ಪುತ್ತೂರು ಮೂಲದ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವು ಪ್ರಕರಣ

0

ಉಡುಪಿ ಎಸ್ಪಿ, ಕುಂದಾಪುರ ಡಿವೈಎಸ್ಪಿ ನೇತೃತ್ವದ 4 ತಂಡ ರಚನೆ
ಕೇರಳ, ಗೋವಾ, ಕರ್ನಾಟಕದ ಹಲವೆಡೆ ಮುಂದುವರಿದ ಪೊಲೀಸ್ ತನಿಖೆ
ಆತ್ಮಹತ್ಯೆಯೇ, ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆಯೇ ಎಂದೂ ತನಿಖೆ

ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಇನ್ಸ್‌ಪೆಕ್ಟರ್‌ಗಳಾದ ಶ್ರೀಧರ್, ಪ್ರಸಾದ್, ಪವನ್
ತಂಡದಿಂದ ಕಾರ್ಯಾಚರಣೆ: ಬದಿಯಡ್ಕ ಎಸ್.ಐ. ವಿನೋದ್ ನೇತೃತ್ವದಲ್ಲಿ ಹಲವರ ವಿಚಾರಣೆ

ಪುತ್ತೂರು: ಮೂಲತಃ ಪುತ್ತೂರಿನವರಾಗಿದ್ದು ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಸುಮಾರು 30 ವರ್ಷಗಳಿಂದ ಹೆಸರಾಂತ ದಂತ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ (57 )ರವರು ಕುಂದಾಪುರದಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆಯ ತನಿಖೆ ಮುಂದುವರಿದಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮತ್ತು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸರ ನಾಲ್ಕು ತಂಡ ರಚಿಸಲಾಗಿದ್ದು ಕೇರಳ, ಗೋವಾ ಮತ್ತು ಕರ್ನಾಟಕದ ಹಲವೆಡೆ ತನಿಖೆ ಮುಂದುವರಿದಿದೆ. ಡಾ.ಕೃಷ್ಣಮೂರ್ತಿಯವರ ನಿಗೂಢ ಸಾವಿಗೆ ಸಂಬಂಧಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ನಾಪತ್ತೆ ಕೇಸ್ ದಾಖಲಿಸಿಕೊಂಡಿದ್ದ ಕಾಸರಗೋಡು ಬದಿಯಡ್ಕ ಠಾಣಾ ಪೊಲೀಸರು ಪ್ರತ್ಯೇಕ ತನಿಖೆ ಮುಂದುವರಿಸಿದ್ದಾರೆ. ಈ ಮಧ್ಯೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮತ್ತು ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಕುಂದಾಪುರದಲ್ಲಿ ಡಿವೈಎಸ್ಪಿಯಾಗಿರುವ ಶ್ರೀಕಾಂತ್‌ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗಾಗಿ ಪೊಲೀಸರ ನಾಲ್ಕು ತಂಡ ರಚಿಸಿದ್ದಾರೆ. ಕುಂದಾಪುರ ಕಂಡ್ಲೂರು ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ಕೇರಳದಲ್ಲಿ ಬೀಡು ಬಿಟ್ಟಿದ್ದು ಕಾಸರಗೋಡು, ಬದಿಯಡ್ಕ ಪರಿಸರದಲ್ಲಿ ತನಿಖೆ ನಡೆಸುತ್ತಿದೆ. ಸಬ್‌ಇನ್ಸ್‌ಪೆಕ್ಟರ್‌ಗಳಾದ ಶ್ರೀಧರ ನಾಯಕ್, ಪ್ರಸಾದ್ ಮತ್ತು ಪವನ್ ಅವರ ತಂಡ ಪ್ರತ್ಯೇಕವಾಗಿ ಕಾರ್ಯಾಚರಣೆಗಿಳಿದಿದ್ದು ಗೋವಾ ಮತ್ತು ಕರ್ನಾಟಕದ ವಿವಿದೆಡೆ ತನಿಖೆ ಮುಂದುವರಿಸಿದೆ. ಹಲವೆಡೆ ಸಿ.ಸಿ. ಟಿ.ವಿ. ಪರಿಶೀಲನೆಯ ಜತೆಗೆ ರೈಲ್ವೇ ಟಿಕೆಟ್ ಪರಿಶೀಲನಾ ಕಾರ್ಯವೂ ನಡೆಯುತ್ತಿದೆ. ಇನ್ನೊಂದೆಡೆ ಬದಿಯಡ್ಕ ಪೊಲೀಸ್ ಠಾಣಾ ಎಸ್.ಐ. ವಿನೋದ್ ನೇತೃತ್ವದಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಡಾ.ಕೃಷ್ಣಮೂರ್ತಿ ನಿಗೂಢ ಸಾವಿನ ಪ್ರಕರಣದ ತನಿಖೆಗೆ ತಂಡ
ಕಾಸರಗೋಡು ಬದಿಯಡ್ಕದ ತನ್ನ ಕ್ಲಿನಿಕ್‌ನಿಂದ ನ.8ರಂದು ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿಯವರ ಮೃತದೇಹ ಕುಂದಾಪುರದ ಕುತಲ್ಲೂರು ಸಮೀಪದ ರಾಜಾಡಿಯ ಕಡೆಗೆ ತೆರಳುವ ರಸ್ತೆಯಲ್ಲಿನ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿನ ರೈಲು ಹಳಿಯಲ್ಲಿ ಎರಡು ಭಾಗವಾದ ಸ್ಥಿತಿಯಲ್ಲಿ ನ.10 ರಂದು ಪತ್ತೆಯಾಗಿದ್ದ ಘಟನೆಯ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಡಾ. ಕೃಷ್ಣಮೂರ್ತಿಯವರ ದೇಹದ ತಲೆ ಭಾಗ ಒಂದು ಕಡೆ ಮತ್ತು ಅಲ್ಲಿಂದ 50 ಮೀಟರ್ ದೂರದಲ್ಲಿ ದೇಹದ ಉಳಿದ ಭಾಗ ಪತ್ತೆಯಾಗಿದ್ದ ಬಗ್ಗೆ ರೈಲ್ವೇ ಟ್ರ್ಯಾಕ್‌ಮೆನ್ ಗಣೇಶ ಕೆ. ನೀಡಿದ ದೂರಿನಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಕುಂದಾಪುರ ಕಂಡ್ಲೂರು ಗ್ರಾಮಾಂತರ ಠಾಣೆಯ ಪೊಲೀಸರ ಒಂದು ತಂಡ ಬದಿಯಡ್ಕದಿಂದ ಸುಮಾರು 180-190 ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಡಾ. ಕೃಷ್ಣಮೂರ್ತಿ ಹೇಗೆ ಬಂದರು ಎಂಬುದರ ಕುರಿತು ಮಾಹಿತಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದೆ. ಕುಂದಾಪುರಕ್ಕೆ ರೈಲು, ಬಸ್ ಅಥವಾ ಬೇರೆ ಯಾವ ವಾಹನಗಳಲ್ಲಿ ಬಂದರೇ, ರೈಲಿನಲ್ಲಿ ಬಂದಿದ್ದರೂ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ 12 ಕಿಲೋ ಮೀಟರ್ ದೂರದ ಹಟ್ಟಿಯಂಗಡಿಯ ಸ್ಥಳಕ್ಕೆ ನಡೆದುಕೊಂಡೇ ಬಂದರೇ, ರಾತ್ರಿ ವೇಳೆ ಮೊಬೈಲ್ ಫೋನ್ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ ಎಂದು ಇನ್ನೊಂದು ತಂಡ ತನಿಖೆ ನಡೆಸುತ್ತಿದೆ. ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣ, ಕುಂದಾಪುರ ಬಸ್ ನಿಲ್ದಾಣ, ಶಾಸ್ತ್ರಿ ಸರ್ಕಲ್, ಕೊಲ್ಲೂರು, ತಲ್ಲೂರು ಜಂಕ್ಷನ್ ಸಹಿತ ವಿವಿದೆಡೆ ಶೋಧ ನಡೆಸಿರುವ ಈ ತಂಡ ರೈಲ್ವೇ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿದೆ. ಇನ್ನೊಂದು ತಂಡ ಗೋವಾಕ್ಕೆ ತೆರಳಿದ್ದು ರೈಲ್ವೇ ಟಿಕೆಟ್‌ಗೆ ಸಂಬಂಧಿಸಿದ ಶೋಧ ಕಾರ್ಯ ನಡೆಸಿದೆ.


ನ.8ರಂದು ಬೆಳಗ್ಗೆ 8ರ ಸುಮಾರಿಗೆ ಡಾ. ಕೃಷ್ಣಮೂರ್ತಿ ಅವರು ತಮ್ಮ ಕ್ಲಿನಿಕ್‌ಗೆ ಬಂದು ಎಂದಿನಂತೆ ಕೆಲಸ ಆರಂಭಿಸಿದ್ದರು. ಬೆಳಗ್ಗೆ 11ರ ಸುಮಾರಿಗೆ ಕ್ಲಿನಿಕ್‌ಗೆ ತಪಾಸಣೆಗೆಂದು ಮುಸ್ಲಿಂ ಯುವತಿಯೊಬ್ಬಳು ಬಂದಿದ್ದರು. ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಡಾ.ಕೃಷ್ಣಮೂರ್ತಿ ಮೇಲೆ ಗುಂಪೊಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿತ್ತು. ಈ ವೇಳೆ ಅಲ್ಲಿದ್ದವರು ತಡೆದಿದ್ದರು. ಇದಲ್ಲದೆ ವೈದ್ಯರ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುವುದಾಗಿಯೂ ಬೆದರಿಸಿತ್ತು. ನ.8ರಂದು ಮಧ್ಯಾಹ್ನ ತನ್ನ ಕ್ಲಿನಿಕ್‌ನಲ್ಲಿ ಮೊಬೈಲ್ ಫೋನ್ ಬಿಟ್ಟು ಹೋಗಿದ್ದ ಡಾ.ಕೃಷ್ಣಮೂರ್ತಿಯವರು ಮಧ್ಯಾಹ್ನ 12 ಗಂಟೆಗೆ ಬೈಕನ್ನು ಬದಿಯಡ್ಕ ಪೇಟೆಯಲ್ಲಿಟ್ಟು ಬಳಿಕ ನಾಪತ್ತೆಯಾಗಿದ್ದಾರೆ ಎಂದು ಕ್ಲಿನಿಕ್‌ನ ಕಂಪೌಂಡರ್ ಸಿ.ಎಚ್. ಪರಮೇಶ್ವರ ಭಟ್ ನೀಡಿದ ಮಾಹಿತಿಯ ಆಧಾರದಲ್ಲಿ ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬದಿಯಡ್ಕ ಠಾಣಾ ಎಸ್.ಐ. ವಿನೋದ್ ನೇತೃತ್ವದ ತಂಡ ಹಲವರನ್ನು ವಿಚಾರಣೆಗೊಳಪಡಿಸಿದೆ. ಕ್ಲಿನಿಕ್‌ನಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಡಾ.ಕೃಷ್ಣಮೂರ್ತಿಯವರ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಬದಿಯಡ್ಕ ಪೊಲೀಸ್ ಠಾಣಾ ಎಸ್.ಐ. ವಿನೋದ್ ನೇತೃತ್ವದ ಪೊಲೀಸರು ಡಾ.ಕೃಷ್ಣಮೂರ್ತಿಯವರ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡು ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂಲೀಗ್ ಪದಾಧಿಕಾರಿ ಆಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ಬದಿಯಡ್ಕ ಮತ್ತು ಕುಂದಾಪುರಪೊಲೀಸರು ತಾವು ನಡೆಸುತ್ತಿರುವ ಕಾರ್ಯಾಚರಣೆಯ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡು ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಮೇಲಾಧಿಕಾರಿಗಳಿಂದ ಮಾಹಿತಿ ಸಂಗ್ರಹ; ಆತ್ಮಹತ್ಯೆಯೇ, ವ್ಯವಸ್ಥಿತ ಕೊಲೆಯೇ ಎಂದೂ ತನಿಖೆ
ಡಾ. ಕೃಷ್ಣಮೂರ್ತಿ ಅವರು ಮುಸ್ಲಿಂ ಯುವತಿಗೆ ತನ್ನ ಕ್ಲಿನಿಕ್‌ನಲ್ಲಿ ಕಿರುಕುಳ ನೀಡಿದರೆಂಬ ಆರೋಪ ಎದುರಿಸಿರುವುದು ಅವರ ಸಾವಿಗೆ ಕಾರಣ ಆಯಿತೇ ಎಂಬುದರ ಕುರಿತು ತನಿಖಾಧಿಕಾರಿಗಳಿಂದ ಮೇಲಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ 6 ತಿಂಗಳುಗಳಿಂದ ಡಾ. ಕೃಷ್ಣಮೂರ್ತಿ ಅವರು ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಅನುಭವಿಸುತ್ತಿದ್ದರು. ಜಾಗವನ್ನು ತಮಗೇ ಮಾರಾಟ ಮಾಡಬೇಕೆಂದು ಕೆಲವರು ನಿರಂತರ ಒತ್ತಾಯಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಈ ವಿಚಾರದಿಂದ ವೈದ್ಯರು ನೊಂದಿದ್ದರು ಎಂಬ ವಿಷಯದ ಕುರಿತು ಮಾಹಿತಿ ಸಂಗ್ರಹಿಸಿರುವ ಮೇಲಾಧಿಕಾರಿಗಳು ಡಾ.ಕೃಷ್ಣಮೂರ್ತಿಯವರ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೇ ಎಂಬುದರ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ. ಪುತ್ತೂರಿನ ಖ್ಯಾತ ವೈದ್ಯರುಗಳಾದ ಡಾ. ರಾಮಮೋಹನ್ ಮತ್ತು ಡಾ. ಅರವಿಂದ್ ಅವರ ಸಹೋದರರಾಗಿರುವ ಡಾ. ಕೃಷ್ಣಮೂರ್ತಿಯವರ ಪತ್ನಿ, ದರ್ಬೆ ನಿವಾಸಿಯಾಗಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್.ಈಶ್ವರ ಭಟ್ ಅವರ ಪುತ್ರಿ ಪ್ರೀತಿ, ತಂದೆ ಡಾ.ಎಸ್.ಎಸ್.ಭಟ್, ತಾಯಿ ಭಾರತಿ ಮತ್ತು ಪುತ್ರಿ ಎಂ.ಬಿ.ಬಿ.ಯಸ್. ಬಳಿಕ ಉನ್ನತ ಶಿಕ್ಷಣ ಪಡೆಯಲು ತಯಾರಿ ನಡೆಸುತ್ತಿರುವ ವರ್ಷಾರವರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here