ಭ್ರಷ್ಟಾಚಾರ ನಿರ್ಮೂಲನೆಗೆ ಕರೆಕೊಡುವ ಮೂಲಕ ಸಮಾಜದ ಈ ಪಿಡುಗನ್ನು ಹೊಡೆದೋಡಿಸುವ ಕಾರ‍್ಯಕ್ಕೆ ಪ್ರಧಾನಿಯವರು ನಾಂದಿ ಹಾಡಲಿ

0

ಆ.29ರ ಭ್ರಷ್ಟಾಚಾರ ನಿರ್ಮೂಲನೆಯ ಸಂಪಾದಕೀಯ ಲೇಖನಕ್ಕೆ ಪ್ರತಿಕ್ರಿಯೆ

ಸುದ್ದಿ ಬಿಡುಗಡೆ ದೈನಿಕ ತನ್ನದೇ ಆದ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಅನೇಕ ರೀತಿಯಲ್ಲಿ ಓದುಗರನ್ನೂ ಒಟ್ಟಾಗಿಸಿಕೊಂಡು ತನ್ನದೇ ಶೈಲಿಯಲ್ಲಿ ಹೋರಾಡುತ್ತಲೇ ಬಂದಿದೆ. ಸಂಪಾದಕರ ಹೋರಾಟದ ಪೂರ್ತಿ ಸಾರಾಂಶವನ್ನು ದೇಶದ ಅಗ್ರಗಣ್ಯ ನಾಯಕ ಪ್ರಧಾನಿ ಮೋದಿಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದು ಮಾತ್ರವಲ್ಲದೆ ಭ್ರಷ್ಟಾಚಾರ ವಾಸ್ತವದಲ್ಲಿ ಇಲ್ಲಿ ಈಗಲೂ ಯಾವ ರೀತಿ ತಾಂಡವವಾಡುತ್ತಿದೆ ಹಾಗೂ ಭ್ರಷ್ಟಾಚಾರದ ವಿಷಯದಲ್ಲಿ ಮೋದೀಜಿಯವರಿಗೆ ಪತ್ರ ಬರೆಯಲು ಜನರು ಯಾಕೆ ಹೆದರುತ್ತಿದ್ದಾರೆ, ಈಗಾಗಲೇ ಬರೆದವರನ್ನು ಹೇಗೆ ಹೆದರಿಸಲಾಗುತ್ತಿದೆ/ಬರೆದವರ ಆತ್ಮಹತ್ಯೆ ಹೇಗೆ ನಡೆದಿದೆ ಎಂಬುದನ್ನೂ ಕೂಲಂಕುಷವಾಗಿ ಬರೆಯಲಾಗಿದೆ. ಎಂದಿನಂತೆ ಈ ಸಂಪಾದಕೀಯದಲ್ಲೂ ಯಾವೊಂದು ರೀತಿಯಲ್ಲೂ ರಾಜಕೀಯ ವಾಸನೆ ಬರದಂತೆ ಜಾಗ್ರತೆ ವಹಿಸಿರುವುದು ಪತ್ರಿಕೆಯು ಆಂದೋಲನದ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದಿರುವುದಕ್ಕೆ ಇನ್ನೊಂದು ನಿದರ್ಶನ. ಈ ಸಂಪಾದಕೀಯ ಲೇಖನ ಮೋದೀಜಿಯವರ ಮಂಗಳೂರು ಭೇಟಿಯ ಸಮಯದಲ್ಲೇ ಪ್ರಕಟಗೊಂಡಿದ್ದು ಆಂದೋಲನವನ್ನು ಸಫಲಗೊಳಿಸುವ ಸಂಪಾದಕರ ಕಾಳಜಿಯ ತೀವ್ರತೆ ಜನಸಾಮಾನ್ಯರಿಗೆ ಅರ್ಥವಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಈ ಆಂದೋಲನಕ್ಕೆ ಮತ್ತಷ್ಟು ಪ್ರಚಾರ ಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲು ಹಾಗೂ ಪತ್ರಿಕೆಯಲ್ಲಿ ಪ್ರತಿಕ್ರಿಯೆ ನೀಡಲು ಸಂಪಾದಕರು ಕರೆ ಕೊಟ್ಟಿದ್ದನ್ನು ಗಮನಿಸಿದರೆ ಇದಕ್ಕೆ ಮಾನ್ಯ ಪ್ರಧಾನಿಯವರಿಂದ ಸ್ಪಂದನೆ ಪಡೆಯಲೇಬೇಕು ಹಾಗೂ ಈ ಭ್ರಷ್ಟಾಚಾರಕ್ಕೆ ಪೂರ್ಣವಿರಾಮ ಬೀಳಲೇ ಬೇಕು ಎಂಬ ಒತ್ತಾಸೆ ಸಂಪಾದಕರಲ್ಲಿರುವುದು ಮನದಟ್ಟಾಗುತ್ತದೆ.

ಸಂಪಾದಕೀಯದಲ್ಲಿ ಭ್ರಷ್ಟಾಚಾರದ ವಿಷಯದೊಂದಿಗೆ ಕೃಷಿಕರಿಗೆ ಸ್ವಾತಂತ್ರ್ಯ, ಸಿಗಬೇಕಾದ ಸೌಲಭ್ಯಗಳು ಮುಂತಾದವುಗಳ ಬಗ್ಗೆ ಸುದ್ದಿ ಪತ್ರಿಕೆಯ ಹೋರಾಟವನ್ನೂ ಅನ್ಯ ಗಂಭೀರ ಸಮಸ್ಯೆಗಳೊಂದಿಗೆ ವಿವರವಾಗಿ ಸಂಪಾದಕೀಯದಲ್ಲಿ ಬರೆದದ್ದು ಕೃಷಿಕನಿಗೂ ಆಶಾಕಿರಣ ಕಂಡಂತಾಗಿದೆ.

ಒಟ್ಟಿನಲ್ಲಿ ಸಂಪಾದಕರು ಹಾಗೂ ಈ ಪತ್ರಿಕೆಯ ಓದುಗರು ಮಾತ್ರವಲ್ಲದೆ ಈ ಸೀಮೆಯ ಜನ ಮೋದೀಜಿಯವರ ಮೇಲಿಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸದೆ ಪ್ರಧಾನಿಯವರು ಸಂಪಾದಕೀಯ ಲೇಖನದಲ್ಲಿ ಬರೆದ ಪತ್ರಕ್ಕೆ ಸ್ಪಂದಿಸುವಂತಾಗಲಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಕರೆಕೊಡುವ ಮೂಲಕ ಸಮಾಜದ ಈ ಪಿಡುಗನ್ನು ಹೊಡೆದೋಡಿಸುವ ಕಾರ್ಯಕ್ಕೆ ನಾಂದಿ ಹಾಡಲಿ ಎಂದು ಆಶಿಸೋಣ. ಇಂತಹ ಸತ್ಕಾರ್ಯದಲ್ಲಿ ನಾವೆಲ್ಲ ಕೈ ಜೋಡಿಸೋಣ. ಪತ್ರಿಕೆಯಲ್ಲಿ ಪ್ರತಿಕ್ರಿಯೆ ನೀಡುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಪ್ರಚಾರ ಕೊಡೋಣ.

ಬಾಲಕೃಷ್ಣ ಕಣ್ಣಾರಾಯ ಬನೇರಿ, ಮುಂಡೂರು (ನಿವೃತ್ತ ಮುಖ್ಯ ಪ್ರಬಂಧಕರು VBK) ಮೊ.9945556801

LEAVE A REPLY

Please enter your comment!
Please enter your name here