ಸವಣೂರು ವಿದ್ಯಾರಶ್ಮಿಯಲ್ಲಿ ಕಾನೂನು ಅರಿವು ಮಾಹಿತಿ ಕಾರ್ಯಾಗಾರ

ಪುತ್ತೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕಾನೂನು ಅರಿವು ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು, ವಕೀಲರ ಸಂಘ ಪುತ್ತೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾನೂನು ಅರಿವಿನ ಮೂಲಕ ನಾಗರೀಕರಣ, ಸಬಲೀಕರಣ ಅಭಿಯಾನ-2022 ಎಂಬ ಶಿರೋನಾಮೆಯೊಂದಿಗೆ ಮಾಹಿತಿ ನೀಡಲಾಯಿತು.

ಪುತ್ತೂರಿನ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಮೂರ್ತಿ ಶಿವಣ್ಣ ಎಚ್.ಆರ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾನೂನು, ಸಂವಿಧಾನಗಳು ಹಳ್ಳಿ ಹಳ್ಳಿಯ ಮೂಲೆ ಮೂಲೆಯಲ್ಲೂ ಗೊತ್ತಿರುವಂತಾಗಬೇಕು. ಹಾಗಾದಾಗ ಸಶಕ್ತ ಭಾರತ ನಿರ್ಮಾಣಗೊಳ್ಳುತ್ತದೆ. ಇದಕ್ಕೆ ಕೈ ಜೋಡಿಸಿರುವ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯ ಅಭಿನಂದನಾರ್ಹ. ಸವಣೂರು ಸೀತಾರಾಮ ರೈ ಅಂತಹವರ ಸಂಖ್ಯೆ ಹೆಚ್ಚಾದಾಗ ಬಲಿಷ್ಠ ಭಾರತದ ನಿರ್ಮಾಣ ಸುಲಭ ಸಾಧ್ಯ ಎಂದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸವಣೂರು ಸೀತಾರಾಮ ರೈ ಅವರು ಕಾನೂನು ಎಂಬುದು ಮನುಷ್ಯನಿಗೆ ಅತಿ ಅಗತ್ಯವಾದುದು. ಕಾನೂನು ಗೊತ್ತಿಲ್ಲದೆ ಮಾಡಿದ ತಪ್ಪಿಗು ಸಹ ಶಿಕ್ಷೆ ಇದ್ದೇ ಇದೆ. ಕಾನೂನನ್ನು ತಿಳಿದುಕೊಂಡರಷ್ಟೇ ಸಾಲದು ಅದನ್ನು ಅನುಸರಿಸಬೇಕು. ನಮ್ಮ ನೈಮಿತ್ತಿಕ ಜೀವನದಲ್ಲಿ ಕಾನೂನನ್ನು ತಿಳಿದುಕೊಂಡಾಗ ನಮ್ಮ ಆತ್ಮ ವಿಶ್ವಾಸ ವೃದ್ಧಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾ. ಗಿರೀಶ್ ಮಳಿ ಅವರು ಕ್ರಮಬದ್ಧವಾಗಿ ಕಾನೂನುಗಳ ಮಾಹಿತಿ ಮಾಡಿಕೊಟ್ಟು ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ನ್ಯಾಯಮೂರ್ತಿ 2ನೇ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಮತ್ತು ಜೆ.ಎಮ್.ಎಫ್.ಸಿ. ಯೋಗೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ನ್ಯಾ. ಮನೋಹರ್ ಕೆ.ವಿ. ಅವರು ಪ್ರಸ್ತಾವನೆಗೈದು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನ್ಯಾ. ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಸಂಪನ್ಮೂಲ ವ್ಯಕ್ತಿ ನ್ಯಾ. ಶಶಿಧರ ಬಿ.ಎನ್., ವಕೀಲರ ಸಂಘದ ಪದಾಧಿಕಾರಿಗಳಾದ ನ್ಯಾ. ಶ್ಯಾಮ ಪ್ರಸಾದ್ ಕೈಲಾರ್, ನ್ಯಾ. ಚಿನ್ಮಯಿ ರೈ ಎನ್. ಮತ್ತು ನ್ಯಾ. ಸೀಮಾ ನಾಗರಾಜ್, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಾದ ಅಭಿಜ್ಞಾ ಕೆ. ಮತ್ತು ಶ್ರಾವ್ಯವಾಣಿ ಪ್ರಾರ್ಥಿಸಿದರು. ತೃತೀಯ ಬಿ.ಕಾಂ.ನ ರಕ್ಷಿತಾ ಎ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.