ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏಳನೇ ಉಚಿತ ವೈದ್ಯಕೀಯ ಶಿಬಿರ

0

* ದಂತ ಚಿಕಿತ್ಸೆ, ಪ್ರಸೂತಿ, ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ಕೀಲು, ಎಲುಬು ಚಿಕಿತ್ಸೆ

ಪುತ್ತೂರು; ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಏಳನೇ ತಿಂಗಳ ಶಿಬಿರವು ಅ.2ರಂದು ನಡೆಯಿತು. ಈ ಭಾರಿಯ ಶಿಬಿರದಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ದಂತ ಚಿಕಿತ್ಸೆ, ಕೀಲು ಮತ್ತು ಎಲುಬು ಚಿಕಿತ್ಸೆಗಳನ್ನು ನಡೆಸಲಾಯಿತು.
ರೋಟರಿ ಕ್ಲಬ್ ಪುತ್ತೂರು ಪೂರ್ವ, ನವಚೇತನಾ ಯುವಕ ಮಂಡಲ ಸಂಪ್ಯ, ಶ್ರೀಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಮಹಾವೀರ ಆಸ್ಪತ್ರೆ ಬೊಳುವಾರು, ಧನ್ವಂತರಿ ಕ್ಲಿನಿಕ್ ಲ್ಯಾಬೋರೇಟರಿ ದರ್ಬೆ, ಭಾರತೀಯ ಜನೌಷಧ ಕೇಂದ್ರಗಳು ಸಹಕಾರದೊಂದಿಗೆ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಶರತ್ ಕುಮಾರ್ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿ, ನಿರಂತರವಾಗಿ ಆರೋಗ್ಯ ಶಿಬರ ನಡೆಸಲಾಗುತ್ತಿದ್ದು ಊರಿನ ಜನತೆಗೆ ನೇರವಾಗಿ ಪ್ರಯೋಜನ ದೊರತು, ಅವರ ಆರೋಗ್ಯ ವೃದ್ಧಿಯಲ್ಲಿ ಶಿಬಿರವು ಪ್ರಯೋಜಕಾರಿಯಾಗಿದೆ. ರೋಟರಿಯ ಧ್ಯೇಯದಂತೆ ಇಲ್ಲಿ ಜನರಿಗೆ ಸೇವೆ ನೀಡಲಾಗುತ್ತಿದ್ದು ವರ್ಷಾನುಗಟ್ಟೆಲೆ ನಡೆಯಲಿ ಎಂದು ಹೇಳಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ರಾಜೇಶ್ವರಿ ಪಡಿವಾಳ್, ಮಹಾವೀರ ಆಸ್ಪತ್ರೆಯ ಕೀಲು ಮತ್ತು ಎಲುಬು ತಜ್ಞ ಡಾ.ಸಚಿನ್ ಶಂಕರ್, ಮಕ್ಕಳ ತಜ್ಞ ಡಾ. ಮಂಜುನಾಥ ಶೆಟ್ಟಿ , ಕುಂಬ್ರ ಬಾಲಾಜಿ ಡೆಂಟಲ್ ಕ್ಲಿನಿಕ್‌ನ ಡಾ.ಯಶ್ಮೀ, ಆಯುರ್ವೇದ ತಜ್ಞರಾದ ಡಾ.ದೀಕ್ಷಾ, ಡಾ.ಸಾಯಿಪ್ರಕಾಶ್ ಹಾಗೂ ಡಾ.ಆಕಾಶ್, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಶಿಕಲಾ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ವಂದಿಸಿ, ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.
ಈ ಭಾರಿಯ ಶಿಬಿರದಲ್ಲಿ…!
ಈ ಭಾರಿಯ ಉಚಿತ ಶಿಬಿರದಲ್ಲಿ ವಿಶೇಷವಾಗಿ ಮಹಾವೀರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯೆ ಡಾ.ರಾಜೇಶ್ವರಿ ಪಡಿವಾಳ್‌ರವರಿಂದ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸೆ, ಮಹಾವೀರ ಆಸ್ಪತ್ರೆಯ ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ.ಸಚಿನ್ ಶಂಕರ್‌ರವರಿಂದ ಕೀಲು ಮತ್ತು ಎಲುಬು ಚಿಕಿತ್ಸೆ, ಮಕ್ಕಳ ತಜ್ಞ ಡಾ. ಮಂಜುನಾಥ ಶೆಟ್ಟಿಯವರಿಂದ ಮಕ್ಕಳ ಚಿಕಿತ್ಸೆ, ಕುಂಬ್ರ ಬಾಲಾಜಿ ಡೆಂಟಲ್ ಕ್ಲಿನಿಕ್‌ನ ಡಾ.ಯಶ್ಮೀಯವರಿಂದ ದಂತ ಚಿಕಿತ್ಸೆ, ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ದೀಕ್ಷಾ, ಡಾ.ಸಾಯಿಪ್ರಕಾಶ್ ಹಾಗೂ ಡಾ.ಆಕಾಶ್ ವೈದ್ಯಕೀಯ ಚಿಕಿತ್ಸೆಗಳು ಹಾಗೂ ಮೂಳೆ ಸಾಂದ್ರತೆ ಹಾಗೂ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯವರಿಂದ ರಕ್ತ ಪರೀಕ್ಷೆ ನಡೆದು ರೋಗಿಗಳಿಗೆ ಒಂದು ತಿಂಗಳಿಗೆ ಆವಶ್ಯಕವಾದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೆ ಶಿಬಿರಾರ್ಥಿಗಳಿಗೆ ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು.
ಶಿಬಿರದಲ್ಲಿ 30ಮಂದಿ ಮಕ್ಕಳ ಚಿಕಿತ್ಸೆ, ೧೫ ಮಂದಿ ಹೆರಿಗೆ ಮತ್ತು ಪ್ರಸೂತಿ, 30 ದಂತ ಚಿಕಿತ್ಸೆ, 32 ಮಂದಿ ಕೀಲು ಮತ್ತು ಎಲುಬು, 110 ಮಂದಿ ಸಾಮಾನ್ಯ ಚಿಕಿತ್ಸೆಗಳನ್ನು ಪಡೆದುಕೊಂಡರು. ೫೦ ಮಂದಿ ಆಯುಷ್ಮಾನ್ ಆರೋಗ್ಯ ಭಾರತ್ ಕಾರ್ಡ್ ನೋಂದಾಯಿಸಿಕೊಂಡರು.
ಆಯುಧಾ ಪೂಜೆ
ಸಂಜೆ ದೇವಸ್ಥಾನದಲ್ಲಿ ಸಾಮೂಹಿಕ ಆಯುಧಾ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕ ಸಂದೀಪ್ ಕಾರಂತ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸುಮಾರು 120ಕ್ಕೂ ಅಧಿಕ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here