ರಾಮಕುಂಜ: ಒಕ್ಕಲಿಗ ಸ್ವ-ಸಹಾಯ ಸಂಘಗಳ ವಾರ್ಷಿಕೋತ್ಸವ

0

  • ಆಟಿಡೊಂಜಿ ದಿನಾಚರಣೆ
  • ಸಾಧಕ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ
  • ವಿವಿಧ ಆಟೋಟ ಸ್ಪರ್ಧೆ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ, ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನದ ಮಹತ್ವ ಹಾಗೂ ಒಕ್ಕಲಿಗ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ, ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಆ.೭ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.


ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕಡಬ ಶಾಖಾ ಮೇನೇಜರ್ ಜಯಂತಿ ನಾಗೇಶ್-ತಾವೂರುರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ‘ಆಹಾರ ಆಚಾರ’ದ ಕುರಿತು ಉಪನ್ಯಾಸ ನೀಡಿದ ಪೂರ್ಣಾತ್ಮರಾಮ ಈಶ್ವರಮಂಗಲರವರು, ಬೇಯಿಸದೆ ತಿನ್ನುವಂತಹ ಆಹಾರಗಳು ಹೆಚ್ಚು ಪೌಷ್ಠಿಕವಾಗಿರುತ್ತವೆ. ಸಸ್ಯ, ನಾರು ಮೂಲದ ಆಹಾರ ತಿನ್ನುವುದರಿಂದ ಕರುಳಿನ ಸ್ಚಚ್ಛತೆ ಕಾಪಾಡಬಹುದು. ಆಟಿ ತಿಂಗಳಲ್ಲಿ ಗಡ್ಡೆ ಗೆಣಸಿನ ಆಹಾರ ಹೆಚ್ಚು ಬಳಕೆ ಮಾಡಬೇಕು. ನಮ್ಮ ಸುತ್ತಲಿನಲ್ಲಿ ಸಿಗುವ ಶೇ.೯೦ರಷ್ಟು ಹೆಚ್ಚು ಸಸ್ಯಗಳು ಔಷಧೀಯ ಗುಣ ಹೊಂದಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಠಿಕ, ಸ್ವಚ್ಛ ಆಹಾರ ಬಳಕೆ ಮಾಡಬೇಕು. ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತಿ ವಹಿಸುವ ಎಂದು ಹೇಳಿದರು. ಅನ್ನ ವ್ಯರ್ಥ ಮಾಡುವುದು ಅಪರಾಧ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸಾಮೂಹಿಕ ಸಹಭೋಜನದ ವ್ಯವಸ್ಥೆ ಮನೆಯಿಂದಲೇ ಆರಂಭವಾಗಬೇಕೆಂದು ಪುಣ್ಮಾತ್ಮರಾಮ ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ.ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕೆದಂಬಾಡಿ ರಾಮಯ್ಯ ಗೌಡರವರ ಕಂಚಿನ ಪ್ರತಿಮೆ 22ರಂದು ಆದಿಚುಂಚನಗಿರಿಯಿಂದ ಹೊರಟು ಸುಳ್ಯ, ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ಬರಲಿದ್ದು ಅ.೧೫ರಂದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ. ಇದು ಗೌಡ ಜನಾಂಗದವರಿಗೆ ಸರಕಾರದಿಂದ ದೊರೆತಿರುವ ಗೌರವ ಆಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಮಾತನಾಡಿ, ಪ್ರತಿಯೊಬ್ಬರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ನಮ್ಮ ಸಮುದಾಯ, ದೇಶವೂ ಅಭಿವೃದ್ಧಿಯಾಗುತ್ತದೆ. ನಾವು ಮಾಡುವ ಕೃಷಿ ಉತ್ಪನ್ನವೂ ದೇಶಕ್ಕೆ ನೀಡುವ ಕೊಡುಗೆಯಾಗುತ್ತದೆ. ಆದ್ದರಿಂದ ನಮ್ಮ ಮೂಲ ವೃತ್ತಿಯಾಗಿರುವ ಕೃಷಿಯ ಬಗ್ಗೆ ತಾತ್ಸಾರ ಇರಬಾರದು ಎಂದು ಹೇಳಿದರು. ಯುವ ಜನಾಂಗ ಸಮಾಜಕ್ಕೆ ಆಸ್ತಿಯಾಗಬೇಕೇ ಹೊರತು ಹೊರೆಯಾಗಬಾರದು. ಆದ್ದರಿಂದ ಇಂತಹ ಸಂಘಟನೆಗಳಲ್ಲಿ ಯುವಕ, ಯುವತಿಯರು ಹೆಚ್ಚಾಗಿ ತೊಡಗಿಕೊಳ್ಳುವಂತೆ ಮಾಡುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಚಂದ್ರಶೇಖರ ಕೆ.,ಹೇಳಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ತೇಜಸ್ವಿನಿಶೇಖರ ಗೌಡ, ಒಕ್ಕಲಿಗ ಗೌಡ ಸಂಘದ ಆಲಂಕಾರು ವಲಯ ಉಸ್ತುವಾರಿ ಚಕ್ರಪಾಣಿ ಬಾಕಿಲ ಸಂದರ್ಭೋಚಿತವಾಗಿ ಮಾತನಾಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯ ಮುಖಂಡರಾದ ದಯಾನಂದ ಕೆ.ಎಸ್., ಲಿಂಗಪ್ಪ ಗೌಡ ಕಡೆಂಬ್ಯಾಲು, ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಗುಮ್ಮಣ್ಣ ಗೌಡ ಪಿ., ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ ವಳೆಂಜ, ಒಕ್ಕಲಿಗ ಸ್ವಸಹಾಯ ಸಂಘಗಳ ರಾಮಕುಂಜ ಒಕ್ಕೂಟದ ಅಧ್ಯಕ್ಷ ಪೂವಪ್ಪ ಗೌಡ ಕೊಂಡ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳಿಗೆ ಶಾಲು ಹಾಕಿ, ಗುಲಾಬಿ ಹೂ ನೀಡಿ ರಾಮಕುಂಜ ಗ್ರಾಮ ಸಮಿತಿ ಪದಾಧಿಕಾರಿಗಳು ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು.

ನೂತನ ಸ್ವಸಹಾಯ ಸಂಘಕ್ಕೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು. ಭಾಗೀರಥಿಯವರು ಸ್ವಸಹಾಯ ಸಂಘಗಳ ಒಕ್ಕೂಟದ ವರದಿ ವಾಚಿಸಿದರು. ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪದ್ಮಪ್ಪ ಗೌಡ ಸ್ವಾಗತಿಸಿ, ಆಲಂಕಾರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡರವರು ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ವತಿಯಿಂದ ಕೈಗೊಂಡ ಕಾರ್ಯಯೋಜನೆಗಳ ಬಗ್ಗೆ ತಿಳಿಸಿ, ವಂದಿಸಿದರು. ರಾಮಕುಂಜ ಸಾಂಸ್ಕೃತಿಕ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹರೀಶ್ ಬರಮೇಲು ಕಾರ್ಯಕ್ರಮ ನಿರೂಪಿಸಿದರು. ಶರಣ್ಯ ಜಿ., ಜೇಷ್ಮಾ ಪ್ರಾರ್ಥಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಇದರ ಕಾರ್ಯದರ್ಶಿ ಮೋಹನದಾಸ ಎಂಜಿರ್, ರಾಮಕುಂಜ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಸೀತಾರಾಮ ಗೌಡ ಅರ್ಬಿ, ಮಹಿಳಾ ಘಟಕದ ಕಾರ್ಯದರ್ಶಿ ವಿಮಲ ದೊಡ್ಡ ಉರ್ಕ, ಸ್ವಸಹಾಯ ಸಂಘಗಳ ಒಕ್ಕೂಟದ ಕಾರ್ಯದರ್ಶಿ ನಾಗರಾಜ ಸಂಪ್ಯಾಡಿ, ಕ್ರೀಡಾ ಕಾರ್ಯದರ್ಶಿ ಪ್ರೇಮಾ ಬಿ., ಪ್ರೇರಕಿ ಲಲಿತಾ ಸಹಕರಿಸಿದರು. ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕಲಿಗ ಗೌಡ ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳ ಸ್ಪರ್ಧೆ ನಡೆಸಲಾಯಿತು. ಮಧ್ಯಾಹ್ನ ಸಹಭೋಜನ ನಡೆಯಿತು. ಮಧ್ಯಾಹ್ನದ ಬಳಿಕ ರಾಮಕುಂಜ ಗ್ರಾಮದ ಒಕ್ಕಲಿಗ ಗೌಡ ಸಮಾಜಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸನ್ಮಾನ:
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಪ್ಯಾಡಿ ಮೀನಾಕ್ಷಿ ಹುಕ್ರಪ್ಪ ಗೌಡರವರ ಪುತ್ರ ಜೀವನ್ ಹಾಗೂ ಗಾಂಧಾರಿಮಜಲು ಬಾಲಕೃಷ್ಣ ಗೌಡ-ವಸಂತಿ ದಂಪತಿ ಪುತ್ರಿ ಶರಣ್ಯ ಜಿ.,ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜು.೩೧ರಂದು ನಿವೃತ್ತರಾದ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಅಸಿಸ್ಟೆಂಟ್ ಸೂಪರ್‌ವೈಸರ್ ರವೀಂದ್ರ ಆನ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮುಂಭಡ್ತಿ ಪಡೆದುಕೊಂಡ ಪದ್ಮಪ್ಪ ಗೌಡ ಕೆ., ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರನ್ನು ಸನ್ಮಾನಿಸಲಾಯಿತು. ಉರ್ಕ ಶ್ರೀ ರಾಮಕುಂಜೇಶ್ವರ ಒಕ್ಕಲಿಗ ಸ್ವ ಸಹಾಯ ಸಂಘವನ್ನು ಅತ್ಯುತ್ತಮ ಸ್ವ ಸಹಾಯ ಸಂಘ ಎಂದು ಗುರುತಿಸಲಾಯಿತು. ಮಧ್ಯಾಹ್ನದ ಸಹಭೋಜನದ ಪ್ರಾಯೋಜಕರಾದ ಕೊಂಡ್ಯಾಡಿ ಕತ್ಲಡ್ಕ ಬಾಲಕೃಷ್ಣ ಗೌಡ-ರುಕ್ಮಿಣಿ ದಂಪತಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here