ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ನಡೆದ ವೈಭವೋಪೇತ ‘ಸ್ವಾತಂತ್ರ್ಯದ ನಡಿಗೆ’ ಪುತ್ತೂರು ನಗರದಾದ್ಯಂತ ದೇಶಪ್ರೇಮ ಪಸರಿಸಿದ ಅಂಬಿಕಾ ವಿದ್ಯಾರ್ಥಿಗಳು

0

ಪುತ್ತೂರು: ಒಂದೆಡೆಯಲ್ಲಿ ಆದ್ಯಾತ್ಮ ಭಾರತದ ಸೊಗಡು, ಭಾರತಾಂಬೆಯ ಮಡಿಲಲ್ಲಿ ಕುಳಿತ ಶ್ರೀ ಶಂಕರಾಚಾರ್ಯರ ಚಿನ್ಮಯ ಮುದ್ರೆ, ಚತುರಾಮ್ನಾಯ ಪೀಠದ ಪ್ರಸ್ತುತಿ. ಅಮೃತ ಭಾರತ – ಆಧ್ಯಾತ್ಮ ಭಾರತ ಎಂಬ ಕಲ್ಪನೆಯ ಅನಾವರಣ. ಮತ್ತೊಂದೆಡೆ ಭಾರತದ ಬ್ರಹ್ಮ ಶಕ್ತಿಯಾದ ಬ್ರಹ್ಮೋಸ್ ಕ್ಷಿಪಣಿಯ ವೈಭವ, ಇನ್ನೊಂದೆಡೆ ಶಿವಾಜಿ ಮಹಾರಾಜನ ಕ್ಷಾತ್ರ ತೇಜಸ್ಸು, ಹಾಗೆಯೇ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರಂತಹ ಮಹಾನ್ ದೇಶಪ್ರೇಮಿಗಳ ಚಿತ್ರಣ. ಅಂತೆಯೇ ಕಾರ್ಗಿಲ್‌ನ ಹಿಮಾಚ್ಛಾದಿತ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಸೆಟೆದು ನಿಂತಿರುವ ಯೋಧರ ಸನ್ನಿವೇಶ. ಜತೆಗೆ ಇತ್ತೀಚೆಗಷ್ಟೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರ ಪ್ರಸ್ತುತಿ. ಹೀಗೆ ದೇಶದ ಬಗೆಗೆ ಹೆಮ್ಮೆ ಉಕ್ಕಿಸುವ ಹತ್ತು ಹಲವು ವಿಚಾರಧಾರೆಗಳು. ಇವೆಲ್ಲವೂ ಕಂಡು ಬಂದದ್ದು ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಡೆದ ಸ್ವಾತಂತ್ರ್ಯದ ನಡಿಗೆ ಎಂಬ ಬೃಹತ್ ಜಾಥಾದಲ್ಲಿ.
ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ 75ನೆಯ ಸ್ವಾತಂತ್ರ್ಯ ದಿನಾಚರಣೆ – ಅಮೃತ ಮಹೋತ್ಸವ ಅದ್ಧೂರಿಯಿಂದ ಆಚರಿಸಲ್ಪಟ್ಟಿತು. ಸದಾ ದೇಶಭಕ್ತಿಯನ್ನು ಎಳೆಯ ಮನಸ್ಸುಗಳಲ್ಲಿ ತುಂಬುವ ಅಂಬಿಕಾ ಶಿಕ್ಷಣ ಸಂಸ್ಥೆ ಈ ಬಾರಿಯ ಅಮೃತ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ಪ್ರಯತ್ನ ನಡೆಸಿ, ಸಫಲವಾಯಿತು. ದರ್ಭೆ, ಬೊಳುವಾರು, ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಿಂದ ಏಕಕಾಲಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಪ್ರತಿಯೊಂದು ಮೆರವಣಿಗೆಯಲ್ಲೂ ವಿವಿಧ ಸ್ಥಬ್ಧ ಚಿತ್ರಗಳು ಮೆರೆದಾಡಿದವು. ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾರತ ಮಾತೆಗೆ ಜೈಕಾರ ಕೂಗುತ್ತಾ, ವಂದೇ ಮಾತರಂ ಘೋಷಣೆ ಮೊಳಗಿಸುತ್ತಾ, ಕೈಯಲ್ಲಿ ರಾಷ್ಟçಧ್ವಜವನ್ನು ಹಿಡಿದು ಮುನ್ನಡೆಯುತ್ತಿದ್ದರೆ ಇಡಿಯ ನಗರವೇ ಶೃಂಗಾರಗೊಂಡಂತೆ ಕಂಡುಬಂತು. ದರ್ಭೆಯಲ್ಲಿ ಶಾಸಕ ಸಂಜೀವ ಮಠಂದೂರು ಜಾಥಾಕ್ಕೆ ಚಾಲನೆ ನೀಡಿದರೆ ಬೊಳುವಾರಿನಲ್ಲಿ ಮಾಜಿ ಸುಬೇದಾರ್ ರಮೇಶ್ ಬಾಬು ಅವರು ಚಾಲನೆ ನೀಡಿದರು.
75ರ ಅಮೃತ ಮಹೋತ್ಸವದ ನೆಲೆಯಲ್ಲಿ ಸ್ವಾತಂತ್ರ್ಯದ ನಡಿಗೆ ಎಂಬ ಮಹತ್ವದ ಕಲ್ಪನೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಯೋಜಿಸಿದ್ದವು. ಅದರನ್ವಯ ಅಂಬಿಕಾ ಸಂಸ್ಥೆಗಳೊಡನೆ ಸಂತ ಫಿಲೋಮಿನಾವೂ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಬೋಧಕರು ಜತೆಸೇರಿದ್ದರು. ಅಂಬಿಕಾದ ವಿದ್ಯಾರ್ಥಿಗಳಲ್ಲದೆ ಹೆತ್ತವರು, ಆಡಳಿತ ಮಂಡಳಿ, ಬೋಧಕ-ಬೋಧಕೇತರ ವೃಂದದವರೆಲ್ಲರೂ ಈ ಸ್ವಾತಂತ್ರ್ಯದ ನಡಿಗೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.
ಈ ಬೃಹತ್ ಜಾಥಾ ಅಂತಿಮವಾಗಿ ಕಿಲ್ಲೆ ಮೈದಾನದ ಬಳಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂಪಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕೊನೆಗೊಂಡು ಅಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಚ್.ಮಾದವ ಭಟ್, ಸುರೇಶ್ ಶೆಟ್ಟಿಯವರು ದರ್ಬೆಯಲ್ಲಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅವರ ಬೊಳುವಾರಿನಲ್ಲಿ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಚಾರ್ಯೆ ಮಾಲತಿ ಡಿ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಸೇರಿದಂತೆ ಹಲವಾರು ಮಂದಿ ಪೋಷಕರು ನಡಿಗೆಯ ಜೊತೆಗಿದ್ದರು.

LEAVE A REPLY

Please enter your comment!
Please enter your name here