ಸಂಗಮ ಕ್ಷೇತ್ರದಲ್ಲೇ ಕಲುಷಿತಗೊಳ್ಳುತ್ತಿದೆ ಜೀವನದಿ

0

ಉಪ್ಪಿನಂಗಡಿ ಗ್ರಾ.ಪಂ.ನ ಇಬ್ಬಗೆ ನೀತಿಯಿಂದ ನೇತ್ರಾವತಿ ಮಲೀನ

ಉಪ್ಪಿನಂಗಡಿ: ಇಂಗು ಗುಂಡಿ ಇಲ್ಲವೆಂದು ಕೆಲವು ಬಡಪಾಯಿ ಮನೆಯವರ ಕುಡಿಯುವ ನೀರಿನ ಸಂಪರ್ಕವನ್ನೇ ಕಡಿತಗೊಳಿಸುವ ಕಠಿಣ ನಿಲುವು ತೋರಿದ್ದ ಉಪ್ಪಿನಂಗಡಿ ಗ್ರಾ.ಪಂ. ತನ್ನ ತ್ಯಾಜ್ಯ ಘಟಕದಿಂದಲೇ ಮಲಿನ ನೀರನ್ನು ನೇತ್ರಾವತಿ ನದಿಗೆ ಬಿಡುವುದಲ್ಲದೆ, ದೊಡ್ಡ ದೊಡ್ಡ ವಸತಿ ಸಂಕೀರ್ಣದಿಂದ ಮಲಿನ ನೀರು ನೇತ್ರಾವತಿಯ ಒಡಲು ಸೇರುವಾಗ ಜಾಣ ಕುರುಡು ಅನುಸರಿಸುವ ಮೂಲಕ ಇಬ್ಬಗೆಯ ನೀತಿ ತೋರುತ್ತಿರುವ ಆರೋಪ ಕೇಳಿ ಬರುತ್ತಿದೆ.

ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಸೇತುವೆಯ ಮೂಲಕ ನದಿಗೆ ತ್ಯಾಜ್ಯ ಎಸೆಯುವುದು. ಕೋಳಿ, ಹಂದಿ, ಆಡು ಸಾಗಾಟದ ಕೆಲ ವಾಹನಗಳವರು ಸತ್ತ ಕೋಳಿ, ಹಂದಿ ಸೇರಿದಂತೆ ಪ್ರಾಣಿಗಳನ್ನು ನದಿಗೆ ಎಸೆಯುವುದು. ಮಲಿನ ನೀರನ್ನು ನದಿಗೆ ಹರಿಸುವುದು ಹೀಗೆ ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯನ್ನು ಮಲಿನಗೊಳಿಸುವ ಕೆಲಸ ಉಪ್ಪಿನಂಗಡಿಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ.

ಗುಬ್ಬಿ ಮೇಲೆ ಬ್ರಹ್ಮಾಸವೇ!?: ಇಂಗು ಗುಂಡಿಯಿಲ್ಲದೆ ಮಲಿನ ನೀರು ಚರಂಡಿಗೆ ಬಿಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಉಪ್ಪಿನಂಗಡಿ ಗ್ರಾ.ಪಂ. ಕೆಲವು ಬಡಪಾಯಿಗಳ ಕುಡಿಯುವ ನೀರಿನ ಸಂಪರ್ಕವನ್ನೇ ಕಡಿತಗೊಳಿಸಿತ್ತು. ಬಾರ್‌ವೊಂದಕ್ಕೆ ದಂಡವನ್ನೂ ವಿಧಿಸಲಾಗಿತ್ತು. ಹಾಗೆ ಮಾಡಿದಾಗ ಹಲವರು ಇಂಗುಗುಂಡಿಗಳನ್ನು ಮಾಡಿದ್ದರು. ಆದರೆ ಗ್ರಾ.ಪಂ.ನ ತ್ಯಾಜ್ಯ ಘಟಕದಿಂದಲೇ ಕಟ್ಟಡದ ಮಲಿನ ಮಾತ್ರ ನೇರವಾಗಿ ನೇತ್ರಾವತಿಯ ಒಡಲನ್ನು ಸೇರುತ್ತಿದೆ. ಕೂಟೇಲುವಿನಿಂದ ಹಿಡಿದು ಸಂಗಮ ಕ್ಷೇತ್ರದವರೆಗೂ ಅಲ್ಲಲ್ಲಿ ಮಲಿನ ನೀರು ನೇತ್ರಾವತಿ ನದಿಯನ್ನು ಸೇರಿಕೊಳ್ಳುತ್ತದೆ. ಆದರೆ ಗ್ರಾ.ಪಂ.ನ ಕಾನೂನು ಕ್ರಮವೆನ್ನುವುದು ‘ಗುಬ್ಬಿ ಮೇಲೆ ಬ್ರಹ್ಮಾಸ’ ಎಂಬ ಗಾದೆಯಂತೆ ಕೇವಲ ಬಡಪಾಯಿಗಳಿಗೆ ಮಾತ್ರ ಸೀಮಿತವಾದಂತಿದೆ. ವಸತಿ, ವಾಣಿಜ್ಯ ಸಂಕೀರ್ಣ, ಹೊಟೇಲ್, ರೆಸ್ಟೋರೆಂಟ್‌ಗಳು ಇಂಗು ಗುಂಡಿಯನ್ನು ನಿರ್ಮಿಸಿದ್ದಲ್ಲಿ ಮಾತ್ರ ಅದಕ್ಕೆ ಪರವಾನಿಗೆ ನೀಡಬೇಕೆಂಬ ನಿಯಮವಿದ್ದರೂ, ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಮಾತ್ರ ಅದನ್ನು ಗಾಳಿಗೆ ತೂರಲಾಗಿದೆ. ಇಲ್ಲಿ ಈ ನಿಯಮ ಅನ್ವಯಿಸೋದು ಓರ್ವ ಬಡಪಾಯಿ ಮನೆ ಕಟ್ಟಿಸುವಾಗ ಮಾತ್ರ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಾವಿತ್ರ್ಯತೆಯಲ್ಲಿ ದಕ್ಷಿಣದ ಗಂಗೆ ಎನಿಸಿಕೊಂಡಿರುವ ಜೀವನದಿ ನೇತ್ರಾವತಿಯು ಮಲಿನತೆಯಲ್ಲಿಯೂ ಉತ್ತರದ ಗಂಗೆಗೆ ಸರಿಸಮಾನವಾಗುವತ್ತ ಹೊರಟಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಜೀವಜಲವನ್ನು ಶುದ್ಧವಾಗಿಟ್ಟುಕೊಳ್ಳುವ ಕೆಲಸವಾಗಬೇಕಿದೆ.

ಗ್ರಾ.ಪಂ. ನ ಅಧೀನದಲ್ಲಿರುವ ವಾಣಿಜ್ಯ ಸಂಕೀರ್ಣ ಸೇರಿದಂತೆ ಇನ್ನಿತರ ಘಟಕಗಳಿಂದ ಮಲಿನ ನೀರು ನದಿ ಸೇರದಂತೆ ಗ್ರಾ.ಪಂ. ಮೊದಲಾಗಿ ನೋಡಿಕೊಳ್ಳಬೇಕು. ಆ ಬಳಿಕ ನದಿ ನೀರನ್ನು ಮಲಿನಗೊಳಿಸದ ಹಾಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಆ ಬಳಿಕವೂ ಕೊಳಚೆ ನೀರನ್ನು ನದಿಗೆ ಬಿಟ್ಟರೆ, ಅಂತವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಕ್ರಮ ಅನುಷ್ಠಾನಿಸುವಾಗ ಯಾವುದೇ ತಾರತಮ್ಯ ನೀತಿ ತೋರಬಾರದು. ಇನ್ನು ಪೇಟೆಯ ಜನವಸತಿ ಪ್ರದೇಶದಲ್ಲಿ ಹೆಚ್ಚಿನವರಿಗೆ ಇಂಗು ಗುಂಡಿ ಮಾಡಲು ಜಾಗದ ಸಮಸ್ಯೆ ಇರುತ್ತದೆ. ಆದ್ದರಿಂದ ಜನವಸತಿ ಪ್ರದೇಶದಲ್ಲಿ ಗ್ರಾ.ಪಂ.ನ ವತಿಯಿಂದ ಇಂಗು ಗುಂಡಿ ಮಾಡಿ ಪೈಪ್‌ಲೈನ್ ಮೂಲಕ ಮಲಿನ ನೀರನ್ನು ಅದಕ್ಕೆ ಹರಿಸಬೇಕು. ಈ ಕಾಮಗಾರಿಗೆ ಹಣವನ್ನು ಆ ಇಂಗುಗುಂಡಿಯನ್ನು ಯಾರೆಲ್ಲಾ ಆಶ್ರಯಿಸುತ್ತಾರೆ. ಅವರಿಂದಲೇ ಪಡೆಯಬೇಕು. ನದಿಯೆಂದರೆ ಪ್ರತಿಯೋರ್ವರಲ್ಲಿ ಪೂಜ್ಯನೀಯ ಭಾವನೆಯಿರಬೇಕು. ಆಗ ಮಾತ್ರ ಶುದ್ಧ ಜೀವಜಲ ನಮ್ಮದಾಗಲು ಸಾಧ್ಯ.

– ಡಾ. ರಾಜಗೋಪಾಲ ಭಟ್ ಕೈಲಾರ್ ವಾಸ್ತು ಗಿಡದ ತಜ್ಞರು

ಸಾವಿರಾರು ಎಕರೆ ಭೂ ಪ್ರದೇಶ, ಜೀವ ಸಂಕುಲಗಳಿಗೆ ನೀರುಣಿಸುತ್ತಿರುವ ನೇತ್ರಾವತಿ- ಕುಮಾರಧಾರ ನದಿಗಳ ನೀರನ್ನು ಮಂಗಳೂರು ನಗರಕ್ಕೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆದರೆ ಅದು ಮಂಗಳೂರು ತಲುಪುವ ಮುನ್ನ ಅದೆಷ್ಟು ಮಲೀನಗೊಳ್ಳುತ್ತದೆ ಎಂಬುದನ್ನು ಉಪ್ಪಿನಂಗಡಿಯಲ್ಲಿ ನೋಡಬಹುದು. ಇದನ್ನು ನೋಡಿಯೂ ಸ್ಥಳೀಯಾಡಳಿತ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಗಳೆಲ್ಲಾವೂ ಜಾಣ ಕುರುಡು ಅನುಸರಿಸುತ್ತಿದ್ದು, ನದಿ ಮಲೀನತೆಯ ವಿರುದ್ಧ ಬೃಹತ್ ಜನಾಂದೋಲನ ರೂಪಿಸುವ ಕಾರ್ಯ ಜನರಿಂದಲೇ ಆಗಬೇಕಿದೆ.

LEAVE A REPLY

Please enter your comment!
Please enter your name here