ಬೊಳುವಾರಿನ ಕೀರ್ತನಾ ರೆಸಿಡೆನ್ಸಿಯಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು!

0

  • ಬೊಳುವಾರಿನ ಕೀರ್ತನಾ ರೆಸಿಡೆನ್ಸಿಯಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು!

  • ಸುದಾನ ಶಾಲಾ ವಿದ್ಯಾರ್ಥಿ ಸುಶಾನ್ ರೈ ತಾಯಿಯ ಮೊಬೈಲ್ ಫೋನ್ ಸೀಝ್

     

  • ಪಬ್ ಜಿಯಂತಹ ಅಪಾಯಕಾರಿ ಆಟ ಆಡುತ್ತಿದ್ದ ಶಂಕೆ: ಮೊಬೈಲ್ ಫೋನ್ ಫೊರೆನ್ಸಿಕ್ ಲ್ಯಾಬ್ ಗೆ ರವಾನೆ

ಪುತ್ತೂರು: ಬೊಳುವಾರುನಲ್ಲಿರುವ ವಸತಿ ಸಮುಚ್ಛಯದ ಮಹಡಿಯಿಂದ ಬಿದ್ದು ನೆಹರೂನಗರದ ಸುದಾನ ವಸತಿಯುತ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಮೃತಪಟ್ಟ ಘಟನೆಗೆ ಸ್ಫೋಟಕ ತಿರುವು ದೊರೆಯುವ ಸಾಧ್ಯತೆ ಕಂಡು ಬರುತ್ತಿದೆ. ಆಕಸ್ಮಿಕವಾಗಿ ವಿದ್ಯಾರ್ಥಿ ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದರೇ ಅಥವಾ ಆತ್ಮಹತ್ಯೆ ಮಾಡಿಕೊಂಡರೇ ಎಂದು ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕಾರಣ ನಿಗೂಢ

ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ ರೈಯವರ ಪುತ್ರ, ನೆಹರೂನಗರದಲ್ಲಿರುವ ಸುದಾನ ವಸತಿಯುತ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ(೧೫ ವ)ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಗಸ್ಟ್ 5ರಂದು ಸುಶಾನ್ ರೈ ಅವರು ಸಂಜೆ ಶಾಲೆಯಿಂದ ಮನೆಗೆ ಹೋಗದೆ ಮನೆಗೆ ಹೋಗುವ ದಾರಿಯಲ್ಲೇ ಇರುವ ಬೊಳುವಾರು ಕೀರ್ತನಾ ರೆಸಿಡೆನ್ಸ್ ವಸತಿ ಸಮುಚ್ಛಯಕ್ಕೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಅವರು ಸಮುಚ್ಛಯದ ಮಹಡಿಯಿಂದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಅದೇ ದಾರಿಯಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸುಶಾನ್ ರೈ ಮೃತಪಟ್ಟಿದ್ದರು.
ಸುಶಾನ್ ರೈ ಅವರು ಶಾಲೆಯಿಂದ ಮನೆಗೆ ಹೋಗುವ ಬದಲು ಸಂಜೆ ಗಂಟೆ ೪.೨೦ಕ್ಕೆ ವಸತಿ ಸಮುಚ್ಛಯದ ಒಳಗೆ ಬಂದಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೆಲವೇ ನಿಮಿಷದಲ್ಲಿ ಅವರು ಅಲ್ಲಿ ಮಹಡಿಯಿಂದ ಕೆಳಗೆ ಬಿದ್ದಿದ್ದರು. ಸುಶಾನ್ ರೈಯವರ ಶಾಲಾ ಬ್ಯಾಗ್ ೫ನೇ ಮಹಡಿಯಲ್ಲಿ ಪತ್ತೆಯಾಗಿತ್ತು. ಅದೇ ಮಹಡಿಯಿಂದ ಅವರು ಬಿದ್ದಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಸುಶಾನ್ ರೈ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರೇ ಅಥವಾ ಅವರಾಗಿಯೇ ಮಹಡಿಯಿಂದ ಕೆಳಗಡೆ ಹಾರಿದರೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ. ಒಟ್ಟು ಘಟನೆ ನಿಗೂಢವಾಗಿದೆ.

ಕೇಸು ದಾಖಲು: ತನಿಖೆ ಚುರುಕು

ಸುಶಾನ್ ರೈಯವರ ತಂದೆ ಮನೋಹರ್ ರೈಯವರು ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

‘ನಾನು ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿರುವ ಸಂದರ್ಭ ನನ್ನ ಮಗ ಮಹಡಿಯಿಂದ ಬಿದ್ದಿರುವ ಕುರಿತು ನನ್ನ ಪತ್ನಿ ನನಗೆ ಮಾಹಿತಿ ನೀಡಿದ್ದರು. ನಾನು ಘಟನಾ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ನಾನು ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದಿದ್ದೆ. ಅಲ್ಲಿ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಆದ್ದರಿಂದ ನನ್ನ ಮಗ ಮೃತಪಟ್ಟ ಘಟನೆ ಕುರಿತು ತನಿಖೆ ನಡೆಸಬೇಕು’ ಎಂದು ಮನೋಹರ ರೈ ದೂರಿನಲ್ಲಿ ತಿಳಿಸಿದ್ದರು. ಬಳಿಕ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುಶಾನ್ ರೈ ಅವರನ್ನು ಬೆಳಿಗ್ಗೆ ಅವರ ತಂದೆ ಮನೋಹರ್ ರೈ ಶಾಲೆಗೆ ಬಿಟ್ಟು ಬರುತ್ತಿದ್ದರು. ಸಂಜೆ ಸುಶಾನ್ ಆಟೋ ರಿಕ್ಷಾದಲ್ಲಿ ಬೊಳುವಾರಿಗೆ ಬಂದು ಅಲ್ಲಿಂದ ಹರಿಪ್ರಸಾದ್ ಹೊಟೇಲ್ ಪಕ್ಕದ ರಸ್ತೆಯಿಂದಾಗಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಆಗಸ್ಟ್ ೫ರಂದು ಎಂದಿನಂತೆ ಸಂಜೆ ಆಟೋ ರಿಕ್ಷಾದಲ್ಲಿ ಬಂದ ಸುಶಾನ್ ರೈ ಬೊಳುವಾರಿನಲ್ಲಿ ಇಳಿದು ಬಳಿಕ ನಿತ್ಯ ಹೋಗುವ ರಸ್ತೆಯನ್ನು ಬದಲಾಯಿಸಿ ಬೊಳುವಾರು ವಸತಿ ಸಮುಚ್ಚಯದ ಬಳಿಯ ರಸ್ತೆಯಿಂದ ಮನೆ ಕಡೆಗೆ ಹೊರಟ್ಟಿದ್ದರು. ಮನೆ ಕಡೆ ಹೋಗದೆ ವಸತಿ ಸಮುಚ್ಚಯಕ್ಕೆ ಹೋಗಿದ್ದರು. ಕೆಲವೇ ಕ್ಷಣದಲ್ಲಿ ಅವರು ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ದಾಖಲೆ ಸಂಗ್ರಹಿಸಿರುವ ಪೊಲೀಸ್ ಅಧಿಕಾರಿಗಳು ಸುಶಾನ್ ರೈ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದರೇ ಅಥವಾ ಆತ್ಮಹತ್ಯೆ ಮಾಡಿಕೊಂಡರೇ ಎಂದು ಮಾಹಿತಿ ಕಲೆ ಹಾಕಿದ್ದಾರೆ. ಈ ಮಧ್ಯೆ ಎ.ಎಸ್.ಐ. ಲೋಕನಾಥ್ ಮತ್ತು ನಾಲ್ವರು ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದೆ. ಅಲ್ಲದೆ, ಪೊಲೀಸರು ಸುಶಾನ್ ಅವರ ತಾಯಿ ಸುಧಾ ಎಂ. ರೈಯವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸುಧಾ ರೈಯವರ ಮೊಬೈಲ್ ಫೋನಿನ ಪಾಸ್ವರ್ಡ್ ಸುಶಾನ್ ಅವರಿಗೆ ಗೊತ್ತಿತ್ತು ಎಂದೂ ಅವರು ಆ ಫೋನಿನಲ್ಲಿ‌ ಪಬ್ ಜಿಯಂತಹ ಅಪಾಯಕಾರಿ ಆಟ ಆಡುತ್ತಿದ್ದರೆಂದೂ ಜತೆಗೆ ಜಪಾನ್ ಮೂಲದ ಕ್ರೈಮ್ ಸಿನಿಮಾ ವೀಕ್ಷಿಸುತ್ತಿದ್ದರೆಂದೂ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸುಧಾ ಎಂ.ರೈಯವರ ಮೊಬೈಲ್ ಫೋನ್ ಸದ್ಯ ಬೆಂಗಳೂರಿನ‌ ವಿಧಿವಿಜ್ಞಾನ‌ ಪ್ರಯೋಗಾಲಯಕ್ಕೆ ರವಾನೆಯಾಗಲಿದ್ದು ಮೊಬೈಲ್ ಫೋನ್ ಪರಿಶೀಲನೆ ಬಳಿಕ ಸತ್ಯಾಂಶ ಹೊರ ಬರಲಿದೆ. ಸುಶಾನ್ ರೈ ವಿದ್ಯಾಭ್ಯಾಸ ನಡೆಸುತ್ತಿದ್ದ ಸುದಾನ ಶಾಲೆಯ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಸುಶಾನ್ ರೈ ಕುರಿತು ಉತ್ತಮ ಅಭಿಪ್ರಾಯವನ್ನು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here