ರಮಾನಾಥ ರೈ ಎಲ್ಲರನ್ನೂ ಸಮಾನರಾಗಿ ಕಂಡು ಆಡಳಿತ ನಡೆಸಿದ ಪ್ರತಿನಿಧಿ: ಮಧುಬಂಗಾರಪ್ಪ

0

ಉಪ್ಪಿನಂಗಡಿ: ರಮಾನಾಥ ರೈಯವರು ಸಾಮಾಜಿಕ ಕಳಕಳಿಯುಳ್ಳ ರಾಜಕಾರಣಿಯಾಗಿದ್ದು, ಸಚಿವರಾಗಿದ್ದ ವೇಳೆ ಪಕ್ಷಾತೀತ ರಾಜಕಾರಣ ಮಾಡದೇ ರಾಜ್ಯದ ಎಲ್ಲಾ ಜನತೆಯನ್ನು ಸಮಾನರಾಗಿ ಕಂಡು ನ್ಯಾಯವೊದಗಿಸಿದ ಅಪರೂಪದ ಜನಪ್ರತಿನಿಧಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧುಬಂಗಾರಪ್ಪ ಶ್ಲಾಘನೆ ವ್ಯಕ್ತಪಡಿಸಿದರು.

ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಅಭಿನಂದನಾ ಸಮಿತಿ, ಯುವ ಕಾಂಗ್ರೆಸ್ ವಿಟ್ಲ- ಉಪ್ಪಿನಂಗಡಿ ಮತ್ತು ವಲಯ ಕಾಂಗ್ರೆಸ್ ಪೆರ್ನೆ- ಬಿಳಿಯೂರು ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.೧೪ರಂದು ಪೆರ್ನೆಯ ಎ.ಎಂ. ಅಡಿಟೋರಿಯಂನಲ್ಲಿ ನಡೆದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತಾನು ಜೆಡಿಎಸ್ ಶಾಸಕನಾಗಿದ್ದ ಸಂದರ್ಭ ರಮಾನಾಥ ರೈಯವರು ಸಚಿವರಾಗಿದ್ದುಕೊಂಡು ಅವರ ಸ್ವಪಕ್ಷದವರ ಒತ್ತಡಕ್ಕೂ ಮಣಿಯದೇ ನ್ಯಾಯದ ಕಡೆ ನೋಡಿ ನನ್ನ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಇಂತಹ ಕೆಲಸಗಳ ಮೂಲಕ ಓರ್ವ ಜನಪ್ರತಿನಿಧಿಯಾಗಿದ್ದುಕೊಂಡು ತಮ್ಮ ಪಕ್ಷದ ಪರ ನಿಲ್ಲದೆ ನ್ಯಾಯದ ಪರ ನಿಲ್ಲುವ ಶುಭ್ರ ವ್ಯಕ್ತಿತ್ವ ರಮಾನಾಥ ರೈಯವರದ್ದು. ಉತ್ತಮ ಅಭಿವೃದ್ಧಿ ಕೆಲಸಗಾರನಾಗಿರುವ ಇವರ ಸೇವೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೇ ರಾಜ್ಯವ್ಯಾಪ್ತಿ ಸಿಗುವಂತಾಗಲಿ ಎಂದು ಹಾರೈಸಿದ ಅವರು, ತನ್ನ ತಂದೆಯವರಾದ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತ ಪರ ಆಡಳಿತ ನಡೆಸಿದ್ದು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಇಂದು ಆಡಳಿತದಲ್ಲಿರುವ ಬಿಜೆಪಿ ಸರಕಾರ ಅದನ್ನು ರೈತರಿಂದ ಕಸಿದುಕೊಳ್ಳಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ಬಡವರ, ರೈತರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ಆಡಳಿತ ತರಬೇಕು ಎಂದರು.

ವೇ.ಮೂರ್ತಿ ವಿದ್ವಾನ್ ಕೆ. ಕೃಷ್ಣಮೂರ್ತಿ ಕಾರಂತ, ಕೆಮ್ಮಾರದ ಸಂಶುಲ್ ಉಲೇಮ ಮೆಮೋರಿಯಲ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ, ಮಾಯ್ದೆ ದೇವುಸ್ ಚರ್ಚ್‌ನ ವಂ.ಗುರುಗಳಾದ ಲಾರೆನ್ಸ್ ಮಸ್ಕರೇಂಞಸ್ ಶುಭಾಶೀರ್ವಚನ ನೀಡಿದರು. ರಕ್ತದಾನ ಶಿಬಿರ ಉದ್ಘಾಟಿಸಿದ ಶಾಸಕಿ ಟಿ. ಶಕುಂತಳಾ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ಸಂಸ್ಥಾಪಕ ತುಕರಾಮ ಪೂಜಾರಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ೩೪ ಮಂದಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ಪುಟಾಣಿ ಮಕ್ಕಳೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ರಮಾನಾಥ ರೈವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕುಮಾನ್ ಬಂಟ್ವಾಳ, ರಾಜೀವ ಗಾಂಧಿ ವಿವಿಯ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಡಾ. ಬಿ. ರಘು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷ ತೋಯಾಜಾಕ್ಷ ಶೆಟ್ಟಿ, ಕಾಂಗ್ರೆಸ್ ಮುಖಂಡ ಭಾಸ್ಕರ ಶೆಟ್ಟಿ, ಪೆರ್ನೆ ಗ್ರಾ.ಪಂ. ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಪೆರ್ನೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ, ಪೆರ್ನೆ ಗ್ರಾ.ಪಂ. ಸದಸ್ಯ ತನಿಯಪ್ಪ ಪೂಜಾರಿ ಬೆಳಿಯೂರು, ಪೆರ್ನೆ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಫಾರೂಕ್ ಪೆರ್ನೆ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರವೀಣ್ ಚಂದ್ರ ಆಳ್ವ, ವಿಜಯಕುಮಾರ್ ಸೊರಕೆ, ಇಬ್ರಾಹೀಂ ಕೆ., ಎಂ.ಎಸ್. ಮುಹಮ್ಮದ್, ದಿವ್ಯಪ್ರಭಾ, ಉಷಾ ಅಂಚನ್, ಶಿವನಾಥ ರೈ ಮೇಗಿನಗುತ್ತು, ಖಲಂದರ್ ಶಾಫಿ ನೆಕ್ಕಿಲಾಡಿ, ಸತ್ಯವತಿ ಪೂಂಜಾ, ಜಯಶೀಲ ಶೆಟ್ಟಿ, ಸುಲೈಮಾನ್, ಮಿತ್ರದಾಸ್ ರೈ, ಇಸ್ಮಾಯೀಲ್ ಶಾಫಿ, ರಾಜೀವ್ ಶೆಟ್ಟಿ, ಸವೋತ್ತಮ ಗೌಡ, ಸತೀಶ್ ಕುಮಾರ್ ಕೆಡೆಂಜಿ, ಕೃಷ್ಣರಾವ್ ಆರ್ತಿಲ, ಪಂಜಿಗುಡ್ಡೆ ಈಶ್ವರಭಟ್, ಕೆ.ಪಿ. ಥೋಮಸ್, ದೇವಿಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.

ಅಭಿನಂದನ ಸಮಿತಿಯ ಅಧ್ಯಕ್ಷ ಮುರಳೀಧರ ರೈ ಸ್ವಾಗತಿಸಿದರು. ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರಂಜನ್ ರೈ ಮಠಂತಬೆಟ್ಟು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here