ಆತ್ಮಾಲಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದ ಕುಂಬ್ಳೆ ಶ್ರೀಧರ ರಾವ್

0

ಪುತ್ತೂರು : ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ರವರು ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ.25ರಂದು ಪೂರ್ವಾಹ್ನ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಜರುಗಲಿದೆ.

ಪ್ರಶಸ್ತಿಯನ್ನು ಆತ್ಮಾಲಯ ಅಕಾಡೆಮಿಯು ಆಯೋಜಿಸುವ ಜಸ್ಟೀಸ್ ಕೆ. ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಶ್ರೀಧರ ರಾಯರು ಭಾಜನರಾಗಿದ್ದಾರೆ. ಅಂದು ಅವರಿಂದ ಯಕ್ಷಗಾನ ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಇವರೊಂದಿಗೆ ರಾಮಪುರಂ ಕುನ್ನಿಕೃಷ್ಣ ಮಾರಾರ್ ಅವರು ದೇವಿಕಾ ಮತ್ತು ಚಾಕ್ಯರ್ ರಾಜನ್ ಮೆಮೋರಿಯಲ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಉಪ್ಪಿನಂಗಡಿ ಸನಿಹದ ನೆಕ್ಕಿಲಾಡಿ ಗ್ರಾಮದ ಬೇರಿಕೆ ನಿವಾಸಿಯಾಗಿರುವ ಇವರು ವಿವಿಧ ಯಕ್ಷಗಾನ ಮೇಳಗಳಲ್ಲಿ ವ್ಯವಸಾಯ ಮಾಡಿ, ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತಿಯಾದವರು. ದಾಕ್ಷಾಯಿಣಿ, ಸುಭದ್ರೆ, ದ್ರೌಪದಿ, ಅಮ್ಮುದೇವಿ.. ಮೊದಲಾದ ಸ್ತ್ರೀಪಾತ್ರಗಳಿಂದ ಖ್ಯಾತರಾಗಿದ್ದರು. ಮೇಳ ತಿರುಗಾಟದ ಒಂದು ಕಾಲಘಟ್ಟದಲ್ಲಿ ಸ್ತ್ರೀಪಾತ್ರದಿಂದ ಪುರುಷ ಪಾತ್ರಕ್ಕೆ ಬದಲಾದರು. ಕೀರ್ತಿಶೇಷರಾದ ಡಾ.ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗರು, ಶಂಕರ ನಾರಾಯಣ ಸಾಮಗರು. ಹೀಗೆ ಹಿರಿಯರ ಒಡನಾಟ. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಸ್ತ್ರೀಪಾತ್ರಕ್ಕೆ ಪ್ರತ್ಯೇಕವಾದ ಸ್ವಂತಿಕೆಯ ಛಾಪನ್ನು ಒತ್ತಿದ್ದ ಇವರು ತಾಳಮದ್ದಳೆ ಅರ್ಥದಾರಿಯೂ ಆಗಿದ್ದಾರೆ. ಸ್ನೇಹಕ್ಕೆ ತೆರೆದುಕೊಳ್ಳುವ ಅಪರೂಪದ ವ್ಯಕ್ತಿತ್ವ ಇವರದ್ದಾಗಿದೆ.

LEAVE A REPLY

Please enter your comment!
Please enter your name here