ಮಠಂತಬೆಟ್ಟು ಮಹಿಷಮರ್ದಿನಿ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಆಟಿದ ಐಸಿರ

0

ಪುತ್ತೂರು: ಮಠಂತಬೆಟ್ಟು ಮಹಿಷಮರ್ದಿನಿ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೋಡಿಂಬಾಡಿಯ ಮಠಂತಬೆಟ್ಟು ಪಾಲಿತ್ತಿಮಾರ್ ಗದ್ದೆಯಲ್ಲಿ ‘ಆಟಿದ ಐಸಿರ-ಕೆಸರ್ದ ಗೊಬ್ಬುಲು’ ಕಾರ್ಯಕ್ರಮ ಆ.7ರಂದು ನಡೆಯಿತು.
ಬೆಳಗ್ಗೆ ಶ್ರೀ ಮಹಿಷಮರ್ದಿನಿ ದೇವಾಲಯದಿಂದ ಜಿಲ್ಲೆಯ ಪ್ರತಿಷ್ಠಿತ ಕಂಬಳ ಓಟದ ಕೋಣಗಳ ಜೊತೆ ಮೆರವಣಿಗೆಯೊಂದಿಗೆ ಬಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿದರು‌. ಬಳಿಕ ಮಾತನಾಡಿದ ಅವರು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ, ತಿಳಿಸುವ ಕೆಲಸವನ್ನು ಅಶೋಕ್ ಕುಮಾರ್‌ ರೈ ಮತ್ತು ಅವರ ತಂಡ ಮಾಡುತ್ತಿದೆ. ಆಟಿ ತಿಂಗಳಿನ ಮಹತ್ವವನ್ನು ತಿಳಿಸುವುದರ ಜೊತೆಗೆ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗಳನ್ನು ಜೋಡಿಸಿಕೊಳ್ಳುವ ಮೂಲಕ ಮಾದರಿ ಕಾರ್ಯಕ್ರಮದ ಆಯೋಜನೆ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಷಮರ್ದಿನಿ ಸೇವಾ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾ‌ನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ ಊರಿನ ಎಲ್ಲರೂ ಒಂದುಗೂಡಿ ಸಂಭ್ರಮ ಪಡಬೇಕೆಂಬ ಕನಸು ನನಸಾಗಿದೆ. ಇದರ ಹಿಂದೆ ಊರಿನ ಹಲವರು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಇವರೆಲ್ಲರ ಪರಿಶ್ರಮದ ಫಲವಾಗಿ ಇಂದು ಕೆಸರು ಗದ್ದೆಯಲ್ಲಿ ಅಮೋಘ ಕಾರ್ಯಕ್ರಮವೊಂದು ಸಂಘಟನೆಗೊಂಡಿದೆ ಎಂದರು. ಮಹಿಷಮರ್ದಿನಿ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು, ಪ್ರಗತಿಪರ ಕೃಷಿಕ ಕೇಶವ ಭಂಡಾರಿ ಕೈಪ, ಬಿ.ಎಸ್.ಎಫ್ ನಿವೃತ್ತ ಯೋಧ ಪುಷ್ಪರಾಜ್ ಬಾರ್ತಿಕುಮೇರು ಹಾಗೂ ಕಾರ್ಯಕ್ರಮದ ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಯೋಧ ಪುಷ್ಪರಾಜ್ ಬಾರ್ತಿಕುಮೇರುರವರಿಗೆ ಸ್ವಾಗತ
ಬಿ.ಎಸ್.ಎಫ್.ನಲ್ಲಿ ಸತತ 20 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ಪುಷ್ಪರಾಜ್ ಬಾರ್ತಿಕುಮೇರುರವರನ್ನು ಮಠಂತಬೆಟ್ಟು ದೇವಾಲಯದ ದ್ವಾರದ ಬಳಿ ಸ್ವಾಗತಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಬ್ಯಾಂಡ್ ವಾದನಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತಂದು ಮಹಿಷಮರ್ದಿನಿ ದೇವಾಲಯದಲ್ಲಿ ಪೂಜೆಯ ಬಳಿಕ ದೇವರ ಸನ್ನಿಧಿಯಲ್ಲಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ
ಬನ್ನೂರು ರೈತ ಸೇವಾ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಿವೃತ್ತ ಬಿ.ಎಸ್.ಎಫ್. ಯೋಧ ಪುಷ್ಪರಾಜ್ ಬಾರ್ತಿಕುಮೇರು ಮತ್ತು ಕಂಬಳದ ಸಾಧಕ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿಯವರನ್ನು ಆಟಿದ ಐಸಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಂಬಳ ಕೂಟಗಳಲ್ಲಿ ಅನೇಕ ಪದಕಗಳನ್ನು ಗೆದ್ದಿರುವ ಕೇಶವ ಭಂಡಾರಿಯವರ ಮಾಲಕತ್ವದ ಕೋಣಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ವಿವಿಧ ಆಟೋಟ ಸ್ಪರ್ಧೆಗಳು
ಆಟಿದ ಐಸಿರ-ಕೆಸರ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳು ನಡೆಯಿತು. ಓಟ,ತ್ರೋಬಾಲ್,ವಾಲಿಬಾಲ್,ಹಗ್ಗಜಗ್ಗಾಟ,ಹಿಮ್ಮುಖ ಓಟ,ಮುಳಿಯ ನಿಧಿ ಶೋಧ,ಉಪ್ಪಿನ ಮೂಟೆ ಓಟ, ಹಾಳೆ ಎಳೆಯುವುದು, ತಪ್ಪಂಗಾಯಿ ಮುಂತಾದ ಕ್ರೀಡೆಗಳು ದಿನವಿಡೀ ಮಠಂತಬೆಟ್ಟು ಪಾಲಿತ್ತಿಮಾರ್ ಗದ್ದೆಯಲ್ಲಿ ಜರಗಿತು. ಸಂಜೆ ಶ್ರೀ ಮಹಿಷಮರ್ದಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಸಂಚಾಲಕರಾದ ಕುಮಾರನಾಥ ಪಲ್ಲತ್ತಾರು, ರಮೇಶ್ ನಾಯಕ್‌ ನಿಡ್ಯ, ರಾಜೀವ ಶೆಟ್ಟಿ ಕೇದಗೆ, ಯತೀಶ್ ಗೌಡ ಬಾರ್ತಿಕುಮೇರು, ಜಯಪ್ರಕಾಶ್ ಬದಿನಾರು, ರೇಣುಕಾ ಮುರಳೀಧರ ರೈ, ಶಿವಪ್ರಸಾದ್ ರೈ, ಗೀತಾ ಶಾಂತರಾಮ ಸಾಮಾನಿ, ದಾಮೋದರ ಶೆಟ್ಟಿ ಮಠಂತಬೆಟ್ಟು, ಯಮುನಾ ಡೆಕ್ಕಾಜೆ, ಯೋಗೀಶ್ ಸಾಮಾನಿ ಸಂಪಿಗೆದಡಿ ಮತ್ತು ಮಲ್ಲಿಕಾ ಎ. ಪೂಜಾರಿ ಕಾಂತಳಿಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.‌ ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

‘ಸುದ್ದಿ’ಯಲ್ಲಿ ನೇರಪ್ರಸಾರ
ಆಟಿದ ಐಸಿರ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆಯವರೆಗೆ ಸುದ್ದಿ ಯು ಟ್ಯೂಬ್ ಚಾನೆಲ್ ಮತ್ತು ಸುದ್ದಿ ಬಿಡುಗಡೆ ಫೇಸ್ಬುಕ್ ಪೇಜಿನಲ್ಲಿ ನೇರಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಿಸಿದರು.

LEAVE A REPLY

Please enter your comment!
Please enter your name here