ಬಿಳಿನೆಲೆ: ಕಡಬ ತಾ. 3 ನೇ ಕನ್ನಡ ಸಾಹಿತ್ಯ ಸಮ್ಮೇಳನ

0

ಭಾಷೆ ಬಳಕೆಯಿಂದ ಬೆಳೆಯುತ್ತದೆ,ಭಾಷೆ ಉಳಿದರೆ ಸಂಸ್ಕೃತಿಯೂ ಉಳಿಯಲಿದೆ-ಗಣರಾಜ ಕುಂಬ್ಳೆ

ಕಡಬ: ಯಾವೊಬ್ಬ ವ್ಯಕ್ತಿ ಜತೆ ವ್ಯವಹಾರ, ಸಂವಹನ ನಡೆಸಲು ಭಾಷೆ ಪ್ರಮುಖವಾಗಿದೆ. ಜತೆಗೆ ಭಾಷೆ ಪ್ರಪಂಚ ಜ್ಞಾನ ಪಡೆಯಲಿರುವ ಪ್ರಮುಖ ಮಾಧ್ಯಮವಾಗಿದೆ ಎಂದು ಕಡಬ ತಾಲೂಕು ಮೂರನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಗಣರಾಜ ಕುಂಬ್ಳೆ ರಾಮಕುಂಜ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ನ. 20 ರಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪೌಢಶಾಲೆಯ ಪಟೇಲ್ ನಾಗಣ್ಣ ಗೌಡ ಸಭಾಂಗಣದ ಆರ್.ಎನ್.ಭಿಡೆ ವೇದಿಕೆಯಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾಷೆ ಒಂದು ಸಮುದಾಯದ ಆಸ್ತಿ. ಒಂದು ನಿರ್ದಿಷ್ಟ ಸಮುದಾಯದ ವ್ಯವಹಾರಗಳು ನಿರ್ದಿಷ್ಟ ಭಾಷಾ ಮಾಧ್ಯಮದಲ್ಲಿ ಬಹುತೇಕ ನಡೆಯುತ್ತದೆ. ಭಾಷೆ ಹುಟ್ಟಿನಿಂದ ಬರುವಂತಹದಲ್ಲ. ಕಲಿತೇ ಬರಬೇಕಷ್ಟೇ. ಕನ್ನಡ ನಾಡು ತನ್ನ ಸಂಸ್ಕೃತಿಯಿಂದಲೇ ಎಲ್ಲೆಡೆ ಪಸರಿಸಿದೆ. ಕನ್ನಡವನ್ನು ಆಡಿ, ಓದಿ, ಬರೆದು ಬಳಸಿದರೆ ಮಾತ್ರ ಅದು ಉಳಿದೀತು. ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸಲು ಪೋಷಕರು ಪ್ರೋತ್ಸಾಹಿಸಬೇಕು. ಯಕ್ಷಗಾನ ಕನ್ನಡದ ರಕ್ಷಣೆಗೆ ಬಲುದೊಡ್ಡ ಕೊಡುಗೆ ನೀಡಿದೆ. ಭಾಷೆ ಬಳಕೆಯಿಂದ ಬೆಳೆಯುತ್ತದೆ. ಬಾಷೆ ಉಳಿದರೆ ಸಂಸ್ಕೃತಿಯೂ ಉಳಿಯಲಿದೆ ಎಂದರು.

ಉತ್ತಮ ಶಬ್ದ ಬಳಕೆಯೂ ಸಾಹಿತ್ಯ:
ಆಶೀರ್ವಚನ ನೀಡಿದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ನಗರದಲ್ಲಿ ಕನ್ನಡವನ್ನು ಧಿಕ್ಕರಿಸುವ ವಿಧಾನ ಕಾಣುತ್ತೇವೆ. ನಮ್ಮಲ್ಲಿ ಕನ್ನಡದ ಜ್ಞಾನ ವಿಸ್ತರಿಸಬೇಕು. ಕನ್ನಡದಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದ ಅವರು ಉತ್ತಮ ಶಬ್ದ ಬಳಕೆಯೂ ಸಾಹಿತ್ಯ. ಆಶ್ಲೀಲ ಪದ ಬಳಕೆ ಸಾಹಿತ್ಯ ಎಂದಾಗುವುದಿಲ್ಲ ಎಂದರು.

ಕನ್ನಡ ಶಾಲೆ ಬೆಳೆಯಲಿ;
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಮಾದ್ಯಮ ಶಾಲೆ ಕಟ್ಟುವ ಗಟ್ಟಿತನ ನಮ್ಮಲ್ಲಿರಲಿ. ಹಿರಿಯರ ಉತ್ಸಾಹದಿಂದ ಹಿಂದೆ ಕನ್ನಡ ಶಾಲೆಗಳನ್ನು ಕಟ್ಟಲಾಗಿತ್ತು. ಕನ್ನಡದ ಬಗೆಗಿನ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡ ಶಿಕ್ಷಣ ಪಡೆದ ಮಕ್ಕಳಿಗೆ ಅವಕಾಶ ನೀಡಲಿದೆಯಾ ಎಂಬ ಆತಂಕ ನನ್ನಲ್ಲಿದೆ ಎಂದ ಅವರು ಕನ್ನಡ ಮಾಧ್ಯಮಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸಮಾಲೋಚನೆ ನಡೆಸಬೇಕಿದೆ ಎಂದರು.

ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೇಶವ ಭಟ್ ಎನ್., ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ,ಕಡಬ ತಾ.ಪಂ. ಆಡಳಿತಾಧಿಕಾರಿ ಸೀತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ಗೌಡ, ಧರ್ಮಗುರು ಅಬ್ದುಲ್ ಜಲೀಲ್ ಹರ್ಷದಿ, ರಾಜ್ಯ ಯುವಜನ ಸಂಘಗಳ ಒಕ್ಕೂಟದ ಪ್ರ.ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಗ್ರಾ.ಪಂ. ಅಧ್ಯಕ್ಷ ಶಿವಶಂಕರ್, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮೋಂಟಡ್ಕ ಉಪಸ್ಥಿತರಿದ್ದರು. ಕೃಷ್ಣ ಶರ್ಮ ಪಿ.ಎಸ್. ಸ್ವಾಗತಿಸಿದರು. ಕಡಬ ತಾಲೂಕು ಘಟಕ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯನುಡಿ ನುಡಿದರು. ನಾರಾಯಣ ಟಿ.ಭಟ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಹಿರಿಯಣ್ಣ ಗೌಡ ವಂದಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಅದ್ಧೂರಿ ಮೆರವಣಿಗೆ;
ಬಿಳಿನೆಲೆ ಪ್ರಾ.ಕೃ.ಪ.ಸ.ಸಂಘದ ಮುಂಭಾಗದಿಂದ ಸಮ್ಮೇಳನದ ವೇದಿಕೆ ತನಕ ಕನ್ನಡ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಯಿತು. ಗ್ರಾ.ಪಂ.ಸದಸ್ಯ ಸತೀಶ್ ಕಳಿಗೆ ಕನ್ನಡ ಬಾವುಟ ಹಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗಣಪಯ್ಯ ಗೌಡ ಪುತ್ತಿಲ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆ ಬಳಿಗೆ ಕರೆತರಲಾಯಿತು. ಶಾಲಾ ಮೈದಾನದಲ್ಲಿ ಗ್ರಾ.ಪಂ.ಅಧ್ಯಕ್ಷ ಶಿವಶಂಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪರಿಷತ್ತು ಧ್ವಜಾರೋಹಣ ನೆರವೇರಿಸಿದರು. ಕಡಬ ಘಟಕದ ಅಧ್ಯಕ್ಷ ಸೇಸಪ್ಪ ರೈ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಿಳಿನೆಲೆ ಬೈಲು ಸ.ಹಿ.ಪ್ರಾ.ಶಾಲೆ, ಪುತ್ತಿಲ ಬೈಲಡ್ಕ, ಬಿಳಿನೆಲೆ ಕೈಕಂಬ, ಗೋಪಾಲಕೃಷ್ಣ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆ, ಸಂಜೆ ಸಮಾರೋಪ ನಡೆಯಿತು.

LEAVE A REPLY

Please enter your comment!
Please enter your name here