ರಾಷ್ಟ್ರಧ್ವಜ,ಕನ್ನಡ ಧ್ವಜಕ್ಕೆ ಗೌರವ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜ್ರಂಭಿಸಿದ ತಾ| ಮಟ್ಟದ ಕನ್ನಡ ರಾಜ್ಯೋತ್ಸವ

  •  ಭಾಷಾಭಿಮಾನ ಸಂಸ್ಕೃತಿಯನ್ನು ನೆನಪಿಸುತ್ತದೆ-ಮಠಂದೂರು
  •  ಪರಭಾಷಾ ವ್ಯಾಮೋಹದಿಂದ ಕನ್ನಡ ಭಾಷೆಯನ್ನು ಉಳಿಸೋಣಗಿರೀಶ್‌ನಂದನ್
  •  ಸಾಹಿತ್ಯ ಪರಿಸರವನ್ನು ಪುನಶ್ಚೇತನಗೊಳಿಸಬೇಕಾಗಿದೆ ಪ್ರೊ|ವಿ.ಬಿ.ಅರ್ತಿಕಜೆ
  •  ನ.14ಕ್ಕೆ ‘ಬಾಲವನದಲ್ಲಿ ಬಾಲರು’-ಉಮೇಶ್ ನಾಯಕ್

ಪುತ್ತೂರು:ಕಿಲ್ಲೆ ಮೈದಾನದಲ್ಲಿರುವ ಮಂಗಲ್‌ಪಾಂಡೆ ಚೌಕದಲ್ಲಿ ರಾಷ್ಟ್ರಧ್ವಜ ಮತ್ತು ಪುರಭವನದ ಎದುರು ಕನ್ನಡ ಧ್ವಜಾರೋಹಣ ಮಾಡಿ ಗೌರವ ಸೂಚಿಸುವ ಜೊತೆಗೆ ಐವರು ಸಾಧಕರಿಗೆ ಸನ್ಮಾನ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ವಿಜ್ರಂಭಣೆಯಿಂದ ನ.1ರಂದು ನಡೆಯಿತು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಬೆಳಿಗ್ಗೆ ಕಿಲ್ಲೆ ಮೈದಾನದ ಮಂಗಲ್‌ಪಾಂಡೆ ಚೌಕದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ರಾಷ್ಟ್ರಧ್ವಜಾರೋಹಣ ಮಾಡಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು.ಬಳಿಕ ಪುರಭವನದ ಎದುರು ಶಾಸಕ ಸಂಜೀವ ಮಠಂದೂರು ಅವರು ಕನ್ನಡ ಧ್ವಜಾರೋಹಣ ಮಾಡಿದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್‌ಐ ಕಾರ್ತಿಕ್ ಅವರ ನೇತೃತ್ವದಲ್ಲಿ ಧ್ವಜವಂದನೆ ಪೆರೇಡ್ ನಡೆಯಿತು.ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್, ಸಂಚಾರ ಪೊಲೀಸ್ ಠಾಣೆ ಎಸ್.ಐ ರುಕ್ಮಯ್ಯ ನಾಯ್ಕ್, ಎಸ್.ಐ.ಕುಟ್ಟಿ ಅವರು ಪರೇಡ್‌ನಲ್ಲಿ ಸಹಕರಿಸಿದರು.ಬಳಿಕ ಪುರಭವನದ ಸಭಾಭವನದಲ್ಲಿ ಕನ್ನಡ ಜ್ಯೋತಿ ಪ್ರಜ್ವಲನೆ ಮಾಡಲಾಯಿತು.

ಭಾಷಾಭಿಮಾನ ಸಂಸ್ಕೃತಿಯನ್ನು ನೆನಪಿಸುತ್ತದೆ: ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ 8 ಜ್ಞಾನಪೀಠ ಪ್ರಶಸ್ತಿ ಬಂದಿರುವ ಕನ್ನಡ ಭಾಷೆ ನಾಡಿನ ಜನರನ್ನು ಆಕರ್ಷಿಸುವ ಜೊತೆಯಲ್ಲಿ ನಮ್ಮ ಸಂಸ್ಕೃತಿಯನ್ನು ನೆನಪು ಮಾಡಿಸುತ್ತದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಸಾವಿರಕ್ಕೂ ಮಿಕ್ಕಿ ಭಾಷೆ, ಉಪ ಜಾತಿಗಳು ಇತ್ತು. ಇವತ್ತು ಎಲ್ಲಾ ಭಾಷೆಗಳು ಕಡಿಮೆ ಆಗುತ್ತಾ ಬರುತ್ತಿವೆ.ಇದಕ್ಕೆ ಮೂಲ ಕಾರಣ ಇಂಗ್ಲೀಷ್ ಪ್ರಭಾವ.ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ.ಈ ಚಿಂತನೆ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೂಕ್ತವಾಗದೇ ಕನ್ನಡ ತಾಯಿ ಭುವನೇಶ್ವರಿಗೆ ನಾನೇನು ಕೊಡುಗೆ ಕೊಡಬಹುದು ಎಂದು ನಾವೆಲ್ಲ ಚಿಂತನೆ ಮಾಡಬೇಕಾಗಿದೆ ಎಂದರು. ದೇಶದಲ್ಲಿ ಅತೀ ಹೆಚ್ಚು ಜಿ.ಎಸ್.ಟಿ ಕೊಡುತ್ತಿರುವ ಕರ್ನಾಟಕ ರಾಜ್ಯ ಸರಕಾರವು ಕನ್ನಡ ನಾಡುನುಡಿಗೆ ಕಾರಣಕರ್ತರಾದವರನ್ನು ಅವಿಸ್ಮರಣೀಯವಾಗಿ ನೆನಪಿಸುವ ಕಾರ್ಯ ಮಾಡುತ್ತಿದೆ.ಈ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆ ಮತ್ತು ಥೀಮ್ ಪಾರ್ಕ್ ಅನ್ನು ನ.11ಕ್ಕೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದವರು ಹೇಳಿದರು.

ಪರಭಾಷಾ ವ್ಯಾಮೋಹದಿಂದ ಕನ್ನಡ ಭಾಷೆಯನ್ನು ಉಳಿಸೋಣ: ಉಪವಿಭಾಗಾಧಿಕಾರಿ ಗಿರೀಶ್‌ನಂದನ್ ಅವರು ರಾಜ್ಯೋತ್ಸವ ಸಂದೇಶ ಸಾರಿದರು. ಇಂದು ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ದೇಶದ ಪ್ರಬುದ್ಧ ರಾಜ್ಯಗಳಲ್ಲಿ ಒಂದಾಗಿದೆ. ತಂತ್ರಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆಗೈದು, ವಿಶ್ವವನ್ನೇ ಸೆಳೆಯುವ ಸಾಧನೆ ಮಾಡಿದೆ. 8 ಜ್ಞಾನಪೀಠ ಪ್ರಶಸ್ತಿ ಬಂದಿರುವ ನಮ್ಮ ರಾಜ್ಯದಲ್ಲಿ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ, ಕುವೆಂಪು, ಮಾಸ್ತಿ ವೆಂಕಟೇಶ, ದ.ರಾ.ಬೇಂದ್ರೆ, ಡಾ|ಶಿವರಾಮ ಕಾರಂತ ಹೀಗೆ ಹಲವಾರು ಸಾಹಿತಿಗಳು ಇಲ್ಲಿನ ನೆಲಜಲ, ಭಾಷೆ ಬಗ್ಗೆ ಕಾಳಜಿ ವಹಿಸಿದ್ದಂತೆ ನಾವು ಕೂಡಾ ಕಾಳಜಿ ವಹಿಸಬೇಕು.ಪರಭಾಷಾ ವ್ಯಾಮೋಹದಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ.ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದರು.

ಸಾಹಿತ್ಯ ಪರಿಸರವನ್ನು ಪುನಶ್ಚೇತನಗೊಳಿಸಬೇಕಾಗಿದೆ: ಸನ್ಮಾನಿತ ಹಿರಿಯ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆ ಅವರು ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಗೈದರು.ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿ ಇವತ್ತು ಕೆಲವೇ ಕೆಲವು ಕನ್ನಡ ಅಭಿಮಾನಿಗಳು ಇರುವುದನ್ನು ಉಲ್ಲೇಖಿಸುತ್ತಾ, ಕನ್ನಡ ರಾಜ್ಯೋತ್ಸವದ ಹೊರಗೆ ಇನ್ನೂ ರಾಜ್ಯೋದಯವಾಗುವುದಿದೆ.ಒಳಗೆ ಎಂಬ ಕವಿ ಮಾತಿಗೆ ಪುರಭವನ ಸಾಕ್ಷಿಯಾಗಿದೆ.ಇದರೊಂದಿಗೆ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿತರ ಹೆಸರನ್ನು ಆಮಂತ್ರಣದಲ್ಲಿ ಮುದ್ರಣ ಮಾಡದೆ ನಮ್ಮನ್ನು ಮೂಲೆಗುಂಪು ಮಾಡಿದಂತಾಗಿದೆ.ಅದೇ ರೀತಿ ಪ್ರತಿ ಕಾರ್ಯಕ್ರಮದಲ್ಲಿ ಚಪ್ಪಾಳೆಯ ಆಸಕ್ತಿಯೂ ಹೋಗಿದೆ.ನಾನು ಸಾಹಿತ್ಯ ಪರಿಸರ, ಪತ್ರಿಕೋದ್ಯಮ ಪರಿಸರ ನೋಡಿದವನು.ಆದರೆ ಇಲ್ಲಿ ಇವತ್ತು ಸಾಹಿತ್ಯ ಪರಿಸರ ಕೆಟ್ಟು ಹೋಗುತ್ತಿದೆ.ಸಾಹಿತ್ಯ ಚಟುವಟಿಕೆಗಳಿಗೆ ಈಗ ವ್ಯವಸ್ಥೆ ಇಲ್ಲವೇ ಇಲ್ಲ.ಹಾಗಾಗಿ ನಾವು ಅದನ್ನು ಪುನಶ್ಚೇತಗೊಳಿಸಬೇಕು ಎಂದು ಹೇಳಿದರು.

ನ.14ಕ್ಕೆ ಬಾಲವನದಲ್ಲಿ ಬಾಲರು: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಕನ್ನಡದ ಕಂಪು ನಿತ್ಯ ಬೆಳಗಬೇಕು.ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮ ಹಾಕಿಕೊಂಡು ಬಂದಿದೆ.ನ.14ಕ್ಕೆ ಮಕ್ಕಳ ದಿನಾಚರಣೆಯ ಅಂಗವಾಗಿ ಪರ್ಲಡ್ಕದ ಬಾಲವನದಲ್ಲಿ ‘ಬಾಲವನದಲ್ಲಿ ಬಾಲರು’ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.ಸನ್ಮಾನಿತ ಪ್ರಗತಿಪರ ಕೃಷಿಕ ಸುರೇಶ್ ಬಾಯಾರು ಅವರು ಕೃಷಿ ಕ್ಷೇತ್ರದ ಅನುಭವ ಹಂಚಿಕೊಂಡರು.

ಸನ್ಮಾನ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸುರೇಶ್ ಬಾಯಾರು ಬಲ್ನಾಡು, ಜನಪದ ಕ್ಷೇತ್ರದಲ್ಲಿ ದೈವ ನರ್ತಕ ಹರೀಶ್ ಕೆಯ್ಯೂರು, ವೈದ್ಯಕೀಯ ಕ್ಷೇತ್ರದಲ್ಲಿ ಜನಪ್ರಿಯ ವೈದ್ಯ ಡಾ.ಎ.ಕೆ.ರೈ, ಕ್ರೀಡಾ ಸಾಧಕಿ ಅನಘಾ ತೆಂಕಿಲ ಅವರನ್ನು ತಾಲೂಕು ರಾಷ್ಡ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಪತ್ರ, ಸ್ಮರಣಿಕೆ, ಫಲಪುಷ್ಪ ನೀಡಿ, ಪೇಟ ತೊಡಿಸಿ, ಹಾರ ಹಾಕಿ ಗೌರವಿಸಲಾಯಿತು.ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ತಹಶೀಲ್ದಾರ್ ನಿಸರ್ಗಪ್ರಿಯ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.ಸಾಂಸ್ಕೃತಿಕ ಕಾರ‍್ಯಕ್ರಮದ ಸಂಚಾಲಕರು, ಸಮಿತಿ ಕಾರ್ಯದರ್ಶಿಯೂ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವಂದಿಸಿದರು.ಕಂದಾಯ ನಿರೀಕ್ಷಕರಾದ ದಯಾನಂದ, ಉಪತಹಸೀಲ್ದಾರ್ ಸುಲೋಚನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ‍್ಯಕ್ರಮ: ಸಭಾಕಾರ‍್ಯಕ್ರಮದ ಬಳಿಕ ಬೆಥನಿ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ ಪಾಂಗ್ಲಾಯಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆ, ಮಾಯಿದೆ ದೇವುಸ್ ಶಾಲೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು.ಶಿಕ್ಷಣ ಸಂಯೋಜಕ ಹರಿಪ್ರಸಾದ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸೀತಾರಾಮ ರೈ ಸವಣೂರು, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ,ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಹಲವಾರು ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಶಾಲೆಗಳಿಗೆ ಅತೀ ಹೆಚ್ಚು ಅನುದಾನ

ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕೆಂದು ಸರಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ.ಈಗಾಗಲೇ ರೂ.5 ಕೋಟಿ ಅನುದಾನವನ್ನು 215 ಸರಕಾರಿ ಕನ್ನಡ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಕೊಟ್ಟಿದ್ದೇನೆ.ಪ್ರಾಥಮಿಕ ಶಾಲೆಗಳಿಗೆ ರೂ.13.90 ಲಕ್ಷ, ಪ್ರೌಢಶಾಲೆಗಳಿಗೆ ರೂ.16 ಲಕ್ಷವನ್ನು ನೀಡಲಾಗಿದೆ.ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ.ಪ್ರತಿ ವರ್ಷ ಕನ್ನಡ ಭಾಷೆ ಇನ್ನಷ್ಟು ಸಮೃದ್ಧಗೊಳ್ಳಬೇಕು.ಅದೇ ರೀತಿ ವಿನೂತನವಾಗಿ ಕಳೆದ ನಾಲ್ಕು ವರ್ಷಗಳಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುತ್ತಿದೆ. ಇದನ್ನು ಕೂಡಾ ನಾನೇ ಆರಂಭಿಸಿದ್ದೇನೆ.ಯಾಕೆಂದರೆ ಈ ಸನ್ಮಾನ ಮುಂದೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸನ್ಮಾನಕ್ಕೆ ಮೆಟ್ಟಲಾಗಬೇಕು.

ಸಂಜೀವ ಮಠಂದೂರು, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.