ನಿವೃತ್ತ ಪ್ರಾಂಶುಪಾಲ, ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿಯಾಗಿದ್ದ ಪಾರ್ಲ ವೀರಪ್ಪ ಗೌಡ ನಿಧನ

ಪುತ್ತೂರು:ಪಾಲ್ತಾಡು ಗ್ರಾಮದ ಪಾರ್ಲ ನಿವಾಸಿ, ನಿವೃತ್ತ ಪ್ರಾಂಶುಪಾಲ, ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿಯಾಗಿದ್ದ ವೀರಪ್ಪ ಗೌಡ(೭೫.ವ)ರವರು ಅಸೌಖ್ಯದಿಂದ ನ.೧೪ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.



ಪುಣಚ ಗ್ರಾಮದ ಆಜೀರ್‌ಮಜಲು ಸೋಮಣ್ಣ ಗೌಡ ಮತ್ತು ತಿಮ್ಮಕ್ಕ ದಂಪತಿ ಪುತ್ರನಾಗಿರುವ ವೀರಪ್ಪ ಗೌಡರವರು, ಪರಿಯಾಲ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ವಿಟ್ಲದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದಿರುತ್ತಾರೆ. ಇವರು ಬೆಳ್ತಂಗಡಿಯ ಮುಂಡಾಜೆ ಪ್ರೌಢಶಾಲೆಯಲ್ಲಿ ೨ ವರ್ಷ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು. ಬಳಿಕ ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು, ಉಡುಪಿ ಎಂಜಿಎಂ ಕಾಲೇಜು, ಬಂಟ್ವಾಳದ ಎಸ್‌ವಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ೧೯೭೨ರಲ್ಲಿ ಸರಕಾರಿ ಉಪನ್ಯಾಸಕರಾಗಿ ಗುಲ್ಬರ್ಗಾ ಪದವಿ ಪೂರ್ವ ಕಾಲೇಜಿಗೆ ನೇಮಕಗೊಂಡರು. ನಂತರ ಗುಂಡ್ಲುಪೇಟೆ ಕಾಲೇಜು ಪದವಿ ಪೂರ್ವ ಕಾಲೇಜು, ಇದೇ ಅವಧಿಯಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಆರು ತಿಂಗಳ ಕಾಲ ಪ್ರಾಧ್ಯಾಪಕರಾಗಿ, ನಂತರ ಉಪ್ಪಿನಂಗಡಿ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಕೋಟೇಶ್ವರ ಪಿ.ಯು ಕಾಲೇಜು, ಕಡಬ ಪ.ಪೂ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ೨೦೦೦ದಲ್ಲಿ ನಿವೃತ್ತಿಗೊಂಡಿದ್ದರು.

ನಿವೃತ್ತಿಯ ಬಳಿಕ ಒಂದು ವರ್ಷ ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಪುತ್ತೂರು ಲಯನ್ಸ್ ಕ್ಲಬ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ, ಪುತ್ತೂರು ಒಕ್ಕಲಿಗ ಗೌಡ ಸಮಾಜದ ಹಾಗೂ ಪುತ್ತೂರು ಆಫೀಸರ್‍ಸ್ ಕ್ಲಬ್‌ನ ಸಕ್ರೀಯ ಸದಸ್ಯರಾಗಿದ್ದರು.
ಮೃತರು ಪತ್ನಿಗಿರಿಜಾ, ಇಬ್ಬರು ಪುತ್ರ, ಓರ್ವ ಪುತ್ರಿ ಹಾಗೂ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.