ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ತ್ರಿವರ್ಣ ಧ್ವಜ ಹಸ್ತಾಂತರ – ಬನ್ನೂರು ಅಂಗನವಾಡಿಯಲ್ಲಿ ವಾರ್ಡ್ ಮಟ್ಟದ ಪ್ರಥಮ ಚಾಲನೆ

0

ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಸಂಬಂಧಿಸಿ ಪುತ್ತೂರು ನಗರಸಭೆಯಿಂದ ಪ್ರತಿ ವಾರ್ಡ್‌ಗಳಲ್ಲೂ ತ್ರಿವರ್ಣ ಧ್ವಜ ಹಸ್ತಾಂತರ ಕಾರ್ಯಕ್ರಮಕ್ಕೆ ಬನ್ನೂರು ಅಂಗನವಾಡಿಯಲ್ಲಿ ನಗರಸಭಾ ಸದಸ್ಯೆ ಗೌರಿ ಬನ್ನೂರು ಅವರ ವಾರ್ಡ್‌ನಲ್ಲಿ ಆ.೧೦ರಂದು ಧ್ವಜ ವಿತರಣೆ ಮಾಡುವ ಪ್ರಥಮ ಚಾಲನೆ ನೀಡಲಾಯಿತು.

ದೇಶಾಭಿಮಾನ ಬೆಳೆಯಲಿ:
ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸಾಂಕೇತಿಕವಾಗಿ ತ್ರಿವರ್ಣ ಧ್ವಜ ವಿತರಣೆ ಮಾಡಿದರು. ಸ್ವಾತಂತ್ರ್ಯದ ಅರಿವು ಮೂಡಿಸುವ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ಪ್ರಧಾನ ಮಂತ್ರಿ ಕರೆ ಕೊಟ್ಟಿದ್ದಾರೆ. ಅದರಂತೆ ತ್ರಿವರ್ಣ ಧ್ವಜವನ್ನು ಆ.೧೩ ಕ್ಕೆ ಧ್ವಜಾರೋಹಣ ಮಾಡಿ ಆ.೧೫ಕ್ಕೆ ಧ್ವಜಾಅವರೋಹಣ ಮಾಡುವ ಮೂಲಕ ಗೌರವ ಕೊಡಬೇಕೆಂದರು. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೫,೫೦೦ ಮನೆಗಳಿದ್ದು, ಪ್ರತಿಯೊಂದು ಮನೆಗಳಲ್ಲೂ ಧ್ವಜಾರೋಹಣ ಮಾಡಿ ಧ್ವಜಕ್ಕೆ ಗೌರವ ನೀಡಿ ಎಂದ ಅವರು ನಗರಭೆಯಿಂದ ಒಂದು ಧ್ವಜಕ್ಕೆ ರೂ. ೨೨ ದರ ನಿಗದಿಪಡಿಸಲಾಗಿದೆ. ಯಾರಿಗೆ ಧ್ವಜ ಬೇಕು ಅವರು ನಗರಸಭೆಯಿಂದ ಪಡೆಯಬಹುದು ಎಂದರು.

ಪ್ರತಿ ಮನೆಯಲ್ಲೂ ಧ್ವಜ ಅರಳಲಿ:
ಶಿಶು ಅಭಿವೃದ್ಧಿಯೋಜನಾಧಿಕಾರಿ ಶ್ರೀಲತಾ ಅವರು ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶ ಪ್ರೇಮವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಮನೆಯಲ್ಲೂ ಧ್ವಜ ಅರಳಲಿ ಎಂದು ಹೇಳಿದರು.

ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಪುಣ್ಯದ ಕೆಲಸ:
ನಗರಸಭೆ ಸದಸ್ಯೆ ಗೌರಿ ಬನ್ನೂರು ಅವರು ಮಾತನಾಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸ್ವಾತಂತ್ರೋತ್ಸವವನ್ನು ಸಂಭ್ರಮದಲ್ಲಿ ಆಚರಿಸಬೇಕು. ಜೊತೆಗೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ನಮಗೆ ಸಿಕ್ಕಿದ ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ಎಲ್ಲರು ರೂ. ೨೨ ಕೊಟ್ಟು ತ್ರಿವರ್ಣ ಧ್ವಜ ಖರೀದಿಸಬೇಕೆಂದು ಹೇಳಿದರು. ಬನ್ನೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಸ್ಪೂರ್ತಿ ಯುವ ಸಂಸ್ಥೆಯ ಸಂಚಾಲಕ ದಿನೇಶ್ ಸಾಲಿಯಾನ್, ಕಂದಾಯ ಇಲಾಖೆ ಗ್ರಾಮಕರಣಿಕ ಪುರುಷೋತ್ತಮ ಅವರಿಗೆ ಸಾಂಕೇತಿಕವಾಗಿ ಧ್ವಜ ಹಸ್ತಾಂತರಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಹರಿಣಾಕ್ಷಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರಣಿತ, ಅಂಗನವಾಡಿ ಕಾರ್ಯಕರ್ತೆ ರತ್ನ, ನಿವೃತ್ತ ಕಂದಾಯ ನಿರೀಕ್ಷ ರಾಧಾಕೃಷ್ಣ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಗೌರಿ ಬನ್ನೂರು ಸ್ವಾಗತಿಸಿ, ರೋಹಿಣಿ ವಂದಿಸಿದರು.

LEAVE A REPLY

Please enter your comment!
Please enter your name here