ಮೇಳೈಸಿದ ಬೆಂಗಳೂರು ಜಿ.ಕೆ.ವಿ.ಕೆ. ಕೃಷಿ ಮೇಳದಲ್ಲಿ ಸುಳ್ಯದ ಎಂ.ಬಿ.ಕೆ ಮಹಿಳೆಯರು, ಪುತ್ತೂರಿನ ಜಾಕ್ ಅನಿಲ್ ಅವರ ಪ್ರಯತ್ನಕ್ಕೆ, ಸಾಧನೆಗೆ ಸುದ್ದಿ ಕೃಷಿ ಕೇಂದ್ರದ ಸೆಲ್ಯೂಟ್

0

ನ. 03ರಿಂದ 06ರವರೆಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ (ಜೆ.ಕೆ.ವಿ.ಕೆ) ಜರಗಿದ ಕೃಷಿ ಮೇಳದಲ್ಲಿ 800ಕ್ಕೂ ಹೆಚ್ಚು ಮಳಿಗೆಗಳು ಇದ್ದವು. 10 ಲಕ್ಷಕ್ಕೂ ಮಿಕ್ಕಿ ಜನರು ಭೇಟಿ ನೀಡಿದ್ದಾರೆ. ಕೋಟ್ಯಾಂತರ ರೂಪಾಯಿ ವ್ಯವಹಾರಗಳಾಗಿದೆ. ಕೃಷಿಗೆ ಬೇಕಾದ ಎಲ್ಲಾ ಮಾಹಿತಿಗಳು, ಉತ್ಪನ್ನಗಳು ಮಾತ್ರವಲ್ಲ ಕೃಷಿಗೆ ಬೇಕಾದ ವಿವಿಧ ಪ್ರದರ್ಶನ ಮಳಿಗೆಗಳು ಇದ್ದವು. ಡೈರಿ, ಜಾನುವಾರು-ಕೋಳಿ-ಮೀನು ಸಾಕಣೆ, ಕೃಷಿ ನರ್ಸರಿಗಳು, ನೀರಾವರಿ ಯಂತ್ರೋಪಕರಣಗಳು, ಗೊಬ್ಬರಗಳು, ಆಧುನಿಕ ತಂತ್ರಜ್ಞಾನದ ಪರಿಕರಗಳು, ಕೃಷಿಕೋದ್ಯಮದ ವಸ್ತುಗಳು ಇದ್ದುವು. ರಸ್ತೆ ಬದಿಯಲ್ಲಿ ಹಳ್ಳಿ ಹಳ್ಳಿಯಲ್ಲಿ ಮಾರಾಟವಾಗುವ ವಸ್ತುಗಳಿಂದ ಹಿಡಿದು ದೊಡ್ಡ ಮಟ್ಟದ ವ್ಯವಸ್ಥೆಯಿಂದ ಕೂಡಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿ ಸಾಧಕರಿಗೆ ಸನ್ಮಾನಗಳಿದ್ದವು. ಮಹಿಳೆಯರು ಅದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಶಸ್ತಿ ಪಡೆದಿದ್ದದ್ದು ವಿಶೇಷವಾಗಿತ್ತು. ಕೃಷಿಕರು ಕೃಷಿಕರೊಂದಿಗೆ ಹಾಗೂ ನವ ಉದ್ಯಮದ ಬಗ್ಗೆ ವಿಚಾರಗೋಷ್ಠಿಗಳಿದ್ದವು. ಜಿ.ಕೆ.ವಿ.ಕೆ.ಯ ಉಪಕುಲಪತಿ ಸುರೇಶ್ ಮತ್ತು ಎಕ್ಸ್‌ಟೆಂಕ್ಷನ್ ವಿಭಾಗದ ಮುಖ್ಯಸ್ಥ ನಾರಾಯಣ ಗೌಡರು ಸುದ್ದಿ ಚಾನೆಲ್‌ನೊಂದಿಗೆ ಕೃಷಿ ಮೇಳದ ಉದ್ದೇಶ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಅಲ್ಲಿ ಅವ್ಯವಸ್ಥೆಗಳೂ ಇದ್ದವು ಆದರೆ ಬಂದಿದ್ದ ವ್ಯಕ್ತಿಗಳ ಮತ್ತು ಕೃಷಿ ಮೇಳದ ಸಾಧನೆ ಮೆಚ್ಚುವಂತದ್ದು ಆಗಿತ್ತು. ಕೃಷಿಕರೆಲ್ಲರೂ, ಕೃಷಿಯಲ್ಲಿ ಮತ್ತು ಕೃಷಿ ಉದ್ದಿಮೆಯಲ್ಲಿ ಆಸಕ್ತಿ ಇರುವ ಎಲ್ಲರೂ ಭಾಗವಹಿಸಬೇಕಾದ ಕೃಷಿ ಮೇಳ ಅದಾಗಿತ್ತು

ಈ ಕೃಷಿ ಮೇಳಕ್ಕೆ ಸುದ್ದಿ ಕೃಷಿ ಕೇಂದ್ರ ಸುಳ್ಯದಿಂದ ಕೃಷ್ಣ ಬೆಟ್ಟ, ವಿನಯ ಜಾಲ್ಸೂರು, ಪುತ್ತೂರಿನಿಂದ ರಾಜೇಶ್ ಮಾಡಾವು, ಶಿವಕುಮಾರ್ ಮತ್ತು ಗಣೇಶ್ ಕಲ್ಲರ್ಪೆ, ಬೆಳ್ತಂಗಡಿಯಿಂದ ಅಭಿಷೇಕ್, ತಿಮ್ಮಪ್ಪ ಮತ್ತು ಕೆ.ಎನ್. ಗೌಡರವರು ಭಾಗವಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಗೆ ಕೃಷಿ ಮಾಹಿತಿ ನೀಡಲು ಬೇಕಾದ ಬಂಡವಾಳ ನಮಗೆ ಸುದ್ದಿಯವರಿಗೆ ಅಲ್ಲಿ ದೊರಕಿದೆ. ನಮಗೆ ಮೇಳದಲ್ಲಿ ಸಹಜವಾಗಿ ಆಸಕ್ತಿ ಇದ್ದದ್ದು ಸುಳ್ಯ, ಪುತ್ತೂರು, ಬೆಳ್ತಂಗಡಿಯಿಂದ ಭಾಗವಹಿಸಿದವರ ಬಗ್ಗೆ. ನಮಗೆ ಸುದ್ದಿಯವರಿಗೆ ಸುಳ್ಯ, ಪುತ್ತೂರು, ಬೆಳ್ತಂಗಡಿಯವರು ಪ್ರಿಯರು. ಅಲ್ಲಿ ಜಾಕ್ ಅನಿಲ್ ಎಂಬ ಪುತ್ತೂರಿನವರು ಪುತ್ತೂರಿನ ಜಾಕ್ ಅನಿಲ್‌ನ ಅದ್ಭುತ ಹಲಸು ಎಂಬ ಸ್ಟಾಲ್‌ನ್ನು ಕೃಷಿ ನರ್ಸರಿಯಲ್ಲಿ ಹಾಕಿದ್ದರು. ಅದಕ್ಕೆ ಉತ್ತಮ ಬೇಡಿಕೆಯೂ ಇತ್ತು ಎಂಬುದು ನಮಗೆಲ್ಲರಿಗೂ ಸಂತೋಷದ ವಿಷಯ. ಅದೇ ರೀತಿ ಸುಳ್ಯದ ಐವರ್ನಾಡಿನ ಮತ್ತು ಮುರುಳ್ಯದ ಎಂ.ಬಿ.ಕೆ.ಯವರಾದ ಅಮಿತಾ ಮತ್ತು ಶೈಲಜಾರವರು ಸಂಜೀವಿನಿ ಒಕ್ಕೂಟ ಐವರ್ನಾಡು ಮತ್ತು ಮುರುಳ್ಯವನ್ನು ಪ್ರತಿನಿಧಿಸಿ ಅಲ್ಲಿ ಜೇನಿನ ಮತ್ತು ಅಕ್ಕಿ ರೊಟ್ಟಿಯ ಸ್ಟಾಲ್ ಹಾಕಿದ್ದರು. ಆ ಇಬ್ಬರು ಮಹಿಳೆಯರು 25ಕ್ಕೂ ಹೆಚ್ಚು ಪೊಟ್ಟಣಗಳು, 60 ಕೆ.ಜಿ. ಜೇನು ಬಾಟಲಿಗಳೊಂದಿಗೆ ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಅಲ್ಲಿಂದ 4ನೇ ತಾರೀಕು ಬೆಳಗ್ಗಿನ ಬಸ್ಸಿನಲ್ಲಿ ಪ್ರಥಮ ಬಾರಿಗೆ ಬೆಂಗಳೂರಿಗೆ ಹೊರಟಿದ್ದರು. ಕೃಷಿ ಮೇಳದಲ್ಲಿ ಸರಿಯಾದ ವ್ಯವಸ್ಥೆ ಇರದಿದ್ದರೂ ತಾಳ್ಮೆಯಿಂದ ಮತ್ತು ಧೈರ್ಯದಿಂದ ಸ್ಟಾಲ್‌ನ್ನು ಪಡೆದು ಮಳೆಯಿಂದ ತಮ್ಮ ವಸ್ತುಗಳನ್ನು ರಕ್ಷಿಸಿಕೊಂಡು ಸ್ಟಾಲ್‌ನ್ನು ನಡೆಸಿದ್ದಾರೆ. ಆ ಅವಧಿಯಲ್ಲಿ ಇತರರೊಂದಿಗೆ ಸ್ನೇಹಾಚಾರ ಬೆಳೆಸಿ ಉತ್ತಮ ವ್ಯಾಪಾರಕ್ಕೆ ಬೆಂಬಲ ಪಡೆದಿದ್ದರು. ಸುದ್ದಿಯ ತಂಡ ಅವರಿಗೆ ಸ್ಟಾಲ್ ದೊರಕಲು ಮತ್ತು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಗೆ ಸಹಾಯವನ್ನು ಮಾಡಿದ್ದರೂ, ಆ ಮಹಿಳೆಯರ ಧೈರ್ಯ ಮತ್ತು ಶ್ರಮಕ್ಕೆ ಸುದ್ದಿ ಕೃಷಿ ಕೇಂದ್ರದ ವತಿಯಿಂದ ಸೆಲ್ಯೂಟ್ ಸಮರ್ಪಿಸುತ್ತಿದ್ದೇವೆ. ಇತರರಿಗೆ ಅದು ಧೈರ್ಯ ತುಂಬಲಿ ಮತ್ತು ಮಾರ್ಗದರ್ಶನವಾಗಲಿ ಎಂದು ಹಾರೈಸುತ್ತೇವೆ.

ದ.ಕ. ಜಿಲ್ಲೆಯ ಎಲ್ಲಾ ಕೃಷಿಕರಿಗೆ ವಿಶೇಷವಾಗಿ ಸಂಜೀವಿನಿ ತಂಡದವರಿಗೆ ಮಾಹಿತಿ ಮತ್ತು ಮಾರ್ಕೆಟ್‌ನ ಸಹಾಯವನ್ನು ನೀಡುವುದು ಸುದ್ದಿ ಕೃಷಿ ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇವೆ.

LEAVE A REPLY

Please enter your comment!
Please enter your name here