ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ವಿಚಾರ: ಗ್ರಾಮಸಭೆಯಲ್ಲಿ ಪರಸ್ಪರ ವಾಗ್ವಾದ, ಗದ್ದಲ

0

  • ಹಸ್ತಕ್ಷೇಪ ಮಾಡುವ ಗ್ರಾ.ಪಂ ಸದಸ್ಯರ ವಿರುದ್ಧ ದಿಕ್ಕಾರ, ಖಂಡನಾ ನಿರ್ಣಯಕ್ಕೆ ಆಗ್ರಹ
  • ದಾಖಲಾಗದ ಖಂಡನಾ ನಿರ್ಣಯ
  • ಆಣೆ ಪ್ರಮಾಣಕ್ಕೆ ಆಹ್ವಾನ
  • ಬೆಳ್ಳಿಪ್ಪಾಡಿ ಕ್ರಾಸ್ ನಲ್ಲಿ ಸಿ.ಸಿ.ಕೆಮರಾ ಅಳವಡಿಸಲು ಆಗ್ರಹ
  • ಖಾಯಂ ಗ್ರಾಮಕರಣಿಕರ ನೇಮಕಕ್ಕೆ ಒತ್ತಾಯ
  • ಶಾಲಾ ಆವರಣದಲ್ಲಿ ಮದ್ಯದ ಬಾಟಲಿ!

ಪುತ್ತೂರು; ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ಹುದ್ದೆಯ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸಭೆಯಲ್ಲಿ ಪರಸ್ಪರ ವಾಗ್ವಾದ ನಡೆದು ಗದ್ದಲ ನಡೆದ ಮತ್ತು ಸಂಜೀವಿನಿ ಒಕ್ಕೂಟದ ಮೇಲೆ ಹಸ್ತಕ್ಷೇಪ ಮಾಡುತ್ತಿರುವ ಗ್ರಾ.ಪಂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಜೀವಿನಿ ಒಕ್ಕೂಟದ ಸದಸ್ಯರು ಹಸ್ತಕ್ಷೇಪ ಮಾಡುವವರ ವಿರುದ್ಧ ದಿಕ್ಕಾರ ಕೂಗಿ, ಖಂಡನಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ಕೋಡಿಂಬಾಡಿ ಗ್ರಾಮಸಭೆಯಲ್ಲಿ ನಡೆದಿದೆ.

ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳನ್ನೊಳಗೊಂಡಿರುವ ಕೋಡಿಂಬಾಡಿ ಗ್ರಾಮ ಪಂಚಾಯತಿನ ಗ್ರಾಮಸಭೆ ಸೆ.೧೩ರಂದು ಬೆಳ್ಳಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು.

ಪರಸ್ಪರ ವಾಗ್ವಾದ:
ಗ್ರಾಮಸಭೆಯಲ್ಲಿ ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ನೇಲಡ್ಕ ಮಾತನಾಡಿ, ಸಂಜೀವಿನಿ ಒಕ್ಕೂಟದ ಬಗ್ಗೆ ಪತ್ರಿಕೆಗಳಲ್ಲಿ ಸುಳ್ಳು ಮಾಹಿತಿ, ಅಪಪ್ರಚಾರಗಳು ಬರುತ್ತಿರುವ ಬಗ್ಗೆ ಸ್ಪಷ್ಟನೆ ಬೇಕು ಎಂದರು. ಪ್ರತಿಕ್ರಿಯಿಸಿದ ಗ್ರಾ.ಪಂ.ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಪಂಚಾಯತ್‌ನಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಸದಸ್ಯರು ವೈಯಕ್ತಿಕವಾಗಿ ಮಾಡಿದ್ದರೆ ಅವರೇ ಉತ್ತರ ಕೊಡಬೇಕು. ನಾವು ಉತ್ತರ ಕೊಡಲು ಸಾಧ್ಯವಿಲ್ಲ ಎಂದರು. ಸಂಜೀವಿನಿ ಒಕ್ಕೂಟದಿಂದ ತಪ್ಪು, ಅನ್ಯಾಯವಾಗಿಲ್ಲ. ೩೦೦ ಮಹಿಳಾ ಸದಸ್ಯರು ಇದ್ದಾರೆ. ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ಜನಪ್ರತಿನಿಧಿಗಳಾಗಿ ಅವರು ಅಪಪ್ರಚಾರ ಮಾಡುವುದಕ್ಕೆ ಉತ್ತರ ಬೇಕು ಎಂದು ಒಕ್ಕೂಟದ ಕಾರ್ಯದರ್ಶಿ ಸುಂದರಿ ಹೇಳಿದರು. ಸಂಜೀವಿನಿ ಒಕ್ಕೂಟದ ಬಗ್ಗೆ ನಾವು ಯಾವುದೇ ಹಸ್ತಕ್ಷೇಪ, ದೂರು ನೀಡಿಲ್ಲ. ಹೀಗಾಗಿ ಅವರೇ ಉತ್ತರ ನೀಡಬೇಕು ಎಂದು ಅಧ್ಯಕ್ಷರು ಮತ್ತೆ ಹೇಳಿದರು. ಗ್ರಾಮ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿದ್ದು ಅದಕ್ಕೆ ಇಲ್ಲಿಯೇ ಉತ್ತರ ದೊರೆಯಬೇಕು ಎಂದು ತಾ.ಪಂ. ಮಾಜಿ ಅಧ್ಯಕ್ಷ ಕೆ. ಜಯಾನಂದ ಹೇಳಿದರು.

ಪ್ರತಿಕ್ರಿಯಿಸಿದ ಗ್ರಾ.ಪಂ. ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆರವರು ನ್ಯಾಯಾಲಯದಲ್ಲಿರುವ ವಿಚಾರಗಳನ್ನು ಗ್ರಾಮಸಭೆಯಲ್ಲಿ ಮಾತನಾಡಬಾರದು. ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ನೇಮಕಕ್ಕೆ ಮಾನ ದಂಡಗಳಿವೆ. ಈ ಪ್ರಕರಣ ಪ್ರಸ್ತುತ ಎಸಿಬಿ ನ್ಯಾಯಾಲದಲ್ಲಿದೆ. ಎಂ.ಬಿ.ಕೆ.ಅವರನ್ನು ಅಮಾನತು ಮಾಡಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ. ಇದು ಯಾವುದನ್ನು ಲೆಕ್ಕಿಸದೇ ಅದೇ ಮಹಿಳೆ ಎಂ.ಬಿ.ಕೆ.ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಈ ಪ್ರಕರಣ ಹೈಕೋರ್ಟ್‌ಗೆ ಹೋಗಿದೆ. ಅವರು ಆದಾಯದ ಬಗ್ಗೆ ಹಾಗೂ ವಿದ್ಯಾರ್ಹತೆಯ ಬಗ್ಗೆ ನೀಡಿದ ದಾಖಲೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಇದೆಲ್ಲಾ ಮಾನದಂಡಗಳನ್ನು ಪರಿಶೀಲಿಸಿ ಗೊಂದಲದ ಬಗ್ಗೆ ದೂರು ನೀಡಿದ್ದೇವೆ. ಇದಕ್ಕೆ ಒಕ್ಕೂಟದ ಅಧ್ಯಕ್ಷರು ಹಾಗೂ ತಂಡದವರಿಗೆ ನಾವು ಕಿರುಕುಳ ನೀಡಿರುವುದಾಗಿ ನನ್ನ ಹಾಗೂ ಜಯಪ್ರಕಾಶ್ ಬದಿನಾರು ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದರು. ನಮ್ಮ ಮೇಲೆ ಏನೂ ಬೇಕಾದರೂ ಕ್ರಮ ಕೈಗೊಳ್ಳಬಹುದು. ಇನ್ನಷ್ಟು ಕೇಸು ದಾಖಲಿಸಬಹುದು. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನಾವು ಸಿದ್ಧ. ನಾವು ಮಹಿಳೆಯ ಮೇಲೆ ದೌರ್ಜನ್ಯ ಮಾಡಿಲ್ಲ ಎಂದು ಜಗನ್ನಾಥ ಶೆಟ್ಟಿ ತಿಳಿಸಿದರು.

ಈಗಿನ ಎಂ.ಬಿ.ಕೆ. ಆಗಿರುವವರು ಹಿಂದೆ ಪಂಚಾಯತ್ ಅಧ್ಯಕ್ಷರಾಗಿದ್ದರು. ಅವರ ಮೇಲೆ ಪೈಪ್ ಕಾಂಪೋಸ್ಟ್ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪವಿದೆ. ಲೋಕಾಯುಕ್ತದಲ್ಲಿ ಕೇಸು ನಡೆಯುತ್ತಿದೆ. ಸರಕಾರಿ ಹುದ್ದೆಗೆ ಭ್ರಷ್ಟಾಚಾರದ ಆರೋಪಿಗಳನ್ನು ನೇಮಕ ಮಾಡುವಾಗ ಅಧಿಕಾರಿಗಳು ಗಮನಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಲೋಕಾಯುಕ್ತಕ್ಕೂ ದೂರು ನೀಡಿದ್ದೇವೆ. ಸೂಕ್ತ ಉತ್ತರ ದೊರೆಯುವ ತನಕ ಹೋರಾಟ ಮುಂದುವರಿಯಲಿದೆ ಎಂದು ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ತಿಳಿಸಿದರು.

ಆಣೆ ಪ್ರಮಾಣಕ್ಕೆ ಆಹ್ವಾನ:
ಎಂಬಿಕೆ ಅಥವಾ ಸಂಜೀವಿನಿ ಒಕ್ಕೂಟದ ಬಗ್ಗೆ ನಾವು ಕಾನೂನು ಹೋರಾಟವಲ್ಲದೆ ವೈಯಕ್ತಿಕವಾಗಿ ಅವಮಾನ ಮಾಡಿ ಕಿರುಕುಳ ನೀಡಿದ್ದೇ ಆದರೆ ನಾವು ನಂಬಿದ ಮಹಿಷಮರ್ದಿನಿ ದೇವರು ಮತ್ತು ಪಂಚಲಿಂಗೇಶ್ವರ ದೇವರ ಎದುರು ಆಣೆ ಪ್ರಮಾಣ ಮಾಡಿ. ನೀವು ಯಾವ ದೇವಸ್ಥಾನ, ಚರ್ಚ್ ಅಥವಾ ಮಸೀದಿಗೆ ಬೇಕಾದರೂ ಕರೆಯಿರಿ. ನಾವು ಬಂದು ಪ್ರಮಾಣ ಮಾಡುತ್ತೇವೆ ಎಂದು ಜಗನ್ನಾಥ ಶೆಟ್ಟಿ ಹೇಳಿದರು.

ಇ.ಓ ಬರಲಿ:
ಎಂಬಿಕೆ ನೇಮಕ ಅನರ್ಹ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ನಮಗೆ ಉತ್ತರ ನೀಡಿದ್ದಾರೆ. ಹೀಗಾಗಿ ಇಲ್ಲಿಗೆ ಅವರು ಬರಬೇಕು. ಮೇಲಾಧಿಕಾರಿಗಳು ಅನರ್ಹ ಎಂದು ಹೇಳಿದರೂ ಕಾನೂನಿಗೆ ಬೆಲೆ ಇಲ್ಲವೇ. ನಮ್ಮ ಮೇಲೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ನಾವು ಐದು ಮಂದಿ ಸದಸ್ಯರು ಸೇರಿಕೊಂಡು ದೂರು ನೀಡಿದ್ದೇವೆ. ಆದರೂ ನೀವು ದೂರು ನೀಡಿರುವುದು ನಮ್ಮಿಬ್ಬರ ಮೇಲೆ. ಐದು ಮಂದಿಯ ಮೇಲೆ ಯಾಕೆ ದೂರು ನೀಡಿಲ್ಲ .ನಮ್ಮನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಜಯಪ್ರಕಾಶ್ ಬದಿನಾರು ಆರೋಪಿಸಿದರು.

ಇತರರು ಹಸ್ತಕ್ಷೇಪ ಮಾಡದಂತೆ ಬೈಲಾದಲ್ಲಿದೆ:
ಸದಸ್ಯ ರಾಮಣ್ಣ ಗೌಡ ಗುಂಡೋಲೆ ಮಾತನಾಡಿ, ಸಂಜೀವಿನಿ ಒಕ್ಕೂಟ ಸ್ವತಂತ್ರ ಸಂಘಟನೆ. ಮಹಿಳೆಯರಿಗಾಗಿ ಇರುವಂತದ್ದು. ಒಕ್ಕೂಟದಲ್ಲಿ ವ್ಯತ್ಯಾಸವಾದರೆ ಸದಸ್ಯರಿಗೆ ಮಾತ್ರ ಪ್ರಶ್ನಿಸಲು ಅವಕಾಶವಿದೆ ಬೇರೆ ಯಾರಿಗೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅದರ ಬೈಲಾದಲ್ಲಿದೆ. ಆಯ್ಕೆ ಬಗ್ಗೆ ದೂರು ನೀಡಿದ್ದಕ್ಕೆ ಆದೇಶ ಮಾಡಿರುವ ಸಿಇಓ, ಇಓರವರು ಯಾಕೆ ಅನರ್ಹಗೊಳಿಸಿಲ್ಲ. ಒಕ್ಕೂಟದ ತೀರ್ಮಾನವೇ ಅಂತಿಮ. ಬೇಕಾದರೆ ಇಓರವರನ್ನು ಇಲ್ಲಿಗೆ ಕರೆಯಿರಿ ಎಂದು ಹೇಳಿದರು. ಸಭೆಯಲ್ಲಿದ್ದ ಕೆಲವರು ಹಸ್ತಕ್ಷೇಪ ಮಾಡಿದವರು ಮಹಿಳಾ ವಿರೋಧಿಗಳು ಎಂದು ಆರೋಪಿಸಿದರು. ಅಧ್ಯಕ್ಷರಿಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಮತ್ತೆ ಯಾಕೆ ತಲೆ ಬಿಸಿ ಎಂದು ರಾಮಣ್ಣ ಗೌಡ ಹೇಳಿದರು.

ತೀರ್ಮಾನವಾಗದೇ ಸಭೆ ನಡೆಯಲು ಬಿಡುವುದಿಲ್ಲ:
ಸಂಜೀವಿನಿ ಒಕ್ಕೂಟದ ಬಗ್ಗೆ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಸಭೆಯಲ್ಲಿಯೇ ತೀರ್ಮಾನವಾಗಬೇಕು. ಇಲ್ಲಿ ತೀರ್ಮಾನವಾಗದೇ ಗ್ರಾಮಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಸಂಜೀವಿನಿ ಒಕ್ಕೂಟದ ಸದಸ್ಯರು ಪಟ್ಟು ಹಿಡಿದರು. ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರನ್ನು ಜೊತೆಗೆ ನಿಲ್ಲಬಾರದು ಎಂದು ತಿಳಿಸಲಾಗಲಿಲ್ಲವೇ ಎಂದು ಗ್ರಾ.ಪಂ.ಸದಸ್ಯೆ ಮಲ್ಲಿಕಾ ಅಶೋಕ್ ಹೇಳಿದಾಗ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಪರಸ್ಪರ ವಾಗ್ವಾದ ನಡೆಯಿತು. ಪಂಚಾಯತ್ ವಿಚಾರದಲ್ಲಿ ಪಕ್ಷವನ್ನು ತರಬೇಡಿ ಎಂದು ಅಧ್ಯಕ್ಷರು ಹಾಗೂ ಗ್ರಾಮಸ್ಥರು ಹೇಳಿದರು.

ಡೋಂಗಿ ಡೋಂಗಿ ಘೋಷಣೆ:
ನಾವು ಮೊದಲೇ ನಿಮ್ಮ ಪ್ರಶ್ನೆಗೆ ಉತ್ತರ ನೀಡಿದ್ದೇವೆ. ಈಗ ಚರ್ಚೆಗೆ ವೇದಿಕೆ ಒದಗಿಸಿದ್ದೀರಿ. ಸಂಜೀವಿನಿ ಒಕ್ಕೂಟದವರು ಎಲ್ಲರೂ ಇಲ್ಲಿ ಸೇರಿದ್ದಾರೆ. ಚರ್ಚೆಗೆ ವೇದಿಕೆ ಒದಗಿಸಿದ ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ ಜಯಪ್ರಕಾಶ್ ಬದಿನಾರು ಅವರು ಎಂಬಿಕೆ ನೇಮಕಕ್ಕೆ ಅದರದ್ದೇ ಆದ ಸುತ್ತೋಲೆಯಿದೆ ಎಂದು ಹೇಳಿ ಎಂಬಿಕೆಯವರು ಅಧ್ಯಕ್ಷರಾಗಿದ್ದಾಗ ಪೈಪ್ ಕಾಂಪೋಸ್ಟ್ ಅವ್ಯವಹಾರವಾಗಿದೆ. ಅವರೇ ಈಗ ಎಂಬಿಕೆಯಾಗಿದ್ದಾರೆ. ಸಂಜೀವಿನಿ ಒಕ್ಕೂಟದವರು ಏನೂ ಮಾಡುತ್ತಿಲ್ಲ ಎಂದರು. ಈ ವೇಳೆ ಮತ್ತೆ ಸಭೆಯಲ್ಲಿ ಬೊಬ್ಬೆ, ಗದ್ದಲ ಉಂಟಾಯಿತು. ಎಂಬಿಕೆ ವಿಚಾರದಲ್ಲಿ ಹೈಕೋರ್ಟಿಗೆ ಹೋಗುವುದಾಗಿ ಜಯಪ್ರಕಾಶ್ ತಿಳಿಸಿದರು. ಆಗ ಡೋಂಗಿ, ಡೋಂಗಿ ಎಂದು ಸಭೆಯಲ್ಲಿ ಘೋಷಣೆ ಕೇಳಿಬಂತು. ಸಂಜೀವಿನಿ ಒಕ್ಕೂಟದಲ್ಲಿ ಎಲ್ಲಾ ಪಕ್ಷದವರಿದ್ದಾರೆ. ಆದರೆ ಇಲ್ಲಿ ಪಕ್ಷ ಬರಬಾರದು ಇಲ್ಲಿ ಎಲ್ಲರೂ ಒಂದೇ. ಸ್ತ್ರೀಶಕ್ತಿ ಸಂಘಗಳು ಸಂಜೀವಿನಿ ಒಕ್ಕೂಟವಾಗಿ ಬದಲಾಗಿದೆ. ಇಲ್ಲಿ ಯಾವುದೇ ನಿರ್ಣಯವಾಗದೇ ಗ್ರಾಮಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮಣ್ ಹೇಳಿದರು.

ಒಂದು ದಿನವೂ ನೆಮ್ಮದಿಯಿಂದ ಕೆಲಸ ಮಾಡಿಲ್ಲ-ಅಧ್ಯಕ್ಷೆಯ ಅಳಲು
ಸಂಜೀವಿನಿ ಒಕ್ಕೂಟದಲ್ಲಿ ನಾವು ಒಂದು ದಿನವೂ ನೆಮ್ಮದಿಯಲ್ಲಿ ಕೆಲಸ ಮಾಡಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಸಂಧ್ಯಾ ನೇಲಡ್ಕ ತಮ್ಮ ಅಳಲನ್ನು ಸಭೆಯಲ್ಲಿ ತಿಳಿಸಿದರು. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ನಮಗೆ ಕೆಲಸ ನಿರ್ವಹಿಸಲು ಯಾವುದೇ ತೊಂದರೆಯಿಲ್ಲ. ಆದರೆ ಇಬ್ಬರು ಪಂಚಾಯತ್‌ನ ಜನಪ್ರತಿನಿಧಿಗಳು ಬಾಯಿಗೆ ಬಂದಂತೆ ಪತ್ರಿಕೆಗಳಲ್ಲಿ ನಮ್ಮ ಮೇಲೆ, ನಮ್ಮ ಮನೆಯ ಹೆಸರು ಹಾಕಿ ಅಪಪ್ರಚಾರ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಪತ್ರಿಕೆಯಲ್ಲಿ ಬಂದಿರುವ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ಇದೇ ವಿಚಾರದಲ್ಲಿ ಸಭೆಯಲ್ಲಿ ತೀವ್ರ ಆರೋಪ, ಪ್ರತ್ಯಾರೋಪ ನಡೆಯಿತು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಿದೆ. ಅದರಂತೆ ಕಾನೂನು ಹೋರಾಟ ಮಾಡುತ್ತೇವೆ ಹೊರತು ನಿಮಗೆ ಯಾವುದೇ ತೊಂದರೇ ನೀಡಿದ್ದೇವಾ ಎಂದು ಜಗನ್ನಾಥ ಶೆಟ್ಟಿ ಪ್ರಶ್ನಿಸಿದರು. ಪತ್ರಿಕೆಯಲ್ಲಿ ಅಪಪ್ರಚಾರ ಮಾಡುವುದು ತೊಂದರೆಯಲ್ಲವೇ ಎಂದು ಒಕ್ಕೂಟದ ಸದಸ್ಯರು ಪ್ರಶ್ನಿಸಿದಾಗ ಪತ್ರಿಕೆಯವರ ಮೇಲೆ ಮಾನನಷ್ಟ ಕೇಸ್ ಹಾಕಿ ಎಂದು ಜಗನ್ನಾಥ ಶೆಟ್ಟಿ ತಿಳಿಸಿದರಲ್ಲದೆ ಮಹಿಳಾ ಆಯೋಗಕ್ಕೆ ದೂರು ನೀಡುವುದು ತೊಂದರೆಯಲ್ಲವೇ ಎಂದರು. ಈ ವೇಳೆ ಮತ್ತೆ ಸಭೆಯಲ್ಲಿ ಗೊಂದಲ ಉಂಟಾಯಿತು.

ಎಂಬಿಕೆ ನೇಮಕ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಅನುಭವಸ್ಥೆಯಾದ ಸಂಧ್ಯಾರವರನ್ನು ನೇಮಕ ಮಾಡಲಾಗಿದೆ. ಈಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಲವು ಮಂದಿ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ. ಹಲವು ಮಂದಿ ಸ್ವ ಉದ್ಯೋಗ ಪ್ರಾರಂಭಿಸಿದ್ದಾರೆ. ಇತರರು ಹಸ್ತಕ್ಷೇಪ ಮಾಡದಂತೆ ಆದೇಶದಲ್ಲಿ ಸ್ಪಷ್ಟವಾಗಿ ಇದೆ. ಜವಾಬ್ದಾರಿಯುತ ಅಧ್ಯಕ್ಷರಿರುವಾಗ ಅಲ್ಲಿ ಭ್ರಷ್ಟಾಚಾರ ಉಂಟಾಗಲು ಸಾಧ್ಯವಿಲ್ಲ. ಅಲ್ಲದೆ ಒಕ್ಕೂಟದಿಂದ ಅನ್ಯಾಯವಾಗಿದ್ದರೆ ತಿಳಿಸಿ. ಇದರ ಹೊರತು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇಬ್ಬರು ಪುರುಷರ ಜೊತೆ ಮಹಿಳೆಯೋರ್ವರ ಫೋಟೋ ಹಾಕುವ ಉದ್ದೇಶವೇನು. ಅವರು ಎಷ್ಟು ಕಿರುಕುಳ ಅನುಭವಿಸಬೇಕು ಎಂದು ಅರುಣಾರವರು ಹೇಳಿದರು. ಫೋಟೋ ಹಾಕಿದ್ದು ಪತ್ರಿಕೆಯವರು ಈ ಬಗ್ಗೆ ಅವರಲ್ಲಿಯೇ ಕೇಳಿ ಎಂದು ಜಗನ್ನಾಥ ಶೆಟ್ಟಿ ತಿಳಿಸಿದರು. ವರದಿ ಯಾರೂ ಹಣ ಕೊಟ್ಟು ಹಾಕಿಸಿದ್ದಲ್ಲ. ಅವರನ್ನು ಅನರ್ಹಗೊಳಿಸಲು ದೂರು ನೀಡಿಲ್ಲ. ನೇಮಕದ ಗೊಂದಲದ ಬಗ್ಗೆ ಸ್ಪಷ್ಟನೆ ನೀಡುವಂತೆ ದೂರು ನೀಡಿದ್ದೇವೆ ಎಂದರು.

ಸದಸ್ಯರ ವಿರುದ್ಧ ದಿಕ್ಕಾರ, ಖಂಡನಾ ನಿರ್ಣಯಕ್ಕೆ ಆಗ್ರಹ:
ಸಭೆಯಲ್ಲಿ ತೀವ್ರ ಆರೋಪ ಪ್ರತ್ಯಾರೋಪ ನಡೆದು ನಂತರ ಸಂಜೀವಿನಿ ಒಕ್ಕೂಟದ ಮೇಲೆ ಹಸ್ತಕ್ಷೇಪ ನಡೆಸುವ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದ ಸಂಜೀವಿನಿ ಒಕ್ಕೂಟದ ಸದಸ್ಯರು ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು. ಸದಸ್ಯರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಗ್ರಾಮಸ್ಥರಾದ ಮೋಹನ ಪಕ್ಕಳ ಹಾಗೂ ಜಯಾನಂದ ಕೋಡಿಂಬಾಡಿ ಮೊದಲಾದವರು ಇದಕ್ಕೆ ಧ್ವನಿಗೂಡಿಸಿ ಖಂಡನಾ ನಿರ್ಣಯಕ್ಕೆ ಆಗ್ರಹಿಸಿದರು. ನಮಗೂ ನ್ಯಾಯಬೇಕು ಎಂದು ಜಯಪ್ರಕಾಶ್ ಬದಿನಾರು ತಿಳಿಸಿದರು.
ಎಂಬಿಕೆ ನೇಮಕದ ಬಗ್ಗೆ ಉಂಟಾಗಿರುವ ಲೋಪದ ಬಗ್ಗೆ ಆರೋಪವಿದೆ. ಮಾನದಂಡದಲ್ಲಿ ಲೋಪವೇ ಆಗಿದ್ದರೆ ಹೇಗೆ ಅವರು ಮಾನ್ಯತೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಕರ್ತವ್ಯ ನಿರ್ವಹಿಸಲು ಹೇಗೆ ಅವಕಾಶ ನೀಡಿದ್ದಾರೆ. ಅದು ಸ್ವಾಯತ್ತ ಸಂಸ್ಥೆ. ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಹಸ್ತಕ್ಷೇಪ ಮಾಡುವವರ ವಿರುದ್ಧ ಖಂಡನಾ ನಿರ್ಣಯ ಮಾಡಬೇಕು ಎಂದು ಆಗ್ರಹ ವ್ಯಕ್ತವಾಯಿತು. ಗ್ರಾಮ ಸಭೆ ಮುಂದುವರಿಯಬೇಕಾದರೆ ಖಂಡನಾ ನಿರ್ಣಯ ಆಗಬೇಕು ಎಂದು ಮೋಹನ ಪಕ್ಕಳ ಕುಂಡಾಪು ಆಗ್ರಹಿಸಿದರು. ಖಂಡನಾ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಚರ್ಚೆಗೆ ತೆರೆ ಎಳೆಯಲಾಯಿತು. ಆದರೆ, ಸಭೆಯಲ್ಲಿ ಖಂಡನಾ ನಿರ್ಣಯ ದಾಖಲಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಶಾಲಾ ವಿದ್ಯುತ್ ಫೀಸ್ ತೆಗೆದರೆ ಬೀಗ ಹಾಕಿ ಧರಣಿ;
ನಾಲ್ಕು ವರ್ಷಗಳ ಹಿಂದೆ ಕೋಡಿಂಬಾಡಿ ಶಾಲೆಗೆ ಅಳವಡಿಸಲಾದ ಕೊಳವೆ ಬಾವಿಯ ಪಂಪ್‌ನ ವಿದ್ಯುತ್ ಬಿಲ್ ಈ ತನಕ ಬಂದಿಲ್ಲ. ಕೆಲ ಸಮಯಗಳ ಹಿಂದೆ ಮೂವತ್ತು ಸಾವಿರದ ಒಂದೇ ಬಿಲ್ ಬಂದಿದೆ. ಇದೀಗ ಮತ್ತೆ ನಲವತ್ತು ಸಾವಿರದ ಬಿಲ್ ಬಂದಿದೆ. ಬಡ ಮಕ್ಕಳಿರುವ ಶಾಲೆಯಲ್ಲಿ ಅಷ್ಟೊಂದು ಮೊತ್ತ ಪಾವತಿಸಲು ಸಾಧ್ಯವಿಲ್ಲ. ಪ್ರತಿ ತಿಂಗಳ ಬಿಲ್ ಕಳುಹಿಸುತ್ತಿದ್ದರೆ ಇಂತಹ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ. ಒಂದೇ ಬಾರಿ ಕಳುಹಿಸಿದರೆ ಪಾವತಿಸುವುದು ಹೇಗೆ. ಈ ಹಿಂದೆ ಒಂದು ಬಾರಿ ಫೀಸ್ ತೆಗೆಯಲು ಬಂದಿದ್ದಾರೆ. ಈ ಬಿಲ್‌ನ್ನು ಸರಕಾರ ಮನ್ನಾ ಮಾಡಬೇಕು. ಫೀಸ್ ತೆಗೆದರೆ ಶಾಲೆಗೆ ಬೀಗ ಹಾಕಿ ಧರಣಿ ನಡೆಸುವುದಾಗಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸುರೇಶ್ ಹೇಳಿದರು.

ಉಪಕೇಂದ್ರಕ್ಕೆ ಗಡಿಗುರುತು ಮಾಡಿ;
ಆರೋಗ್ಯ ಇಲಾಖೆಯ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಂತಿನಗರದಲ್ಲಿ ಜಾಗ ಗುರುತು ಮಾಡಲಾಗಿದೆ. ಅದನ್ನು ಶೀಘ್ರವಾಗಿ ಸರ್ವೆ ನಡೆಸಿ, ಗಡಿಗುರುತು ಮಾಡಿಕೊಡಬೇಕು. ಬೆಳ್ಳಿಪ್ಪಾಡಿಗೆ ಉಪ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು. ಸಮುದಾಯ ಆರೋಗ್ಯಾಧಿಕಾರಿಯವರ ಕೇಂದ್ರವನ್ನು ಬೆಳ್ಳಿಪ್ಪಾಡಿಯಲ್ಲಿ ತೆರೆಯಬೇಕು ಎಂದು ಮೋಹನ ಪಕ್ಕಳ ಕುಂಡಾಪು ಆಗ್ರಹಿಸಿದರು.

ಖಾಯಂ ಗ್ರಾಮಕರಣಿಕರ ನೇಮಿಸಿ:
ಕೋಡಿಂಬಾಡಿ, ಬೆಳ್ಳಿಪ್ಪಾಡಿ ಗ್ರಾಮಗಳ ವ್ಯಾಪ್ತಿಯ ಕೋಡಿಂಬಾಡಿಯಲ್ಲಿ ಖಾಯಂ ಗ್ರಾಮಕರಣಿಕರಿಲ್ಲ. ಹೀಗಾಗಿ ಖಾಯಂ ಗ್ರಾಮಕರಣಿಕರನ್ನು ನೇಮಿಸುವಂತೆ ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಒತ್ತಾಯಿಸಿದರು.

ವಸತಿ ಯೋಜನೆ ಅನುದಾನ ಏರಿಕೆಯಾಗಲಿ:
ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಕೇವಲ ೧.೨೦ ಲಕ್ಷ ರೂ ಮಾತ್ರ ನೀಡುತ್ತಿದ್ದು ಇದು ಏನು ಸಾಕಾಗುವುದಿಲ್ಲ. ಹೀಗಾಗಿ ಅನುದಾನದ ಮೊತ್ತವನ್ನು ಏರಿಕೆ ಮಾಡಬೇಕು. ಮನೆ ನಿರ್ಮಾಣಕ್ಕೆ ಮರಳಿನದ್ದೇ ಪ್ರಮುಖ ಸಮಸ್ಯೆಯಾಗಿದ್ದು, ವಸತಿ ಯೋಜನೆಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಕಾಮಗಾರಿಗೆ ಸ್ಥಳೀಯವಾಗಿ ಮರಳು ಸಾಗಾಟಕ್ಕೆ ಅವಕಾಶ ನೀಡಬೇಕು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಬಾಬು ಗೌಡ ಆಗ್ರಹಿಸಿದರು.

ಬೆಳ್ಳಿಪ್ಪಾಡಿ ಕ್ರಾಸ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ:
ಸುರಕ್ಷತೆಯ ದೃಷ್ಟಿಯಿಂದ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಕ್ರಾಸ್ ಬಳಿ ಸಿಸಿ ಕ್ಯಾಮರಾ ಅಳವಡಿಸುವಂತೆ ಗ್ರಾಮಸ್ಥ ವಸಂತ ಆಗ್ರಹಿಸಿದರು. ಇದಕ್ಕೆ ಇತರ ಗ್ರಾಮಸ್ಥರು ಧ್ವನಿಗೂಡಿಸಿದರು. ಪಂಚಾಯತ್ ಲಭ್ಯ ಅನುದಾನದಲ್ಲಿ ಆಧ್ಯತೆಯ ಮೇರೆಗೆ ಅಳವಡಿಸಲು ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷ ರಾಮಚಂದ್ರ ಪೂಜಾರಿ ತಿಳಿಸಿದರು.

ಶಾಲಾ ಆವರಣದಲ್ಲಿ ಮದ್ಯದ ಬಾಟಲಿ;
ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲಾ ಆವರಣದಲ್ಲಿ ಪ್ಯಾಂಪರ್ಸ್, ಮದ್ಯದ ಬಾಟಲಿಗಳು ರಾಶಿ ಬೀಳುತ್ತದೆ. ಚಾಕಲೇಟ್ ಸಿಪ್ಪೆಗಳಾದರೂ ಶಾಲಾ ಆವರಣದಲ್ಲಿಲ್ಲ. ಆದರೆ ಮದ್ಯದ ಬಾಟಲಿಗಳು ರಾಶಿ ಬೀಳುತ್ತಿದೆ. ಶಾಲಾ ಮಕ್ಕಳು ಮದ್ಯದ ಬಾಟಲಿಗಳನ್ನು ಹೆಕ್ಕಬೇಕಾದ ಪರಿಸ್ಥಿತಿ ಇಲ್ಲಿ ಉದ್ಬವವಾಗಿದೆ ಎಂದು ಎಸ್.ಡಿ.ಎಂಸಿ ಅಧ್ಯಕ್ಷೆ ಭವ್ಯ ಹೇಳಿದರು.

ಅಕ್ಕಿ, ಬೇಳೆಯಲ್ಲಿ ಹುಳ;
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಬರುವ ಅಕ್ಕಿ ಹಾಗೂ ಬೇಳೆಯಲ್ಲಿ ಹುಳಗಳಿದ್ದು ಅಕ್ಷರ ದಾಸೋಹ ಸಿಬಂದಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಕೋಡಿಂಬಾಡಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್ ಆರೋಪಿಸಿದರು.

ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ:
ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥ ಗಣೇಶ್ ಹೆಗ್ಡೆ ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷರು, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ ಮಂಜೂರಾಗಿದೆ. ವಾಹನವೂ ಬಂದಿದೆ. ಘಟಕ ನಿರ್ಮಾಣಕ್ಕೆ ಅನುದಾನವೂ ಇದೆ. ಶೀಘ್ರದಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ….!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸದಸ್ಯ ಮನೋಹರ್ ಡಿ.ವಿಯವರು, ಎಲ್ಲಾ ಕಡೆ ಶೇ.೫೦ರಷ್ಟು ಮಹಿಳೆಯರು ಹಾಗೂ ಶೇ.೪೦ ಮಾತ್ರ ಪುರುಷರಿರುತ್ತಾರೆ. ಮತದಾರರ ಪಟ್ಟಿ ಹಾಗೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಮಹಿಳೆಯರೇ ಅಧಿಕವಿದ್ದರೂ ಸುಮಾರು ೨೮-೩೦ ವಯಸ್ಸಿನ ಹುಡುಗರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಮಹಿಳೆಯರು ಲಿಂಗಾನುಪಾತದಲ್ಲಿ ಕಡಿಮೆಯಿರುವದಾಗಿ ಇಲಾಖೆಯ ಅಧಿಕಾರಿಯವರು ತಿಳಿಸಿದರು.

ಸ್ಪೀಕರ್ ಸ್ಥಾನ ನೀಡಿದ್ದಾರ?
ಸಭೆಯಲ್ಲಿ ಚರ್ಚಾನಿಯಂತ್ರಣಾಧಿಕಾರಿಯವರು ಇಲಾಖಾ ಮಾಹಿತಿ ನೀಡುವ ಸಂದರ್ಭದಲ್ಲಿ ಕುಳಿತಲ್ಲಿಂದಲೇ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿಯವರು, ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳು ನಿಂತುಕೊಂಡು ಮಾತನಾಡುತ್ತಾರೆ. ಸ್ಪೀಕರ್ ಮಾತ್ರ ಕುಳಿತಲ್ಲೇ ಮಾತನಾಡುತ್ತಾರೆ. ನಿಮಗೆ ಸ್ಪೀಕರ್ ಸ್ಥಾನ ಕೊಟ್ಟಿದ್ದಾರ ಎಂದು ಕೇಳಿದರು. ಈ ಸಂದರ್ಭಲ್ಲಿ ಅವರು ತನ್ನಿಂದಾದ ಪ್ರಮಾಧವನ್ನು ಒಪ್ಪಿಕೊಂಡ ಘಟನೆಯೂ ನಡೆಯಿತು.

ಆದೇಶದಲ್ಲೇನಿದೆ
ಸಂಜೀವಿನಿ ಒಕ್ಕೂಟಗಳು ಸಮುದಾಯಾಧಾರಿತ ಸಂಸ್ಥೆಗಳಾಗದ್ದು, ತನ್ನದೇ ಆದ ಅಧಿಕಾರಯುಕ್ತ ಸಮಿತಿಗಳನ್ನು ಹೊಂದಿರುತ್ತದೆ. ಈ ಸಮಿತಿಗಳು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಇತರ ವ್ಯಕ್ತಿಗಳು, ಅಧಿಕಾರಿಗಳು, ಸಿಬಂದಿಗಳು ಹಸ್ತಕ್ಷೇಪ ಮಾಡುವುದು ಕಾನೂನು ಬಾಹಿರ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆದೇಶದಲ್ಲಿ ತಿಳಿಸಿದ್ದಾರೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ತಿಳಿಸಿದಾಗ ಸಭೆಯು ಇಲಾಖೆಯ ಆದೇಶದಂತೆ ಒಕ್ಕೂಟ ಮುಂದುವರಿಯುವಂತೆ ಸೂಚಿಸಿದೆ.

ಎಂಬಿಕೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ:
ಸಂಜೀವಿನಿ ಒಕ್ಕೂಟದ ಎಂಬಿಕೆಯಾಗಿರುವ ಸಂಧ್ಯಾರವರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಂದ ನಮಗೆ ಬಹಳಷ್ಟು ಪ್ರಯೋಜಕಾರಿಯಾಗಿದೆ ಎಂದು ಫಲಾನುಭವಿ ಅನುಪಮ ಮೆಚ್ಚುಗೆ ವ್ಯಕ್ತಪಡಿಸಿದರು.

ದಾಖಲಾಗದ ಖಂಡನಾ ನಿರ್ಣಯ:
ಸಭೆಯಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಸಂಜೀವಿನಿ ಒಕ್ಕೂಟದ ವಿರುದ್ಧ ದೂರು ನೀಡಿದವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಖಂಡನಾ ನಿರ್ಣಯ ಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಲಾಗಿತ್ತು. ಬಳಿಕ ಚರ್ಚೆಗೆ ತೆರೆ ಬಿದ್ದಿತ್ತು.ಆದರೆ ಸಭೆಯಲ್ಲಿ ಯಾರ ವಿರುದ್ಧವೂ ಖಂಡನಾ ನಿರ್ಣಯ ದಾಖಲು ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
ವಿವಿಧ ಇಲಾಖೆಯ ಸಿಬ್ಬಂದಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯರಾದ ಗೀತಾ, ಪೂರ್ಣಿಮಾ, ವಿಶ್ವನಾಥ, ಪುಷ್ಪಾ ಮತ್ತು ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ರೋಹಿತಾಶ್ವ ಎಂ.ಎ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ಸುರೇಶ್ ವಾರ್ಡ್ ಸಭೆಯ ಪ್ರಸ್ತಾವನೆ ಓದಿದರು. ಸಿಬ್ಬಂದಿ ಸುರೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here