ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಕಲ್ಲೇಗ ಟೈಗರ್ಸ್ ಅವರಿಂದ ಪಿಲಿನಲಿಕೆ

0

  • ಯುವಸಮೂಹದ ಕಣ್ಣ ಮುಂದೆ ತುಳುನಾಡ ಸಂಸ್ಕೃತಿಯ ಅನಾವರಣ

ಪುತ್ತೂರು: ಕಾಲೇಜು ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಒಮ್ಮಿಂದೊಮ್ಮೆಗೆ ಆಶ್ಚರ್ಯ! ಇದೇನು? ಅಂತ ಅತ್ತಿತ್ತ ನೋಡುತ್ತಿರುವಾಗಲೇ ಸಾಲು ಸಾಲು ಹುಲಿಗಳು ವೇದಿಕೆಯನ್ನೇರಿ ಕುಣಿಯಲಾರಂಭಿಸಿದ್ದವು. ವೇದಿಕೆಯೊಂದರಲ್ಲೇ ಮೂವತ್ತಕ್ಕಿಂತಲೂ ಅಧಿಕ ಹುಲಿಗಳು ನರ್ತಿಸುವ ಅಪೂರ್ವ ಅವಕಾಶವನ್ನು ನೆರೆದ ಸಾವಿರಾರು ಮಂದಿ ತಮ್ಮದಾಗಿಸಿಕೊಂಡರು.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ವಾರ್ಷಿಕೋತ್ಸವ – ಮಾನಸೋಲ್ಲಾಸ ೨೦೨೨-೨೩ ನಡೆಯುತ್ತಿದ್ದ ಮಧ್ಯೆಯಲ್ಲಿ ಈ ಹುಲಿಗಳ ಆಗಮನವಾಯಿತು. ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಪ್ರಸ್ತುತಿಯಲ್ಲಿ ಅನೇಕ ಮಂದಿ ಹುಲಿವೇಷಧಾರಿಗಳಾಗಿ ಪುತ್ತೂರಿಗರ ಮನರಂಜಿಸುತ್ತಿದ್ದಾರೆ. ಅದರ ಭಾಗವಾಗಿ ಆ ತಂಡದಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸುಮಾರು ಅರ್ಧ ಗಂಟೆಯ ಹುಲಿನರ್ತನ ನಡೆಯಿತು. ಈ ‘ಪಿಲಿ ನಲಿಕೆ’ ಯುವಮನಸ್ಸುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಬಾಗವನ್ನು ಅನಾವರಣಗೊಳಿಸಿತು.

ಕಪ್ಪು ಹುಲಿಗಳು, ಪಟ್ಟೆ ಹುಲಿಗಳು, ಚಿರತೆ ಬಣ್ಣದ ಹುಲಿಗಳು, ಅವುಗಳ ಜತೆಗೆ ಪುಟಾಣಿ ಹುಲಿಗಳು ಹಿಮ್ಮೇಳದ ಸದ್ದಿನ ಜತೆಗೆ ವೈಭವದ ಹೆಜ್ಜೆಯನ್ನಿರಿಸಿದವು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪಿಲಿ ನಲಿಕೆಯ ನಾನಾ ವೈವಿಧ್ಯಗಳು ತೆರೆದುಕೊಂಡು ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಯಿತು.
ಯುವ ಸಮೂಹವನ್ನು ‘ಪಿಲಿ ನಲಿಕೆ’ ಮೂಲಕ ರಂಜಿಸಿದ ಕಲ್ಲೇಗ ಟೈಗರ್ಸ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಗೌರವಿಸಿದರು.

LEAVE A REPLY

Please enter your comment!
Please enter your name here