ಉಪ್ಪಿನಂಗಡಿ: ತುಳು ಬಗ್ಗೆ ತುಚ್ಛ ಭಾವನೆ ಆರೋಪ : ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ್ದ ತುಳು ಆಚಾರ- ವಿಚಾರ, ಸಂಸ್ಕೃತಿಯ ಬಗೆಗಿನ ‘ತುಳುನಾಡ್‌ದ ಐಸಿರಿ’ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಚಾರ್ಯ ಶೇಖರ ಎಂ.ಬಿ. ಅವರು ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿ ಜೀವನಕ್ಕೆ ಉಪಯೋಗವಿಲ್ಲವೆಂಬ ದಾಟಿಯಲ್ಲಿ ಮಾತನಾಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ ಘಟನೆ ಆ.8ರಂದು ನಡೆಯಿತು.

ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆ.5 ಮತ್ತು 6ರಂದು ಕಾಲೇಜಿನಲ್ಲಿ ತುಳುನಾಡ ಐಸಿರಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಆಯೋಜಿಸಿದ್ದರು. ಅದರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಶೇಖರ ಎಂ.ಬಿ. ಅವರು, ಕಾರ್ಯಕ್ರಮಗಳನ್ನು ಆಯೋಜಿಸುವಾಗ ವಿದ್ಯಾರ್ಥಿಗಳ ಕಲಿಕಾ ನೆಲೆಯಲ್ಲೂ ಅದು ಉಪಯೋಗಕ್ಕೆ ಬರಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಅವರಾಡಿದ ಮಾತು ತುಳು ಸಂಸ್ಕೃತಿ ಮತ್ತು ಕಲೆಯನ್ನು ಅವಮಾನಿಸಿದಂತಿತ್ತು ಎಂದು ಆಪಾದಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಳಿಕ ಪ್ರಾಚಾರ್ಯ ಶೇಖರ್ ಎಂ.ಬಿ. ಅವರು, ‘ಯಾವುದೇ ಸಂಸ್ಕೃತಿಯನ್ನಾಗಲಿ, ಕಲೆಯನ್ನಾಗಲೀ ತಾನು ಅವಮಾನಿಸುವ ಮಾತು ಆಡಿಲ್ಲ. ನನ್ನ ಮಾತು ಕಲೆ ಸಂಸ್ಕೃತಿಯನ್ನು ಅವಮಾನಿಸುವಂತೆ ಗೋಚರಿಸಿದ್ದರೆ, ನಾನದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಲಿಯ ಪ್ರಾಚಾರ್ಯರಾದ ಶೇಖರ ಎಂ.ಬಿ. ಅವರು ತಮ್ಮ ಮಾತಿನಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಅವಮಾನಿಸಿರುವುದು ತಿಳಿದು ಬಂದಿದೆ. ತುಳುನಾಡಿನ ಬಗ್ಗೆ, ತುಳು ಸಂಸ್ಕೃತಿ ಬಗ್ಗೆ ತುಳುನಾಡಿನಲ್ಲಿದ್ದು ಸರಕಾರಿ ಸೇವೆಯಲ್ಲಿರುವ ವ್ಯಕ್ತಿಯು ಮಾಡಿರುವ ಅಕ್ಷಮ್ಯ ಅಪರಾಧ ಇದಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ತ ತುಳುವರಿಗೆ ಆದ ಅವಮಾನಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ತೆಗರ್ ತುಳು ಕೂಟದ ಸಂಚಾಲಕ ಉಮೇಶ್ ಸಾಯಿರಾಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here