ಮನೆಯಲ್ಲಿ ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡಿಸುವ ವಾತಾವರಣವಿರಲಿ: ಸಮ್ಮೇಳನಾಧ್ಯಕ್ಷ ಡಾ| ಶ್ರೀಧರ್

0

ಪುತ್ತೂರು: ಮಕ್ಕಳಿಗೆ ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಒಲವನ್ನು ಮೂಡಿಸಿದಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿಕೊಳ್ಳಬಹುದು. ಮಕ್ಕಳು ಕನ್ನಡ ಸಾಹಿತ್ಯದಿಂದ ವಿಮುಖರಾದಂತೆ ಕಂಡುಬಂದರೂ ಆಸಕ್ತಿ ಮೂಡಿಸುವ ಲೇಖನಗಳು ಲಭಿಸಿದಲ್ಲಿ ಓದಿನ ಕಡೆಗೆ ಹೆಚ್ಚು ಆಕರ್ಷಿತರಾಗುವಂತೆ ಮಾಡುವ ಅವಶ್ಯಕತೆಯಿದೆ ಎಂದು ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ|ಶ್ರೀಧರ ಹೆಚ್.ಜಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಳವೆಯಲ್ಲಿಯೇ ಮಕ್ಕಳ ಎದುರು ಬಣ್ಣ ಬಣ್ಣದ ಪುಸ್ತಕಗಳನ್ನು ಇಟ್ಟು, ಪುಸ್ತಕದೆಡೆಗೆ ಆಸ್ತಕಿಯನ್ನು ಹುಟ್ಟಿಸಬೇಕು. ಮಕ್ಕಳ ಹುಟ್ಟುಹಬ್ಬಕ್ಕೆ ಪುಸ್ತಕ, ಪೆನ್ನುಗಳನ್ನು ನೀಡಿ ಬರವಣೆಗೆಯ ಕಡೆಗೆ ಮುಖ ಮಾಡುವಂತೆ ಮಾಡಬೇಕು. ಇದರಿಂದ ಯುವ ಸಮೂಹವು ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಹಿಂದೆ ಮಕ್ಕಳು ಚಂದಮಾಮ, ಬಾಲಮಂಗಳದಂತಹಾ ಪುಸ್ತಕಗಳನ್ನು ಓದುವ ಮೂಲಕ ಓದಿನಲ್ಲಿ ಆಸಕ್ತರಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ನಮ್ಮ ಜ್ಞಾನದ ಪರಿಧಿ ವಿಸ್ತಾರಗೊಳ್ಳುವಂತೆ ಮಾಡಲು ಪ್ರವೃತ್ತಿ ಸಹಕಾರಿಯಾಗಿದೆ. ವೃತ್ತಿ ಹಾಗೂ ಪ್ರವೃತ್ತಿ ಅಂತರ್ ಸಂಬಂಧವನ್ನು ಹೊಂದಿದ್ದು, ಪ್ರವೃತ್ತಿಯಲ್ಲಿ ಗಳಿಸುವ ವಿಚಾರಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ವೃತ್ತಿಯಲ್ಲಿ ಗುಣಮಟ್ಟ ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಮನೆಯ ಸುತ್ತಮುತ್ತ ಸಂತ್ರಸ್ಥ ಕುಟುಂಬಗಳು ನೆಲೆಸಿದ್ದವು. ಇವರು ಮೂಲತಃ ಅನುಕೂಸ್ಥರಾಗಿದ್ದರೂ ನದಿಗೆ ಅಣೆಕಟ್ಟು ಕಟ್ಟಿದಾಗ ಮನೆ ಹಾಗೂ ಜಾಗ ಮುಳುಗಡೆಯಾಗಿ ಸಂತ್ರಸ್ಥರಾಗಿದ್ದರು. ಇವರು ಶ್ರೀಮಂತರಾಗಿದ್ದರೂ ಜಾಗ ಕಳೆದುಕೊಂಡು ಬಡವರಂತೆ ಜೀವನ ನಡೆಸಿದ್ದು ಮನಸ್ಸಿನ ಮೇಲೆ ಪರಿಣಾಮ ಬೀರಿತು. ಇದು ಸಾಹಿತ್ಯ ರಚಿಸುವ ಸಂದರ್ಭ ಪರಿಣಾಮ ಬೀರಿತು ಎಂದರು.

ಇತರೆ ಭಾಷೆಗಳ ಗ್ರಂಥಗಳ ಅಧ್ಯಯನದ ಮೂಲಕ ಸಮಗ್ರ ಗ್ರಂಥಗಳ ಅಧ್ಯಯನದ ಮೂಲಕ ಸಮಗ್ರ ಅಧ್ಯಯನವನ್ನು ಮಾಡಿದೆ. ಆ ಗ್ರಂಥಗಳಲ್ಲಿ ಒಳಗೊಳ್ಳದ ಅಗತ್ಯವಾದ ವಿಚಾರಗಳನ್ನು ಪುಸ್ತಕ ರಚಿಸುವ ಸಂದಭದಲ್ಲಿ ತಿಳಿಸುವ ಯತ್ನ ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ, ವಿವೇಕಾನಂದ ಕಾಲೇಜಿನ ಅರುಣ್ ಕುಮಾರ್ ಕಿರಿಮಂಜೇಶ್ವರ, ಬೆಟ್ಟಂಪಾಡಿ ಸರಕಾರಿ ಕಾಲೇಜಿನ ದಿವ್ಯಾ ಎಂ, ಅಂಬಿಕಾ ಮಹಾವಿದ್ಯಾಲಯದ ಪಂಚಮಿ ಬಾಕಿಲಪದವು, ಎಂ.ಜಿ. ತಿಲೋತ್ತಮೆ, ಯು.ಎಲ್. ಉದಯಕುಮಾರ್ ಉಪ್ಪಿನಂಗಡಿ ಅಧ್ಯಕ್ಷರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಡಾ ಶೋಭಿತಾ ಸತೀಶ್ ಸ್ವಾಗತಿಸಿ, ಬಾಬು ಎಂ. ವಂದಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು. ಗೋಷ್ಠಿಯ ಬಳಿಕ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರ ಶಿಷ್ಯೆ ಅನುಷಾ ಚೇಕೋಡು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉಪನ್ಯಾಸಕ ಸತೀಶ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here