ಕಡಬ: ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ವಿಶ್ವಕರ್ಮ ಸಮುದಾಯದ ಕಾರ್ಯ ಕೌಶಲ ಅನುಕರಣೀಯ: ಅನಂತಶಂಕರ್

0

ಕಡಬ: ವಿಶ್ವಕರ್ಮರ ಕೊಡುಗೆಗಳಾದ ಪುರಾತನ ಶಿಲ್ಪ ಹಾಗೂ ನಿರ್ಮಾಣಗಳಿಂದಾಗಿ ನಮ್ಮ ದೇಶವು ಜಗತ್ತಿನಲ್ಲಿಯೇ ಉನ್ನತ ಸ್ಥಾನವನ್ನು ಪಡೆದಿದೆ. ವಿಶ್ವಕರ್ಮ ಸಮುದಾಯದ ಕಾರ್ಯ ಕೌಶಲ ಅನುಕರಣೀಯ ಎಂದು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷ ಕಡಬ ತಹಶೀಲ್ದಾರ್ ಅನಂತಶಂಕರ ಬಿ. ಅವರು ನುಡಿದರು.

ಅವರು ಸೆ.17ರಂದು ಕಡಬದ ಅಂಬೇಡ್ಕರ್ ಭವನದಲ್ಲಿ ಕಡಬ ತಾಲೂಕು ಶ್ರೀ ವಿಶ್ವಕರ್ಮ ಸಮಾಜ ಅಭ್ಯುದಯ ಸೇವಾ ಟ್ರಸ್ಟ್ ಮತ್ತು ಶ್ರೀ ವಿಶ್ವಕರ್ಮ ಸಂಘ ಕಡಬ ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶ್ರೀ ವಿಶ್ವಕರ್ಮ ದೇವರ ಚಿತ್ರಕ್ಕೆ ಪುಷ್ಪಾರ್ಚನೆಗೈದು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. 

ಶ್ರೀ ವಿಶ್ವಕರ್ಮ ಕೇವಲ ಓರ್ವ ದೇವತಾ ಸ್ವರೂಪಿ ಮಾತ್ರವಲ್ಲ. ಆತ ಜಗತ್ತಿನ ಪ್ರಥಮ ಇಂಜಿನಿಯರ್ ಎನ್ನುವ ಹಿರಿಮೆಯನ್ನು ಪಡೆದವನು. ದೇವರನ್ನು ನೋಡಿರದ ನಮಗೆ ಶಿಲ್ಪ ಹಾಗೂ ವಿಗ್ರಹಗಳ ರಚನೆಯ ಮೂಲಕ ದೇವರ ರೂಪವನ್ನು ಕಾಣಿಸಿದವರು ವಿಶ್ವಕರ್ಮರು ಬೇಲೂರು, ಹಳೆಬೀಡು ಮಾತ್ರವಲ್ಲದೇ ದೇಶದ ಉದ್ದಗಲಕ್ಕೂ ಅಪರೂಪವೆನಿಸುವ ದೇವಾಲಯಗಳನ್ನು ಕಣ್ಣುಗಳು ನಿಬ್ಬೆರಗಾಗುವಂತೆ ನಿರ್ಮಿಸಿದ ವಿಶ್ವಕರ್ಮರ ಕೌಶಲ್ಯ ಅನನ್ಯವಾದುದು ಎಂದು ಅವರು ಶ್ಲಾಘಿಸಿದರು.

 ಧಾರ್ಮಿಕ ಉಪನ್ಯಾಸ ನೀಡಿದ ಮಂಗಳೂರಿನ ಕಥಾ ಕೀರ್ತನ ಕಲಾವಿದ ಡಾ| ಎಸ್.ಪಿ.ಗುರುದಾಸ್ ಅವರು ವಿಶ್ವಕರ್ಮ ಸಮಾಜ ನಿರ್ಮಾಣ ಕೌಶಲ ಹಾಗೂ ಶಿಲ್ಪ ಕಲಾ ನಿಪುಣತೆಯಿಂದ ಉನ್ನತ ಸ್ಥಾನದಲ್ಲಿದ್ದರೂ ಸಾಮಾಜಿಕವಾಗಿ ಅವಕಾಶ ವಂಚಿತ ಸಮುದಾಯ ಎಂದೇ ಹೇಳಬಹುದು. ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ದೊರೆಯುವಂತಾಗಬೇಕು ಎಂದರು.

 ಕಡಬ ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷೆ ಸರೋಜಿನಿ ಎಸ್. ಆಚಾರ್ಯ ಹಾಗೂ ಕಡಬ ವಿಶ್ವಕರ್ಮ ಕೂಡುವಳಿ ಮೊಕ್ತೇಸರ ಅಚ್ಯುತ ಆಚಾರ್ಯ ಪಿಜಕಳ ಅವರು ಉಪಸ್ಥಿತರಿದ್ದರು.
ಕಡಬ ತಾಲೂಕು ಶ್ರೀ ವಿಶ್ವಕರ್ಮ ಸಮಾಜ ಅಭ್ಯುದಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್. ದಿನೇಶ್ ಆಚಾರ್ಯ ಕಡಬ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮಮತಾ ದಿನೇಶ್ ಆಚಾರ್ಯ ನಿರೂಪಿಸಿ, ಎಚ್.ಸುರೇಶ್ ಆಚಾರ್ಯ ಕೋಡಂದೂರು ವಂದಿಸಿದರು. ಸವಿತಾ ಆಚಾರ್ಯ ಪಿಜಕಳ, ಉಮೇಶ್ ಆಚಾರ್ಯ ಗೋಳಿಯಡ್ಕ, ಶಿಲ್ಪಾ ಪ್ರಶಾಂತ್ ಕಡಬ ಸಮ್ಮಾನಿತರು ಹಾಗೂ ಅತಿಥಿಗಳನ್ನು ಪರಿಚಯಿಸಿದರು. 

ಸನ್ಮಾನ:
ಬಹುಮುಖ ಪ್ರತಿಭೆಯ ಕಲಾವಿದೆ ಶ್ರೇಯಾ ಆಚಾರ್ಯ ಆಲಂಕಾರು ಹಾಗೂ ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಆಚಾರ್ಯ ಮಡಂತ್ಯಾರು ಅವರನ್ನು ಸಮ್ಮಾನಿಸಲಾಯಿತು. ತಹಶೀಲ್ದಾರ್ ಅನಂತಶಂಕರ ಬಿ. ಹಾಗೂ ಕಡಬ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here