ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ನೇತೃತ್ವದ ನಿರ್ದೇಶಕರ ನಿಯೋಗದಿಂದ ಬೆಂಗಳೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ: ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಮಾತುಕತೆ-ಸಾಲ ಮನ್ನಾದ ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಮನವಿ

0

 ಪುತ್ತೂರು: ಸಾಲ ಮನ್ನಾ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ನೇತೃತ್ವದ ನಿರ್ದೇಶಕರ ನಿಯೋಗ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನು ಸೆ.೧೯ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


ನಿಯಮಾನುಸಾರ ೬೫೦ ಸದಸ್ಯರು ಸಾಲ ಮನ್ನಾ ಯೋಜನೆಗೆ ಅರ್ಹರಿದ್ದು ಸದ್ರಿ ದಾಖಲಾತಿಯಲ್ಲಿ ೪೦೧ ಸದಸ್ಯರಿಗೆ ಸಾಲ ಮನ್ನಾ ಯೋಜನೆಯ ಸೌಲಭ್ಯವು ಸಿಕ್ಕಿರುತ್ತದೆ. ಉಳಿದ ಫಲಾನುಭವಿಗಳಿಗೆ ಸಾಲ ಮನ್ನಾ ಸೌಲಭ್ಯವು ಸಿಗದೇ ಇರುವ ಕಾರಣ ಈ ಬಗ್ಗೆ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಚಾರ ತಿಳಿಸಿದಾಗ ಶಾಸಕರ ಪ್ರಯತ್ನಿದಿಂದ ೧೬೯ ಜನ ಸದಸ್ಯರ ಹೆಸರು ಹಸಿರು ಪಟ್ಟಿಗೆ ಬಂದಿದ್ದು ಹಣ ಬಿಡುಗಡೆಗೆ ಬಾಕಿ ಇರುತ್ತದೆ. ಇನ್ನೂ ೮೦ ಜನ ಸದಸ್ಯರ ಹೆಸರು ಹಸಿರುಪಟ್ಟಿಗೆ ಸೇರಲು ಬಾಕಿ ಇದೆ. ಅವರ ಹೆಸರನ್ನು ತಕ್ಷಣ ಹಸಿರುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಬಾಬು ಶೆಟ್ಟಿ ನೇತೃತ್ವದ ನಿಯೋಗ ಸಹಕಾರ ಸಚಿವರಲ್ಲಿ ಮನವಿ ಮಾಡಿದರು.

ಹಣ ಬಿಡುಗಡೆಗೆ ಕ್ರಮ-ಸೋಮಶೇಖರ್
ಸಾಲ ಮನ್ನಾ ಹಣ ಬಿಡುಗಡೆಯಾಗದೆ ಹಲವು ಫಲಾನುಭವಿಗಳಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದೆ. ರಾಜ್ಯದಲ್ಲಿ ಒಟ್ಟು ೧೦,೫೦೦ ಮಂದಿಯ ಹೆಸರು ಗ್ರೀನ್ ಲಿಸ್ಟ್‌ನಲ್ಲಿದ್ದು ಹಣ ಬಿಡುಗಡೆಗೆ ಬಾಕಿ ಇದೆ. ಪುತ್ತೂರಿನ ಸಮಸ್ಯೆ ಹಾಗೂ ನಿಮ್ಮ ಬೇಡಿಕೆ ಬಗ್ಗೆ ಶಾಸಕ ಸಂಜೀವ ಮಠಂದೂರು ಈ ಮೊದಲೇ ನನ್ನ ಗಮನಕ್ಕೆ ತಂದಿದ್ದರು. ಮುಂದಿನ ದಿನಗಳಲ್ಲಿ ಸಾಲ ಮನ್ನಾ ಹಣ ಬಿಡುಗಡೆಯಾಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್‌ರವರು ನಿಯೋಗಕ್ಕೆ ಭರವಸೆ ನೀಡಿದರು.
ಸಂಘದ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ನಿರ್ದೇಶಕರಾದ ಪರಮೇಶ್ವರ ಭಂಡಾರಿ, ಶಿವರಾಮ, ನಾರಾಯಣ ಪೂಜಾರಿ, ವಿಶ್ವನಾಥ ನಾಯ್ಕ, ಹಸನ್ ಎ, ನಾಗಮ್ಮ, ಬಾಲಕೃಷ್ಣ ಗೌಡ, ಯಮುನಾ, ಲತಾಮೋಹನ ಹಾಗೂ ಸಿಬ್ಬಂದಿ ರೋಹಿತ್‌ರವರು ನಿಯೋಗದಲ್ಲಿದ್ದರು.

ಹಣ ಶೀಘ್ರದಲ್ಲೇ ಬಿಡುಗಡೆಯಾಗುವ ಭರವಸೆಯಿದೆ-ಬಾಬು ಶೆಟ್ಟಿ
ಸಹಕಾರ ಸಚಿವ ಎಸ್.ಟಿ ಸೋಮಶೇಖರ್‌ರವರನ್ನು ಶಾಸಕರ ಉಪಸ್ಥಿತಿಯಲ್ಲಿ ನಾವು ಬೆಂಗಳೂರು ವಿಧಾನಸೌಧದಲ್ಲಿ ಭೇಟಿ ಮಾಡಿ ಬಾಕಿಯಿರುವ ಸಾಲ ಮನ್ನಾ ಹಣ ಬಿಡುಗಡೆ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಿದ್ದು ಸಹಕಾರ ಸಚಿವರು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ಹಣ ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನಮ್ಮ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿದ್ದು ಸಾಲ ಮನ್ನಾ ಹಣ ಬಿಡುಗಡೆಗೊಳಿಸುವ ವಿಚಾರದಲ್ಲಿ ಸಚಿವರಿಗೆ ವಿವರಣೆ ನೀಡಿದ್ದಾರೆ. ಬೆಂಗಳೂರಿಗೆ ತೆರಳಿದ ನಮಗೂ ಶಾಸಕರು ಉತ್ತಮ ಸಹಕಾರ ನೀಡಿ ಸಚಿವರನ್ನು ಭೇಟಿಯಾಗಲು ಅವಕಾಶ ಒದಗಿಸಿಕೊಟ್ಟಿದ್ದಾರೆ. ಶಾಸಕರ ಆಪ್ತ ಸಹಾಯಕ ವಸಂತ ಅವರೂ ನಮಗೆ ಸಹಕಾರ ನೀಡಿದ್ದಾರೆ ಎಂದು ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ತಿಳಿಸಿದ್ದಾರೆ.

ಕಲಾಪ ವೀಕ್ಷಿಸಿದ ನಿರ್ದೇಶಕರು:
ಸಹಕಾರ ಸಚಿವರನ್ನು ಭೇಟಿಯಾದ ನರಿಮೊಗರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರಿಗೆ ಕಲಾಪ ವೀಕ್ಷಿಸಲು ಶಾಸಕ ಸಂಜೀವ ಮಠಂದೂರು ವ್ಯವಸ್ಥೆ ಮಾಡಿದ್ದರು.

LEAVE A REPLY

Please enter your comment!
Please enter your name here