ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರದಿಂದ ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಹಯೋಗದೊಂದಿಗೆ ಕೃಷಿಕರೊಂದಿಗೆ ಸಮಗ್ರ ಕೃಷಿ ಬಗ್ಗೆ ಮಾಹಿತಿ, ಸಂವಾದ ಕಾರ್ಯಕ್ರಮ

ಪುತ್ತೂರು: ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರದ ವತಿಯಿಂದ ಮುಂಡೂರು ಗ್ರಾ.ಪಂ ವ್ಯಾಪ್ತಿಯ ಆಸಕ್ತ ಕೃಷಿಕರೊಂದಿಗೆ ಸಮಗ್ರ ಕೃಷಿ ಬಗ್ಗೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಸಹಯೋಗದೊಂದಿಗೆ ಸಂಘದ ಸಭಾಭವನದಲ್ಲಿ ನಡೆಯಿತು.

ಸುದ್ದಿ ಕೃಷಿ ಮಾಹಿತಿ ಕೇಂದ್ರದ ಮುಖ್ಯಸ್ಥ ಗಣೇಶ್ ಕಲ್ಲರ್ಪೆಯವರು ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸ್ಥಳೀಯ ಕೃಷಿಕರ ಕೃಷಿ ಬಗೆಗಿನ ಅಭಿಪ್ರಾಯ ಹಾಗೂ ನರ್ಸರಿಗಳ ಮಾಹಿತಿಯನ್ನು ಪ್ರೊಜೆಕ್ಟರ್ ಮೂಲಕ ಪ್ರಸ್ತುತಪಡಿಸಲಾಯಿತು.

ಸುದ್ದಿ ಕೃಷಿ ಮಾಹಿತಿ, ಸೇವಾ ಕೇಂದ್ರದ ಬಗ್ಗೆ ಮಾಹಿತಿ ನೀಡಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಯು.ಪಿ ಶಿವಾನಂದರು ಮಾತನಾಡಿ ಕೃಷಿಯ ಬಗ್ಗೆ ಸ್ಥಳೀಯವಾಗಿಯೇ ಮಾಹಿತಿ ಒದಗಿಸಿದಾಗ ಅದು ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಮಾಹಿತಿ ಸಂಗ್ರಹ ಮಾಡುವುದು ಮತ್ತು ಅದನ್ನು ಕೃಷಿಕರಿಗೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ. ಕೃಷಿ ಉತ್ಪನ್ನಗಳ ಮಾಹಿತಿ ಮತ್ತು ಮಾರುಕಟ್ಟೆ ದೊರಕಿದಾಗ ಅದು ಪೂರ್ಣ ಕೃಷಿಯಾಗಲು ಸಾಧ್ಯ ಎಂದು ಹೇಳಿದರು.

ಕೃಷಿಕರ ಬೇಡಿಕೆ ಈಡೇರಬೇಕು. ಕೃಷಿ ಕೆಲಸ ಮಾಡುವವರಿಗೆ, ಉತ್ಪನ್ನ ಮಾಡುವವರಿಗೆ ಗೌರವ ಸಿಗಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಹಯೋಗ ಪಡೆದುಕೊಂಡು ಕೃಷಿ ಮಾಹಿತಿಯನ್ನು ತಳಮಟ್ಟದಲ್ಲೇ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೃಷಿಕ ಕೂಡಾ ಸ್ವಾಭಿಮಾನದಿಂದ ಜೀವನ ನಡೆಸಬೇಕು. ಎಲ್ಲ ಇಲಾಖೆಗಳಲ್ಲೂ ಕೃಷಿಕನಿಗೆ ಗೌರವ ಸಿಗಬೇಕು. ಈ ನಿಟ್ಟಿನಲ್ಲಿ ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುವ ನಿಟ್ಟಿನಲ್ಲೂ ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರ ಕೆಲಸ ಮಾಡಲಿದೆ ಎಂದು ಡಾ.ಯು.ಪಿ ಶಿವಾನಂದ ಹೇಳಿದರು.

ಶಿವಾನಂದರ ಹೋರಾಟಕ್ಕೆ ನಾವು ಶಕ್ತಿ ತುಂಬಬೇಕು-ಸೊರಕೆ: ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ವೈಜ್ಞಾನಿಕ ತಾಂತ್ರಿಕತೆ ಇವತ್ತು ಬೆಳೆದಿದ್ದು ಅದರ ಜೊತೆ ಕೃಷಿಕ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ಥಳೀಯವಾಗಿಯೇ ಕೃಷಿ ಬಗ್ಗೆ ಮಾಹಿತಿ ನೀಡುವ ಯೋಜನೆ ಹಾಕಿಕೊಂಡಿರುವ ಸುದ್ದಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕಳೆದ 37 ವರ್ಷಗಳಿಂದ ಪತ್ರಿಕೆಯನ್ನು ನಡೆಸುತ್ತಾ ಬಂದಿರುವ ಡಾ.ಯು.ಪಿ ಶಿವಾನಂದರು ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸುತ್ತಿದ್ದು ಅವರ ಹೋರಾಟಗಳಿಗೆ ನಾವು ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಸುದ್ದಿಯವರ ಯೋಜನೆ ಖುಷಿ ನೀಡಿದೆ-ಕೆದಿಲಾಯ:ಪ್ರಗತಿಪರ ಕೃಷಿಕರಾದ ಜಯರಾಮ ಕೆದಿಲಾಯ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಯುವಜನತೆ ಮೊಬೈಲ್‌ಗೆ ಮಾರು ಹೋಗಿ ಕೃಷಿ ಬಗೆಗಿನ ಆಸಕ್ತಿ ಅವರಲ್ಲಿ ಕಮ್ಮಿಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ಸುದ್ದಿ ವತಿಯಿಂದ ಕೃಷಿ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಮಾಹಿತಿ ನೀಡುವುದು ಒಳ್ಳೆಯ ಕಾರ್ಯ ಎಂದು ಹೇಳಿದರು. ಕೃಷಿಯ ಅವಶ್ಯಕತೆ ಬಗ್ಗೆ ತಿಳಿದುಕೊಂಡು ಸಮಯವನ್ನು ಸದುಪಯೋಗಪಡಿಸಿಕೊಂಡರೆ ಕೃಷಿಯಲ್ಲಿ ನೆಮ್ಮದಿ ಕಾಣಬಹುದು. ಕೃಷಿಯ ಬಗೆಗಿನ ಕಷ್ಟ ಸುಖಗಳ ಬಗ್ಗೆ ಮಾತನಾಡುವ ಪ್ರಕ್ರಿಯೆಯೂ ಶುರುವಾಗಬೇಕು ಎಂದ ಕೆದಿಲಾಯವರವರು ಸುದ್ದಿಯವರು ಕೃಷಿ ಬಗೆಗಿನ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಅತೀವ ಖುಷಿ ನೀಡಿದೆ ಎಂದು ಹೇಳಿದರು.

ತಳ ಮಟ್ಟದಲ್ಲೇ ಕೃಷಿಕರಿಗೆ ಮಾಹಿತಿ-ಸುದ್ದಿ ಬಳಗಕ್ಕೆ ಅಭಿನಂದನೆ -ಕಣ್ಣಾರಾಯ: ಕೃಷಿಕರಾದ ಬಾಲಕೃಷ್ಣ ಕಣ್ಣಾರಾಯ ಮಾತನಾಡಿ ಕೃಷಿಕರು ಇಲಾಖೆ ಬಗೆಗಿನ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿದ್ದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಪರದಾಟ ನಡೆಸುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ತಳ ಮಟ್ಟದಲ್ಲೇ ಕೃಷಿಕರಿಗೆ ಮಾಹಿತಿ ನೀಡುವ ಹೊಸ ಯೋಜನೆ ಹಮ್ಮಿಕೊಂಡಿರುವ ಡಾ.ಯು.ಪಿ ಶಿವಾನಂದ ಮತ್ತು ಬಳಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಸುದ್ದಿ ಕಾರ‍್ಯ ಯಶಸ್ಸು ಕಾಣಲಿದೆ-ಮುಲಾರ್: ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ಡಾ.ಯು.ಪಿ ಶಿವಾನಂದರು ಯಾವುದೇ ಯೋಜನೆ, ಕಾರ್ಯಕ್ರಮ ಹಮ್ಮಿಕೊಂಡರೂ ಅದು ಯಶಸ್ಸು ಸಾಧಿಸುತ್ತದೆ. ಕೃಷಿ ಬಗ್ಗೆ ಸ್ಥಳೀಯವಾಗಿಯೇ ಮಾಹಿತಿ ನೀಡುವ ಸುದ್ದಿಯ ಕಾರ್ಯ ಯಶಸ್ಸು ಕಾಣಲಿದೆ ಎಂದು ಹೇಳಿದರು.

ಕೃಷಿಕರಾದ ರಕ್ಷಿತ್, ಅಶೋಕ್ ಮತ್ತಿತರರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ನೇರೋಳ್ತಡ್ಕ, ಸುಧಾಕರ ರಾವ್, ಶಶಿಧರ ಕೆ ಮಾವಿನಕಟ್ಟೆ, ಗಣೇಶ್, ಉಮ್ಮರ್ ಪಟ್ಟೆ, ಅಣ್ಣಿ ಪೂಜಾರಿ ಹಿಂದಾರು, ಪದ್ಮನಾಭ ನಾಯ್ಕ, ರಾಧಾಕೃಷ್ಣ ಪುತ್ತೂರಾಯ, ಬಾಲಕೃಷ್ಣ ಶೆಟ್ಟಿ ಪಟ್ಟೆ ಉಪಸ್ಥಿತರಿದ್ದರು.

ಸುದ್ದಿ ಬಿಡುಗಡೆ ವರದಿಗಾರ ಯೂಸು- ರೆಂಜಲಾಡಿ ಸ್ವಾಗತಿಸಿ ವಂದಿಸಿದರು.

ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರದ ರಾಜೇಶ್ ಎಂ.ಎಸ್, ಶಿವಕುಮಾರ್ ಈಶ್ವರಮಂಗಲ, ಕುಶಾಲಪ್ಪ, ದಿಲ್ಶನ್ ಕುಂಬ್ರ, ಹರಿಣಾಕ್ಷಿ ಬರೆಪ್ಪಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.