ಕರ್ನಾಟಕ ಪತ್ರಕರ್ತರ ಸಂಘದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ, ಆಟಿ ಆಚರಣೆ-ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಸಮಿತಿ ವತಿಯಿಂದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಹಾಗೂ ಆಟಿ ಆಚರಣೆ ಆ.10ರಂದು ನೆಲ್ಲಿಕಟ್ಟೆ ಮಾತೃಛಾಯಾ ಸಭಾಭವನದಲ್ಲಿ ನಡೆಯಿತು. ಹಿರಿಯರಾದ ದೇವಕಿ ಜಿನ್ನಪ್ಪ ಗೌಡ ಪೋಳ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಆಟಿ ಆಚರಣೆ ಕುರಿತು ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಮಾತನಾಡಿ ಆಟಿ ಆಚರಣೆಗೆ ತುಳು ನಾಡಿನಲ್ಲಿ ತನ್ನದೇ ಆದ ಇತಹಾಸವಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಬಹಳ ಸಂಕಷ್ಟದ ತಿಂಗಳು ಎನ್ನುವ ಪ್ರತೀತಿ ಇದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಅಂತಹ ಸಂಕಷ್ಟಗಳು ಕಡಿಮೆ ಎಂದು ಹೇಳಿದರು. ಆಧುನಿಕತೆಯ ಭರಾಟೆಯಲ್ಲಿ ಅನೇಕ ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿದ್ದರೂ ಕೂಡಾ ಕೆಲವು ಆಚರಣೆಗಳು ಇಂದಿಗೂ ನಡೆಯುತ್ತಲೇ ಇದೆ, ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಲಕ್ಷ್ಮೀಕಾಂತ್ ರೈ ಹೇಳಿದರು.

ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಮಾತನಾಡಿ ಸ್ವಾತಂತ್ರ‍್ಯ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾದ ಆಚರಣೆಯಲ್ಲ, ದೇಶದ ಅನೇಕ ಹೋರಾಟಗಾರರ ಹೋರಾಟ, ತ್ಯಾಗ, ಪರಿಶ್ರಮದ ಫಲವಾಗಿ ನಮಗೆ ಸ್ವಾತಂತ್ರ‍್ಯ ದೊರಕಿದ್ದು ಅವರ ನೆನಪು ಮತ್ತು ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಹೇಳಿದರು. ಸ್ವಾತಂತ್ರ‍್ಯ ದಿನಾಚರಣೆ ಇಡೀ ಭಾರತೀಯರ ಹಬ್ಬವಾಗಿದ್ದು ಈ ಬಾರಿ ಅಮೃತ ಮಹೋತ್ಸವ ಆದ ಕಾರಣ ನಾವೆಲ್ಲರೂ ಸಂಭ್ರಮದಿಂದ ಆಚರಿಸಬೇಕು. ದೇಶಕ್ಕಾಗಿ ಬಲಿದಾನವಾದ ಮಹಾನ್ ವ್ಯಕ್ತಿಗಳನ್ನು ಸದಾ ಸ್ಮರಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸದಸ್ಯ ಶ್ರೀಧರ್ ರೈರವರ ಪುತ್ರ ದ್ವಿತೀಯ ಪಿಯುಸಿಯಲ್ಲಿ 96.16% ಅಂಕ ಗಳಿಸಿ ಸಾಧನೆ ಮಾಡಿರುವ ಶರಣ್ ರೈ ಎಸ್ ಅವರನ್ನು, ತಿಲಕ್ ರೈ ಕುತ್ಯಾಡಿರವರ ಪುತ್ರ ದ್ವಿತೀಯ ಪಿಯುಸಿಯಲ್ಲಿ 89% ಅಂಕ ಗಳಿಸಿ ಸಾಧನೆ ಮಾಡಿರುವ ಸಾತ್ವಿಕ್ ರೈ ಕುತ್ಯಾಡಿಯವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಕವಿತಾ ವಿಶ್ವನಾಥ್‌ರವರ ಪುತ್ರಿ ಬಿಎಸ್ಸಿ ಪದವಿ ಶಿಕ್ಷಣದಲ್ಲಿ 71.52% ಅಂಕ ಗಳಿಸಿ ಸಾಧನೆ ಮಾಡಿರುವ ದೀಪ್ತಿ ಎಂ.ವಿ ಅವರ ಅನುಪಸ್ಥಿತಿಯಲ್ಲಿ ಅವರ ತಾಯಿ ಕವಿತಾ ವಿಶ್ವನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ ಶಿವಾನಂದ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಗುರುತಿಸಿ ಸನ್ಮಾನಿಸಿರುವುದು ಒಳ್ಳೆಯ ಕಾರ್ಯ. ಈ ಸನ್ಮಾನ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ. ಸಂಘದ ಮೂಲಕ ಇಂತಹ ಕಾರ್ಯಕ್ರಮಗಳು ಮುಂದಕ್ಕೂ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ ನಮ್ಮ ಸಂಘದ ವತಿಯಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾಮಾಜಿಕ ಜವಾಬ್ದಾರಿ ಅರಿತು ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಆಟಿ ಆಚರಣೆ ಸಂಭ್ರಮ:
ಸಂಘದ ವತಿಯಿಂದ ನಡೆದ ಆಟಿ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಆಟಿ ವಿಶೇಷ ತಿನಿಸುಗಳು ಗಮನ ಸೆಳೆಯಿತು.

ಕ್ವಿಝ್ ಸ್ಪರ್ಧೆ-ಬಹುಮಾನ ವಿತರಣೆ
ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಕ್ವಿಝ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಶ್ರೀಧರ್ ರೈ ಕೋಡಂಬು, ಶಿವಕುಮಾರ್ ಈಶ್ವರಮಂಗಲ, ಗಣೇಶ್ ಕಲ್ಲರ್ಪೆ, ಪ್ರಜ್ವಲ್ ಪುತ್ತೂರು, ಉಮಾಪ್ರಸಾದ್ ರೈ ನಡುಬೈಲು ಹಾಗೂ ಚಿತ್ರಾಂಗಿಣಿಯವರು ವಿಜೇತರಾದರು. ಸಂಘದ ಅಧ್ಯಕ್ಷ ಯೂಸುಫ್ ರೆಂಜಲಾಡಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಕ್ವಿಝ್ ಸ್ಪರ್ಧೆಯನ್ನು ನಿರ್ವಹಿಸಿದರು.


ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಉಪಾಧ್ಯಕ್ಷೆ ಶೈಲಜಾ ಸುದೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರಾದ ರಕ್ಷಿತಾ ಹಾಗೂ ಚಿತ್ರಾಂಗಿಣಿ ಪ್ರಾರ್ಥಿಸಿದರು. ಕೋಶಾಧಿಕಾರಿ ನರೇಶ್ ಜೈನ್ ವಂದಿಸಿದರು. ಸಂಘದ ಸದಸ್ಯರು, ಸುದ್ದಿ ಬಳಗದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here