ಪಾಪೆಮಜಲು ಶಾಲೆಯ ಮುಖ್ಯಶಿಕ್ಷಕಿ ತೆರೆಸಾರವರು ಪ್ರಶಸ್ತಿ ಸ್ವೀಕರಿಸದಂತೆ ತಡೆದಿರುವುದು ಖಂಡನೀಯ

0

  • ವಾರದೊಳಗೆ ಸೂಕ್ತ ಕ್ರಮ ಕೈಗೊಂಡು ಪ್ರಶಸ್ತಿ ನೀಡದಿದ್ದಲ್ಲಿ ಹೋರಾಟ: ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಪುತ್ತೂರಿನಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಪುತ್ತೂರು ತಾಲೂಕಿನ ಪಾಪೆಮಜಲು ಶಾಲೆಯ ಮುಖ್ಯಶಿಕ್ಷಕಿ ತೆರೆಸಾ ಅವರು ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸದಂತೆ ಮಾಡಿರುವುದು ಖಂಡನೀಯ.  ಒಂದು ವಾರದೊಳಗೆ ಸಾರ್ವಜನಿಕವಾಗಿ, ಗೌರವಯುತವಾಗಿ ಅವರನ್ನು ಸನ್ಮಾನಿಸಬೇಕು. ಪ್ರಶಸ್ತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಶಿಕ್ಷಣ ಸಚಿವರು, ರಾಜ್ಯಪಾಲರಿಗೆ ದೂರು ನೀಡುತ್ತೇವೆ. 3 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪುತ್ತೂರಿನ ಗಾಂಧೀಕಟ್ಟೆಯ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಎಚ್ಚರಿಸಿದ್ದಾರೆ.

ಸೆ.7ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಶಿಕ್ಷಕರು ಈ ಸಮಾಜಕ್ಕೆ ಎಷ್ಟು ಮುಖ್ಯ, ಅವರ ಜವಾಬ್ದಾರಿಗಳೇನು? ಎನ್ನುವುದನ್ನು ಅರಿತುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಅನೇಕ ಶಿಕ್ಷಕರು ಈವರೆಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದರಲ್ಲಿ ಯಾವುದೇ ಒತ್ತಡ, ರಾಜಕಾರಣ, ಧರ್ಮ, ಮತ ಪರಿಗಣನೆಗೆ ಬರುವುದಿಲ್ಲ. ಅದರಂತೆಯೇ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ. ಆದರೆ ಇಡೀ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುವ ಘಟನೆ ಸೆ.೫ರಂದು ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಪಾಪೆಮಜಲು ಶಾಲಾ ಶಿಕ್ಷಕಿ ತೆರೆಸಾ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಅವರು `ನನಗೆ ಪ್ರಶಸ್ತಿ ಘೋಷಣೆಯಾದ ವಿಚಾರವನ್ನು ನನಗೆ ಅಧಿಕೃತವಾಗಿ ಹೇಳಿಲ್ಲ. ಬೇರೆಯವರಿಂದ ತಿಳಿದುಕೊಂಡಿದ್ದೇನೆ. ಇಲಾಖೆಯಿಂದ ನನಗೆ ಯಾವುದೇ ಮಾಹಿತಿ ಕೊಟ್ಟಿಲ್ಲ’ ಎಂದು ಹೇಳಿದ್ದರು. ಈ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಿದಾಗ, ಇಬ್ಬರು ಶಿಕ್ಷಕರು ಅವರ ಮನೆಗೆ ಹೋಗಿ `ನೀವು ಆ ಕಾರ್ಯಕ್ರಮಕ್ಕೆ ಬರಬಾರದು. ಬಂದರೆ ಗೊಂದಲ ನಿರ್ಮಾಣವಾಗುತ್ತದೆ. ಶಾಸಕರು, ಜನಪ್ರತಿನಿಧಿಗಳು ಸಭೆಯಿಂದ ಎದ್ದು ಹೋಗ್ತಾರೆ. ಸಭೆಯೇ ಅಲ್ಲೋಲಕಲ್ಲೋಲವಾಗುತ್ತದೆ. ಪ್ರಶಸ್ತಿಯನ್ನು ಪಡೆದುಕೊಳ್ಳಲು ಬರಬಾರದು. ಮುಂದಿನ ದಿನಗಳಲ್ಲಿ ನಿಮಗೆ ಪ್ರಶಸ್ತಿ ನೀಡಲಾಗುವುದು’ ಎನ್ನುವ ಮಾತುಗಳನ್ನು ಹೇಳಿದ್ದರು ಎನ್ನುವುದು ತಿಳಿಯಿತು. ಇದನ್ನು ನೋಡುವಾಗ ಇದು ಜಾತಿ ರಾಜಕಾರಣವೋ, ಅಸಹಿಷ್ಣುತೆಯೋ ಎನ್ನುವುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಆ ಶಿಕ್ಷಕರನ್ನು ಸಂಪರ್ಕಿಸುವಾಗ `ನನಗೆ ಅನ್ಯಾಯವಾಗಿದೆ’ ಎನ್ನುವ ಮಾತನ್ನು ಹೇಳುತ್ತಾರೆ ಹೊರತು ಬೇರೆ ಯಾವುದನ್ನೂ ಹೇಳುತ್ತಿಲ್ಲ. ಓರ್ವ ಶಿಕ್ಷಕಿಗೆ ಈ ರೀತಿ ಅಪಮಾನವಾಗುವುದು ಸರಿಯೇ? ಯಾರದೋ ಒತ್ತಡದಿಂದಾಗಿ ಅವರಿಗೆ ಪ್ರಶಸ್ತಿ ಬಂದಿಲ್ಲ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ ಎಂದರು.

ಅರ್ಹತೆಗೆ ಸರಿಯಾಗಿ ಅವರಿಗೆ ಸಂದಿರುವ ಪ್ರಶಸ್ತಿಯನ್ನು ಗೌರವಯುತವಾಗಿ ಕೊಡಬೇಕಾದುದು ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ. ಇದರಲ್ಲಿ ಅವರು ಲೋಪವನ್ನು ಮಾಡಿದ್ದಾರೆನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇದರ ಹಿಂದೆ ಏನಾಗಿದೆ ಎನ್ನುವುದು ತಿಳಿಯುವ ಕೆಲಸ ಮಾಡುವ ಜೊತೆಗೆ ಶಿಕ್ಷಕಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ. ಇದನ್ನು ಪ್ರಶ್ನಿಸದಿದ್ದರೆ ನಾವು ಸಮಾಜದಲ್ಲಿ ಬದುಕಿ ಪ್ರಯೋಜನವಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಯಾವ ವಿಚಾರಕ್ಕೆ ಶಿಕ್ಷಕರಿಗೆ ಈ ಅನ್ಯಾಯ ಮಾಡಲಾಗಿದೆ ಎನ್ನುವುದು ಪ್ರಶ್ನಾರ್ಥವಾಗಿದೆ. ಅವರ ಸಾಧನೆ, ಮಾನದಂಡವನ್ನು ಗುರುತಿಸಿ ಜಿಲ್ಲಾಮಟ್ಟದ ಅಧಿಕಾರಿಗಳು ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ ಹೊರತು ಯಾರು ಕೂಡ ಅವರಿಗೆ ಪ್ರಶಸ್ತಿ ನೀಡಬೇಕೆಂದು ಕೇಳಿಕೊಂಡು ಹೋಗಿಲ್ಲ. ಅವರಿಗೆ ಪ್ರಶಸ್ತಿಯನ್ನು ನೀಡದೆ ಗೂಂಡಾಗಿರಿಯ ಪ್ರವೃತ್ತಿಯನ್ನು ಮಾಡುವ ಮೂಲಕ ಇಲಾಖೆ ತಪ್ಪು ಮಾಡಿದೆ. ಇದರ ಹಿಂದೆ ಏನಿದೆ ಎನ್ನುವುದನ್ನು ನಾವು ತಿಳಿದುಕೊಳ್ಳುತ್ತೇವೆ. ಶಿಕ್ಷಕರಿಗೆ ಅವಮಾನ, ಅಗೌರವ ತೋರಿಸುವ ಕೆಲಸ ಯಾರು ಮಾಡಿದರೂ ತಪ್ಪೇ. ಇದು ಶಿಕ್ಷಕರಿಗೆ ಮಾತ್ರ ಅಪಮಾನ ಅಲ್ಲ. ಶಿಕ್ಷಕರಿಗೆ ನೀಡುವ ಪ್ರಶಸ್ತಿಗೆ ತಂದ ಕೆಡುಕು. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು, ತಾಲೂಕು ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಬೇಕಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಪಾಪೆಮಜಲು ಶಾಲೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ಸೇವೆಯನ್ನು ಗುರುತಿಸಿ ತೆರೆಸಾ ಅವರನ್ನು ಪ್ರಶಸ್ತಿಗೆ ಶಿಕ್ಷಣ ಇಲಾಖೆಯು ಆಯ್ಕೆ ಮಾಡಿತ್ತು. ಆದರೆ ಆ ಪ್ರಶಸ್ತಿಯನ್ನು ಪಡೆದುಕೊಳ್ಳಲು ಬಿಡುವುದಿಲ್ಲ ಎಂದರೆ ಇದು ಯಾವ ರಾಜಕಾರಣ? ಯಾವ ನ್ಯಾಯ ಎನ್ನುವುದು ತಿಳಿಯುತ್ತಿಲ್ಲ. ಇದನ್ನು ಸರಿಪಡಿಸಲಾಗುತ್ತದೆಯೇ ಎಂದು ಎರಡು ದಿನ ಕಾದಿದ್ದೆವು. ಆದರೆ ತಪ್ಪೆಸಗಿದವರು ಬಚಾವಾಗಲು ಯತ್ನಿಸುತ್ತಿದ್ದಾರೆ. ಹೀಗಾಗಿ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಮತ್ತು ಸಿಎಂಗೆ ದೂರು ನೀಡಲಾಗುವುದು. ಅವರನ್ನು ಸಾರ್ವಜನಿಕವಾಗಿ ಗೌರವಯುತವಾಗಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನಿಸಬೇಕು. ಒಂದು ವಾರದೊಳಗೆ ಸಾರ್ವಜನಿಕವಾಗಿ, ಗೌರವಯುತವಾಗಿ ಅವರನ್ನು ಸನ್ಮಾನಿಸಬೇಕು. ಪ್ರಶಸ್ತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಶಿಕ್ಷಣ ಸಚಿವರು, ರಾಜ್ಯಪಾಲರಿಗೆ ದೂರು ನೀಡುತ್ತೇವೆ. 3 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ರೆ ಪುತ್ತೂರಿನ ಗಾಂಧೀಕಟ್ಟೆಯ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಮನಾಥ ಶೆಟ್ಟಿಯವರು ಎಚ್ಚರಿಸಿದರು.

ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ, ಪಾಪೆಮಜಲು ಶಾಲೆಯ ಶಿಕ್ಷಕಿ ತೆರೆಸಾ ಅವರು ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಕ್ಕಳ ಸಂಖ್ಯೆಯೂ ಜಾಸ್ತಿಯಾಗಿದೆ. ನನ್ನ ಜಿ.ಪಂ. ಸದಸ್ಯತನದ ಅವಧಿಯಲ್ಲಿ ಅಲ್ಲಿಗೆ ಅಂಗನವಾಡಿ ಕೇಂದ್ರವೊಂದು ಮಂಜೂರಾಗಿತ್ತು. ಆಗ ಅಲ್ಲಿ ಸ್ವಲ್ಪ ಗೊಂದಲವಿತ್ತು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಎಲ್ಲರೂ ಕೂಡ ನಾವು ಹೇಳಿದಲ್ಲಿ ಅಂಗನವಾಡಿ ಕೇಂದ್ರ ಕಟ್ಟಲು ಒಪ್ಪಿದ್ದರು. ಆದರೆ ಇನ್ನೊಂದು ವರ್ಗ ನಾವು ಹೇಳಿದಲ್ಲಿ ಕಟ್ಟಡ ನಿರ್ಮಾಣ ಆಗಬಾರದು ಎಂದು ಪ್ರಯತ್ನಿಸಿತ್ತು. ಈ ವಿಚಾರದಲ್ಲಿ ಬಹಳಷ್ಟು ಗೊಂದಲ ಏರ್ಪಟ್ಟಿತ್ತು. ಆ ವಿಚಾರ ಇಲ್ಲಿ ಕಾರಣವಾಗಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಅಂತಹ ಉತ್ತಮ ಶಿಕ್ಷಕಿಗೆ ಅನ್ಯಾಯವಾಗಿದೆ. ಅಲ್ಲಿ ಯಾರದೋ ಮಾತು ಕೇಳಿ ಅನ್ಯಾಯವಾಗಿದೆ. ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಅವರಿಗೆ ನೀಡಿ ಗೌರವಿಸಬೇಕು. ಡಿಡಿಪಿಐ, ಬಿಇಒ ಈ ಬಗ್ಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಎನ್‌ಎಸ್‌ಯುಐನ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಉಪಸ್ಥಿತರಿದ್ದರು.

 

ಪಾಪೆಮಜಲಿನ ಮುಖ್ಯ ಶಿಕ್ಷಕಿಗೆ ಎನ್.ಎಸ್.ಯು.ಐ ಪುತ್ತೂರು ಘಟಕದಿಂದ ಸನ್ಮಾನ:ಬಾತೀಶ್ ಅಳಕೆಮಜಲು

LEAVE A REPLY

Please enter your comment!
Please enter your name here