`ಬಣ್ಣ ಹಚ್ಚುವ ಬದಲು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ’

0

ಸಿ.ಎಂ, ಶಿಕ್ಷಣ ಸಚಿವರಿಗೆ ನೆಕ್ಕಿಲಾಡಿಯ ಜತೀಂದ್ರ ಶೆಟ್ಟಿ ಮನವಿ

ಪುತ್ತೂರು: ಶಾಲೆಗಳಿಗೆ ಬಣ್ಣ ಹಚ್ಚುವ ವಿಚಾರಕ್ಕೆ ಆದ್ಯತೆ ನೀಡುವ ಬದಲು ಶಾಲೆಗಳಿಗೆ ಶಿಕ್ಷಕರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರಿಗೆ 34ನೇ ನೆಕ್ಕಿಲಾಡಿ ಗ್ರಾಮದ ಅಲಿಮಾರ ಜತೀಂದ್ರ ಶೆಟ್ಟಿಯವರು ಮನವಿ ಮಾಡಿದ್ದಾರೆ.

ನೋಂದಾಯಿತ ಅಂಚೆ ಮೂಲಕ ಮನವಿ ಸಲ್ಲಿಕೆ ಮಾಡಿರುವ ಜತೀಂದ್ರ ಶೆಟ್ಟಿಯವರು, ತಾವು ಹಲವಾರು ಪ್ರಾಥಮಿಕ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೀರಿ. ಈಗ ಪುನಃ ಶಾಲೆಗಳಿಗೆ ಕೇಸರಿ ಬಣ್ಣ ಕೊಡುವ ನಿರ್ಧಾರವನ್ನು ಕೂಡಾ ತೆಗೆದುಕೊಂಡಿದ್ದೀರಿ. ಆದರೆ ರಾಜ್ಯದ ಒಬ್ಬ ಶಿಕ್ಷಣ ಸಚಿವರಾಗಿ ನಿಮ್ಮ ಪ್ರಥಮ ಆದ್ಯತೆ ಇರಬೇಕಾದದ್ದು ಶಾಲೆಯ ಪರಿಪೂರ್ಣ ಅಭಿವೃದ್ಧಿ ಬಗ್ಗೆ. ಇವತ್ತು ಹಲವಾರು ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಹಲವಾರು ಕಡೆ ಮುಚ್ಚಿದೆ ಕೂಡಾ ಎಂದು ಮನವಿಯಲ್ಲಿ ತಿಳಿಸಿದ್ದು ನೀವೇನಾದರೂ ಈ ಬಗ್ಗೆ ಅಧ್ಯಯನ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಶಿಕ್ಷಕರು ಯಾವ ಸರಕಾರಿ ಶಾಲೆಯಲ್ಲಾದರೂ ಪರಿಪೂರ್ಣವಾಗಿದ್ದಾರೆಯೇ, ಅದರ ಬಗ್ಗೆ ನೀವು ಯಾವತ್ತಾದರೂ ಗಮನ ಹರಿಸಿದ್ದೀರಾ ಅಥವಾ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ನಿಮ್ಮ ಗಮನಕ್ಕೆ ತಂದಿದ್ದಾರೆಯೇ, ಈ ಸರಕಾರ ಪ್ರತೀ ಸರಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯನ್ನು ಮಾಡಿರುತ್ತೀರಿ, ಎಲ್ಲಾ ಶಾಲಾ ಜವಾಬ್ಧಾರಿಯನ್ನು ಅವರ ತಲೆಯ ಮೇಲೆ ಹಾಕಿ ಕೈ ತೊಳೆದುಕೊಂಡು ಬಿಡುತ್ತೀರಾ. ಶಾಲೆಯಲ್ಲಿ ಶಿಕ್ಷಕರು ಇಲ್ಲದಿದ್ದಾಗ ಶಾಲಾಭಿವೃದ್ಧಿ ಸಮಿತಿಯವರು ಊರಿನ ಜನರಲ್ಲಿ ಕಾಡಿ ಬೇಡಿ ಗೌರವ ಶಿಕ್ಷಕಿಯರನ್ನು ನೇಮಿಸುತ್ತಾರೆ. ಇದರ ಬಗ್ಗೆ ಯಾವತ್ತಾದರೂ ಗಮನ ಹರಿಸಿದ್ದೀರಾ. ಉದಾಹರಣೆಯಾಗಿ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ 550ರಷ್ಟು ವಿದ್ಯಾರ್ಥಿಗಳಿದ್ದಾರೆ. ಆದರೆ ಅಲ್ಲಿ ಸರಕಾರದಿಂದ ನೇಮಕವಾದ ಶಿಕ್ಷಕರೆಷ್ಟು. ಗೌರವ ಶಿಕ್ಷಕರು ಎಷ್ಟು ಮಂದಿ ಇದ್ದಾರೆ, ತಮ್ಮ ಗಮನಕ್ಕೆ ಬಂದಿದೆಯೇ. ನಾನು ಈ ದೇಶದ ಒಬ್ಬ ಶಿಕ್ಷಣ ಪ್ರೇಮಿಯಾಗಿ ನನ್ನ ಒಡನಾಡಿಗಳ ಜೊತೆ ಸೇರಿ ಇಬ್ಬರು ಗೌರವ ಶಿಕ್ಷಕಿಯರನ್ನು ಉಪ್ಪಿನಂಗಡಿ ಶಾಲೆಗೆ ನೇಮಿಸಿದ್ದೇವೆ. ಅದರಂತೆ 34ನೇ ನೆಕ್ಕಿಲಾಡಿ ಶಾಲೆಯಲ್ಲಿ ನನಗೆ ಗೊತ್ತಿದ ಮಟ್ಟಿಗೆ ಸರಕಾರಿ ಶಿಕ್ಷಕರು ಇರುವುದು ಇಬ್ಬರು. ಉಳಿದ 4 ಮಂದಿ ಗೌರವ ಶಿಕ್ಷಕಿಯರು. ಅದರಲ್ಲಿ ಒಂದು ಗೌರವ ಶಿಕ್ಷಕಿಯ ಗೌರವಧನ ಪ್ರತೀ ತಿಂಗಳು ಕೊಡುವುದು ನಾನು ಅಂತ ಹೇಳಲಿಕ್ಕೆ ಹೆಮ್ಮೆ ಪಡುತ್ತೇನೆ. ತಮ್ಮ ಗಮನಕ್ಕೆ ಈ ವಿಚಾರ ಯಾಕೆ ತರುತ್ತಿದ್ದೇನೆ ಎಂದರೆ ಯಾವುದೇ ಸರಕಾರಿ ಶಾಲೆಯ ಅಭಿವೃದ್ಧಿಯತ್ತ ಗಮನ ಕೊಡಿ. ಶಿಕ್ಷಕಿಯರು, ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಲೈಬ್ರೆರಿ ಸಹಿತ ಯಾವಾಗ ಶಾಲೆಯ ಮೂಲ ಸೌಕರ್ಯ ಉತ್ತಮವಾಗಿರುತ್ತದೆಯೋ ಆಗ ತನ್ನಿಂದ ತಾನೇ ಶಾಲೆ ಅಭಿವೃದ್ಧಿ ಆಗುತ್ತದೆ. ಶಾಲಾ ವಿದ್ಯಾಭ್ಯಾಸಕ್ಕೆ ಬರುವ ಮಕ್ಕಳ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತದೆ. ಶಾಲಾ ಮೂಲ ಸೌಕರ್ಯದ ಬಗ್ಗೆ ಗಮನ ಕೊಡದೇ, ವಿಶೇಷವಾಗಿ ಶಿಕ್ಷಕರ ಬಗ್ಗೆ ಗಮನ ಹರಿಸದೇ ಬರೇ ಬಣ್ಣ ಹಚ್ಚುವ ಬಗ್ಗೆ ಯೋಚನೆ ಮಾಡಿದರೆ ಅದರಿಂದ ಏನು ಪ್ರಯೋಜನ ಮುಂದೊಂದು ದಿನ ಎಲ್ಲಾ ಸರಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಆಮೇಲೆ ಬಣ್ಣ ಹೊಡೆಯಲು ಶಾಲೆಗಳು ಇರುವುದಿಲ್ಲ ಎಂದು ಮನವಿಯಲ್ಲಿ ಜತೀಂದ್ರ ಶೆಟ್ಟಿ ತಿಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಇದೇ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here