ಅಂತರ್-ಕಾಲೇಜು ವಿಜ್ಞಾನ ಮಾದರಿ ರಚನಾ ಸ್ಪರ್ಧೆ `ಇಂಜಿಕನೆಕ್ಟ್’ – ಫಿಲೋಮಿನಾ ಪಿಯು ಕಾಲೇಜು ರನ್ನರ್ಸ್

0

ಪುತ್ತೂರು: ಮಂಗಳೂರು ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆಯಲ್ಲಿ ಸೆ.17ರಂದು ಜರಗಿದ ಪದವಿ ಪೂರ್ವ ಕಾಲೇಜುಗಳ ಅಂತರ್-ಕಾಲೇಜು ವಿಜ್ಞಾನ ಮಾದರಿ ರಚನಾ ಸ್ಪರ್ಧೆ `ಇಂಜಿಕನೆಕ್ಟ್-2022′ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ರನ್ನರ್ಸ್ ಪ್ರಶಸ್ತಿಯೊಂದಿಗೆ ರೂ.೩ ಸಾವಿರ ನಗದನ್ನು ಗಳಿಸಿಕೊಂಡಿರುತ್ತದೆ.

ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಮೊಹಮದ್ ಝಹ್ರಾನ್‌ರವರ ಮುಂದಾಳತ್ವದಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ನಿಖಿಲ್ ಎಂ., ಅಬ್ದುಲ್ ಸಲಾಮ್ ಹಾಗೂ ಮೊಹಮದ್ ರಿಹಾನ್‌ರವರನ್ನೊಳಗೊಂಡ ತಂಡವು ಸ್ಪರ್ಧೆಯಲ್ಲಿ ಎರಡು ರೀತಿಯ ಪ್ರಾಜೆಕ್ಟ್‌ನ್ನು ಪ್ರದರ್ಶಿಸಿದ್ದರು. ಡೊಮೊಟಿಕ್ಸ್ ಎಂಬ ಪ್ರಾಜೆಕ್ಟ್‌ನಲ್ಲಿ ಮನುಷ್ಯ ದೇಶದ ಯಾವುದೇ ಮೂಲೆಯಲ್ಲಿರಲಿ, ತನ್ನ ಮನೆಯಲ್ಲಿನ ಲೈಟ್, ಫ್ಯಾನ್, ನೀರಿನ ಪೈಪ್ ಸೇರಿದಂತೆ ಇತರ ಯಾವುದೇ ಉಪಕರಣಗಳನ್ನು ಇದ್ದಲ್ಲಿಂದಲೇ ಮೊಬೈಲ್ ಆಪ್ ಮುಖೇನ `ಆನ್ ಮತ್ತು ಆಫ್’ ಮಾಡುವ ಮೂಲಕ ಮನೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಇದರಿಂದಾಗಿ ವಿದ್ಯುತ್ ಉಪಯೋಗವನ್ನು ಕಡಿಮೆ ಮಾಡುತ್ತಾ ಹಾಗೂ ಮಳೆಗಾಲದಲ್ಲಿ ಗುಡುಗು-ಸಿಡಿಲಿನಿಂದ ಮನೆಯನ್ನು ಕಾಪಾಡಬಹುದಾಗಿದೆ.

ಮತ್ತೊಂದು ಪ್ರಾಜೆಕ್ಟ್ ಎಂದರೆ ಸ್ಮಾರ್ಟ್ ವಾಕಿಂಗ್ ಸ್ಟಿಕ್. ಇದು ಕಣ್ಣು ಕಾಣದ ಹಾಗೂ ಕಿವಿ ಕೇಳದ ವ್ಯಕ್ತಿಗಳಿಗೆ ತಮ್ಮ ಮುಂದೆ ಯಾವ ಅಪಾಯಕಾರಿ ವಸ್ತುಗಳಿವೆಯೋ ಅವನ್ನು ಸುಲಭವಾಗಿ ಗ್ರಹಿಸುವ ಸಾಧನವಾಗಿದೆ. ಕಣ್ಣು ಕಾಣದವರಿಗೆ `ಸೈರನ್’ ಮೊಳಗಿಸುವ ಹಾಗೂ ಕಿವಿ ಕೇಳದವರಿಗೆ `ವೈಬ್ರೇಟ್’ ಮಾಡುವ ವಾಕಿಂಗ್ ಸ್ಟಿಕ್ ಇದಾಗಿದೆ. ಈ ವಾಕಿಂಗ್ ಸ್ಟಿಕ್‌ನಲ್ಲಿ ಜಿಪಿಎಸ್ ಅಳವಡಿಸಿ ಕಣ್ಣು ಕಾಣದವರಿಗೆ ಇಯರ್‌ಪೋನ್ ಕೊಟ್ಟು ತಾನು ಯಾವ ದಾರಿಯಲ್ಲಿ ಹೋಗುತ್ತೇನೆಂದು ಆ ಜಾಗ ಹಾಗೂ ಜಾಗದ ಹೆಸರು ತಿಳಿಸುತ್ತದೆ.
ಸ್ಪರ್ಧೆಯಲ್ಲಿ ಸುಮಾರು ೭೦ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿ ಮೊಹಮದ್ ಝಹ್ರಾನ್‌ರವರು ಬೆಥನಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭ ಇನ್‌ಫೈರ್ ಅವಾರ್ಡ್‌ಗೂ ಭಾಜನರಾಗಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದರು. ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಸುಮನಾ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ರೋಹಿತ್ ಕುಮಾರ್ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕ ಭರತ್ ಜಿ.ಪೈರವರು ತಂಡವನ್ನು ಮುನ್ನೆಡೆಸಿದ್ದರು.

LEAVE A REPLY

Please enter your comment!
Please enter your name here