ಅಕ್ಷಯ ಕಾಲೇಜ್‌ನಲ್ಲಿ ಮೇಳೈಸಿದ ಆಟಿ ಕೂಟ

0

  • ಇಂದಿನ ಆಟಿ ಅಂದಿನ ತುಳುನಾಡಿನ ಹಿರಿಯರ ಬದುಕಾಗಿತ್ತು-ಡಾ|ಗಣೇಶ್ ಅಮೀನ್

ಪುತ್ತೂರು: ಆಟಿ ತಿಂಗಳು ಎಂದರೆ ಮಾಂತ್ರಿಕ ತಿಂಗಳು. ಆಟಿ ತಿಂಗಳಿಗೆ ಅದರದ್ದೇ ಆದ ಪ್ರಾಶಸ್ತ್ಯವಿತ್ತು. ಆಟಿ ತಿಂಗಳಿನಲ್ಲಿ ವಿಜ್ಞಾನವಿತ್ತು. ಆಯುರ್ವೇದ ಸತ್ವವಿತ್ತು. ಆಟಿ ಎಂದರೆ ಮನೋವಿಜ್ಞಾನ, ಜೀವ ವಿಜ್ಞಾನ, ಫ್ಯಾಶನ್ ಡಿಸೈನಿಂಗ್, ಕುಟುಂಬ ವಿಜ್ಞಾನವು ಅಡಕವಾಗಿದೆ. ಇಂದು ನಾವು ಆಚರಿಸುತ್ತಿರುವ ಆಟಿ ಅಂದಿನ ತುಳುನಾಡಿನ ಹಿರಿಯರ ಬದುಕಾಗಿತ್ತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣಗುರು ತುಳು ಅಧ್ಯಯನ ಪೀಠದ ನಿರ್ದೇಶಕ ಹಾಗೂ ತುಳು ವಿದ್ವಾಂಸರಾದ ಡಾ|ಗಣೇಶ್ ಅಮೀನ್ ಸಂಕಮಾರ್‌ರವರು ಹೇಳಿದರು.

ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜ್ ವತಿಯಿಂದ ಂ.೧೩ ರಂದು ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ನಡೆದ `ಆಟಿ ಕೂಟ’ದಲ್ಲಿ ಹಿಂಗಾರವನ್ನು ಅರಳಿಸುವ ಮೂಲಕ ಹಾಗೂ ಆಟಿ ಕೂಟದ ಮಹತ್ವದ ಕುರಿತು ಮಾತನಾಡಿದರು. ಇಂದಿನ ಆಟಿ ಎಂದರೆ ಕೇವಲ ಫ್ಯಾಶನ್ ಆಗಿದೆ. ಅಂದಿನ ತಿಂಗಳ ಆಟಿಯಲ್ಲಿ ಪ್ರತಿ ದಿನವೂ ಒಂದೊಂದು ಆರೋಗ್ಯದಾಯಿಕ ತಿನಸುಗಳಿದ್ದವು. ಇಂದು ನೂರಾರು ಬಗೆಯ ಆಟಿ ತಿನಸುಗಳನ್ನು ಒಂದೇ ದಿನ ಬಡಿಸುವಂತಾಗಿದೆ. ಅಂದಿನ ಆಟಿ ಎಂದರೆ ಅದು ಹಸಿವನ್ನು ನೀಗಿಸುವುದಾಗಿತ್ತು. ಅಕ್ಷಯ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ಎಂಬ ಕಲೆಯನ್ನು ಪ್ರಸ್ತುತಪಡಿಸುವುದರಿಂದ ಹಿಂದಿನ ಸಾಂಸ್ಕೃತಿಕ ಪರಿಕರಗಳ ಪರಂಪರೆಯನ್ನು ಇಂದಿನ ಸಮಾಜಕ್ಕೆ ಪರಿಚಯಿಸಬಹುದಾಗಿದೆ. ಹಿಂದಿನ ಪೂರ್ವಜರಿಗೆ ಆಟಿ ತಿಂಗಳು ಎಂದರೆ ಅದು ವರ್ಕ್ ಫ್ರಮ್ ಹೋಮ್ ಆಗಿತ್ತು. ಆದರೆ ಇಂದು ಕೊರೋನಾ ಕಾಲಘಟ್ಟದಲ್ಲಿ ಅದು ವರ್ಕ್ ಫ್ರಮ್ ಹೋಮ್ ಆಗಿದೆ. ಹಿಂದಿನ ಆಹಾರ ಪದ್ಧತಿ ಎಂದರೆ ಅದು ಆರೋಗ್ಯಕ್ಕೆ ಹಿತಕಾರಿ `ಮದ್ದು’ ಆಗಿತ್ತು. ಇಂದಿನ ಅಹಿತಕಾರಿ ಆಹಾರ ಪದ್ಧತಿಯೇ ಮನುಷ್ಯನ `ಮದ್ದು’ ಎನಿಸಿಬಿಟ್ಟಿದೆ ಎಂದ ಅವರು ಹಿಂದಿನ ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳು ಅಕ್ಷಯ ಕಾಲೇಜಿನಲ್ಲಿ ಬಹಳ ಅಚ್ಚುಕಟ್ಟಾಗಿ ಜೋಡಣೆ ಮಾಡುವ ಮೂಲಕ ಕಾಣ ಸಿಗುತ್ತವೆ ಮಾತ್ರವಲ್ಲದೆ ಹಿರಿಯರು ಬಳಸುವ ಕರಕುಶಲ ವಸ್ತುಗಳಿಗೆ ಮತ್ತು ಅಕ್ಷಯ ಕಾಲೇಜಿನ ಫ್ಯಾಶನ್ ಡಿಸೈನಿಂಗ್‌ಗೆ ಬಹಳ ಸಾಮ್ಯತೆಯಿದೆ ಎಂದೆನಿಸುತ್ತದೆ. ಫ್ಯಾಶನ್ ಡಿಸೈನಿಂಗ್ ಕಲಿತ ವಿದ್ಯಾರ್ಥಿಗೆ ಹಸಿವನ್ನು ನೀಗಿಸುವ ಉದ್ಯೋಗವಂತೂ ಖಂಡಿತಾ ದೊರಕಬಲ್ಲುದು ಎಂದು ಅವರು ಹೇಳಿದರು.

ಹಿಂದಿನ ಸಂಸ್ಕೃತಿ ಉಳಿಸುವತ್ತ ನಾವೆಲ್ಲ ಒಗ್ಗೂಡಬೇಕಾಗಿದೆ-ನವೀನ್ ಭಂಡಾರಿ:
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಿಂದಿನ ಹಿರಿಯರ ಸಂಸ್ಕೃತಿ ನಶಿಸುವತ್ತ ಕಾಲ ಬದಲಾಗುತ್ತಿದೆ. ಹಿಂದಿನ ಸಂಸ್ಕೃತಿ ಉಳಿಸುವತ್ತ ನಾವೆಲ್ಲ ಒಗ್ಗೂಡಬೇಕಾಗಿದೆ. ಡಾಕ್ಟರ್‍ಸ್, ಇಂಜಿನಿಯರ್‍ಸ್ ಆಗಬೇಕು ಎನ್ನುವ ಭರಾಟೆಯಲ್ಲಿರುವಾಗ ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಕೋರ್ಸ್‌ಗಳ ಕಾಲೇಜನ್ನು ಸ್ಥಾಪಿಸಿ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಹುದು ಎನ್ನುವ ಕನಸಿನೊಂದಿಗೆ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಜಯಂತ್ ನಡುಬೈಲುರವರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಮಾತ್ರವಲ್ಲದೆ ಜಯಂತ್‌ರವರು ಶಿಕ್ಷಣ ಕ್ಷೇತ್ರವಲ್ಲದೆ ಸಾಮಾಜಿಕ, ಧಾರ್‍ಮಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ ಎಂದರು.

ಆಟಿಕೂಟ ಎಂಬುದು ತುಳುನಾಡಿನ ವೈಶಿಷ್ಟ್ಯತೆಗಳಲ್ಲೊಂದಾಗಿದೆ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಆಟಿಕೂಟ ಎಂಬುದು ತುಳುನಾಡಿನ ವೈಶಿಷ್ಟ್ಯತೆಗಳಲ್ಲೊಂದಾಗಿದೆ. ಇಂದಿನ ವಿದ್ಯಾರ್ಥಿಗಳು ಗೂಗಲ್ ಪ್ರಪಂಚದಲ್ಲಿ ತೇಲುತ್ತಿದ್ದಾರೆ. ಅವರಿಗೆ ಹಿಂದಿನ ಪೂರ್ವಜರು, ಗುರು-ಹಿರಿಯರು ಪಟ್ಟ ವೇದನೆ, ಕಷ್ಟದ ಅರಿವು ಗೊತ್ತಾಗಬೇಕಿದೆ. ಹಿಂದಿನ ಹಿರಿಯರು ಸಮಾಜದಲ್ಲಿ ಎಷ್ಟು ವರ್ಷ ಬದುಕಿದ್ದಾರೆ, ಅವರ ಬದುಕಿನ ಹಿಂದೆ ಆಹಾರ ಪದ್ಧತಿ, ದಿನನಿತ್ಯದ ಕೆಲಸ ಹಾಗೂ ವ್ಯಾಯಾಮ ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ಅರಿಯಬೇಕಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರಸ್ತುತ ಜನಾಂಗ ಹಿರಿಯರ ಮಾತು ಕೇಳಿಕೊಂಡು ಆರೋಗ್ಯ ಸುಧಾರಿಸುವಲ್ಲಿ ಹೆಜ್ಜೆಯನ್ನಿಡಬೇಕಾಗಿದೆ ಎಂದ ಅವರು ಪುತ್ತೂರಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಬೇಕು, ಆ ಮೂಲಕ ಉದ್ಯೋಗ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಕಾಲೇಜನ್ನು ಸ್ಥಾಪಿಸಿರುವುದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಿದ್ದೇವೆ ಎಂದು ಅವರು ಹೇಳಿದರು.

ಹಿಂದಿನ ಬಡತನದ ಕಾಲದಲ್ಲಿ ನೆಮ್ಮದಿಯಿತ್ತು-ಗೋಪಾಲ ಗೌಡ:
ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡರವರು ಮಾತನಾಡಿ, ಇಂದಿನ ಯುವ ಜನಾಂಗ ವಯಸ್ಸು ೨೦ಕ್ಕೆ ಫ್ರೆಶರ್, ೩೦ಕ್ಕೆ ಶುಗರ್ ಮತ್ತು ೪೦ಕ್ಕೆ ಡಮಾರ್ ಈ ರೀತಿ ಆಗಿದೆ. ಇದಕ್ಕೆಲ್ಲ ಕಾರಣ ಜೀವನಶೈಲಿ, ಆಹಾರ ಪದ್ಧತಿಯಾಗಿದೆ. ಹಿಂದಿನ ಆರೋಗ್ಯಕರ ಆಹಾರಗಳನ್ನು ಇಡೀ ವಿಶ್ವವೇ ಶ್ರೇಷ್ಟ ಪೋಷಕಾಂಶವಿರುವ ಆಹಾರಗಳು ಎಂದು ದೃಢೀಕರಿಸಿವೆ. ಬರೀ ಕಾಲಲ್ಲಿ ಒಂದಷ್ಟು ಮೈಲಿ ನಡೆದರೆ ದೇಹದ ದೈಹಿಕ ಕ್ರಿಯೆಗಳು ಎಷ್ಟು ಪರಿಣಾಮಕಾರಿಯಾಗುತ್ತವೆ ಮಾತ್ರವಲ್ಲದೆ ಗಂಟು ನೋವು, ಫ್ರೆಶರ್, ಶುಗರ್ ಎಲ್ಲವೂ ನಿಯಂತ್ರಣದಲ್ಲಿಡುವಂತಾಗುತ್ತದೆ ಎಂದ ಅವರು ಹಿಂದಿನ ಬಡತನದ ಕಾಲದಲ್ಲಿ ನೆಮ್ಮದಿಯಿತ್ತು ಆದರೆ ಇಂದಿನ ಸಿರಿತನದ ಕಾಲದಲ್ಲಿ ನೆಮ್ಮದಿ ಎಂಬುದೇ ಇಲ್ಲ. ಏನೇ ಆಗಲಿ ಮಾನವ ಪ್ರಕೃತಿಗೆ ವಿರುದ್ಧವಾಗಿ ಹೋಗುವುದನ್ನು ತಡೆಯಬೇಕು, ಪ್ರಕೃತಿಯ ಓಳಿತಿಗಾಗಿ ಸದಾ ಮುನ್ನೆಡೆಯುವಂತಾಗಲಿ ಎಂದು ಅವರು ಹೇಳಿದರು.

ಅಕ್ಷಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಸ್ವಾಗತಿಸಿ, ಉಪನ್ಯಾಸಕಿ ಪ್ರಭಾವತಿ ವಂದಿಸಿದರು. ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು|ಸ್ವರ್ಣಜ್ಯೋಸ್ನಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರಾದ ಪಿ.ವಿ ನಾರಾಯಣನ್, ಕೆ.ಕೃಷ್ಣಪ್ಪ, ಪ್ರಮುಖರಾದ ಆರ್.ಸಿ ನಾರಾಯಣ್, ನಾರಾಯಣ ಪೂಜಾರಿ ಕುರಿಕ್ಕಾರ, ಉಪನ್ಯಾಸಕಿ ರಶ್ಮಿ, ವಿದ್ಯಾರ್ಥಿ ಸಂಘದ ಮೀಡಿಯಾ ಕಾರ್ಯದರ್ಶಿ ಜಶ್ಮಿತಾರವರು ಅತಿಥಿಗಳಿಗೆ ಶಾಲು ಹೊದಿಸಿ, `ಬಚ್ಚಿರೆ ಬಜ್ಜೆಯಿ’ ನೀಡಿ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಶ್ರೀ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಘಮಘಮಿಸಿದ ಖಾದ್ಯಗಳು…
ಉಪ್ಪಿನಕಾಯಿ, ತಿಮರೆ ಚಟ್ನಿ, ಹೆಸರುಕಾಳು ಚಟ್ನಿ, ಬೇವಿನ ಸೊಪ್ಪು ಚಟ್ನಿ, ಕೆಸದ ಎಲೆಯ ಚಟ್ನಿ, ಪುದಿನ ಮತ್ತು ಪಾಲಕ್ ಚಟ್ನಿ,ಬಾಳೆ ಹೂ ಚಟ್ನಿ, ಹುರುಳಿ ಚಟ್ನಿ, ಒಣ ಮೀನು ಚಟ್ನಿ, ಉಪ್ಪಡ್ ಪಚ್ಚಿಲ್, ಬಾಳೆದಿಂಡು ಪಲ್ಯ, ತಜಂಕ್ ಪಲ್ಯ, ಕಣಿಲೆ ಗಸಿ, ಪೂಂಬೆ ಗಸಿ, ಬಾಳೆದಿಂಡು ಸಾರು, ಕೆಸದ ದಂಡಿನ ಗಸಿ, ಅಣಬೆ ಗಸಿ, ಕೆಸುವಿನ ಬಳ್ಳಿಯ ಪುಳಿಮುಂಚಿ, ಬಾಳೆ ಹೂವಿನ ಗಸಿ, ಮಾವಿನಕಾಯಿ ಪುಳಿಮುಂಚಿ, ಪತ್ರೋಡೆ ಗಸಿ, ಸಿಹಿ ಪತ್ರೋಡೆ, ಅರಶಿನ ಗಟ್ಟಿ, ಅಕ್ಕಿ ರೊಟ್ಟಿ, ಹಲಸಿನಕಾಯಿ ಗಟ್ಟಿ, ಓಡ್ಪಲೆ, ಕಲ್ತಪ್ಪ, ಹಲಸಿನ ಇಡ್ಲಿ, ಹಲಸಿನ ದೋಸೆ, ಕಣಿಲೆ ಗಸಿ, ಹಲಸಿನ ಉಂಡುಲಗ, ರಾಗಿ ಮಣ್ಣಿ, ಮೆಂತೆ ಮಣ್ಣಿ, ಮೆಂತೆ ಗಸಿ, ಮೆಂತೆ ಗಂಜಿ, ವಿಟಮಿನ್ ಸೊಪ್ಪಿನ ತಿಂಡಿ, ಜೇನುಂಡೆ, ಸಾಂತಾಣಿ, ಬೀಜದ ಬೊಂಡು, ಹಲಸಿನಕಾಯಿ ಸಪ್ಪೆ ಚಿಪ್ಪು, ಹಲಸಿನಕಾಯಿ ಖಾರ ಚಿಪ್ಪು, ಅಕ್ಕಿಹುಡಿ, ಆಲೂ ಬೋಂಡ, ಗುಲಾಬ್ ಜಾಮೂನ್, ಕ್ಷೀರ, ಪೆಲತರಿ ಪಾಯಸ, ಮುಲ್ಕ, ಹೆಸರು ಪಾಯಸ, ಹಲಸಿನಕಾಯಿ ಪಾಯಸ, ಮಂಡಿ ಚಿಕನ್, ಸ್ಪೈಸಿ ರೋಸ್ಟೆಡ್ ಚಿಕನ್ ಖಾದ್ಯಗಳು ಘಮಘಮಿಸುವಂತಾಗಿತ್ತು.

ಸಂಸ್ಕೃತಿಯ ಅನಾವರಣ..
ಹಿಂದಿನ ತುಳು ಸಾಂಪ್ರದಾಯಿಕ ಪರಿಕರಗಳಾದ ತಡ್ಪೆ, ಕುಡುಪು, ಉಪ್ಪಿನಕಾಯಿ ಭರಣಿ, ನೊಗ, ನಾಯರ್, ಕೊಪ್ಪರಿಗೆ, ಗೆರಟೆ ಸೌಟು ಮುಂತಾದುವುಗಳನ್ನು ವೇದಿಕೆ ಕೆಳಗೆ ಸಾಲುಸಾಲಾಗಿ ಜೋಡಿಸಿಡಲಾಗಿತ್ತು. ತೆಂಗಿನಮರದ ತಾಳೆಗರಿ, ಮಾವಿನ ಎಲೆಗಳು, ಮುಟ್ಟಾಳೆ, ಭತ್ತದ ತೆನೆಗಳಿಂದ ವೇದಿಕೆಯನ್ನು ಸಿಂಗರಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಅತಿಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ `ಪಿಲಿ ನಲಿಕೆ ವೇಷ’ದ ಮೂಲಕ ಸ್ವಾಗತಿಸಲಾಯಿತು. ಸಂಸ್ಥೆಯು ಏರ್ಪಡಿಸಿದ ಆಟಿ ಗೊಬ್ಬುಗಳಲ್ಲಿ ವಿಜೇತರಾದವರಿಗೆ ಮಣ್ಣಿನ ಲೋಟ, ಹೂಜಿಗಳನ್ನು ಬಹುಮಾನವಾಗಿ ನೀಡಲಾಯಿತು.

ಸುದ್ದಿ ಯ್ಯೂಟ್ಯೂಬ್ ಚಾನೆಲ್ ಕಾರ್ಯಕ್ರಮವನ್ನು ನೇರಪ್ರಸಾರವನ್ನು ಮಾಡಿತ್ತು.

LEAVE A REPLY

Please enter your comment!
Please enter your name here