ದಲ್ಕಾಜೆಗುತ್ತು ಎಸ್. ಸಂಜೀವ ಸುವರ್ಣರವರ ಉತ್ತರಕ್ರಿಯೆ

0

ಪುತ್ತೂರು: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಪರಿವರ್ತನೆಗಳ ಮೂಲಕ ಹಿಂದೂ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತನ್ನನ್ನು ಜೀವನ ಪೂರ್ತಿ ತೊಡಗಿಸಿಕೊಂಡ ದಲ್ಕಾಜೆಗುತ್ತಿನ ಹಿರಿಯರಾದ ಸುವರ್ಣರವರು ಓರ್ವ ದಿಟ್ಟ ನೇರ ನಡೆನುಡಿಯ ಆದರ್ಶ ವ್ಯಕ್ತಿಯಾಗಿ 90 ವರ್ಷಗಳ ಸಾರ್ಥಕ ಬದುಕಿನೊಂದಿಗೆ ಬಾಳಿ ಬದುಕಿದವರು ಎಂದು ಪುಣಚಾ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರೂ ಹಾಗೂ ಹಿಂದೂ ಸಮಾಜದ ಮಾರ್ಗದರ್ಶಕರೂ ಆದ ಶ್ರೀ ಎಸ್. ಆರ್ ರಂಗಮೂರ್ತಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ದಲ್ಕಾಜೆಗುತ್ತು ಪ್ರತಿಷ್ಠಿತ ಮನೆತನದ ಹಿರಿಯರಾದ ಎಸ್. ಸಂಜೀವ ಸುವರ್ಣರವರ ಸದ್ಗತಿಯ ಬಗ್ಗೆ ಸೆ.29ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯ ನೇತ್ರಾವತಿ ಸಭಾಭವನದಲ್ಲಿ ನಡೆದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ನುಡಿನಮನವನ್ನು ಸಲ್ಲಿಸಿ ಮಾತನಾಡಿದರು.

ಸುಮಾರು 40 ವರ್ಷಗಳ ಹಿಂದೆ ದೇವಸ್ಥಾನಗಳಿಗೆ ಪ್ರವೇಶ ನೀಡದ ಅನಿಷ್ಟ ಸಂಪ್ರದಾಯಗಳಿಗೆ ತೆರೆ ಎಳೆಸಿ ಶೋಷಿತ ಬಿಲ್ಲವ ಸಮುದಾಯವನ್ನು ಹಿಂದೂ ಸಮಾಜದ ವಾಹಿನಿಯೊಂದಿಗೆ ಸೇರಿಸುವಲ್ಲಿ ಯಶಸ್ವಿ ನೇತೃತ್ವವನ್ನು ವಹಿಸಿ ಸಮಾಜದ ದಿಕ್ಸೂಚಕರಾಗಿ ಗೌರವಾನ್ವಿತರಾದ ಸುವರ್ಣರು ಜೀವನದ ಕೊನೆಘಳಿಗೆವರೆಗೆ ಕೂಡಾ ಅವರು ನಂಬಿದ ತತ್ವ ಸಿದ್ಧಾಂತ ವಿಚಾರಗಳಿಂದ ವಿಚಲಿತರಾದವರಲ್ಲ.ಯಾವುದೇ ವಿಚಾರಗಳಿರಲಿ ಅವುಗಳ ಅನುಷ್ಠಾನದಲ್ಲಿ ಮತ್ತೊಬ್ಬರಿಗೆ ನೋವಾಗುತ್ತದೆ ಎಂದು ಯಾರೊಂದಿಗೂ ಎಡ್ಜಸ್ಟ್‌ಮೆಂಟ್ ಮಾಡಿಕೊಂಡವರಲ್ಲ. ಅದು ನಡೆದೇ ತೀರಬೇಕೆಂಬ ಗುರಿ ಮಾತ್ರ ಅವರದಾಗಿತ್ತು. ಅವರ ತತ್ವ ವಿಚಾರಗಳಿಂದ ಅನೇಕ ಸ್ನೇಹಿತರಿದ್ದಂತೆ, ಅವರ ದಿಟ್ಟ ನೇರ ನಡೆನುಡಿಯ ಸ್ವಭಾವ ಕೆಲವರಿಗೆ ಆಗುತ್ತಿರಲಿಲ್ಲ.ಅಂದರೆ ಅವರು ಯಾವುದೇ ವಿಷಯ, ವಿಚಾರಗಳನ್ನು ನಾಜೂಕಾಗಿ ಹೇಳುತ್ತಿರಲಿಲ್ಲ. ಬದಲಾಗಿ ನೇರವಾಗಿಯೇ ಹೇಳುವ ಸ್ವಭಾವ ಅವರದಾಗಿತ್ತು. ಶ್ರೀದೇವಿ ಫ್ರೌಡ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಶ್ರೀ ಗೋಕರ್ಣನಾಥ ಬ್ಯಾಂಕಿನ ನಿರ್ಧೇಶಕರಾಗಿ, ಪುಣಚಾ ಸಹಕಾರಿ ಬ್ಯಾಕಿನ ಉಪಾಧ್ಯಕ್ಷರಾಗಿ, ಶ್ರೀ ಮಹಿಷ ಮರ್ದಿನೀ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, ಪುತ್ತೂರು ಬಿಜೆಪಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ,ಕೇಪು ಮಂಡಲ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿಯಾಗಿ ಹೀಗೆ ಹಲವಾರು ಕ್ಷೇತ್ರದಲ್ಲಿ ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿದ ಸುವರ್ಣರವರು ಸುಮಾರು 3 ದಶಕಗಳ ಹಿಂದೆ ಮಂಗಳೂರಿನಲ್ಲಿ ನಡೆದ ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ತನ್ನ ಕುಟುಂಬದ ಅನೇಕ ಮಂದಿಯನ್ನು ಸೇರಿಸಿಕೊಂಡು ಭಾಗವಹಿಸುವ ಮೂಲಕ ಹಿಂದುತ್ವಕ್ಕೆ ಶಕ್ತಿಯಾದವರು, ಗ್ರಾಮಕ್ಕೊಂದು ಶಾಲೆ ಬೇಕೆಂದು ಪುಣಚಾದಲ್ಲಿ ಶ್ರೀ ದೇವಿ ಫ್ರೌಡ ಶಾಲೆಯ ಆರಂಭದ ದಿನಗಳಲ್ಲಿ ಮುಂಚೂಣಿಯಲ್ಲಿದ್ದವರು, ಸಹಕಾರಿ ಸಂಘದ ಉನ್ನತಿಯಲ್ಲಿ ಶ್ರಮ ವಹಿಸಿದವರು ಇನ್ನು ನಮಗೆ ನೆನಪು ಮಾತ್ರ ಎಂದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ಫ್ರೌಡ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂ ಸಮಾಜದ ಮಾರ್ಗದರ್ಶಕರೂ ಆದ ನೀರ್ಕಜೆ ಜಯಶ್ಯಾಂ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ. ಅತ್ಯಂತ ನಿಷ್ಠುರವಾದಿಯಾಗಿ ಮನಸ್ಸಿಗಾದಂತಹ ನಿತ್ಯ ಸತ್ಯವನ್ನು ಒಪ್ಪಿಕೊಂಡವರಾಗಿ ಮತ್ತು ಆ ಸತ್ಯಕ್ಕೆ ಯಾವ ರೀತಿಯಿಂದ ವಿರೋಧ ಬಂದರೂ ಕೂಡಾ ಖಡಾ ಖಂಡಿತವಾಗಿ ಅದಕ್ಕೆ ವಿರೋಧವನ್ನು ಕೊಡುವ ವ್ಯಕ್ತಿತ್ವವನ್ನು ಪಡೆದುಕೊಂಡಂತಹ ಸಂಜೀವ ಸುವರ್ಣರು ಇನ್ನು ನೆನಪು ಮಾತ್ರ. ಸಮಾಜದಲ್ಲಿ, ಸಮಾಜದ ಏಳಿಗೆಗೆ ಮತ್ತು ಇಡೀ ಹಿಂದೂ ಸಮಾಜಕ್ಕೆ ಶಕ್ತಿಯನ್ನು ಕೊಡಬಲ್ಲ ಒಂದೂ ವಿಭಾಗವಾಗಿರುವ ಬಿಲ್ಲವ ಸಮಾಜಕ್ಕೆ ತೋರು ಬೆರಳಾಗಿ, ತನ್ನಜಾತಿಯ ಸಂಘಟನೆಯು ಹಿಂದೂ ಸಮಾಜಕ್ಕೆ ಹೇಗೆ ಪೂರಕವಾಗಿರಬೇಕೆಂದು ಹೆಜ್ಜೆ ಹೆಜ್ಜೆಗೆ ತೋರಿಸಿ, ಆ ಮೂಲಕ ಯುವಕರನ್ನು ಒಳ್ಳೆಯ ಕೆಲಸಗಳಿಗೆ ಪ್ರೇರೆಪಿಸಿ ಇವತ್ತು ೯೦ ವರ್ಷಗಳ ತುಂಬು ಬದುಕನ್ನು ಬಾಳಿ ವಿಷ್ಣು ಪಾದಗಳಿಗೆ ಸೇರಿರುವ ಅವರ ಆದರ್ಶಗಳು ಸಮಾಜ ಏಳಿಗೆಯಲ್ಲಿ ಆದರ್ಶನೀಯ ಎಂದರು.

ಕೊನೆಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲಾಯಿತು. ಸದ್ಗತಿ ಹಾಗೂ ಶ್ರದ್ಧಾಂಜಿಲಿ ಕಾರ್ಯಕ್ರಮದಲ್ಲಿ ಪತ್ನಿ ಕಮಲಾವತಿ ಎಸ್. ಸುವರ್ಣ, ಮಕ್ಕಳಾದ ಶಶಿಕಲಾ, ರವಿಪ್ರಕಾಶ್, ಜ್ಯೋತಿಪ್ರಕಾಶ್, ಸಂದ್ಯಕಲಾ ಮತ್ತು ಮೊಮ್ಮಕ್ಕಳು ಹಾಗೂ ಪುಣಚಾ ಗ್ರಾಮಸ್ಥರು, ದಲ್ಕಾಜೆಗುತ್ತು ಕುಟುಂಬಸ್ತರು, ಅಲೆಕ್ಕಾಡಿ ತರವಾಡು ಮನೆ ಕುಟುಂಬಸ್ತರು, ಬಂಧು ಮಿತ್ರರು, ಹಿತೈಶಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here