ಮುಂಡೂರಿನಲ್ಲಿ ರೈತ ಚಿಂತನಾ ಸಭೆ

0

  • ರೈತರಿಗೆ ಅನ್ಯಾಯವಾದರೆ ರೈತ ಸಂಘ ಸುಮ್ಮನಿರುವುದಿಲ್ಲ-ಮುಖಂಡರ ಅಭಿಮತ
  • ಸರ್ವೆ-ಮುಂಡೂರು ವಲಯ ರೈತ ಸಂಘ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಆಯ್ಕೆ

ಪುತ್ತೂರು: ರೈತರು ಎಷ್ಟೇ ಕಷ್ಟ ಬಂದರೂ, ಯಾವುದೇ ಸಮಸ್ಯೆ ಎದುರಾದರೂ ಎದೆಗುಂದಬಾರದು. ಭೂಮಿ ಮಾರಬಾರದು, ಆತ್ಮಹತ್ಯೆಯಂತಹ ಯೋಚನೆಯನ್ನೂ ಮಾಡಬಾರದು. ಅಂತಹ ಪರಿಸ್ಥಿತಿ, ಸಂದರ್ಭ ನಿಮಗೆ ಬಂದಲ್ಲಿ ರೈತ ಸಂಘವನ್ನು ಸಂಪರ್ಕಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ,ಕ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಹರ್ಷಕುಮಾರ್ ಹೆಗ್ಡೆ ಹೇಳಿದರು.

 

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಸಮಿತಿ ವತಿಯಿಂದ ಆ.೭ರಂದು ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ರೈತ ಚಿಂತನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಸ್ವಾಭಿಮಾನದಿಂದ ಜೀವನ ನಡೆಸಬೇಕು. ರೈತರು ದಿನನಿತ್ಯ ಕಷ್ಟಪಡುವವರು ಹಾಗಾಗಿ ರೈತರ ಸಮಸ್ಯೆಗೆ ನಾವೆಲ್ಲಾ ಒಗ್ಗಟ್ಟಾಗಬೇಕು. ರೈತರು ತಮ್ಮ ತೋಟವನ್ನು ಫಸಲು ಗೇಣಿಗೆ ಕೊಡಬಾರದು ಎಂದು ಅವರು ಹೇಳಿದರು.

ರೈತರ ನೆಮ್ಮದಿಯ ಬದುಕಿಗೆ ರೈತ ಸಂಘ ಅಗತ್ಯ-ರೂಪೇಶ್ ರೈ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು ಮಾತನಾಡಿ ರೈತರ ನೆಮ್ಮದಿಯ ಬದುಕಿಗೆ ಮತ್ತು ರೈತ ವರ್ಗದ ಹಿತದೃಷ್ಠಿಗೋಸ್ಕರ ನಾವು ಸಂಘವನ್ನು ಕಟ್ಟಿಕೊಂಡಿದ್ದೇವೆಯೇ ವಿನಃ ನಮಗೆ ಜಾತಿ, ಮತ, ಪಕ್ಷ ಎಂಬುವುದಿಲ್ಲ. ನಾವು ಒಗ್ಗಟ್ಟಾಗದಿದ್ದರೆ ನಮ್ಮ ಯಾವುದೇ ಬೇಡಿಕೆ ಈಡೇರುವುದಿಲ್ಲ ಎಂದು ಹೇಳಿದರು.


ರೈತನಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದ್ದೇವೆ:
ರೈತ ಇಸುಬು ಪಟ್ಟೆ ಎಂಬವರು ಮೂವತ್ತು ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿರುವ ಭೂಮಿಯನ್ನು ಇತ್ತೀಚೆಗೆ ಕಂದಾಯ ಇಲಾಖೆಯ ತಂಡವೇ ಬಂದು ತೋಟವನ್ನೇ ನೆಲಸಮ ಮಾಡಲು ಪ್ರಯತ್ನಿಸಿದಾಗ ನಾವು ಅಲ್ಲಿಗೆ ಭೇಟಿ ನೀಡಿ ಅವರ ಪರವಾಗಿ ನಿಂತು ಓರ್ವ ರೈತನಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದ್ದೇವೆ. ರೈತರ ಕೃಷಿ ಭೂಮಿಯನ್ನು ನಾಶ ಮಾಡುವುದರಿಂದ ರೈತ ಕುಟುಂಬದ ಇಡೀ ಬದುಕೇ ನಾಶವಾಗುತ್ತದೆ. ಹಾಗಾಗಿ ಯಾವುದೇ ರೈತರಿಗೆ ಅನ್ಯಾಯವಾಗುತ್ತದೆ ಎಂದಾದಾಗ ನಮ್ಮಲ್ಲಿ ಪಕ್ಷ, ಜಾತಿ ಯಾವುದೂ ಇರುವುದಿಲ್ಲ, ನಾವು ರೈತರಾಗಿ ಮಾತ್ರ ಹೋರಾಟಕ್ಕೆ ಇಳಿಯುತ್ತೇವೆ ಎಂದು ರೂಪೇಶ್ ರೈ ಅಲಿಮಾರು ಹೇಳಿದರು.

ರೈತರಲ್ಲಿ ಸಂಘಟನಾತ್ಮಕ ಶಕ್ತಿ ರೂಪುಗೊಳ್ಳಬೇಕು-ವಿನೋದ್
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ವಿನೋದ್ ಪಾದೆಕಲ್ಲು ಮಾತನಾಡಿ ರೈತರು ದೇಶದ ಬೆನ್ನೆಲುಬಾಗಿದ್ದರು ಕೂಡಾ ರೈತರ ಸಮಸ್ಯೆಯ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ. ಬ್ಯಾಂಕ್ ನೌಕರರು ಮುಷ್ಕರ ಮಾಡಿದಾಗ ಅವರ ಬೇಡಿಕೆ ತಕ್ಷಣ ಈಡೇರುತ್ತದೆ ಆದರೆ ೭೦% ಇರುವ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದರೂ ಸರಕಾರ ಅದರ ಬಗ್ಗೆ ಚರ್ಚೆಯೇ ಮಾಡುವುದಿಲ್ಲ, ರೈತರನ್ನು ಒಗ್ಗಟ್ಟಾಗಿರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದ್ದು ಅದರ ಬಗ್ಗೆ ರೈತರು ಜಾಗೃತರಾಗಬೇಕು. ಪಕ್ಷಾತೀತವಾಗಿ ರೈತರು ಒಗ್ಗಟ್ಟಾಗಬೇಕು. ರೈತರಲ್ಲಿ ಸಂಘಟನಾತ್ಮಕ ಶಕ್ತಿ ರೂಪುಗೊಳ್ಳಬೇಕು. ಎಲ್ಲಾ ಇಲಾಖೆಗಳಲ್ಲೂ ರೈತರಿಗೆ ಗೌರವ ಮತ್ತು ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.

ರೈತರು ರಾಜಕೀಯ ಶಕ್ತಿಯಾಗಬೇಕು:
ರೈತರು ರಾಜಕೀಯ ಶಕ್ತಿಯಾಗಬೇಕು. ಅದು ಹೇಗೆಂದರೆ ಗೆದ್ದವರನ್ನು ಸೋಲಿಸುವ, ಸೋತವರನ್ನು ಗೆಲ್ಲಿಸುವ ಶಕ್ತಿ ರೈತರಿಗಿರಬೇಕು. ಅದು ವಿಧಾನಸಭೆಯಾದರೂ, ಲೋಕಸಭೆಯಾದರೂ ಸರಿ. ಆ ರೀತಿಯ ಒಗ್ಗಟ್ಟು ರೈತರಲ್ಲಿರಬೇಕು. ನೊಂದ ರೈತರಿಗೆ ನಾವು ನೆರವಾಗಬೇಕು. ಬ್ಯಾಂಕ್‌ನವರ ದಬ್ಬಾಳಿಕೆಯಿಂದ, ಅಧಿಕಾರಿಗಳ ಒತ್ತಡದ ವಿರುದ್ಧ ನಾವು ಸಂಘಟಿತರಾಗಬೇಕು. ರೈತರಿಗೆ ನ್ಯಾಯ ಕೊಡಬೇಕು. ಎಂದು ವಿನೋದ್ ಪಾದೆಕಲ್ಲು ಹೇಳಿದರು.

ರೈತ ವರ್ಗಕ್ಕೆ ಶಕ್ತಿ ತುಂಬಬೇಕಾಗಿದೆ-ಸೊರಕೆ
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ವೈಜ್ಞಾನಿಕವಾಗಿ ದೇಶದ ಸಂಪತ್ತನ್ನು ಹೆಚ್ಚಿಸುವ ವರ್ಗವೊಂದಿದ್ದರೆ ಅದು ರೈತ ವರ್ಗವಾಗಿದೆ, ರೈತರು ಸಂಘಟಿತರಾಗುವ ಮೂಲಕ ರೈತ ಸಮುದಾಯಕ್ಕೆ ಶಕ್ತಿ ನೀಡುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.

ರೈತರ ಹಸಿರು ಶಾಲಿಗೆ ಅಗಾಧ ಶಕ್ತಿಯಿದೆ-ಮುರಳೀಧರ ರೈ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ರೈತರಿಗೆ ಯಾವುದೇ ರಾಜಕೀಯದವರು ನೀಡದ ನ್ಯಾಯವನ್ನು ರೈತ ಸಂಘ ನೀಡುತ್ತಿದೆ. ರೈತರ ಹಸಿರು ಶಾಲಿಗೆ ಅಗಾಧ ಶಕ್ತಿಯಿದೆ, ರೈತರು ಒಗ್ಗಟ್ಟಾಗಿದ್ದರೆ ರೈತರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಒಗ್ಗಟ್ಟಿನಿಂದ ಮಾತ್ರ ಬೇಡಿಕೆ ಈಡೇರಿಸಬಹುದು-ಸೀತಾರಾಮ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಮಡಿವಾಳ ಮಾತನಾಡಿ ರೈತರು ಹಸಿರು ಶಾಲು ಹಾಕಿ ಯಾವುದೇ ಇಲಾಖೆಗೆ ಹೋದರೂ ಗೌರವ ಸಿಗುತ್ತದೆ. ರೈತರು ಒಗ್ಗಟ್ಟಾಗಿದ್ದರೆ ಯಾವುದೇ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ. ರೈತರು ರಾಜಕೀಯಕ್ಕಿಂತ ಮೊದಲು ನಾನೋರ್ವ ರೈತ ಎಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ರೈತರಿಗೆ ಸರಕಾರ ಮೋಸ ಮಾಡುತ್ತಿದೆ-ಯಾಕೂಬ್ ಮುಲಾರ್
ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ರೈತ ಸಂಘಗಳು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದು ಅದಕ್ಕೆ ನಾವು ಬೆಂಬಲ ನೀಡಬೇಕು. ಬಂಡವಾಳಶಾಹಿಗಳ ೧೦ ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡುವ ಸರಕಾರ ರೈತರ ಖಾತೆಗೆ ಜುಜುಬಿ ೨೦೦೦.ರೂ ಹಣ ಸಂದಾಯ ಮಾಡಿ ಮೋಸ ಮಾಡುತ್ತಿದೆ ಎಂದು ಹೇಳಿದರು.

ಫ್ಲಾಟಿಂಗ್ ಸಂಕಷ್ಟ: ಲಂಚದ ಆರೋಪ:
ಸುರೇಶ್ ಕುಮಾರ್ ಸೊರಕೆ ಮಾತನಾಡಿ ರೈತರಯ ಜಾಗ ಫ್ಲಾಟಿಂಗ್ ಮಾಡಿಸಿಕೊಳ್ಳಬೇಕಾದರೆ ಬಹಳ ಕಷ್ಟಪಡುತ್ತಿದ್ದು ಹಣ ಕೊಡಬೇಕಾದ ಪರಿಸ್ಥಿತಿಯಿದೆ. ರೈತರಿಗೂ ಕಂದಾಯ ಇಲಾಖೆಗೂ ನೇರ ಸಂಬಂಧ ಇರುವ ಕಾರಣ ವ್ಯವಸ್ಥೆ ಸರಳೀಕರಣವಾಗಬೇಕಾಗಿದೆ. ಟೇಬಲ್ ಕೆಳಗಿನಿಂದ ಕೊಡುವುದು, ಪಡೆದುಕೊಳ್ಳುವುದು ನಿಂತರೆ ಮಾತ್ರ ರೈತರು ನೆಮ್ಮದಿ ಅನುಭವಿಸಬಹುದು ಎಂದು ಪರೋಕ್ಷವಾಗಿ ಕಂದಾಯ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಚಾಟಿ ಬೀಸಿದರು. ರೂಪೇಶ್ ರೈ ಮಾತನಾಡಿ ಕಂದಾಯ ಇಲಾಖೆಯಲ್ಲಿ ಹಣದ ವ್ಯವಹಾರ ನಡೆಯುತ್ತಿದ್ದು ರೈತರು ಹಣ ನೀಡಬಾರದು ಎಂದು ಹೇಳಿದರು.

ಅಡಿಕೆ ಮರಕ್ಕೆ ರೂ.5ಸಾವಿರ; ತೆಂಗಿನ ಮರಕ್ಕೆ ರೂ.೨೦ ಸಾವಿರ ಪರಿಹಾರಕ್ಕೆ ಆಗ್ರಹಿಸಿ ನಿರ್ಣಯ:
ಪ್ರಾಕೃತಿಕ ವಿಕೋಪದಿಂದ ರೈತರಿಗೆ ಅಡಿಕೆ ಮರ ನಷ್ಟಗೊಂಡರೆ ಒಂದು ಅಡಿಕೆ ಮರಕ್ಕೆ ರೂ.೫ ಸಾವಿರ ಹಾಗೂ ತೆಂಗು ನಷ್ಟಗೊಂಡರೆ ಒಂದು ತೆಂಗಿನ ಮರಕ್ಕೆ ರೂ.೨೦ ಸಾವಿರ ಪರಿಹಾರ ಮೊತ್ತ ಒದಗಿಸಬೇಕೆಂದು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯವನ್ನು ಸಂಬಂಧಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಕೊಡುವುದೆಂದು ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಕೃಷಿ ಪಂಡಿತ ಮೋನಪ್ಪ ಕರ್ಕೇರ, ವಿಜಯ ಬ್ಯಾಂಕ್ ನಿವೃತ್ತ ಮೆನೇಜರ್ ಎಂ.ಬಿ ವಿಶ್ವನಾಥ ರೈ ಉಪಸ್ಥಿತರಿದ್ದರು.

ಸಭೆಯಲ್ಲಿ ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕರಾದ ಗುಲಾಬಿ ಎನ್ ಶೆಟ್ಟಿ, ಪದ್ಮಯ್ಯ ನಾಯ್ಕ, ಕೊರಗಪ್ಪ ಸೊರಕೆ, ಮುಂಡೂರು ಗ್ರಾ.ಪಂ ಮಾಜಿ ಸದಸ್ಯರಾದ ರಾಮಚಂದ್ರ ಸೊರಕೆ, ಹಂಝ ಎಲಿಯ, ಮುಂಡೂರು ಹಾಲು.ಉ.ಸ.ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ, ಕುಕ್ಕಿನಡ್ಕ ದೇವಸ್ಥಾನದ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸುಧೀರ್ ಶೆಟ್ಟಿ ನೇಸರ, ಪ್ರಮುಖರಾದ ಸಪ್ರೀತ್ ಕಣ್ಣಾರಾಯ, ಅಣ್ಣಿ ಪೂಜಾರಿ, ಶಶಿಧರ್ ಎಸ್.ಡಿ, ಉಮ್ಮರ್ ಪಟ್ಟೆ, ಅಬೂಬಕ್ಕರ್ ಮುಲಾರ್, ಇಬ್ರಾಹಿಂ ಪಟ್ಟೆ, ರಾಧಾಕೃಷ್ಣ ರೈ ರೆಂಜಲಾಡಿ, ಝಕರಿಯ ಮುಲಾರ್, ರಾಮಣ್ಣ ಮುಂಡೂರು, ಅಶ್ರಫ್ ಮುಲಾರ್, ತಿಮ್ಮಣ್ಣ ರೈ, ನ್ಯಾಯವಾದಿ ಚಂದ್ರ ಭಕ್ತಕೋಡಿ, ಗಣೇಶ್ ಸಾಲಿಯಾನ್ ಪಜಿಮಣ್ಣು, ಸುಲೈಮಾನ್ ಮುಲಾರ್, ರಘುನಾಥ ಶೆಟ್ಟಿ, ಸಜ್ಜನ್ ಕುಮಾರ್ ಮತ್ತಿತರ ಹಲವು ಮಂದಿ ರೈತರು ಉಪಸ್ಥಿತರಿದ್ದರು.
ಯಾಕೂಬ್ ಮುಲಾರ್ ಸ್ವಾಗತಿಸಿದರು. ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು.

 

ಸರ್ವೆ-ಮುಂಡೂರು ವಲಯ ರೈತ ಸಂಘ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಆಯ್ಕೆ:

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ ಜಿಲ್ಲಾ ಸಮಿತಿ ಅಧೀನದಲ್ಲಿ ಸರ್ವೆ-ಮುಂಡೂರು ವಲಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ರೈತ ಸಂಘದ ಜಿಲ್ಲಾ ಸಮಿತಿ ಮುಖಂಡರು ಧ್ವಜ ಹಸ್ತಾಂತರಿಸಿದರು. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವನಾಥ ರೈ ಅವರು ಪ್ರಸ್ತುತ ಮುಂಡೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾಗಿದ್ದು ಮುಂಡೂರು ಗ್ರಾ.ಪಂನ ಮಾಜಿ ಸದಸ್ಯರಾಗಿದ್ದಾರೆ. ಅಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ನೂತನ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ರಾಜಕೀಯ ರಹಿತವಾಗಿ ರೈತರ ಹಿತ ಕಾಪಾಡುವ ಕೆಲಸವನ್ನು ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರನ್ನು ಸಮಿತಿಗೆ ಸೇರಿಸಿಕೊಂಡು ಸಮಿತಿಯನ್ನು ಬಲಿಷ್ಠಗೊಳಿಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here