ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ – ಮರೆಯದಿರಿ… ಮನೆ-ಮನೆಯಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯ, ಚುನಾವಣೆಯಲ್ಲಿ ನಿರ್ಣಾಯಕ ವಿಷಯವಾಗಲಿ. ಜನರು ಬಯಸಿದರೆ ಪ್ರತಿನಿಧಿಗಳು ಬದಲಾಗುತ್ತಾರೆ, ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ.

0

  • ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯದ, ರಕ್ಷಣೆಯ ಸುದ್ದಿ ಮಾಹಿತಿ ಸೇವಾ ಕೇಂದ್ರ ಬೆಂಬಲಿಸಿರಿ

ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಕಳೆದ ವರ್ಷ ಪ್ರಾರಂಭವಾದ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನಕ್ಕೆ ಅಪೂರ್ವ ಬೆಂಬಲ ಸಿಕ್ಕಿದೆ. ಉತ್ತಮ ಸೇವೆ ನೀಡುವ ಲಂಚ ರಹಿತ ಅಧಿಕಾರಿಗಳು ಬೆಳಕಿಗೆ ಬಂದು ಸನ್ಮಾನ ಪಡೆಯುತ್ತಿದ್ದಾರೆ, ಅದು ಉತ್ತಮ ಪರಿಣಾಮ ಬೀರಿದೆ. ಲಂಚ, ಭ್ರಷ್ಟಾಚಾರದ ವಿಷಯ ವಿಧಾನಸಭೆಯಲ್ಲಿ ಮತ್ತು ಕೋರ್ಟುಗಳಲ್ಲಿ ಚರ್ಚೆಯ ವಿಷಯವಾಗುತ್ತಿದೆ. ಅದರ ವಿರುದ್ಧ ನಿರ್ಣಯಗಳು, ತನಿಖೆಗಳು ಪ್ರಾರಂಭವಾಗಿದೆ. ಆದರೂ ಲಂಚ, ಭ್ರಷ್ಟಾಚಾರಕ್ಕೆ ಅನುಕೂಲಕರವಾದ ಕಾನೂನುಗಳು, ವ್ಯವಸ್ಥೆಗಳು ಇರುವುದರಿಂದ ಜನರು ಅನಿವಾರ್ಯವಾಗಿ ಅದರ ವಿಷವೃತ್ತದಲ್ಲಿ ಸಿಲುಕಿಕೊಂಡಿದ್ದಾರೆ. ಆ ಕಾನೂನುಗಳನ್ನು ನಮ್ಮ ಸೇವೆಗಾಗಿ ನಾವು ಆರಿಸಿದ ಜನಪ್ರತಿನಿಧಿಗಳು, ನೇಮಿಸಿದ ಅಧಿಕಾರಿಗಳು ರಚಿಸಿರುವುದರಿಂದ ಅದನ್ನು ಜನಪರವಾಗಿ ಬದಲಿಸಬೇಕಾಗಿದೆ. ಜನಪ್ರತಿನಿಧಿಗಳು, ಪಕ್ಷಗಳು, ಚುನಾವಣೆಯ ದೃಷ್ಟಿ ಇರಿಸಿಕೊಂಡು ಜನಾಭಿಪ್ರಾಯದ ಮೇಲೆ ಕೆಲಸ ಮಾಡುತ್ತವೆ. ಅದಕ್ಕಾಗಿ ವಿವಿಧ ವಿಷಯಗಳನ್ನು ಮುನ್ನಲೆಗೆ ತಂದು ಭ್ರಷ್ಟಾಚಾರದ ವಿಷಯವನ್ನು ಮರೆಮಾಚುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ನಮ್ಮ ಜನ ಲಂಚ, ಭ್ರಷ್ಟಾಚಾರವನ್ನು ಮನೆ-ಮನೆಯ ಚರ್ಚೆಯ ವಿಷಯವನ್ನಾಗಿ ಮಾಡಿದರೆ, ಅದರ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ ಏನಾಗುತ್ತದೆ ? ಅದು ಮಾಧ್ಯಮಗಳಲ್ಲಿ ಪ್ರತಿಧ್ವನಿಸಿ ಗಂಭೀರ ಚರ್ಚೆಯ ವಿಷಯವಾಗುತ್ತದೆ. ಚುನಾವಣಾ ವಿಷಯವಾಗಿ ಪರಿವರ್ತನೆಯಾಗುತ್ತದೆ. ಎಲ್ಲಾ ಪಕ್ಷಗಳು, ಜನಪ್ರತಿನಿಧಿಗಳು ಜನರ ಓಟಿನಿಂದ ಗೆಲ್ಲುವವರಾದುದರಿಂದ ಅದು ಸೋಲು-ಗೆಲುವಿಗೆ ಕಾರಣವಾಗುತ್ತದೆ. ಆದುದರಿಂದ ಚುನಾವಣಾ ಸಮಯದಲ್ಲಿ ಪ್ರತಿಯೊಬ್ಬ ಮತದಾರ ಲಂಚ, ಭ್ರಷ್ಟಾಚಾರವನ್ನು ವಿರೋಧಿಸುವ, ಅದನ್ನು ಮಾಡುವುದಿಲ್ಲವೆಂದು ಮತ್ತು ಲಂಚವಾಗಿ ಕೊಟ್ಟ ಹಣವನ್ನು ಜನತೆಗೆ ವಾಪಾಸ್ಸು ತೆಗೆಸಿಕೊಡುತ್ತೇವೆ ಎಂಬ ಭರವಸೆ ನೀಡುವ ಅಭ್ಯರ್ಥಿಗೆ, ಪಕ್ಷಕ್ಕೆ ತಮ್ಮ ಮತವೆಂದು ಖಡಾ-ಖಂಡಿತವಾಗಿ ನಿರ್ಣಯ ತೆಗೆದುಕೊಳ್ಳಬೇಕು, ಘೋಷಿಸಬೇಕು. ಲಂಚ, ಭ್ರಷ್ಟಾಚಾರದ ವಿರುದ್ಧದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು. ಲಂಚ, ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎನ್ನುವ ಜನರು ಅದು ತಮ್ಮಿಂದ ಸಾಧ್ಯವಿದೆ ಎಂದು ತಿಳಿದು ಆ ದಿಕ್ಕಿನಲ್ಲಿ ತಮ್ಮ ಅಭಿಪ್ರಾಯವನ್ನು ಜನಾಭಿಪ್ರಾಯವನ್ನಾಗಿ ಮಾಡಿದರೆ ಮಾಧ್ಯಮಗಳು ಅದನ್ನು ಎತ್ತಿಕೊಳ್ಳುತ್ತಾರೆ. ಆಗ ಜನರ ಅಭಿಪ್ರಾಯಕ್ಕೆ ಜಯವಾಗಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯಾಗುವುದು ಖಂಡಿತ.

ಅಂತಹ ಒಂದು ವಾತಾವರಣ ಜಿಲ್ಲೆ ಮತ್ತು ರಾಜ್ಯದಲ್ಲಿ ಸೃಷ್ಠಿಯಾಗಲು ಸುದ್ದಿ ಜನಾಂದೋಲನ ಸದಾ ನಿಮ್ಮೊಂದಿಗೆ ಇರುತ್ತದೆ. ಎಲ್ಲಾ ಮಾಧ್ಯಮಗಳು ಅದನ್ನು ಜನಾಭಿಪ್ರಾಯ ಎಂದು ಪರಿಗಣಿಸಿ ಎತ್ತಿಕೊಳ್ಳಬೇಕಾಗಿ ವಿನಂತಿ ಮಾಡುತ್ತಿದ್ದೇನೆ.

ನಮ್ಮ ದೇಶದಲ್ಲಿ ಶೇ.90 ಜನರು ಕೃಷಿ ಅವಲಂಬಿತವಾಗಿರುವುದರಿಂದ ಅವರ ಮನೆ ಮನೆಗೆ ಮಾಹಿತಿ, ಇಲಾಖೆಗಳ ಸೌಲಭ್ಯ, ಮಾರಾಟ ಖರೀದಿ, ವಿವಿಧ ಸೇವೆಗಳು, ಎಲ್ಲಾ ರೀತಿಯಲ್ಲಿ ಸಹಾಯ ಮಾತ್ರವಲ್ಲ ಅವರಿಗೆ ಯಾವುದೇ ಇಲಾಖೆಗಳಲ್ಲಿ, ವ್ಯವಹಾರದಲ್ಲಿ ತೊಂದರೆಯಾಗದಂತೆ, ನ್ಯಾಯ, ರಕ್ಷಣೆ ಸಿಗುವಂತೆ ಮಾಡುವ ‘ಸುದ್ದಿ ಕೃಷಿ ಸೇವಾ ಕೇಂದ್ರ’ ಈಗಾಗಲೇ ಕಾರ್ಯ ಪ್ರಾರಂಭ ಮಾಡಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ಗ್ರಾಮಗಳಲ್ಲಿ ಅದರ ಯಶಸ್ವಿ ಅನುಷ್ಟಾನಕ್ಕೆ, ಅಲ್ಲಲ್ಲಿ ಸ್ಥಳೀಯ ಸಲಹಾ ಸಮಿತಿಗಳನ್ನು ರಚಿಸಲಾಗುವುದು. ಅದಕ್ಕೆ ಬೆಂಬಲ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ವಿ.ಸೂ: ಅದರ ವಿವರಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು.

LEAVE A REPLY

Please enter your comment!
Please enter your name here