ಪ್ರಥಮ ಬಾರಿಗೆ ಮಹಾಲಿಂಗೇಶ್ವರ ದೇವಳದ 18 ಎಕ್ರೆ ಜಮೀನಿನಲ್ಲಿ ಲಕ್ಷದೀಪೋತ್ಸವದ ಬೆಳಕು ಬೆಳಗಲಿದೆ – ಕೇಶವಪ್ರಸಾದ್ ಮುಳಿಯ

0

ಪುತ್ತೂರು: ಕಾರ್ತಿಕ ಮಾಸದ ಅಮವಾಸ್ಯೆ ದಿನ ಸಂಪ್ರದಾಯ ಪ್ರಕಾರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪ್ರದಾಯದ ಪ್ರಕಾರ ಲಕ್ಷದೀಪೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ ಜೊತೆಗೆ ಪ್ರಥಮ ಬಾರಿಗೆ ದೇವಳದ 18 ಎಕ್ರೆ ಜಮೀನಿನಲ್ಲಿ ಭಕ್ತರ ಸಹಕಾರದೊಂದಿಗೆ ಹಣತೆಗಳು ಬೆಳಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.
ದೇವಳದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇವಳದ ಸುತ್ತಮುತ್ತ, ಪೂರ್ಣ ರಥಬೀದಿ, ಪುಷ್ಕರಿಣಿ ಸುತ್ತ, ಧ್ಯಾನರೂಢ ಶಿವನಮೂರ್ತಿ, ಮೂಲನಾಗನ ಕಟ್ಟೆ ವಠಾರ, ಅಯ್ಯಪ್ ಗುಡಿ ವಠಾರ, ಗೋಶಾಲೆ, ರಥಮಂದಿರದ ಒಳಗೆ ಮತ್ತು ಸುತ್ತ, ಮಹಾರುದ್ರಯಾಗ ಶಾಲೆ ಇತ್ಯಾದಿ ಕಡೆಗಳಲ್ಲಿ ಭಕ್ತರ ಸಹಕಾರದೊಂದಿಗೆ ರಂಗೋಲಿ ಹಾಕಿ, ಹಣತೆ ದೀಪಗಳನ್ನು ಬೆಳಗಿಸಲಾಗುವುದು ಎಂದು ಹೇಳಿದ ಅವರು ಲಕ್ಷ ದೀಪೋತ್ಸವ ಸಂದರ್ಭ ದೀಪ ಬೆಳಗಲು ಭಕ್ತರು ಹಣತೆ, ಬತ್ತಿ ತರಬಹುದು. ಎಣ್ಣೆ ದೇವಳದಿಂದಲೇ ನೀಡಲಾಗುತ್ತದೆ. ಹಣತೆಯನ್ನು ದೇವಳದ ಕಚೇರಿಯಲ್ಲಿ ಕುಂಬಾರಗುಡಿ ಕೈಗಾರಿಕಾ ಸಂಸ್ಥೆಯಿಂದ ಮಾರಾಟ ಕೌಂಟರ್ ತೆರೆಯಲಾಗುತ್ತದೆ. ಲಕ್ಷದೀಪೋತ್ಸವಕ್ಕೆ ಪೂರ್ವಭಾವಿಯಾಗಿ 20ರಂದು ಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದರು.
ಲಕ್ಷ ಬಿಲ್ವಾರ್ಚನೆ
ಬೆಳಿಗ್ಗೆ ಗಂಟೆ 7.30ರ ಪೂಜೆಯ ಬಳಿಕ ಶ್ರೀ ಮಹಾಲಿಂಗೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ಸೇವೆ ಆರಂಭಗೊಳ್ಳಲಿದೆ. 20 ಪುರೋಹಿತರು ಓಂ ನಮಃ ಶಿವಾಯ ಮಂತ್ರಪಠಣದೊಂದಿಗೆ ಬಿಲ್ವಾರ್ಚನೆ ಮಾಡಲಿದ್ದಾರೆ. 1 ಲಕ್ಷ ಬಾರಿ ಶಿವ ಪಂಚಾಕ್ಷರಿ ಮಂತ್ರ ಪಠಣಗೊಳ್ಳಲಿದೆ. ಬಿಲ್ವಪತ್ರೆ ನೀಡುವ ಭಕ್ತರು 22ರಂದು ಬೆಳಗ್ಗಿನ ಒಳಗೆ ದೇವಳಕ್ಕೆ ತಂದೊಪ್ಪಿಸಬೇಕು ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.
ಸಹಸ್ರ ಸಂಖ್ಯೆಯಲ್ಲಿ ಭಜನೆ:
ಸಂಜೆ ಗಂಟೆ 4ರಿಂದ ರಥಬೀದಿ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 5 ಗಂಟೆಯಿಂದ ರಥಬೀದಿ ಇಕ್ಕೆಲಗಳಲ್ಲಿ 1008 ಮಹಿಳೆಯರು ಮತ್ತು ಕುವರಿಯರು ಲಲಿತಾ ಸಹಸ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಸಲಿದ್ದಾರೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.
ಸಂಪ್ರದಾಯದ ಉತ್ಸವ:
ರಾತ್ರಿ 7.30ಕ್ಕೆ ದೇವರ ಪೂಜೆಯ ಬಳಿಕ ದೇವರ ಉತ್ಸವ ಬಲಿ ಹೊರಡಲಿದೆ. ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ ಸುತ್ತು, ಚೆಂಡೆ ಸುತ್ತು ನಡೆಯಲಿದೆ. ಬಳಿಕ ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯುತ್ತದೆ. ವಾದ್ಯ, ಭಜನೆ, ಬ್ಯಾಂಡ್, ಸರ್ವವಾದ್ಯ ಸುತ್ತುಗಳು ನಡೆದು ಚಂದ್ರಮಂಡಲ ಉತ್ಸವ ನಡೆಯುತ್ತದೆ. ದೇವರು ಚಂದ್ರಮಂಡಲದಿಂದ ಇಳಿದು ತೆಪ್ಪೋತ್ಸವಕ್ಕಾಗಿ ಪುಷ್ಕರಿಣಿಯತ್ತ ಸವಾರಿ ಹೋಗುತ್ತಾರೆ. ಕೆರೆಯ ಮುಂಭಾಗದ ಕಟ್ಟೆಯಲ್ಲಿ ಕುಳಿತು ಕಟ್ಟೆ ಪೂಜೆ ಸ್ವೀಕರಿಸಿ ಬಳಿಕ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಕೆರೆಯಲ್ಲಿ 3 ಸುತ್ತು ಉತ್ಸವ ನಡೆಯುತ್ತದೆ. ತೆಪ್ಪದಿಂದ ಇಳಿದ ಬಳಿಕ ಪೂರ್ವ ಬಾಗಿಲಿನಿಂದ ದೇವರು ಒಳ ಪ್ರವೇಶಿಸುತ್ತಾರೆ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಐತ್ತಪ್ಪ ನಾಯ್ಕ್, ಶೇಖರ ನಾರಾವಿ, ಡಾ.ಸುಧಾ ಎಸ್. ರಾವ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here