ಸಿಸಿಬಿ ಇನ್ಸ್‌ಪೆಕ್ಟರ್‌ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ

0

ಗಾಂಜಾ ಸಾಗಾಟ ಪತ್ತೆ-ಇಬ್ಬರ ಬಂಧನ

ಪುತ್ತೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು ನಗರ, ಬೆಂಗಳೂರು ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್‌ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರು 132 ಕೆ.ಜಿ. ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಬಲೆ:
ನ.17ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್‌ ಮಹೇಶ್ ಪ್ರಸಾದ್ ಮತ್ತು ಪಿಎಸ್‌ಐ ರಾಜೇಂದ್ರ ಬಿ. ನೇತೃತ್ವದ ಸಿಸಿಬಿ ಪೊಲೀಸರು ಮುಡಿಪು ಕುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಂಟ್ವಾಳ ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ‌ ರಮೀಝ್ ರಾಝ್ (30ವ) ಮತ್ತು ಮಂಜೇಶ್ವರ ಮೀಯಪದವು ಮದಂಗಲ್ ಕಟ್ಟ ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್, ಪ್ರಾಯ(31ವ) ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಬಿಳಿ ಬಣ್ಣದ ಮಹೇಂದ್ರ ಕಾರು(ನಂಬ್ರ: ಕೆಎಲ್-14-ಪಿ-7775), ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 132 ಕೆ.ಜಿ. ಗಾಂಜಾ, 2 ಮೊಬೈಲ್ ಫೋನ್, 3 ತಲವಾರು ಮತ್ತು 2180 ರೂ ವಶಪಡಿಸಿಕೊಳ್ಳಲಾಗಿದೆ. ಗಾಂಜಾ, ಮಹೇಂದ್ರ ಕಾರು, ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ ರೂ. ಮೂವತ್ತು ಲಕ್ಷ ಎಂದು‌ ಅಂದಾಜಿಸಲಾಗಿದೆ. ಆರೋಪಿಗಳು ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದರು.

ಈ ಅಕ್ರಮ ಗಾಂಜಾ ಸಾಗಾಟದ ಸಮಯದಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ನಿಲ್ಲಿಸಿದ್ದಲ್ಲಿ ಅವರಿಗೆ ತೊಂದರೆ ನೀಡುವ ಉದ್ದೇಶದಿಂದ ತಲವಾರುಗಳನ್ನು ಕಾರಿನಲ್ಲಿ ಇರಿಸಿಕೊಂಡಿದ್ದರು. ಈ ಪ್ರಕರಣದ ಕುರಿತು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ‌ ಕೇಸು ದಾಖಲಾಗಿದೆ.


ಬಂಧಿತರ ಪೈಕಿ ರಮೀಝ್ ರಾಝ್ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸೇವನೆಗೆ ಸಂಬಂಧಪಟ್ಟಂತೆ ಒಂದು ಪ್ರಕರಣ, ಗಾಂಜಾ ಮಾರಾಟ ಮಾಡಿದ ಪ್ರಕರಣ, ಹಲ್ಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಒಂದು ಪ್ರಕರಣ ಸಹಿತ 6 ಪ್ರಕರಣಗಳು ದಾಖಲಾಗಿದೆ. ಇನ್ನೋರ್ವ ಆರೋಪಿ ಅಬ್ದುಲ್ ಖಾದರ್ ಹ್ಯಾರಿಸ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿದೆ.

ಆರೋಪಿಗಳಿಬ್ಬರೂ ಕರ್ನಾಟಕ- ಕೇರಳ ರಾಜ್ಯದ ಗಡಿಭಾಗದವರಾಗಿದ್ದು, ಕರ್ನಾಟಕ, ಕೇರಳ, ಬೆಂಗಳೂರಿನ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಿ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಬಾಡಿಗೆಗೆ ಕಾರನ್ನು ಪಡೆದುಕೊಂಡು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ಖರೀದಿಸಿಕೊಂಡು ಬೆಂಗಳೂರು, ಮಂಗಳೂರು, ಕೇರಳಕ್ಕೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು.

ಈ ಬೃಹತ್ ಗಾಂಜಾ ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತ ಈರ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾಗಿರುವ ಪುತ್ತೂರು ಮೂಲದವರಾಗಿದ್ದು ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಮಹೇಶ್ ಪ್ರಸಾದ್, ಪಿಎಸ್‌ಐ ರಾಜೇಂದ್ರ ಬಿ, ಎಎಸ್‌ಐಯವರಾದ ಶಶಿಧರ ಶೆಟ್ಟಿ, ಮೋಹನ್ ಕೆ ವಿ, ಹರೀಶ ಪಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here