ನೆಹರೂ ನಗರದ ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯಲ್ಲಿ ಆವಿಷ್ಕಾರ್ 2K22

0

ಪುತ್ತೂರು: ವಿದ್ಯಾರ್ಥಿಗಳೇ ದೇಶದ ಸಂಪತ್ತು, ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆಯ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (CBSE) ಯಲ್ಲಿ ಆವಿಷ್ಕಾರ್ 2K22 ಎಂಬ ವಿನೂತನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಇನ್ಸೆಫ್ ರೀಜನಲ್ ಫೇರ್ ಹಾಗೂ ವಿಜ್ಞಾನ ಪ್ರಾಯೋಗಿಕ ಪ್ರದರ್ಶನ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ನಡೆಸಲಾಯಿತು.

ಕುತೂಹಲವೇ ಆವಿಷ್ಕಾರಕ್ಕೆ ಮೂಲ:

ಬೆಳಗ್ಗೆ 10 ಗಂಟೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಘನಾಧ್ಯಕ್ಷತೆಯನ್ನು ವಹಿಸಿದರು.
ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿರುವ ಪರಿ, ಎಳವೆಯಲ್ಲಿ ಮೂಡುವ ಕುತೂಹಲಕ್ಕೆ ಹೆತ್ತವರು ಹಾಗೂ ಶಿಕ್ಷಕರು ಉತ್ತೇಜನ ನೀಡಿ ವಿಜ್ಞಾನದ ಹೊಸ ಆವಿಷ್ಕಾರಕ್ಕೆ ನಾಂದಿಯಾಗಬೇಕು ಮಾತ್ರವಲ್ಲದೆ, ನಮ್ಮ ದೇಶ ವೈಜ್ಞಾನಿಕ ಸಾಧನೆಗಳ ಆಗರ, ಹಿರಿಯರ ಸಾಧನೆಗಳೇ ನಮಗೆ ಸ್ಪೂರ್ತಿ, ಈ ಹಾದಿಯಲ್ಲಿ ವಿದ್ಯಾರ್ಥಿಗಳೆಲ್ಲರೂ ಸಾಧನೆಗೈದು ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ಹಾಗೂ ಕಾರ್ಯದರ್ಶಿಗಳಾದ ಡಾ| ಕೆ. ಎಮ್. ಕೃಷ್ಣ ಭಟ್ ಹಾಗೂ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ|ಟಿ. ಎನ್. ರವಿಪ್ರಸಾದ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ SSI ಯ ಅಧ್ಯಕ್ಷರಾದ ಶ್ರೀ ನಾರಾಯಣ್ ಅಯ್ಯರ್ ಅವರು, ನಡೆಯಲಿರುವ ವಿಭಾಗೀಯ ಇನ್ಸೆಫ್ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸ್ಪರ್ಧಾಳುಗಳಿಗೆ, ಯಾವ ರೀತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಬೇಕೆಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ವಸಂತಿ ಕೆ. ಶಾಲಾ ಸಂಚಾಲಕರಾದ ಶ್ರೀ ಭರತ್ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಿಂಧೂ ವಿ. ಜಿ ಹಾಗೂ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಡಾ| ದೀಪಕ್ ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪರಿಣಾಮಕಾರಿ ಅಧ್ಯಯನ, ಆಧುನಿಕ ತಂತ್ರಜ್ಞಾನದ ಜೊತೆಗೆ, ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಇನ್ನೂ ಹೆಚ್ಚು ಅನುಕೂಲಕರವಾಗುವಂತೆ, ಶಾಲೆಯ ನೂತನ ಡಿಜಿಟಲ್ ಇಂಟರಾಕ್ಟಿವ್ ಪ್ಯಾನಲ್ ನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಸಿ. ಬಿ.ಎಸ್. ಇ ಶಾಲಾ ವಿದ್ಯಾರ್ಥಿಗಳ ಸಾಧನೆ, ಪೋಷಕ-ವಿದ್ಯಾರ್ಥಿಗಳ ಲೇಖನ, ಸಂಸ್ಥೆಯ ವಿಶೇಷ ವಿಷಯಗಳನ್ನೊಳಗೊಂಡ ಶಾಲಾ ಸುದ್ದಿ ಪತ್ರಿಕೆ “ಪ್ರೇರಣಾ” ವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಲೋಕೇಶ್ ಎಸ್. ಆರ್ ಅವರ ಉಪಸ್ಥಿತಿಯನ್ನು ಗೌರವಿಸಲಾಯಿತು.

ಇನ್ಸೆಫ್ ವಿಭಾಗೀಯ ವಿಜ್ಞಾನ ಮೇಳ :

ವಿವಿಧ ಶಾಲೆಗಳ ಒಟ್ಟು 27 ವಿಜ್ಞಾನ ಯೋಜನೆಗಳು ವಿಭಾಗೀಯ ವಿಜ್ಞಾನ ಮೇಳದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
SSI ಯ ಅಧ್ಯಕ್ಷರಾದ ಶ್ರೀ ನಾರಾಯಣ್ ಅಯ್ಯರ್ ಅವರ ನೇತ್ರತ್ವದಲ್ಲಿ ವಿಜ್ಞಾನ ಕ್ಷೇತ್ರದ ನುರಿತ ತಜ್ಞರು ಯೋಜನೆಗಳನ್ನು ಪರಿಶೀಲಿಸಿ ತೀರ್ಪು ನೀಡುವಲ್ಲಿ ಸಹಕರಿಸಿದರು.

IISER ಪ್ರಾಯೋಗಿಕ ಪ್ರದರ್ಶನ:

ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಮಾದರಿಗಳ ಜೊತೆಗೆ ವಿಜ್ಞಾನ ಚಟುವಟಿಕೆಗಳು ಹಾಗೂ ಮಕ್ಕಳ ಆಟಿಕೆಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದು, ಹಿರಿಯ ಸಂಶೋಧನಾ ಸಂಘವಾದ IISER ಪುಣೆಯ, ಪ್ರತಿಭಾನ್ವಿತರಾದ ಶ್ರೀ ಆಶೋಕ್ ರೂಪ್ನರ್ ಅವರು ಬೆಳಗಿನ ಹಾಗೂ ಅಪರಾಹ್ನದ ಬಳಿಕ ಎರಡು ಹಂತಗಳಲ್ಲಿ ಅತ್ಯಂತ ಪ್ರಭಾವಶಾಲಿ ಪ್ರಾಯೋಗಿಕ ಪ್ರದರ್ಶನ ನೀಡಿ, ಮಕ್ಕಳನ್ನು ಮನರಂಜಿಸಿದರು.

ಪುತ್ತೂರು ಆಸುಪಾಸಿನ 29ಕ್ಕೂ ಹೆಚ್ಚು ಶಾಲೆಗಳ ಸುಮಾರು 1500ಕ್ಕೂ ಮಿಕ್ಕಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಈ ವಿಜ್ಞಾನದ ವಿಸ್ಮಯಕ್ಕೆ ಸಾಕ್ಷಿಯಾದರು.
ಪ್ರಸ್ತುತ ಪ್ರದರ್ಶನದಲ್ಲಿ ಶಬ್ದದ ಪ್ರಸಾರ, ಅಯಸ್ಕಾಂತದ ಗುಣಲಕ್ಷಣಗಳು, ಜ್ಯಾಮಿತೀಯ ಆಕಾರಗಳು ಮುಂತಾದ ಹಲವು ಪ್ರದರ್ಶನಗಳನ್ನು ನೀಡಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು.

ಸಮಾರೋಪ ಸಮಾರಂಭ:

ಸಾಯಂಕಾಲ 4 ಗಂಟೆಗೆ INSEF ವಿಭಾಗೀಯ ಮೇಳ ಹಾಗೂ ವಿಜ್ಞಾನ ಪ್ರಾಯೋಗಿಕ ಪ್ರದರ್ಶನದ (IISER,ಪುಣೆ) ಸಮಾರೋಪ ಸಮಾರಂಭವು ಜರುಗಿತು.
ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ಅವರು ವಹಿಸಿ ಮಾತನಾಡುತ್ತಾ, ಮಕ್ಕಳೆಲ್ಲರೂ ಇಂದಿನ ಕಾರ್ಯಕ್ರಮದ ಸದ್ಬಳಕೆಯನ್ನು ಮಾಡಿ, ಉನ್ನತ ಸಾಧನೆಗೈದು ಹೆಸರು ಮಾಡಿದಲ್ಲಿ, ಪುತ್ತೂರು ಮಾತ್ರವಲ್ಲ ನಮ್ಮ ಜಿಲ್ಲೆಗೇ ಹೆಮ್ಮೆ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹನ್ನಿತ್ತರು.

ಮುಖ್ಯ ಅತಿಥಿಗಳಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಮಹೇಶ್ ಪ್ರಸನ್ನ ಅವರು ಮಾತನಾಡುತ್ತಾ, ಮಕ್ಕಳ ಇಂದಿನ ವಿಜ್ಞಾನ ಯೋಜನೆಗಳನ್ನು ನೋಡಿದಾಗ, ಮುಂದೆ ಈ ಯುವ ಪೀಳಿಗೆಯು ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬಲ್ಲರು ಹಾಗೂ ತನ್ಮೂಲಕ ದೇಶದ ಪ್ರಗತಿಗೆ ಅವರು ಕಾರಣರಾಗಬಲ್ಲರು ಎಂಬುದಾಗಿ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ತೀರ್ಪು ನೀಡಿದ ತೀರ್ಪುಗಾರರು, ಸ್ಪರ್ಧಾಳುಗಳು ಹಾಗೂ ಮಕ್ಕಳನ್ನು ಕರೆತಂದ ಶಿಕ್ಷಕರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭದಲ್ಲಿ, 3 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗಳಿಸಿದ ವಿಜೇತ ವಿದ್ಯಾರ್ಥಿಗಳನ್ನು ಘೋಷಿಸಿ, ಅಭಿನಂದಿಸಲಾಯಿತು ಮಾತ್ರವಲ್ಲದೆ, ಮೆಚ್ಚುಗೆ ಗಳಿಸಿದ 7 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಈ ವಿಭಾಗೀಯ ಮೇಳದಲ್ಲಿ, ಚಿನ್ನದ ಪದಕ ಪಡೆದುಕೊಂಡ ವಿಜ್ಞಾನ ಯೋಜನೆಗಳು ಮುಂದೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲಿರುವವು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಮುಖ್ಯೋಪಾಧ್ಯಾಯರು ಆಸೀನರಾಗಿದ್ದರು.
ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಅಂಗಸಂಸ್ಥೆಗಳ ಪ್ರಾಂಶುಪಾಲರು, ಬೋಧಕವರ್ಗ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕೌಶಲ್ಯ ವರ್ಧನೆ ಕಾರ್ಯಕ್ರಮ :

ಕಾರ್ಯಕ್ರಮದ ಮುಂದಿನ ವಿಶೇಷ ಭಾಗವಾಗಿ ಮರುದಿನ, 2020 ರ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಕರಲ್ಲಿ ವೃತ್ತಿಪರ ಕೌಶಲ್ಯವನ್ನು ವರ್ಧಿಸುವ ಹಾಗೂ ನವೀನ ಕಲಿಕಾ ತಂತ್ರಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಲಾದ ಕೌಶಲ್ಯ ವರ್ಧನೆ ತರಬೇತಿಯನ್ನು ದೇಶದ ಪ್ರಧಾನ ಸಂಶೋಧನಾ ಸಂಸ್ಥೆ (IISER) ಪುಣೆಯ ಶ್ರೀ ಅಶೋಕ್ ರೂಪ್ನರ್ ಅವರು ಅತ್ಯಂತ ಪರಿಣಾಮಕಾರಿಯಾಗಿ ನಡೆಸಿಕೊಟ್ಟಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಸುಮಾರು 8 ಶಾಲೆಗಳ 25 ಶಿಕ್ಷಕರು ಭಾಗವಹಿಸಿ ಪ್ರಯೋಜನವನ್ನು ಪಡೆದರು.

ಊರ ಪರವೂರ ಶಾಲೆಗಳಿಂದ ವಿದ್ಯಾರ್ಥಿ- ಶಿಕ್ಷಕರು ಪಾಲ್ಗೊಳ್ಳುವ ಮೂಲಕ ಸಹಕರಿಸಿ, ಮಾತೃಸಂಸ್ಥೆ ಹಾಗೂ ಶಾಲಾ ಆಡಳಿತ ಮಂಡಳಿಯವರ ಮಾರ್ಗದರ್ಶನ, ಮುಖ್ಯೋಪಾಧ್ಯಾಯರ ನೇತ್ರತ್ವ ಹಾಗೂ ಶಿಕ್ಷಕ, ಶಿಕ್ಷಕೇತರ ಬಂಧುಗಳ ಸಹಯೋಗದೊಂದಿಗೆ ಉಪಹಾರ, ಭೋಜನ ವ್ಯವಸ್ಥೆಗಳು ಚೊಕ್ಕವಾಗಿ ನೆರವೇರಿ ಒಟ್ಟೂ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಸುಸಂಪನ್ನಗೊಂಡವು.

LEAVE A REPLY

Please enter your comment!
Please enter your name here