ಪಾಣಾಜೆ: ವಿಶೇಷ ಮಹಿಳಾ ಗ್ರಾಮ ಸಭೆ

0

ಪಾಣಾಜೆ: ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ’ ಜಲಸಂಜೀವಿನಿ ಕಾರ್ಯಕ್ರಮದಡಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದ ವಿಶೇಷ ಮಹಿಳಾ ಗ್ರಾಮ ಸಭೆಯು ಪಾಣಾಜೆ ಗ್ರಾ.ಪಂ. ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ನ. 19 ರಂದು ನಡೆಯಿತು.

ಎನ್ಆರ್‌ಇಜಿ ಐಇಸಿ ಸಂಯೋಜಕ ಭರತ್‌ರಾಜ್ ಕೆ. ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ದೀರ್ಘಕಾಲಿಕ ಬೆಳೆಗಳನ್ನು ಬೆಳೆಯುವಲ್ಲಿ ಮಹಿಳೆಯರು ವಿಶೇಷವಾಗಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿಯಲ್ಲಿ ಅನೇಕ ಮಾರ್ಪಾಡುಗಳನ್ನು ತಂದಿದೆ. ಗಂಡು ಹೆಣ್ಣು ಸಮಾನ ಕೂಲಿ, ಹಿರಿಯ ನಾಗರಿಕರಿಗೆ ಕೃಷಿ ಕಾರ್ಯಕ್ಕೆ ಉತ್ತೇಜನ, ಹೈನುಗಾರಿಕೆ, ಪಶುಸಂಗೋಪನೆಗೆ ಘಟಕ ನಿರ್ಮಾಣ, ಬಯೊಗ್ಯಾಸ್ ಘಟಕಕ್ಕೆ ನೆರವು,‌ ಪೌಷ್ಠಿಕ ತೋಟ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಾಣ ಇತ್ಯಾದಿಗಳ ಮೂಲಕ ನೆರವು ನೀಡಲಾಗುತ್ತಿದೆ. ಮಹಿಳೆಯರು ಶೇ. 60 ರಷ್ಟು ಹೆಚ್ಚು ತೊಡಗಿಸಿಕೊಳ್ಳಬೇಕೆಂಬ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಭರತ್‌ರಾಜ್ ಹೇಳಿದರು.


ಕೆಲವೊಂದು ಪಾವತಿಗಳು ಸರಕಾರದ ಕಡೆಯಿಂದ ಬರುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಭರತ್ ರವರು ‘ಸಮರ್ಪಕ ಸಮಯದಲ್ಲಿ ಬೇಡಿಕೆ ಸಲ್ಲಿಸಿ ಕ್ರಿಯಾಯೋಜನೆಯಲ್ಲಿ ಇಟ್ಟು ಅನುಮೋದನೆ ಪಡೆದು ಸರಕಾರಕ್ಕೆ ಕಳುಹಿಸಿದಲ್ಲಿ ಸರಿಯಾದ ಸಮಯದಲ್ಲಿಯೇ ಪಾವತಿ ಆಗುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಎಂ.ಆರ್. ರವರು ಆರೋಗ್ಯ ಮಾಹಿತಿ ನೀಡಿದರು.
‘ಅನಿಮೀಯಾ ಮುಕ್ತ ಭಾರತ’ ಪರಿಕಲ್ಪನೆಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಅಗತ್ಯ ಆರೋಗ್ಯ ಕ್ರಮಗಳನ್ನು ಜನರು ಮುಂಚಿತವಾಗಿ ವಹಿಸಬೇಕು. ಎಲ್ಲಾ ಕಾಯಿಲೆಗಳಿಗೆ ಮೂಲ ರಕ್ತಹೀನತೆ. ಚುಚ್ಚುಮದ್ದು ಹಾಕಿಸಿಕೊಂಡಾಗ ಕಾಯಿಲೆಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ ಎಂದರು. ಡಿಸೆಂಬರ್ ತಿಂಗಳಲ್ಲಿ ನಡೆಯುವ ಮಕ್ಕಳ ‘ಮೆದುಳು ಜ್ವರ’ ನಿರ್ಮೂಲನಾ ಲಸಿಕೆ ಪಡೆದುಕೊಳ್ಳಲು ಎಲ್ಲರಿಗೂ ಅಗತ್ಯ ಮಾಹಿತಿ ನೀಡಬೇಕು.


ಮಕ್ಕಳಲ್ಲಿ ಕೆಂಗಣ್ಣು ಕಾಯಿಲೆ ಹೆಚ್ಚಾಗುತ್ತಿದ್ದು ಇದರ ಬಗ್ಗೆಯೂ ಮುಂಜಾಗ್ರತೆ ವಹಿಸಬೇಕು. ಕೆಂಗಣ್ಣು ಪೀಡಿತ ಮಕ್ಕಳನ್ನು ಒಂದು ವಾರ ಶಾಲೆಗೆ ಕಳುಹಿಸುವಂತಿಲ್ಲ. ಕಣ್ಣುಗಳನ್ನು ಹೆಚ್ಚಾಗಿ ಕೈಯಲ್ಲಿ ಉಜ್ಜದಂತೆ ನೋಡಿಕೊಳ್ಳಬೇಕು. ಕಣ್ಣು ಮುಖ ಮುಟ್ಟಿ ಇತರೆಡೆ ಮುಟ್ಟುವ‌ ಮುನ್ನ ಸರಿಯಾಗಿ ಕೈ ತೊಳೆದುಕೊಳ್ಳಬೇಕು. ಕೆಂಗಣ್ಣಿಗೆ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದೊರೆಯುತ್ತದೆ‌’ ಎಂದರು.

ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂರವರು ಮಾತನಾಡಿ ‘ ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವಾಗ ಮಾಹಿತಿ ಪಡೆದುಕೊಳ್ಳಲು ಸಾರ್ವಜನಿಕರು ಬರಬೇಕು. ಇಲ್ಲವಾದರೆ ಪಂಚಾಯತ್‌ನಿಂದ ಏನು ಆಗಿದೆ ? ಎಂದು ಕೇಳುತ್ತಾರೆ. ಆರೋಗ್ಯದ ಬಗ್ಗೆಯೂ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಇಂದಿನ ಅಗತ್ಯ’ ಎಂದರು.
ಪಿಡಿಒ ಚಂದ್ರಮತಿ ಸ್ವಾಗತಿಸಿ, ವಂದಿಸಿದರು.

ಸದಸ್ಯರಾದ ಸುಭಾಸ್ ರೈ, ಮೋಹನ ನಾಯ್ಕ್, ಕೃಷ್ಣಪ್ಪ ಪೂಜಾರಿ, ಸುಲೋಚನಾ, ಜಯಶ್ರೀ, ಮೈಮೂನತ್ತುಲ್ ಮೆಹ್ರಾ, ವಿಮಲ ಉಪಸ್ಥಿತರಿದ್ದರು‌.

ಡಿ. 5 ರಿಂದ ಮಕ್ಕಳಿಗೆ ‘ಮೆದುಳು ಜ್ವರ’ ಲಸಿಕೆ ಅಭಿಯಾನ
ಆರೋಗ್ಯ ಇಲಾಖೆಯಿಂದ ರಾಜ್ಯದ 10 ಜಿಲ್ಲೆಗಳಲ್ಲಿ ‘ಮೆದುಳು ಜ್ವರ’ ದ ನಿರ್ಮೂಲನೆಗೆ 1-15 ವರ್ಷದೊಳಗಿನ ಮಕ್ಕಳಿಗೆ ಸಿಂಗಲ್ ಡೋಸ್ ಲಸಿಕೆ ನೀಡುವ ಅಭಿಯಾನ ಡಿ. 5 ರಿಂದ ಕೈಗೊಳ್ಳಲಾಗಿದೆ. ಅದರಲ್ಲಿ ದ.ಕ.ಜಿಲ್ಲೆಯೂ ಒಂದಾಗಿದೆ. ಮೆದುಳು ಜ್ವರದಿಂದ ಮರಣ ಪ್ರಮಾಣ ಅತ್ಯಧಿಕವಾಗಿರುವ ಕಾರಣ ಕಡ್ಡಾಯವಾಗಿ ಲಸಿಕೆ‌ ನೀಡಿಸುವಂತೆ ಪೋಷಕರಿಗೆ ಮಾಹಿತಿ ಕೊಡಬೇಕು ಎಂದು ಪದ್ಮಾವತಿ ಹೇಳಿದರು.

LEAVE A REPLY

Please enter your comment!
Please enter your name here