ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್.  ಸಂಪ್ಯ, ಉಪ್ಪಿನಂಗಡಿಯಲ್ಲಿ ಎಸ್.ಐ. ಆಗಿದ್ದ ರವಿ  ಖಡಕ್ ಅಧಿಕಾರಿ, ಸೈಬರ್ ಕ್ರೈಂ ಪತ್ತೆಗೆ ಎತ್ತಿದ ಕೈ

0

ವಿಶೇಷ ವರದಿ: ಸಿದ್ದಿಕ್ ನೀರಾಜೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಚೇರಿ ಹೊಂದಿರುವ ಸಂಪ್ಯ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಗ್ರಾಮಾಂತರ
ಪೊಲೀಸ್ ಇನ್ಸ್‌ಪೆಕ್ಟರ್ (ಸಿ.ಪಿ.ಐ.) ಆಗಿ ರವಿ ಬಿ.ಎಸ್. ಇವರಿಗೆ ವರ್ಗಾವಣೆ ಆದೇಶ ಆಗಿದೆ.

ಬಿ.ಎಸ್. ರವಿಯವರು ಪ್ರಸಕ್ತ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ರವಿಯವರು 2012 ಮಾರ್ಚ್ 5ರಂದು ಕಾರ್ಕಳ ಪೊಲೀಸ್ ಠಾಣೆಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ ಆಗಮಿಸಿ 2013 ಸೆಪ್ಟೆಂಬರ್ 11ರ ತನಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಬಳಿಕ ಸುಳ್ಯ, ಪುತ್ತೂರು ಗ್ರಾಮಾಂತರ (ಸಂಪ್ಯ) ಆ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ
ನಿರ್ವಹಿಸಿದ್ದು, ಅಲ್ಲಿಂದ ಇನ್ಸ್‌ಪೆಕ್ಟರ್ ಹುದ್ದೆಗೆ ಭಡ್ತಿ ಹೊಂದಿ ದ.ಕ. ಜಿಲ್ಲಾ ಪೊಲೀಸ್ ವಿಶೇಷ ಘಟಕದಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದರು.

ಖಡಕ್ ಅಧಿಕಾರಿ, ಸೈಬರ್ ಕ್ರೈಂ ಪತ್ತೆಗೆ ಎತ್ತಿದ ಕೈ:

ರವಿಯವರು ನಿಷ್ಟಾವಂತ, ಪ್ರಾಮಾಣಿಕ ಮತ್ತು ಖಡಕ್ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಸೈಬರ್ ಕ್ರೈಂ ಪತ್ತೆ ಕಾರ‍್ಯದಲ್ಲಿ ಹೆಚ್ಚು ಸಾಧನೆ ತೋರುವ ಮೂಲಕ ಈ ವಿಭಾಗದಲ್ಲಿ ಅವರದು ಎತ್ತಿದ ಕೈ ಎಂಬ ಹೆಗ್ಗಳಿಕೆಯೂ ಅವರಿಗಿದೆ. ನಕ್ಸಲ್ ತಂಡಗಳ ಜಾಡು ಪತ್ತೆಯಲ್ಲಿ ಪರಿಣತರಾಗಿರುವ ರವಿಯವರು ಕೆಲ ವರ್ಷಗಳ ಹಿಂದೆ ಉಪ್ಪಿನಂಗಡಿ, ಬೆಳ್ತಂಗಡಿ, ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ನಕ್ಸಲ್ ತಂಡ ಬೀಡುಬಿಟ್ಟಿದ್ದ ಸಂದರ್ಭಗಳಲ್ಲಿ ಅವರುಗಳ ಅಡಗುತಾಣವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗ್ಯಾಂಗ್ ರೇಪ್ ಪ್ರಕರಣ ಪತ್ತೆ ಕಾರ‍್ಯದಲ್ಲಿಯೂ ಭಾಗಿ:

ರವಿಯವರು ಉಪ್ಪಿನಂಗಡಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಮಣಿಪಾಲದಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕೇರಳ ಮೂಲದ ವಿದ್ಯಾರ್ಥಿನಿಯೋರ್ವಳ ಗ್ಯಾಂಗ್ ರೇಪ್ ನಡೆದಿದ್ದು, ಇದರ ಆರೋಪಿಗಳ ಪತ್ತೆ ಕಾರ‍್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ತಂಡದಲ್ಲಿದ್ದ ಇವರ ಸಾಧನೆ, ಪಾತ್ರ ವಿಶೇಷವಾಗಿತ್ತು. ಇವರ ಕರ್ತವ್ಯ ನಿಷ್ಠೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here