ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದ `ಛೆಲ್ಲೋ ಶೋ’ ಸಿನಿಮಾ

0

  • ಸಂಕಲನಕಾರನಾಗಿ ಗಮನ ಸೆಳೆದ ಪೆರಿಯಡ್ಕ ಮೂಲದ ಪವನ್ ಭಟ್

ಪುತ್ತೂರು: ಭಾರತದಿಂದ ಅಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿರುವ `ಛೆಲ್ಲೋ ಶೋ’ ಸಿನೆಮಾದ ಸಂಕಲನಕಾರರಾಗಿರುವ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಪವನ್ ಭಟ್ ತನ್ನ ಸಾಧನೆಯಿಂದಾಗಿ ಇದೀಗ ಎಲ್ಲೆಡೆ ಗಮನ ಸೆಳೆದಿದ್ದಾರೆ.

ಎಂಜಿನಿಯರಿಂಗ್ ಪದವೀಧರನಾಗಿರುವ ಪವನ್‌ರವರು ಬ್ಯಾಂಕ್ ಉದ್ಯೋಗಿಯಾಗಿದ್ದ ಗೋಪಾಲಕೃಷ್ಣ ಭಟ್ ಮತ್ತು ಸರೋಜಾ ಭಟ್ ದಂಪತಿಯ ಪುತ್ರರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪವನ್ ಭಟ್ ಇದೀಗ ಸಿನೆಮಾ ರಂಗದಲ್ಲಿ ಬಹು ಬೇಡಿಕೆಯುಳ್ಳ ಎಡಿಟರ್ ಆಗಿ ರೂಪುಗೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಬಳಿಕ ಬೆಂಗಳೂರಿನಲ್ಲಿ ಒಂದನೇ ತರಗತಿಯಿಂದ ಪದವಿಯವರೆಗೆ ವಿದ್ಯಾಭ್ಯಾಸ ಪಡೆದ ಪವನ್ ಭಟ್‌ರವರು ಪಿಯುಸಿ ಕಲಿಯುವಾಗಲೇ ಸಿನೆಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಎಂಜಿನಿಯರ್ ವಿಭಾಗದಲ್ಲಿ ಕಂಪ್ಯೂಟರ್ ಕ್ಷೇತ್ರ ಆರಿಸಿಕೊಂಡ ಪರಿಣಾಮ ಎಡಿಟಿಂಗ್ ವಿಭಾಗಕ್ಕೆ ಹತ್ತಿರವಾದ ಇವರು ಪದವಿಯ ಬಳಿಕ ಮುಂಬಯಿಯಲ್ಲಿ 2 ವರ್ಷ ಎಡಿಟಿಂಗ್‌ಗೆ ಸಂಬಂಧಿಸಿ ಉನ್ನತ ಶಿಕ್ಷಣ ಪಡೆದಿದ್ದಾರೆ. `ಛೆಲ್ಲೋ ಶೋ’ ಸಿನೆಮಾದಲ್ಲಿ ಕೆಲಸ ನಿರ್ವಹಿಸಿದ ಏಕೈಕ ಕನ್ನಡಿಗ ಎಂದು ಹೆಗ್ಗಳಿಕೆ ಪಡೆದಿರುವ ಪವನ್ 3 ವರ್ಷಗಳಿಂದ ಈ ಸಿನೆಮಾದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. . ಪವನ್ ಭಟ್ ನಾಲ್ಕು ಸಿನೆಮಾಗಳಿಗೆ ಪೂರ್ಣ ಪ್ರಮಾಣದಲ್ಲಿ ಎಡಿಟರ್ ಆಗಿ ಈಗಾಗಲೇ ಕಾರ್ಯ ನಿರ್ವಹಿಸಿದ್ದಾರೆ. 20ಕ್ಕೂ ಅಧಿಕ ಸಿನೆಮಾಗಳಲ್ಲಿ ಕೆಲಸ ನಿರ್ವಹಿಸಿದ ಅನುಭವಿ ಆಗಿರುವ ಇವರ ಪ್ರಥಮ ಸಿನಿಮಾ `ಭಸ್ಮಾಸುರ್’ ದೇಶ ವಿದೇಶಗಳಲ್ಲಿ ಹಲವು ಪ್ರಶಸ್ತಿ ಪಡೆದಿದೆ. `ಛೆಲ್ಲೋ ಶೋ’ದಲ್ಲಿ 9 ವರ್ಷದ ಬಾಲಕನೊಬ್ಬನಿಗೆ ಸಿನೆಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು ವಿವರಿಸಲಾಗಿದೆ. ಈ ಸಿನೆಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಿತ್ತು. ಭವಿನ್ ರಾಬರಿ, ಭವೇಶ್ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಈ ಸಿನೆಮಾ ಸ್ಪೇನ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಟೈಕ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅ. 14ರಂದು `ಲಾಸ್ಟ್ ಫಿಲಂ ಶೋ ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಆರ್‌ಅರ್‌ಅರ್, ಕಾಶ್ಮೀರ್ ಫೈಲ್ಸ್, ಬ್ರಹ್ಮಾಸ್ತ್ರದಂತಹ ಘಟಾನುಘಟಿ ಸಿನಿಮಾಗಳನ್ನು ಹಿಂದಿಕ್ಕಿ `ಛೆಲ್ಲೋ ಶೋ’ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದೆ. ಆಸ್ಕರ್‌ಗೆ ಪ್ರವೇಶ ಪಡೆಯುವ ಯೋಚನೆ ಮಾಡಿರಲಿಲ್ಲ. ಪ್ರವೇಶ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಪವನ್ ಭಟ್ ಖುಷಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here