ಕೂರೇಲು ಶ್ರೀ ಪೂಮಾಣಿ ಕಿನ್ನಿಮಾಣಿ ಉಳ್ಳಾಲ್ತಿ ರಾಜನ್ ದೈವಗಳ ವಿಜ್ರಂಭಣೆಯ ನೇಮೋತ್ಸವ

0

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಶ್ರೀ ಪೂಮಾಣಿ ಕಿನ್ನಿಮಾಣಿ ಉಳ್ಳಾಲ್ತಿ ರಾಜನ್ ದೈವಗಳ ದೈವಸ್ಥಾನದಲ್ಲಿ ಶ್ರೀ ಪೂಮಾಣಿ ಕಿನ್ನಿಮಾಣಿ ಉಳ್ಳಾಲ್ತಿ ಹಾಗೂ ಕಲ್ಲುರ್ಟಿ ದೈವಗಳ ವಿಜ್ರಂಭಣೆಯ ನೇಮೋತ್ಸವ ನ.10 ರಂದು ನಡೆಯಿತು. ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಶ್ರೀ ದೈವಗಳಿಗೆ ಸುಮಾರು 600 ವರ್ಷಗಳ ಇತಿಹಾಸವಿದ್ದು ಇದುವರೆಗೆ ದೈವಗಳಿಗೆ ಕೂರೇಲು ಮಣ್ಣಿನಲ್ಲಿ ನೇಮೋತ್ಸವ ನಡೆದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎನ್ನುವ ಹಿರಿಯರು ಇದೀಗ ಕೆ.ಸಂಜೀವ ಪೂಜಾರಿ ಕೂರೇಲುರವರ ಆಡಳಿತದಲ್ಲಿ ಶ್ರೀ ದೈವಗಳಿಗೆ ದೈವಸ್ಥಾನ ನಿರ್ಮಾಣಗೊಂಡು 2014 ಮಾರ್ಚ್ 17 ರಂದು ದೈವಗಳ ಪ್ರತಿಷ್ಠೆ ನಡೆದು 8 ವರ್ಷಗಳ ಬಳಿಕ ನೇಮೋತ್ಸವ ನಡೆದಿದೆ. ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆದು ಶ್ರೀ ದೈವಗಳಿಗೆ ನೇಮೋತ್ಸವ ನಡೆಯಿತು. ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ ನಡೆದು ದೈವಗಳಿಗೆ ಕಲಶ ಅಭಿಷೇಕ, ತಂಬಿಲ ಸೇವೆ ಬಳಿಕ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಆ ಬಳಿಕ ಶ್ರೀ ಉಳ್ಳಾಲ್ತಿ ದೈವದ ನೇಮೋತ್ಸವ ಆರಂಭಗೊಂಡು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ನೇಮೋತ್ಸವ ನಡೆಯಿತು.ಸಂಜೆ ಭಕ್ತಾದಿಗಳಿಗೆ ದೈವದ ಪ್ರಸಾದ ವಿತರಣೆ ನಡೆದು ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾದಿಗಳನ್ನು ಸ್ವಾಗತಿಸಿ ದೈವದ ಪ್ರಸಾದ ನೀಡಿ ಸತ್ಕರಿಸಿದರು. ಹರ್ಷಿತ್ ಕುಮಾರ್ ಕೂರೇಲು, ಸರಸ್ವತಿ ಸಂಜೀವ ಪೂಜಾರಿ ಹಾಗೂ ಕೂರೇಲು ಕುಟುಂಬಸ್ಥರು ಸಹಕರಿಸಿದ್ದರು.

 

ಆಭರಣಗಳ ಅರ್ಪಣೆ: ದೈವಸ್ಥಾನ ನಿರ್ಮಾಣಗೊಂಡ ಬಳಿಕ 8 ವರ್ಷಗಳಲ್ಲಿ ಸುಮಾರು 17 ಲಕ್ಷ ರೂ.ವೆಚ್ಚದಲ್ಲಿ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು ನೇಮೋತ್ಸವದ ಸಂದರ್ಭದಲ್ಲಿ ಶ್ರೀ ಉಳ್ಳಾಲ್ತಿ ದೈವಕ್ಕೆ ಕಂಚಿನ ಮೊಗ, ಅರ್ಧ ಬೆಳ್ಳಿ ಮುಚ್ಚಿದ ಕತ್ತಿ, ಮಣಿ, ಶ್ರೀ ಉಳ್ಳಾಕುಲು ದೈವಕ್ಕೆ ಅರ್ಧ ಬೆಳ್ಳಿ ಮುಚ್ಚಿದ ಸುರಿಯ, ಬಿಲ್ಲು ಬಾಣ ಇತ್ಯಾದಿ ಆಭರಣಗಳನ್ನು ಅರ್ಪಣೆ ಮಾಡಲಾಯಿತು.

ಸಾವಿರಕ್ಕೂ ಅಧಿಕ ಮಂದಿ ಅನ್ನಸಂತರ್ಪಣೆ: ಕೂರೇಲು ಮಣ್ಣಿನಲ್ಲಿ ನಡೆದ ಶ್ರೀ ಪೂಮಾಣಿ ಕಿನ್ನಿಮಾಣಿ ಉಳ್ಳಾಲ್ತಿ ರಾಜನ್, ಕಲ್ಲುರ್ಟಿ ದೈವಗಳ ನೇಮೋತ್ಸವಕ್ಕೆ ಊರಪರವೂರ ಸುಮಾರು 2 ಸಾವಿರಕ್ಕು ಅಧಿಕ ಮಂದಿ ಆಗಮಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 1500 ಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಇದಲ್ಲದೆ ಬೆಳಿಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ

‘ ಕೂರೇಲು ಮಣ್ಣಿನಲ್ಲಿ ನೆಲೆ ನಿಂತಿರುವ ಶ್ರೀ ದೈವಗಳಿಗೆ ಸುಮಾರು 600 ವರ್ಷಗಳ ಇತಿಹಾಸವಿದ್ದು ಕುಟುಂಬಸ್ಥರ, ಭಕ್ತಾದಿಗಳ ಸಹಕಾರದೊಂದಿಗೆ ಶ್ರೀ ದೈವಗಳಿಗೆ ದೈವಸ್ಥಾನ ನಿರ್ಮಿಸಿ 2014 ಮಾರ್ಚ್ 17 ರಂದು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಲಾಗಿದ್ದು ಆ ಬಳಿಕ ಅಂದರೆ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶ್ರೀ ದೈವಗಳಿಗೆ ಕೂರೇಲು ಮಣ್ಣಿನಲ್ಲಿ ನೇಮೋತ್ಸವ ನಡೆದಿದೆ. ನೇಮೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಶ್ರೀ ದೈವಗಳು ಒಳ್ಳೆಯದನ್ನು ಕರುಣಿಸಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.’

ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು ಶ್ರೀ ದೈವಸ್ಥಾನ

LEAVE A REPLY

Please enter your comment!
Please enter your name here