ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಪತ್ರಿಕಾಗೋಷ್ಠಿ

0

  • ವಾರ್ಷಿಕ ೩೭೨ ಕೋಟಿ ವ್ಯವಹಾರ, ೨ ಕೋಟಿ ೩೬ ಲಕ್ಷ ರೂಪಾಯಿ ಲಾಭ
  • ವಿಸ್ತೃತ ಗೋದಾಮು ಕಟ್ಟಡ ಅಮೃತ ಮಹೋತ್ಸವ ವರ್ಷಾಂತ್ಯಕ್ಕೆ ಲೋಕಾರ್ಪಣೆ

 

 

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡಕೊಂಡಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ೨೦೨೧-೨೨ನೇ ಸಾಲಿನಲ್ಲಿ ದಾಖಲೆಯ ವಾರ್ಷಿಕ ೩೭೨.೭೩ ಕೋಟಿ ರೂಪಾಯಿ ವ್ಯವಹಾರ ಮಾಡಿದ್ದು, ಒಟ್ಟು ೨,೩೬,೧೦,೪೯೦.೯೪ ರೂಪಾಯಿ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ತಿಳಿಸಿದರು.

 

ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಘದ ಆಡಳಿತ ಮಂಡಳಿ ಸದಸ್ಯರ ಸಲಹೆ ಸೂಚನೆ, ನೌಕರರ ಪರಿಶ್ರಮ ಹಾಗೂ ಸದಸ್ಯರ ಮತ್ತು ಗ್ರಾಹಕರ ಉತ್ತಮ ಸ್ಪಂದನೆಯಿಂದ ಈ ರೀತಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು ೮೨೦೯ ಸದಸ್ಯರಿದ್ದು ೬.೮೪ ಕೋಟಿ ಶೇರು ಬಂಡವಾಳವನ್ನು ಸಂಗ್ರಹಿಸಲಾಗಿದೆ. ಸಂಘವು ವರದಿ ಸಾಲಿನಲ್ಲಿ ೭೬.೩೧ ಕೋಟಿ ಠೇವಣಿ ಹೊಂದಿದ್ದು ೯೬.೩೫ ಕೋಟಿ ಸಾಲ ವಿತರಿಸಿದೆ. ವರ್ಷಾಂತ್ಯದಲ್ಲಿ ಶೇಕಡಾ ೯೭.೬೫ ಸಾಲ ವಸೂಲಾತಿ ಆಗಿರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು ೯.೫೯ ಕೋಟಿ ಇರುತ್ತದೆ. ಸಂಘವು ಒಟ್ಟು ೧೪೧.೦೨ ಲಕ್ಷ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತ “ಎ” ಗ್ರೇಡನ್ನು ಪಡೆಯುತ್ತಾ ಬಂದಿರುತ್ತದೆ. ಇದೇ ತಿಂಗಳ ೧೪ರಂದು ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಲಿದ್ದು, ಶೇಕಡಾ ೧೨ ಡೆವಿಡೆಂಟ್ ನೀಡುವಂತೆ ಮಹಾಸಭೆಗೆ ಶಿಫಾರಸ್ಸು ಮಾಡಲಾಗಿದೆ.

ಸಂಘದ ಕೃಷಿ ಸಾಲಗಾರರನ್ನು “ಪಾಯಸ್” (ವೈಯಕ್ತಿಕ ಅಪಘಾತ ವಿಮೆ) ವಿಮಾ ಮತ್ತು ಹವಾಮಾನ ಆಧಾರಿತ ವಿಮಾ ಯೋಜನೆಗೆ ಒಳಪಡಿಸಿರುತ್ತೇವೆ. ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪನಿಗಳ ಡೀಲರ್‌ಶಿಪ್ ಪಡಕೊಂಡು ರಖಂ ನೆಲೆಯಲ್ಲಿ ಜಿಲ್ಲೆಯಾದ್ಯಂತ ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಗಿದೆ ಆಗಿದೆ ಎಂದರು.

ವಿಸ್ತೃತ ಗೋದಾಮು ಕಟ್ಟಡ ಅಮೃತ ಮಹೋತ್ಸವ ವರ್ಷಾಂತ್ಯಕ್ಕೆ ಲೋಕಾರ್ಪಣೆ. ನಮ್ಮ ಸಹಕಾರಿ ಸಂಘದಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್ ಹಾಗೂ ಸೇಫ್ ಲಾಕರ್ ವ್ಯವಸ್ಥೆ ಇರುತ್ತದೆ. ಸಂಘದ ಮುಖ್ಯ ಕಛೇರಿಯ ಸಮೀಪ ಇಳಂತಿಲ ಗ್ರಾಮದಲ್ಲಿ ೦.೨೦ ಎಕ್ರೆ ಜಾಗವನ್ನು ಖರೀದಿಸಿದ್ದು ವಿಸ್ತೃತ ಗೋದಾಮು ಕಟ್ಟಡದ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಅಮೃತ ಮಹೋತ್ಸವ ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ.

“ವಿದ್ಯಾಶ್ರೀ” ಎಂಬ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಘದ ಕಾರ್ಯವ್ಯಾಪ್ತಿಯ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ (ಬಿಪಿಎಲ್ ಕಾರ್ಡ್‌ದಾರರು) ಹಾಗು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಈ ಯೋಜನೆಯಡಿ ೨೦೨೧-೨೨ರಲ್ಲಿ ಒಟ್ಟು ೮೬ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್‍ಸ್ ಆಗಿ ಸೇವೆ ಸಲ್ಲಿಸಿದ್ದ ಪೊಲೀಸ್ ಠಾಣೆ, ಸರಕಾರಿ ಆಸ್ಪತ್ರೆ ಹಾಗೂ ಶಾಸಕರ ವಾರ್ ರೂಂಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿರುತ್ತೇವೆ. ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟಿ.ವಿ. ಮತ್ತು ಆರೋಗ್ಯ ತಪಾಸಣಾ ಯಂತ್ರ (ಇ.ಸಿ.ಜಿ.), ಹೀಗೆ ಒಟ್ಟು ರೂ. ೧,೨೩,೪೫೦/- ಮೌಲ್ಯದ ವಸ್ತುಗಳನ್ನು ಸಂಘದ ಮುಖಾಂತರ ನೀಡಲಾಗಿದೆ. ಟೀಂ ದಕ್ಷಿಣ ಕಾಶಿ ಇವರಿಗೆ ಆಂಬ್ಯೂಲೆನ್ಸ್ ಖರೀದಿಗಾಗಿ ೫೦ ಸಾವಿರ ರೂಪಾಯಿ ಸಂಘದಿಂದ ದೇಣಿಗೆಯಾಗಿ ನೀಡಿರುತ್ತೇವೆ.

ವರದಿ ಸಾಲಿನಲ್ಲಿ ಹಡಿಲು ಗದ್ದೆಯಲ್ಲಿ ಭತ್ತದ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ೪೮ ಕೃಷಿಕರಿಗೆ ತಲಾ ೧ ಸಾವಿರ ರೂಪಾಯಿಯಂತೆ ಪ್ರೋತ್ಸಾಹಧನವನ್ನು ನೀಡಿರುತ್ತೇವೆ. ಈ ವರ್ಷವೂ ಮುಂದುವರಿಸಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ಸತತ ೩ನೇ ಬಾರಿಗೆ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಯನ್ನು ಪಡೆದಿರುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು, ನಿರ್ದೇಶಕರುಗಳಾದ ಯಶವಂತ ಜಿ., ಯಂ. ಜಗದೀಶ ರಾವ್, ದಯಾನಂದ ಎಸ್., ರಾಮ ನಾಯ್ಕ, ಶ್ರೀಮತಿ ಸುಜಾತ ಆರ್. ರೈ, ಶ್ರೀಮತಿ ಶ್ಯಾಮಲ ಶೆಣೈ, ರಾಜೇಶ್, ಕುಂಞ ಎನ್., ಸಚಿನ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕ್ಲೇರಿ ವೇಗಸ್, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೋಭಾ ಕೆ., ಲೆಕ್ಕಾಧಿಕಾರಿ ಪ್ರವೀಣ್ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here