ಸಂಟ್ಯಾರ್‌ನಲ್ಲೊಂದು ಮಾದರಿ ಕಾರ್ಯಕ್ರಮ…! ಅಂಗನವಾಡಿ ಕಾರ್ಯಕರ್ತೆ ಶಾಂತಿಯವರಿಗೆ ಅದ್ಧೂರಿ ವಿದಾಯ, ಸಾರ್ವಜನಿಕ ಸನ್ಮಾನ

0

ಪುತ್ತೂರು:ಸಾಮಾನ್ಯವಾಗಿ ಸರಕಾರಿ ನೌಕರರಿಗೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ಬೀಳ್ಕೊಡುಗೆ, ಸಾರ್ವಜನಿಕ ಸನ್ಮಾನ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತದೆ. ಆದರೆ ಸಂಟ್ಯಾರ್ ಹಿ.ಪ್ರಾ ಶಾಲೆಯಲ್ಲಿ ಆ.13ರಂದು ನಡೆದ ಕಾರ್ಯಕ್ರಮ ಇದಕ್ಕೆ ಭಿನ್ನವಾಗಿದೆ. ಪುತ್ತೂರು, ಕಡಬ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ನೆರವೇರಿದ್ದು ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯೋರ್ವರನ್ನು ಸಾರ್ವಜನಿಕ ಅಭಿನಂದನಾ ಸಮಿತಿ ರಚಿಸಿಕೊಂಡು ಅದ್ದೂರಿಯಾಗಿ ಸಾರ್ವಜನಿಕ ಸನ್ಮಾನ ಹಾಗೂ ವಿದಾಯ ನಡೆಸುವ ಮೂಲಕ ಮಾದರಿ ಕಾರ್ಯಕ್ರಮ ನೆರವೇರಿಸಿದ್ದಾರೆ.

ಸಂಟ್ಯಾರ್ ಅಂಗನವಾಡಿ ಕೇಂದ್ರದಲ್ಲಿ ಕಳೆದ ೩೨ ವರ್ಷಗಳಿಂದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಶಾಂತಿ ಮಂಜುನಾಥ ರೈಯವರನ್ನು ಸಾರ್ವಜನಿಕ ಸನ್ಮಾನ, ವಿದಾಯ ಕೂಟ ನೆರವೇರಿಸಿದ್ದಾರೆ. ಶಾಂತಿ ಮಂಜುನಾಥ ರೈಯವರ ಸಾರ್ವಜನಿಕ ಸನ್ಮಾನ ಸಮಿತಿ, ಬಾಲವಿಕಾಸ ಸಮಿತಿ ಹಾಗೂ ಸ್ತ್ರೀಶಕ್ತಿ ಸಂಘಗಳ ಜಂಟೀ ಆಶ್ರಯದಲ್ಲಿ ಸಾರ್ವಜನಿಕ ಸನ್ಮಾನ ಹಾಗೂ ವಿದಾಯ ಸಮಾರಂಭವನ್ನು ಸಂಟ್ಯಾರು ಸರಕಾರಿ ಹಿ.ಪ್ರಾ ಶಾಲೆಯಲ್ಲಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿ ಅತಿಥಿಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಿವೃತ್ತ ಕಾರ್ಯಕರ್ತೆ ಶಾಂತಿಯವರು ಶಾಂತಿಯ ಸ್ವಭಾವದವರು. ಅವರು ಇಡೀ ಸಮಾಜದವರನ್ನು ಆಕರ್ಷಿಸುವ ರೀತಿಯಲ್ಲಿ ಸೇವೆ ನೀಡಿರುತ್ತಾರೆ. ಹೀಗಾಗಿ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ಎಲ್ಲಿಯೂ ನಡೆದಿಲ್ಲ. ಸಂಟ್ಯಾರ್‌ನಲ್ಲಿ ಪ್ರಥಮ ಬಾರಿಗೆ ನಡೆದಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತರನ್ನು ಸನ್ಮಾನಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾರ್ಯಕರ್ತೆ ಶಾಂತಿಯವರ ತ್ಯಾಗಮಯ ಬದುಕು, ಸಮಾಜಮುಖಿ ಸೇವೆ, ಮಕ್ಕಳ ಸ್ನೇಹಿ, ಮಾತೃಹೃದಯದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರ ಕಾರ್ಯತತ್ಪರೆತ ಎಲ್ಲರನ್ನೂ ಆಕರ್ಷಿಸುವಂತೆ ಮಾಡಿದೆ. ಅವರ ತಾಯಿ ಹೃದಯದ ಪ್ರೀತಿ ಎಲ್ಲರಲ್ಲೂ ಮನೆ ಮಾಡಿದೆ. ಹೀಗಾಗಿ ಇಂದು ನೂರಾರು ಮಂದಿ ಸಾರ್ವಜನಿಕರು ಒಟ್ಟಾಗಿ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೃತ್ತಿ ಧರ್ಮ ಪಾಲನೆ ಮಾಡಿ, ನಾಗರಿಕರಿಗೆ ಉತ್ತಮ ಸೇವೆ ನೀಡಿದಾಗಿ ಸಮಾಜ ಗುರುತಿಸಿ, ಗೌರವಿಸುತ್ತದೆ. ಅವರ ನಿವೃತ್ತಿಯ ಸಂದರ್ಭದಲ್ಲಿ ಕಣ್ಣೀರುಡುತ್ತಾರೆ. ಅದೇ ಕಾರ್ಯಾವನ್ನು ಇಂದು ಸಂಟ್ಯಾರ್ ಜನತೆ ಮಾಡಿದ್ದಾರೆ ಎಂದ ಶಾಸಕರು, ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ವೇತನಕ್ಕೆ ಅಧಿಕ ಕೆಲಸ ನಿರ್ವಹಿಸುವವರು. ಇದರ ಬಗ್ಗೆ ಹಲವು ಬಾರಿ ವಿಧಾನ ಸಭೆಯಲ್ಲಿ ಸರಕಾರದ ಗಮನೆ ಸೆಳೆದಿದ್ದೇನೆ. ವಿಧಾನ ಸಭಾ ವ್ಯಾಪ್ತಿಯ ೨೧೫ ಅಂಗನವಾಡಿ ಕೇಂದ್ರಗಳಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಒಬ್ಬ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಗೆ ಸಾರ್ವಜನಿಕ ಸನ್ಮಾನ ಪ್ರಥಮ ಸಂಟ್ಯಾರ್‌ನಲ್ಲಿ ಬಾರಿಗೆ ನಡೆಯುತ್ತಿದೆ. ತನ್ನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ, ತಮ್ಮ ಶಾಂತ ಸ್ವಭಾವದ ಮೂಲಕ ಸಮಾಜಕ್ಕೆ ಶಾಂತಿಯುತ ಮಕ್ಕಳನ್ನು ಬೆಳೆಸಿದ ಕಾರ್ಯಕರ್ತೆ ಶಾಂತಿಯವರಿಗೆ ಅದ್ದೂರಿ ಸನ್ಮಾನ ನಡೆಯುತ್ತಿರುವುದು ನಿಮ್ಮ ಶಾಂತಿಯ ಸ್ವಭಾವಕ್ಕೆ ನಿದರ್ಶನವಾಗಿದೆ. ಉತ್ತಮ ಸೇವೆ ನೀಡಿದರೆ ಸಮಾಜ ಅವರನ್ನು ಗುರುತಿಸುತ್ತದೆ ಎನ್ನುವುದಕ್ಕೆ ಸಂಟ್ಯಾರ್‌ನ ಜನತೆ ಸಾಕ್ಷಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಎಂಆರ್‌ಪಿಎಲ್‌ನ ಮುಖ್ಯ ವ್ಯವಸ್ಥಾಪಕ ಸೀತಾರಾಮ ರೈ ಕೈಕಾರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಶಾಂತಿಯವರು ಹಲವು ಮಕ್ಕಳ ತಾಯಿ. ಅವರು ನಿಸ್ವಾರ್ಥ ಸೇವೆಯ ಪ್ರತಿ ರೂಪ. ಸಾರ್ಥಕ ಜೀವನ ನಡೆಸಿ, ಜಿಲ್ಲೆಗೆ ಮಾದರಿ ಶಿಕ್ಷಕಿ ಎನಿಸಿಕೊಂಡವರು. ಅವರ ಹೆಸರಿಗೆ ಅನ್ವರ್ಥನಾಮ ಎಂಬಂತೆ ಅವರ ಕಾರ್ಯವೈಖರಿಯು ಇದೆ. ಶಾಂತಿಯವರ ಸಾರ್ವಜನಿಕ ಸನ್ಮಾನ ಎಲ್ಲರಿಗೂ ಮಾದರಿ. ಅಧಿಕಾರದ ದುರುಪಯೋಗ ಪಡಿಸಿಕೊಳ್ಳುವವರಿಗೆ ಪಾಠವಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಗೆ ಇಂತಹ ಅದ್ದೂರಿ ವಿದಾಯ ಸಮಾರಂಭ ಈ ತನಕ ಎಲ್ಲಿಯೂ ನಡೆದಿಲ್ಲ. ಇದು ತಾಲೂಕಿನಲ್ಲಿ ವಿಶೇಷ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ ಮಾತನಾಡಿ, ಅಂಗನವಾಡಿ ಕಾರ್ಯಕರ್ತಗೆ ಸಾರ್ವಜನಿಕವಾಗಿ ಸನ್ಮಾನಿಸಿರುವುದು ಜಿಲ್ಲೆಗೆ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ ಮಾತನಾಡಿ, ಕಾರ್ಯಕರ್ತೆಯಾಗಿರುವ ಶಾಂತಿಯವರು ನಿಜವಾಗಿಯೂ ಶಾಂತಿಯುತ ಕಾರ್ಯಕರ್ತೆ. ಮಕ್ಕಳಿಗೆ ಜೀವನದ ಪಾಠ ಕಲಿಸುವುದೇ ಅಂಗನವಾಡಿ ಕೇಂದ್ರಗಳಲ್ಲಿ ಎಂದರು.

ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆ ಶಾಂತಿಯವರು ೩೨ ವರ್ಷಗಳ ಕಾಲ ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಿದವರು ಎಂದರು.

ಅಭಿನಂದನಾ ಸಮಿತಿ ಗೌರವ ಸಲಹೆಗಾರ ಎ.ಪಿ ಸದಾಶಿವ ಭಟ್, ಅಂಗನವಾಡಿಯಲ್ಲಿ ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ಕಾರ್ಯಕರ್ತೆ ಶಾಂತಿಯವರ ಗುಣ ಎಲ್ಲರಿಗೂ ಆದರ್ಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಮಾತನಾಡಿ, ಮಗುವನ್ನು ಸಾಕುವ ಕಷ್ಟ ತಾಯಿಗೆ ಮಾತ್ರ ಗೊತ್ತು. ಹೀಗಿರುವಾಗ ೩ ವರ್ಷದ ನಂತರ ಹಲವು ಮಕ್ಕಳನ್ನು ಅಂಗನವಾಡಿಯಲ್ಲಿ ಬೆಳೆಸುತ್ತಾರೆ. ಅವರ ತಾಳ್ಮೆ ನಿಜವಾಗಲೂ ಶ್ಲಾಘನೀಯವಾಗಿದ್ದು ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಮೆಚ್ಚುವಂತಹದ್ದು ಎಂದರು.

ಸನ್ಮಾನ ಸ್ವೀಕರಿಸಿದ ಶಾಂತಿ ಮಂಜುನಾಥ ರೈಯವರು ಮಾತನಾಡಿ, ತನ್ನ ಸುಧೀರ್ಘ ೩೨ ವರ್ಷಗಳ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡರು. ಸೇವೆಯ ಅವಧಿಯಲ್ಲಿ ಸಹಕರಿಸಿದರವರಿಗೆ ಧನ್ಯವಾದ ಅರ್ಪಿಸಿದರು.

ಸನ್ಮಾನ:
ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾಂತಿ ಮಂಜುನಾಥ ರೈಯವರನ್ನು ಶಾಲು ಹೊದಿಸಿ, ಹಾರ ಹಾಕಿ, ಪೇಟ ತೋಡಿಸಿ ಕವಿಯೋಲೆ ಕೊಡುಗೆ ನೀಡಿ ಸಾರ್ವಜನಿಕ ಅಭಿನಂದನಾ ಸಮಿತಿಯವರು ಸನ್ಮಾನಿಸಿದರು. ಅಂಗನವಾಡಿ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ, ಸ್ವಸಹಾಯ, ಪ್ರಗತಿ ಬಂಧು ತಂಡ, ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂಸಿ ಹಾಗೂ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ, ಅಡುಗೆ ಸಿಬಂದಿಗಳು ನಿವೃತ್ತರನ್ನು ಶಾಲು, ಹೂಹಾರ, ಫಲಪುಷ್ಪ ನೀಡಿ ಸನ್ಮಾನಿಸಿದರು. ಹಲವು ಮಂದ ವಿದ್ಯಾರ್ಥಿಗಳು ತಮ್ಮ ಒಳುಮೆಯ ಶಿಕ್ಷಕಿಗೆ ನಲ್ಮೆಯ ಕಿರುಕಾಣಿಕೆ ನೀಡಿ ಗೌರವಿಸಿದರು.

ನೂತನ ಕಾರ್ಯಕರ್ತೆಗೆ ಸ್ವಾಗತ:
ಅಂಗನವಾಡಿಯ ನೂತನ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಲಿರುವ ವೇದಾವತಿಯವರನ್ನು ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಶಾಂತಿ ರೈಯವರು ಅಂಗನವಾಡಿಗೆ ನೀಡಿದ ಕೊಡುಗೆಯನ್ನು ಕಾರ್ಯಕರ್ತೆ ವೇದಾವತಿ ಹಾಗೂ ಸಹಾಯಕಿ ಗೀತಾಯವರಿಗೆ ಹಸ್ತಾಂತರಿಸಿದರು.

ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಣೇಶ್ ರೈ ಮೂಲೆ, ಸಾರ್ವಜನಿಕ ಸನ್ಮಾನ ಸಮಿತಿ ಅಧ್ಯಕ್ಷ ಯತೀಶ್ ದೇವ, ಉಪಾಧ್ಯಕ್ಷ ಹಮೀದಾಲೀಸ್, ಹನುಮಾನ್ ಏಜೆನ್ಸಿ ಮ್ಹಾಲಕ ದಿನೇಶ್ ರೈ ಮೂಲೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮಾಧವಿ ಕುಶಾಲಪ್ಪ ಗೌಡ ದೇವಸ್ಯ, ಮಾತನಾಡಿ, ನಿವೃತ್ತರಿಗೆ ಶುಭಹಾರೈಸಿದರು.

ಮಾತೃಶ್ರೀ ಅರ್ತ್ ಮೂವರ್ಸ್ ಮ್ಹಾಲಕ ಮೋಹನದಾಸ್ ರೈ ಕುಂಬ್ರ, ಉದ್ಯಮಿ ಹ್ಯಾರೀಸ್ ಸಂಟ್ಯಾರು, ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಕರ್ಕೇರ ಮರಿಕೆ, ರಝಾಕ್ ಸಂಟ್ಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಟ್ಯಾರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ಸಾವಿತ್ರಿ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾ ವಂದಿಸಿದರು. ಶಿಕ್ಷಕಿ ವತ್ಸಲಾ ಹಾಗೂ ಶಶಿಧರ್ ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿಯ ಹಿರಿಯ ವಿದ್ಯಾರ್ಥಿಗಳಾದ ವೈಷ್ಣವಿ, ಬಿಂದುಶ್ರೀ, ಸುಬ್ಬು ಸಂಟ್ಯಾರ್, ಶರತ್ ಆಳ್ವ, ಸ್ತ್ರೀಶಕ್ತಿ ಸಂಘದ ಸದಸ್ಯರಾದ ಜಯಂತಿ ಮಿತ್ತಡ್ಕ, ರಾಧಿಕಾ ಮರಿಕೆ ಹಾಗೂ ಶಶಿಧರ ಗೌಡ ಮರಿಕೆ ನಿವೃತ್ತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆಯಿತು.

LEAVE A REPLY

Please enter your comment!
Please enter your name here