ತುರ್ತು ಸಂದರ್ಭದಲ್ಲಿ ಯಾವುದೇ ದಾಖಲೆ ಪತ್ರ ಕೇಳಬೇಡಿ

ಸರಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖಾ ಆಯುಕ್ತರ ಸೂಚನೆ

ಪುತ್ತೂರು: ತುರ್ತು ಸಂದರ್ಭಗಳಲ್ಲಿ ಯಾವುದೇ ದಾಖಲೆ ಪತ್ರಗಳನ್ನು ಕೇಳದಂತೆ ಸರಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ತುಮಕೂರಿನಲ್ಲಿ ಸಂಭವಿಸಿದ್ದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣದಲ್ಲಿ ವೈದ್ಯರು ಮತ್ತು ಶುಶ್ರೂಷಕರ ಕರ್ತವ್ಯ ಲೋಪ, ನಿರ್ಲಕ್ಷತೆಯು ಗಂಭೀರ ಸ್ವರೂಪದ್ದಾಗಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸಂಬಂಧಪಟ್ಟ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಕರ್ತವ್ಯ ನಿರತ 3 ಶುಶ್ರೂಷಾಧಿಕಾರಿಗಳನ್ನು ತನಿಖೆ ಹಾಗೂ ಶಿಸ್ತುಕ್ರಮ ಬಾಕಿ ಇರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ತುಮಕೂರಿನ‌ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ 24 ಗಂಟೆಯೊಳಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸುವಂತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಅಲ್ಲದೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ‌ ಸೂಚನೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸಾರ್ವಜನಿಕ ಆರೋಗ್ಯ ಪದ್ಧತಿಯಲ್ಲಿ ಇದುವರೆಗೂ ರೋಗಿಗಳಿಗೆ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲದೆಯೂ ಆರೋಗ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಅವಶ್ಯವಿರುವುದಿಲ್ಲ.

ಈ ರೋಗಿಯು ಯಾವುದೇ ದಾಖಲೆ ಅಂದರೆ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಚೀಟಿ ಇತರ ದಾಖಲೆಗಳು ಇಲ್ಲದೇ ಇದ್ದರೂ ಸಹ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆಸ್ಪತ್ರೆಗಳ/ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯವಾಗಿರುತ್ತದೆ. ತುಮಕೂರಿನಲ್ಲಿ ನಡೆದ ಘಟನೆಯ ಆಧಾರದ ಮೇಲೆ ಈ ಅಂಶವನ್ನು ಆರೋಗ್ಯ ಇಲಾಖೆ ಮತ್ತೊಮ್ಮೆ ಪುನರುಚ್ಚರಿಸಿದೆ.
ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ/ ಜಾತಿ/ ವರ್ಗ/ಆರ್ಥಿಕ ಸ್ಥಿತಿಯನ್ನು ಅವಲಂಬಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು, ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿರುತ್ತದೆ.

ಆದುದರಿಂದ, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯು ಯಾವುದೇ ರೀತಿಯ ದಾಖಲೆಗಳನ್ನು ಒದಗಿಸಲು ಒತ್ತಾಯಿಸಬಾರದೆಂದು ಈ ಮೂಲಕ ಮತ್ತೊಮ್ಮೆ ತಿಳಿಯಪಡಿಸಲಾಗಿದೆ.
ಇಂತಹ ಘಟನೆಯು ಮುಂದಿನ ದಿನಗಳಲ್ಲಿ ಮರುಕಳಿಸಿದ್ದಲ್ಲಿ ಇಲಾಖೆಯು ಸಂಬಂಧಪಟ್ಟ ಅಧಿಕಾರಿ/ನೌಕರರನ್ನು ಸೇವೆಯಿಂದ ವಜಾಗೊಳಿಸುವುದಲ್ಲದೆ ಕ್ರಿಮಿನಲ್ ಮೊಕದ್ರಮೆಯನ್ನು ಹೂಡಲಾಗುವುದು ಎಂದು ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.