ಮೊಟ್ಟೆತ್ತಡ್ಕ-ಕೆಮ್ಮಿಂಜೆ ಸರಕಾರಿ ಶಾಲೆಯ ನೂತನ ಕೊಠಡಿಯ ಲೋಕಾರ್ಪಣೆ

0

ಮಕ್ಕಳು ಉನ್ನತ ಶಿಕ್ಷಣ ಪಡೆದು ಊರಿನ ಅಭಿವೃದ್ಧಿಯಲ್ಲಿ ಪಾಲುದಾರರಾಗಿ-ಮಠಂದೂರು

ಚಿತ್ರ: ಫೊಟೊಶಾಪ್ ಕೋರ್ಟ್‌ರೋಡ್

ಪುತ್ತೂರು: ಅತೀ ಹೆಚ್ಚು ಬುದ್ಧಿವಂತರು, ಪ್ರಜ್ಞಾವಂತರೆನಿಸಿಕೊಂಡ ಜಿಲ್ಲೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಾಗಿದೆ. ಮಕ್ಕಳು ನಮ್ಮ ಊರಿನ ಆಸ್ತಿಯಾಗಬೇಕು. ಉನ್ನತ ಶಿಕ್ಷಣ ಪಡೆದು ವಿದೇಶಕ್ಕೋ ಅಥವಾ ಇನ್ನಿತರ ರಾಜ್ಯಕ್ಕೆ ಹೋಗಿ ವಾಸ್ತವ್ಯ ಹೂಡುವುದರ ಬದಲು ನಮ್ಮ ಊರಿನಲ್ಲಿಯೇ ನೆಲೆ ನಿಂತು ಉದ್ಯೋಗದಾತರಾಗಿ, ಊರಿನ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕೆಮ್ಮಿಂಜೆ, ದರ್ಬೆ, ಪುತ್ತೂರು ಇಲ್ಲಿ ನ.14 ಮಕ್ಕಳ ದಿನಾಚರಣೆಯ ದಿನದಂದು ಎನ್.ಎಂ.ಪಿ.ಟಿಯ ಸಿ.ಎಸ್.ಆರ್ ಅನುದಾನದಡಿಯಲ್ಲಿ ನಿರ್ಮಿಸಿರುವ ನೂತನ ಶಾಲಾ ಕೊಠಡಿಯ ಲೋಕಾರ್ಪಣಾ ಸಮಾರಂಭದಲ್ಲಿ ಅವರು ನೂತನ ಶಾಲಾ ಕೊಠಡಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದಾಗ ನಮ್ಮ ಭಾರತದ ಜನಸಂಖ್ಯೆ 32 ಕೋಟಿ, ಸಾಕ್ಷರತೆ ಶೇ15 ರಿಂದ 20. ಈಗ 135 ಕೋಟಿ ಜನಸಂಖ್ಯೆ, ಸಾಕ್ಷರತೆ ಶೇ.99 ಆಗಿದೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆದರೆ ಮಕ್ಕಳಿಗೆ ಬೋಧಿಸುವ ಮೆರಿಟ್ ಅಧ್ಯಾಪಕರು ಇಲ್ಲಿದ್ದಾರೆ. ಖಾಸಗಿ ಶಾಲೆಗಳಲ್ಲಿ ಬುದ್ಧಿವಂತ ಮಕ್ಕಳ ಸಂಖ್ಯೆ ಜಾಸ್ತಿ ಇದ್ದರೆ ಮೆರಿಟ್ ಅಧ್ಯಾಪಕರಿಲ್ಲ ಎಂಬುದೇ ದೌರ್ಭಾಗ್ಯ. 111 ಸರಕಾರಿ ಶಾಲೆಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳು ತುಂಬಾ ಸ್ಮಾರ್ಟ್ ಆಗಿ ಬೆಳೆದು ಜ್ಞಾನವಂತರಾಗಬೇಕು ಎಂದ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ಈ ಶಾಲೆಯಲ್ಲಿ ಪ್ರೌಢಶಿಕ್ಷಣದೊಂದಿಗೆ ಪರಿವರ್ತನೆಯಾಗವಹುದು ಎನ್‌ಎಂಪಿಟಿಯ ಸಂಸ್ಥೆಯು ಅದರ ಲಾಭದ ಒಂದಂಶವನ್ನು ಕಾರ್ಪಸ್ ಫಂಡ್ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು, ಈ ಶಾಲೆಗೆ ರೂ.14.50 ಲಕ್ಷ ಹಣವನ್ನು ನೂತನ ಕೊಠಡಿಗೆ ವಿನಿಯೋಗಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಅಕ್ಷಯ ಕಾಲೇಜಿನಲ್ಲಿ ಪ್ರತಿಭಾನ್ವಿತರಿಗೆ, ಬಡ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ-ಜಯಂತ್ ನಡುಬೈಲು:

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಅಕ್ಷಯ ಗ್ರೂಪ್ ಇದರ ಮುಖ್ಯಸ್ಥ ಜಯಂತ್ ನಡುಬೈಲು ಮಾತನಾಡಿ, ಕೆಮ್ಮಿಂಜೆ ಶಾಲೆ ನನ್ನ ಹತ್ತಿರದ ಶಾಲೆ, ಅಚ್ಚುಮೆಚ್ಚಿನ ಶಾಲೆ. ಇಲ್ಲಿನ ಮಕ್ಕಳು ನಮ್ಮವರು. ಮಕ್ಕಳು ಶಿಕ್ಷಣದಲ್ಲಿ ಗುರಿ ಸಾಧಿಸುವ ಛಲಗಾರಿಕೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಬೇಕು, ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಬೇಕು. ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿದವರು ಮುಂದೊಂದು ದಿನ ಈ ವೇದಿಕೆಯನ್ನು ಅಲಂಕರಿಸಲೂಬಹುದು. ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಗೌರವ ಎನ್ನುವುದು ತಪ್ಪು ಕಲ್ಪನೆ. ಸರಕಾರಿ ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳಿವೆ ಎಂದ ಅವರು ಇಲ್ಲಿಯೇ ಹತ್ತಿರದಲ್ಲಿ ಅಕ್ಷಯ ಕಾಲೇಜಿದೆ. ಶೇ.೯೦ಕ್ಕಿಂತ ಮೇಲ್ಪಟ್ಟು ಅಂಕಗಳನ್ನ ಗಳಿಸಿದ ಎಂಟು ಮಂದಿ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ, ಬಡ ಮಕ್ಕಳಿಗೆ ಅರ್ಧದಷ್ಟು ಶುಲ್ಕ ನಮ್ಮ ಅಕ್ಷಯ ಕಾಲೇಜಿನಲ್ಲಿ ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಕ್ಲಾಸ್‌ರೂಂ ಶಾಸಕರ ವಿಶೇಷ ಕೊಡುಗೆ-ಶಶಿಕಲಾ:

ಸಿಆರ್‌ಪಿ ಶಶಿಕಲಾರವರು ಮಾತನಾಡಿ, ಇತ್ತೀಚೆಗೆ ಶಾಸಕರ ನೇತೃತ್ವದಲ್ಲಿ ಎಪಿಎಂಸಿಯಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗಳ ಉದ್ಘಾಟನೆಯಾಗಿತ್ತು. ಶಾಸಕರ ಉದ್ಧೇಶ ಸರಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವುದಾಗಿತ್ತು. ಅಲ್ಲದೆ ಶಾಸಕರು ಬೇರೆ ಬೇರೆ ಇಲಾಖೆಯ ಅನುದಾನಗಳನ್ನು ಸರಕಾರಿ ಶಾಲೆಯ ಅಭಿವೃದ್ಧಿಗೆ ಬಳಸಿಕೊಂಡು ಮನೆಮಾತಾಗಿದ್ದಾರೆ. ಒಂದರ್ಥದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್‌ರೂಂ ಬಗ್ಗೆ ಶಾಸಕರ ಕೊಡುಗೆ ಮಹತ್ವಪೂರ್ಣವುಳ್ಳದ್ದಾಗಿದೆ. ಸರಕಾರಿ ಶಾಲೆಯ ಮಕ್ಕಳೂ ಇದರಿಂದ ಪ್ರಯೋಜನ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲಿ ಎನ್ನುವುದೇ ಉದ್ಧೇಶವಾಗಿದೆ ಎಂದರು.

ಗೌರವಾರ್ಪಣೆ:

ಶಾಲೆಗೆ ಅಂಚಿತ್ ರಂಗಮಂದಿರ ಹಾಗೂ ಶೌಚಾಲಯದ ಮೇಲ್ಛಾವಣಿ ನಿರ್ಮಾಣ ಹಾಗೂ ಶಾಲೆಗೆ ಪೇಂಯ್ಟಿಂಗ್ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದ ಉದ್ಯಮಿ ಜಯಂತ್ ನಡುಬೈಲು, ಸೇವಾವಧಿಯಲ್ಲಿ ನೂತನ ಕಟ್ಟಡ ನಿರ್ಮಾಣದ ಪ್ರಸ್ತಾಪವನ್ನಿರಿಸಿ ಅದನ್ನು ದೊರಕಿಸಿಕೊಡುವಲ್ಲಿ ಶ್ರಮ ವಹಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಕೆ, ಶಾಲಾ ಎಸ್‌ಡಿಎಂಸಿ ಮಾಜಿ ಸದಸ್ಯರೂ, ಶಾಲಾ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಅಮೃತಾ ಸ್ಟೋರ್‌ನ ಉಮೇಶ್, ಅಮೃತಾ ಫ್ಯಾನ್ಸಿಯ ಗಣೇಶ್ ಆಚಾರ್ಯ, 2021-22ನೇ ಸಾಲಿನಲ್ಲಿ ಶಾಲೆಯ ಗ್ರಂಥಾಲಯಕ್ಕೆ ಸುಮಾರು 500ರಷ್ಟು ಪುಸ್ತಕಗಳನ್ನು ಜಿಲ್ಲಾ ಕೇಂದ್ರ ಗ್ರಂಥಾಲಯ ಇಲ್ಲಿಂದ ಉಚಿತವಾಗಿ ಕೊಡುವಲ್ಲಿ ಶ್ರಮಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ಎಂ.ಕೆ, ಎನ್‌ಎಂಪಿಟಿಯಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಒದಗಿಸುವಲ್ಲಿ ಸಹಕರಿಸಿದ ಮಂಗಳೂರು ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಲಿ.ನ ಸೇಲ್ಸ್ ಅಸೋಸಿಯೇಟ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌ರವರ ಸಹೋದರ ಮನೋಹರ್, ಶಾಲಾ ಪೋಷಕರು, ಹಿತ ಚಿಂತಕರು ಸದಾ ಸಹಕಾರ ನೀಡುವ ಮಜಲು ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಮಣಿಯವರ ಬದಲಿಗೆ ಅವರ ಪುತ್ರನಿಗೆ, ಮಣ್ಣಾಪು ಶ್ರೀ ವಿನಾಯಕ ಯುವಕ ಮಂಡಲದ ಸದಸ್ಯರಿಗೆ, ಕಟ್ಟಡ ನಿರ್ಮಾಣದ ಆರಂಭದಿಂದ ಕೊನೆಯವರೆಗೂ ಎನ್‌ಎಂಪಿಟಿಯವರೊಂದಿಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಿದ ಶಾಲಾ ಸಹ ಶಿಕ್ಷಕಿ ಸುಮತಿ ಎ.ಆರ್, ಶಾಲಾ ಅಡುಗೆಯವರಾದ ಮಾಲತಿ, ಅಪೋಲಿನ್ ಡಿ’ಸೋಜ, ಪುಷ್ಪಾವತಿಯವರಿಗೆ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಶಾಲಾ ಮುಖ್ಯೋಪಾಧ್ಯಾಯ ಎಸ್.ಸಂತೋಷ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕೆ. ಸ್ವಾಗತಿಸಿ, ಶಿಕ್ಷಕಿ ಸೌಮ್ಯಲತಾ ವಂದಿಸಿದರು. ಶಾಲಾ ನಾಯಕ ಪುನೀತ್, ವಿದ್ಯಾರ್ಥಿಗಳಾದ ಆಶಿತಾ, ತನುಶ್ರೀ, ಮೋಕ್ಷ, ಮಧುಸೂದನ್, ವೈಭವ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಶಿಕ್ಷಕಿಯರಾದ ಸುಮತಿ ಎ.ಆರ್, ಅರ್ಚನಾ ಬಿ.ಆರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕಿ ಕಸ್ತೂರಿ, ಸಹಾಯಕ ಶಿಕ್ಷಕರಾದ ಸುಧಾ ಕೆ, ಆಗ್ನೇಶ್ ಸಿಂತಿಯಾ ಡಿ’ಸಿಲ್ವ, ಸೌಮ್ಯಲತಾ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದೀಪಾ, ಸದಸ್ಯರುಗಳಾದ ನವೀನ್ ಚಂದ್ರ, ಗಣೇಶ ಎಂ, ಸದಾಶಿವ ಕೆ.ಎಂ, ಪ್ರಭಾಕರ, ಮೋಹನ, ದಯಾನಂದ, ಕಿಟ್ಟು, ಚಂದಪ್ಪ, ಅಶೋಕ್, ಗಣಪತಿ ಭಂಡಾರ್ಕರ್,ಸುಮಿತ್ರಾ, ಸವೀತಾ ನಾಗರಾಜು, ಸುಶೀಲ, ಲೀಲಾ, ಮುಕ್ತರಿಬಾನುರವರು ಸಹಕರಿಸಿದರು.

ಅನುದಾನವಿತ್ತ ಎನ್‌ಎಂಪಿಟಿ ಸಂಸ್ಥೆಗೆ ಕೃತಜ್ಞತೆ…

ಮಕ್ಕಳ ದಿನಾಚರಣೆ ಸಂದರ್ಭದಂದು ಮಕ್ಕಳ ವಿದ್ಯಾಭ್ಯಾಸದ ನೂತನ ಕೊಠಡಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷವಾಗಿದೆ. ಕಳೆದ ಮೂರು ತಿಂಗಳುಗಳಿಂದ ಇದರ ಉದ್ಘಾಟನೆಯನ್ನು ಮಾಡಬೇಕು ಎಂದು ಕಾಯುತ್ತಿದ್ದೆವು. ಶಾಸಕರೇ ಇದರ ಉದ್ಘಾಟನೆಯನ್ನು ನೆರವೇರಿಸಬೇಕು ಎಂಬುದು ನಮ್ಮ ಆಶಯವಾಗಿತ್ತು. ಪ್ರಯತ್ನ ಪಟ್ಟರೆ ಫಲ ಖಂಡಿತಾ ಸಿಗುತ್ತದೆ. ಶಾಲೆಯ ಅಭಿವೃದ್ಧಿ ಹಿಂದೆ ಹಲವಾರು ಮಂದಿ ದುಡಿದಿದ್ದಾರೆ. ತುಂಬಾ ಜನರ ಶ್ರಮ, ಯೋಚನೆಗಳಿಂದ ಇಂದು ಯಶಸ್ವಿ ಹಂತಕ್ಕೆ ಬಂದಿದ್ದೇವೆ. ಈ ಕಟ್ಟಡದ ಕಾಮಗಾರಿಯನ್ನು ಇಂಜಿನಿಯರ್ ರಾಜಶೇಖರ್‌ರವರು ಅತ್ಯಂತ ಕಡಿಮೆ ಅವಧಿಯಲ್ಲಿ, ಕಡಿಮೆ ಬಜೆಟ್ಟಿನಲ್ಲಿ ನಿರ್ಮಿಸಿಕೊಟ್ಟಿರುತ್ತಾರೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಶಾಲೆಯು ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ ಹೊಂದುವಂತಹ ಸಮಯದಲ್ಲೂ ಶಾಸಕರೇ ಉದ್ಘಾಟನೆ ಮಾಡಬೇಕು. ಜೊತೆಗೆ ಈ ಕಟ್ಟಡಕ್ಕೆ ಅನುದಾನ ನೀಡಿದ ಎನ್‌ಎಂಪಿಟಿ ಸಂಸ್ಥೆಗೆ ತಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

-ಮೋಹನ್ ಕೆ, ಅಧ್ಯಕ್ಷರು, ಶಾಲಾ ಎಸ್‌ಡಿಎಂಸಿ ಸಮಿತಿ

ಸನ್ಮಾನ..

ನೂತನ ಕೊಠಡಿ ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತು ಅದನ್ನು ಕ್ಲಪ್ತ ಸಮಯದಲ್ಲಿ ನಿರ್ಮಾಣ ಕಾರ್ಯವನ್ನು ಮುಗಿಸಿ ಕಟ್ಟಡವನ್ನು ಹಸ್ತಾಂತರಿಸಿದ ಕಟ್ಟಡದ ಗುತ್ತಿಗೆದಾರರಾದ ಸೂರ್ಯ ಕನ್ಸಲ್ಟೆಂಟ್‌ನ ರಾಜಶೇಖರ್‌ರವರನ್ನು ಮತ್ತು ಮೊಟ್ಟೆತ್ತಡ್ಕ ಶಾಲೆಗೆ ಪ್ರಥಮ ಬಾರಿಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರುರವರನ್ನು ಶಾಲಾ ಹಾಗೂ ಎಸ್‌ಡಿಎಂಸಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಶಾಲಾ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರ ಮುತುವರ್ಜಿ…

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕೆ.ರವರ ವಿಶೇಷ ಮುತುವರ್ಜಿಯಿಂದ ಶಾಲಾ ಕಟ್ಟಡ ದುರಸ್ತಿಗೆ ರೋಟರಿ ಕ್ಲಬ್ ಪುತ್ತೂರು ಸಿಟಿಯಿಂದ ರೂ.50 ಸಾವಿರ ಅನುದಾನ, ಜೇಸಿಐ ಪುತ್ತೂರು ವತಿಯಿಂದ ಗ್ರಂಥಾಲಯಕ್ಕೆ ರೂ.40 ಸಾವಿರ ವೆಚ್ಚದಲ್ಲಿ ಕಪಾಟುಗಳ ಕೊಡುಗೆ, ಮರೀಲು ದಿ ಪುತ್ತೂರು ಕ್ಲಬ್‌ನಿಂದ ಸಿ.ಸಿ ಟಿವಿಗಳ ಕೊಡುಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ರೂ.35 ಸಾವಿರ ರೂ.ಗಳ ಶುದ್ಧ ಕುಡಿಯುವ ನೀರಿನ ಘಟಕ, ಕರ್ನಾಟಕ ಸರಕಾರದ ಅನುದಾನದಲ್ಲಿ ಮಾನ್ಯ ಶಾಸಕರ ಶಿಫಾರಸ್ಸಿನ ಮೇರೆಗೆ ರೂ.3,10,000 ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಆರ್.ಒ ಪ್ಲ್ಯಾಂಟಿಗೆ ಅನುದಾನ, ಜೆಸಿಐ ಪುತ್ತೂರಿನ ಸಹಯೋಗದೊಂದಿಗೆ ವಿಶೇಷ ಹಣ್ಣುಗಳ ಗಿಡ ನೆಡುವಿಕೆ ಹಾಗೂ ಶಿಕ್ಷಕರಿಗೆ ಮತ್ತು ಪೋಷಕರಿಗೆ ವ್ಗಕ್ತಿತ್ವ ವಿಕಸನ ತರಬೇತಿ ಮುಂತಾದುವುಗಳು ಒದಗಿ ಬಂದಿರುತ್ತದೆ.

LEAVE A REPLY

Please enter your comment!
Please enter your name here