರ ಪಾಟಾಳಿಯವರು ಅತಿಥಿಗಳನ್ನು ಗೌರವಿಸಿದರು.

ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಒಕ್ಕೂಟದ ಪದಾಽಕಾರಿಗಳು, ಸದಸ್ಯರು, ಮಾತೆಯರು, ಮಹನೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here