ನೆಲ್ಯಾಡಿ: ಒಕ್ಕೂಟಗಳ ಪದಗ್ರಹಣ, ಸಾಧನ ಸಮಾವೇಶ

0

  • ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ೩ ಸಾವಿರ ಕೋಟಿ ರೂ.,ಉಳಿತಾಯ; ವಸಂತ ಸಾಲ್ಯಾನ್

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನೆಲ್ಯಾಡಿ ವಲಯದ ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ನೆಲ್ಯಾಡಿ, ನೆಲ್ಯಾಡಿ ಬಿ, ಮಾದೇರಿ, ಕೌಕ್ರಾಡಿ ಹಾಗೂ ಪಡುಬೆಟ್ಟು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.೧೩ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ‘ ಕಲ್ಪವೃಕ್ಷ ‘ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್‌ರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ೬ ಲಕ್ಷ ಪ್ರಗತಿಬಂಧು ಹಾಗೂ ಸ್ವಸಹಾಯ ಗುಂಪುಗಳಿದ್ದು ೫೫ ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದು ೩ ಸಾವಿರ ಕೋಟಿ ರೂ.,ಉಳಿತಾಯವಾಗಿದೆ. ಸದಸ್ಯರ ೧೭ ಸಾವಿರ ಕೋಟಿ ರೂ., ಸಾಲ ಇದೆ. ಶೇ.೧೦೦ರಷ್ಟು ಸಾಲ ವಸೂಲಾತಿಯೂ ಆಗುತ್ತಿದೆ ಎಂದರು. ಯೋಜನೆಯ ಮೂಲಕ ಸ್ವ ಉದ್ಯೋಗಕ್ಕೂ ಆದ್ಯತೆ ನೀಡಲಾಗುತ್ತಿದ್ದು ಇದಕ್ಕಾಗಿ ೫೦೦ ಕೋಟಿ ರೂ.,ಮೀಸಲಿರಿಸಲಾಗಿದೆ. ಯಾವುದೇ ಆಧಾರವಿಲ್ಲದೇ ಒಬ್ಬ ಸದಸ್ಯನಿಗೆ ೫೦ ಸಾವಿರದಿಂದ ೫ ಲಕ್ಷ ರೂ.,ತನಕ ಸ್ವ ಉದ್ಯೋಗಕ್ಕೆ ಸಾಲ ನೀಡಲಾಗುತ್ತಿದೆ. ಈಗಾಗಲೇ ೨೦೦ ಕೋಟಿ ರೂ.,ವಿತರಣೆಯಾಗಿದೆ. ೧೪ ಸಾವಿರ ಮಂದಿಗೆ ೭೫೦ ರಿಂದ ೧ ಸಾವಿರ ರೂ.,ತನಕ ಮಾಸಾಶನ ನೀಡಲಾಗುತ್ತಿದೆ. ೧೭ ಸಾವಿರ ವಿದ್ಯಾರ್ಥಿಗಳಿಗೆ ಸುಜ್ಞಾನ ಶಿಷ್ಯವೇತನ ನೀಡಲಾಗುತ್ತಿದೆ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾಕೇಂದ್ರವೂ ಆರಂಭಿಸಲಾಗಿದೆ ಎಂದು ವಸಂತ ಸಾಲ್ಯಾನ್ ಹೇಳಿದರು.

೧೦ ಸಾವಿರ ಸಿಎಸ್‌ಸಿ ಕೇಂದ್ರ:
ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ೧೦ ಸಾವಿರ ಸಿಎಸ್‌ಸಿ ಕೇಂದ್ರ ಆರಂಭಿಸಲು ಅನುಮತಿ ಸಿಕ್ಕಿದೆ. ಈ ಪೈಕಿ ಈಗಾಗಲೇ ೮ ಸಾವಿರ ಸೇವಾ ಕೇಂದ್ರಗಳು ಆರಂಭಗೊಂಡಿದ್ದು ಈ ಮೂಲಕ ೮ ಸಾವಿರ ಮಂದಿಗೆ ಉದ್ಯೋಗ ನೀಡಲಾಗಿದೆ. ಇಲ್ಲಿ ಸುಮಾರು ೪೦೦ ಸೇವೆ ಸಿಗಲಿದೆ. ಆಯುಷ್ಮಾನ್, ಇ ಶ್ರಮ ಕಾರ್ಡ್ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಮುಂದೆ ಸಂಘದ ಬ್ಯಾಂಕ್ ಹಾಗೂ ಇತರೇ ವ್ಯವಹಾರಗಳೂ ಸಿಎಸ್‌ಸಿ ಕೇಂದ್ರದ ಮೂಲಕವೇ ನಡೆಯಲಿದೆ ಎಂದು ವಸಂತ ಸಾಲ್ಯಾನ್ ಹೇಳಿದರು.

ವಿಪತ್ತು ನಿರ್ವಹಣಾ ತಂಡ:
ರಾಜ್ಯದ ೫೩ ತಾಲೂಕುಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದ್ದು ತಂಡದಲ್ಲಿರುವ ಯುವಕರಿಗೆ ಎನ್‌ಡಿಆರ್‌ಎಫ್ ಮೂಲಕ ತರಬೇತಿ ನೀಡಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಾದ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ. ಸಂಘದ ಸದಸ್ಯರು ಸಾಲ ಪಡೆಯುವುದು ಸುಲಭವಲ್ಲ, ಅದರ ಸದ್ಬಳಕೆ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಒಬ್ಬ ಮನುಷ್ಯನಿಗೆ ಹುಟ್ಟಿನಿಂದ ಸಾಯುವ ತನಕದ ಅವಶ್ಯಕತೆಗಳನ್ನೂ ಯೋಜನೆಯ ಮೂಲಕ ನೀಡಲಾಗುತ್ತಿದೆ ಎಂದು ವಸಂತ ಸಾಲ್ಯಾನ್ ಹೇಳಿದರು.

ಕಾರ್ಯಕ್ರಮವನ್ನು ನೆಲ್ಯಾಡಿ ಖ್ಯಾತ ಜ್ಯೋತಿಷಿ ಶ್ರೀಧರ ಗೋರೆಯವರು ದೀಪ ಬೆಳಗಿಸಿ, ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶೋದ್ಧಾರದ ಸಂಕಲ್ಪದೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಹುಟ್ಟುಹಾಕಿದ್ದಾರೆ. ಯೋಜನೆಯ ಮೂಲಕ ಜನರಲ್ಲೂ ಶ್ರದ್ಧೆ, ಶಿಸ್ತು ಬೆಳೆದಿದೆ. ಸದಸ್ಯರೆಲ್ಲರೂ ಯೋಜನೆಯಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಜನ, ಊರಿನ ಅಭಿವೃದ್ಧಿಗೆ ಸರಕಾರ ಮಾಡುವುದಕ್ಕಿಂತ ಹೆಚ್ಚಿನ ಕೆಲಸ ಡಾ|ವಿರೇಂದ್ರ ಹೆಗ್ಗಡೆಯವರು ಹುಟ್ಟುಹಾಕಿದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿದೆ. ಇದರಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಶಾಲೆಯಲ್ಲಿ ಸಿಗುವ ಶಿಸ್ತು ಊರಿನ ಜನರಿಗೆ ಯೋಜನೆಯ ಮೂಲಕ ಸಿಗುತ್ತಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಮೂಲಕ ಮಹಿಳೆಯರೂ ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ. ಕಾರ್ಯಕ್ರಮ ಶಿಸ್ತುಬದ್ಧವಾಗಿ ಮೂಡಿ ಬರುತ್ತಿದೆ. ಯೋಜನೆಯಿಂದ ಜನರಿಗೆ ಇನ್ನೂ ಹೆಚ್ಚಿನ ಪ್ರಯೋಜನ ಸಿಗಲಿ ಎಂದರು. ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ದೇಶದೆಲ್ಲೆಡೆ ವಿಸ್ತರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೇಂದ್ರ ಸರಕಾರ ರಾಜ್ಯಸಭಾ ಸ್ಥಾನದ ಗೌರವ ನೀಡಿದೆ ಎಂದರು. ನೋಟರಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯೂ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ. ಈ ಯೋಜನೆ ರಾಷ್ಟ್ರಮಟ್ಟಕ್ಕೂ ವಿಸ್ತರಣೆ ಆಗಬೇಕು. ಈ ಮೂಲಕ ಬಲಿಷ್ಠ ದೇಶ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು. ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಮಾತನಾಡಿ, ದ್ವೇಷ ಬಿಟ್ಟು ಪ್ರೀತಿಯಿಂದ ಬದುಕಬೇಕೆಂಬುದನ್ನು ಗ್ರಾಮಾಭಿವೃದ್ಧಿ ಯೋಜನೆ ಕಳಿಸಿಕೊಟ್ಟಿದೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದರು.

ಪ್ರಗತಿಪರ ಕೃಷಿಕ ಡೇವಿಡ್ ಜೈಮಿ ಕೊಕ್ಕಡ ಮಾತನಾಡಿ, ನೀರು ಇಲ್ಲದೇ ಬದುಕು ಸಾಧ್ಯವಿಲ್ಲ. ಆದ್ದರಿಂದ ನೀರಿನ ಬಗ್ಗೆ ಜಾಗೃತೆ ವಹಿಸಿ ಜಾಗೃತಿ ಮೂಡಿಸಬೇಕು. ಮಹಿಳೆಯರಲ್ಲೂ ಹಣಕಾಸಿನ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಿಸಿಕೊಟ್ಟಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಗತಿಬಂಧು ಸ್ವಸಹಾಯ ಸಂಘಗಳ ಪುತ್ತೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಮಾತನಾಡಿ, ಸಾಲ, ಉಳಿತಾಯದ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರೂ ಸೇವಾ ಚಟುವಟಿಕೆಗಳಲ್ಲೂ ತೊಡಗಿಕೊಂಡು ದೇವಸ್ಥಾನ, ದೈವಸ್ಥಾನ, ಶಾಲೆಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸದಸ್ಯರಿಗೆ ಲಾಭಾಂಶ ವಿತರಣೆ ಮೂಲಕ ಸಹಕಾರ ನೀಡಲಾಗಿದೆ ಎಂದು ಹೇಳಿದ ಅವರು, ಸಂಘದ ಪ್ರತಿಯೊಬ್ಬ ಸದಸ್ಯರೂ ಸಂಪೂರ್ಣ ಸುರಕ್ಷಾ ಮಾಡಿಕೊಳ್ಳುವಂತೆ ಹೇಳಿದರು.

ಕೌಕ್ರಾಡಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಸವಿತಾ, ಮಾದೇರಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಶ್ರೀಲತಾ ಸಿ.ಹೆಚ್., ನೆಲ್ಯಾಡಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವಾಲ್ಟರ್ ಡಿ.ಸೋಜರವರು ಅನಿಸಿಕೆ ವ್ಯಕ್ತಪಡಿಸಿದರು. ನೆಲ್ಯಾಡಿ ಒಕ್ಕೂಟದ ನೂತನ ಅಧ್ಯಕ್ಷೆ ಸುಮಿತ್ರಾರವರು ಸಹಕಾರ ಕೋರಿದರು. ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ವನಿತ, ಪಡುಬೆಟ್ಟು ಒಕ್ಕೂಟದ ನೂತನ ಅಧ್ಯಕ್ಷ ಜೋನ್ ಮೊಂತೆರೋ, ಕೌಕ್ರಾಡಿ ಒಕ್ಕೂಟದ ನೂತನ ಅಧ್ಯಕ್ಷ ಬಾಲಕೃಷ್ಣ ಗೌಡ, ಮಾದೇರಿ ಒಕ್ಕೂಟದ ನೂತನ ಅಧ್ಯಕ್ಷ ಸೆಬಾಸ್ಟಿಯನ್ ಪಿ.ಜೆ., ನೆಲ್ಯಾಡಿ ಬಿ ಒಕ್ಕೂಟದ ನೂತನ ಅಧ್ಯಕ್ಷ ಮಾರ್ಸೆಲ್ ಡಿ.ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಎನ್.,ಸ್ವಾಗತಿಸಿ, ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಹಾಗೂ ವಿಜೇಶ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಸನ್ಮಾನ:
ಜಲ ಸಂರಕ್ಷಣೆ ವಿಧಾನವಾದ ಮಳೆಕೊಯ್ಲು ಅಳವಡಿಕೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದ ಡೇವಿಡ್ ಜೈಮಿ ಕೊಕ್ಕಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಡೇವಿಡ್ ಜೈಮಿಯವರನ್ನು ಪರಿಚಯಿಸಿದರು.

ನೆರವು:
ಪ್ರಾಕೃತಿಕ ವಿಕೋಪದಿಂದ ಮನೆ ಹಾನಿಗೊಂಡ ರೇವತಿ ಕುಡ್ತಾಜೆಯವರಿಗೆ ನೆರವು ನೀಡಲಾಯಿತು. ಶ್ರೀಮತಿ ಬೇಬಿಯವರಿಗೆ ಮಾಸಾಶನ ಮಂಜೂರಾತಿ ಪತ್ರ ನೀಡಲಾಯಿತು. ಸಿಎಸ್‌ಸಿ ಕೇಂದ್ರದ ಮೂಲಕ ಆಯುಷ್ಮನ್, ಇ ಶ್ರಮ ಕಾರ್ಡ್ ಪಡೆದುಕೊಂಡವರಿಗೆ ಉಚಿತವಾಗಿ ವಿತರಿಸಲಾಯಿತು. ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ಕೊಡುಗೆ, ಅಭಿನಂದನಾ ಪತ್ರ ಹಸ್ತಾಂತರಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here