ಕೋಡಿಂಬಾಡಿಯಲ್ಲಿ ಯುವಕನಿಗೆ ತಂಡದಿಂದ ಹಲ್ಲೆ, ಜೀವ ಬೆದರಿಕೆ: ಹತ್ತು ಮಂದಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದ ಮನೆಯೊಂದರಲ್ಲಿ ಯುವಕನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಹತ್ತು ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ‌.
ಪುತ್ತೂರು ನಗರ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 94/2022ರಂತೆ ಕೇಸ್ ದಾಖಲು ಮಾಡಲಾಗಿದ್ದು ಆರೋಪಿಗಳ ವಿರುದ್ಧ ಕಲಂ: 143,147,148,341,504,324,323,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲು ಮಾಡಲಾಗಿದೆ‌.
ನ.10ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿ ಗ್ರಾಮ ಪಂಚಾಯತ್‌ ಕಚೇರಿ ಬಳಿ ಹಿರೇಬಂಡಾಡಿ ಗ್ರಾಮದ ಕರೆಂಕಿ ಮನೆಯ ಮಂಚ ಮುಗೇರ ಎಂಬವರ ಪುತ್ರ ಸುರೇಶ ಕೆ. (33 ವರ್ಷ) ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಶೇಖರ ಪೂಜಾರಿ, ಮನೋಜ್‌, ಪ್ರಮೋದ್‌, ಅಶೋಕ, ಸುರೇಶ, ಉಮೇಶ, ರತ್ನಾಕರ, ಕೃಷ್ಣಪ್ಪ ಮತ್ತು ಪ್ರದೀಪ ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ದೂರುದಾರ ಸುರೇಶ್ ಅವರು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿಯ ಗ್ರಾಮ ಪಂಚಾಯತ್‌ ಕಛೇರಿ ಬಳಿಯ ನಿವಾಸಿ ಮೋಹನ ಎಂಬವರ ಮನೆಯಲ್ಲಿ ಸುಮಾರು ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ರಾತ್ರಿ ಸಮಯ ಕೂಡಾ ಮೋಹನರವರ ಮನೆಯಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ತನ್ನ ಮನೆಗೆ ಹೋಗುತ್ತಿದ್ದಾರೆ. ದಿನಾಂಕ 09.11.2022ರಂದು ಬೆಳಿಗ್ಗೆ ಸುರೇಶ್ ಅವರು ಮೋಹನರವರ ಇನ್ನೊಂದು ಕೃಷಿ ಜಾಗವಾದ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕರ್ಪಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಸಾಯಂಕಾಲ ಮೋಹನರವರ ತಂದೆ ಅಣ್ಣಪ್ಪ ಗೌಡ ಮತ್ತು ತಾಯಿಯ ಜೊತೆ ಕೋಡಿಂಬಾಡಿಗೆ ಬಂದಾಗ ಮೋಹನರವರ ಮನೆಯಲ್ಲಿ ಮೋಹನ್ ಅವರ ಮಗ ದಿಶಾನ್ ಮಾತ್ರ ಇದ್ದು ಬೇರೆ ಯಾರೂ ಇರಲಿಲ್ಲ. ಬಳಿಕ ಮೋಹನರವರ ತಾಯಿ ಪುತ್ತೂರು ಪೇಟೆಗೆ ಹೋಗಿದ್ದು , ಮನೆಯಲ್ಲಿ ಮೋಹನರವರ ತಂದೆ ಮತ್ತು ಮಗ ಮಾತ್ರ ಇದ್ದರು. ಸುರೇಶ್ ಅವರು ಹಳೆಯ ಮನೆ ಕಡೆಗೆ ಬಟ್ಟೆಗಳನ್ನು ತರಲು ಹೋದಾಗ ಹಳೆ ಮನೆಗೆ ಬೀಗ ಹಾಕಿದ್ದು ನಂತರ ರಾತ್ರಿ ಸುಮಾರು 8.30 ಗಂಟೆಗೆ ಮೋಹನರವರ ಮನೆಯಿಂದ ತನ್ನ ಮನೆಗೆ ಹೊರಟಾಗ ಮನೆಯ ಅಂಗಳಕ್ಕೆ ಶೇಖರ ಪೂಜಾರಿ, ಮನೋಜ್, ಉಮೇಶ್, ಪ್ರಮೋದ್ , ಅಶೋಕ, ಸುರೇಶ, ಉಮೇಶ ,ರತ್ನಾಕರ ,ಕೃಷ್ಣಪ್ಪ ಮತ್ತು ಪ್ರದೀಪರವರು ಬಂದು ಸುರೇಶ್ ಅವರನ್ನು ಹಿಡಿದು ಅವಾಚ್ಯವಾಗಿ ಬೈದು ಮೋಹನರವರ ಹಳೆಯ ಮನೆಗೆ ಕರೆದುಕೊಂಡು ಹೋಗಿದ್ದಲ್ಲದೆ ಸುರೇಶ್ ಅವರಿಗೆ ಶೇಖರ ಪೂಜಾರಿ ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಇತರರು ಕೈಗಳಿಂದ ಬೆನ್ನಿಗೆ ಕೆನ್ನೆಗೆ, ಎದೆಗೆ ಕಾಲಿನಿಂದ ಮತ್ತು ಸೊಂಟಕ್ಕೆ ತುಳಿದು ದೂಡಿ ಹಾಕಿದ್ದಾರೆ. ಸುರೇಶ್ ಅವರು ಜೋರಾಗಿ ಬೊಬ್ಬೆ ಹೊಡೆದಾಗ ಮೋಹನರವರ ತಂದೆ ಹಾಗೂ ಅವರ ಮಗ ಬರುವುದನ್ನು ನೋಡಿ ಆರೋಪಿಗಳು ಸುರೇಶ್ ಅವರನ್ನು ನಿಂದಿಸಿ ಕೇಸು ಕೊಡಲು ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾರೆ. ನಂತರ ಮೋಹನರವರು ವಿಷಯ ತಿಳಿದು ಹಲ್ಲೆಯಿಂದ ಗಾಯಗೊಂಡ ಸುರೇಶ್ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸುರೇಶ್ ಅವರು ಸುಮಾರು ಎರಡು ವರ್ಷಗಳಿಂದ ಮೋಹನರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಈ ಬಗ್ಗೆ ಆರೋಪಿಗಳು ಹೊಟ್ಟೆಕಿಚ್ಚಿನಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸು ದಾಖಲಾದ ಹತ್ತು ಮಂದಿಯೂ ತಲೆ ಮರೆಸಿಕೊಂಡಿದ್ದಾರೆ.‌

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.