ತಿಂಗಳಾಡಿಯಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ `ಸಹಕಾರಿ ಮಾರ್ಟ್’ ಶುಭಾರಂಭ

0

ಕೈಗೆಟಕುವ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಕೊಡುವುದೇ ನಮ್ಮ ಉದ್ದೇಶ : ಶಶಿಧರ ರಾವ್

ಪುತ್ತೂರು: ರೇಷನ್‌ಗೆ ಬರುವ ಗ್ರಾಹಕರಿಗೆ ಸರಕಾರದಿಂದ ಕೊಡುವ ರೇಷನ್ ಅಕ್ಕಿ ಜೊತೆಯಲ್ಲಿ ಇತರೆ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆತರೆ ಬಹಳ ಅನುಕೂಲವಾಗುತ್ತದೆ ಎಂಬ ದೃಷ್ಟಿಯನ್ನಿಟ್ಟುಕೊಂಡು ಗ್ರಾಹಕರಿಗೆ ಹೊರೆಯಾಗದೆ ಕೈಗೆಟಕುವ ದರದಲ್ಲಿ ವಸ್ತುಗಳನ್ನು ಕೊಡುವ ಉದ್ದೇಶದಿಂದ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಈ ಸಹಕಾರಿ ಮಾರ್ಟ್ ಅನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಆರಂಭಿಸುತ್ತಿದ್ದೇವೆ. ಗ್ರಾಹಕರ ಸಹಕಾರ ಬಹಳ ಮುಖ್ಯ ಎಂದು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ ಹೇಳಿದರು.

ಅವರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ತಿಂಗಳಾಡಿಯಲ್ಲಿರುವ ಸಂಘದ ಪ್ರಧಾನ ಕಛೇರಿಯ ವಠಾರದಲ್ಲಿ ಆರಂಭಗೊಂಡಿರುವ ತರಕಾರಿ, ಹಣ್ಣುಹಂಪಲು ಹಾಗೂ ಇತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಸಹಕಾರಿ ಮಾರ್ಟ್ ಅನ್ನು ಸೆ.೦೧ ರಂದು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಹಕಾರಿ ಮಾರ್ಟ್‌ನಲ್ಲಿ ಗ್ರಾಹಕರಿಗೆ ಅವಶ್ಯವಿರುವ ಎಲ್ಲಾ ವಸ್ತುಗಳು ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಂದಿನಿ ಉತ್ಪನ್ನಗಳ ಮಳಿಗೆಯನ್ನು ಉದ್ಘಾಟಿಸಿದ ಕೆಎಂಎಫ್ ಉಪಾಧ್ಯಕ್ಷ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ಸಂಘದ ವತಿಯಿಂದ ಆರಂಭಗೊಂಡ ಸಹಕಾರಿ ಮಾರ್ಟ್‌ನಲ್ಲಿ ನಂದಿನಿ ಉತ್ಪನ್ನಗಳು ಕೂಡ ದೊರೆಯಲಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ತರಕಾರಿ ಹಾಗೂ ಇತರ ಗೃಹೋಪಯೋಗಿ ವಸ್ತುಗಳ ಮಾರಾಟ ವಿಭಾಗವನ್ನು ಉದ್ಘಾಟಿಸಿದ ಟಿಎಪಿಸಿಎಂಎಸ್ ಅಧ್ಯಕ್ಷ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಮಾತನಾಡಿ, ಕೋರೋನ ಸಂಕಷ್ಟ ಕಾಲದಲ್ಲಿ ನಮ್ಮ ಸೊಸೈಟಿಯು ಜನರ ಕಷ್ಟವನ್ನು ಅರಿತುಕೊಂಡು ೫ ತಾಲೂಕುಗಳಿಗೆ ಆಹಾರ ಸಾಮಾಗ್ರಿಗಳನ್ನು ಬಂದ ದರದಲ್ಲೇ ಮಾರಾಟ ಮಾಡಿದ್ದು ಇದು ಇಂತಹ ಸಹಕಾರಿ ಮಾರ್ಟ್ ಮಾಡಲು ಪ್ರೇರಣೆಯಾಯಿತು. ಆಡಳಿತ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಿ ಸಹಕಾರಿ ಮಾರ್ಟ್ ಆರಂಭಿಸಿದ್ದೇವೆ. ಗ್ರಾಹಕರು ಸಂಪೂರ್ಣ ಸಹಕಾರ ನೀಡುವಂತೆ ಕೇಳಿಕೊಂಡರು.ಸ್ಟೇಷನರಿ ವಿಭಾಗದ ಪ್ರಥಮ ಮಹಡಿಯನ್ನು ಉದ್ಘಾಟಿಸಿ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶಿವರಾಮ ಗೌಡ ಇದ್ಯಪೆ ಮಾತನಾಡಿ, ಎಲ್ಲಾ ವಸ್ತುಗಳು ಒಂದೇ ಸೂರಿನಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಪ್ರಥಮ ಖರೀದಿ ಮಾಡಿದ ವಿಘ್ನೇಶ್ ಕ್ಯಾಟರಿಂಗ್‌ನ ಮಾಲಕ ಗೋಪಾಲಕೃಷ್ಣ ಭಟ್ ಪಂಜಳರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪ್ರಥಮ ಖರೀದಿ ಮಾಡಿದ ಗೋಪಾಲಕೃಷ್ಣ ಭಟ್ ಪಂಜಳ ಮತ್ತು ತಿಂಗಳಾಡಿ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈಯವರಿಗೆ ಹೂಗುಚ್ಛ ನೀಡಲಾಯಿತು. ಸಾರ್ವಜನಿಕರ ಪರವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಸಹಕಾರಿ ಮಾರ್ಟ್ ಗ್ರಾಮಸ್ಥರಿಗೆ ಸಹಕಾರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಶಿವರಾಮ ರೈ ಬೊಳಿಕ್ಕಲಕಜೆ, ಭಾಸ್ಕರ ಬಲ್ಲಾಳ್ ಬಿ, ತಾರಾನಾಥ ಕಂಪ, ಲೀಲಾವತಿ ರೈ ಕೋಡಂಬು, ನಿಮಿತಾ ರೈ, ವೀರಪ್ಪ ನಾಯ್ಕ ಪಟ್ಟೆತ್ತಡ್ಕ, ಬಾಬು, ಸೂರ್ಯಪ್ರಸನ್ನ ರೈ ಎಂಡೆಸಾಗು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ, ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ ಸ್ವಾಗತಿಸಿದರು. ಕಡಮಜಲು ಸುಭಾಷ್ ರೈ ಪ್ರೀತಮ್ ರೈ, ಸೂರಜ್ ರೈ, ಅಣ್ಣು ತಿಂಗಳಾಡಿ, ಐತ್ತಪ್ಪ ನಾಯ್ಕ, ಪ್ರದೀಪ್ ರೈ, ನಿರುಪಮ, ಕೌಶಲ್ಯ, ಭವ್ಯ, ಆದಿತ್ಯ ರೈ, ಕೊರಗಪ್ಪ ಪೂಜಾರಿ, ಪ್ರಜ್ವಲ್, ರಕ್ಷಿತ್ ಎರಕ್ಕಲ, ನಿತಿನ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ನಿರ್ದೇಶಕ ಶಿವರಾಮ ರೈ ಕಜೆ ವಂದಿಸಿದರು. ಸದಾಶಿವ ಭಟ್ ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿ ಮಾರ್ಟ್‌ನಲ್ಲಿ ಏನೇನಿದೆ?
ಸಹಕಾರಿ ಸಂಘದ ಆಶ್ರಯದಲ್ಲಿ ಗ್ರಾಮೀಣ ಭಾಗದ ತಿಂಗಳಾಡಿಯಲ್ಲಿ ಆರಂಭಗೊಂಡ ಸಹಕಾರಿ ಮಾರ್ಟ್‌ನಲ್ಲಿ ಎಲ್ಲಾ ಬಗೆಯ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ. ತಾಜಾ ತರಕಾರಿಗಳು, ಮನೆಗೆ ಬೇಕಾದ ಪ್ಲಾಸ್ಟಿಕ್ ಐಟಂಗಳು, ಅಕ್ಕಿ, ಚಾಹುಡಿ, ಬೆಲ್ಲ, ಸಕ್ಕರೆ ಸಹಿತ ಎಲ್ಲಾ ಬಗೆಯ ಮಸಾಲ ಪದಾರ್ಥಗಳು, ಬೇಕರಿ ಐಟಂಗಳು, ಫ್ಯಾನ್ಸಿ ಐಟಂಗಳು ಸೇರಿದಂತೆ ನಿತ್ಯ ಉಪಯೋಗಿ ಎಲ್ಲಾ ಬಗೆಯ ಐಟಂಗಳು ಲಭ್ಯವಿದೆ.

ಗ್ರಾಹಕರಿಗೇ ಖರೀದಿಸುವ ಅವಕಾಶ
ದೊಡ್ಡ ದೊಡ್ಡ ಸಿಟಿಗಳಲ್ಲಿರುವ ಸೂಪರ್ ಮಾರ್ಕೆಟ್, ಮಾಲ್, ಸ್ಮಾರ್ಟ್‌ನಂತಹ ವ್ಯಾಪಾರ ಮಳಿಗೆಗಳಲ್ಲಿ ಸ್ವತಃ ಗ್ರಾಹಕರೇ ಬ್ಯಾಗ್ ಹಿಡಿದುಕೊಂಡು ತಮಗೆ ಬೇಕಾದ ಐಟಂಗಳನ್ನು ಖರೀದಿಸಿ ಕೊನೆಯಲ್ಲಿ ಬಿಲ್ ಮಾಡುವ ವ್ಯವಸ್ಥೆ ಇರುತ್ತದೆ ಅದೇ ರೀತಿ ಸಹಕಾರಿ ಮಾರ್ಟ್‌ನಲ್ಲಿಯೂ ಸ್ವತಃ ಗ್ರಾಹಕರು ತಮಗೆ ಬೇಕಾದ ಐಟಂಗಳನ್ನು ನೋಡಿ ಖರೀದಿಸಿ ಕೊನೆಯಲ್ಲಿ ಬಿಲ್ ಪಾವತಿಸುವ ವ್ಯವಸ್ಥೆ ಇದೆ.

LEAVE A REPLY

Please enter your comment!
Please enter your name here