`ಸರಿಯಾದ ಮಾಹಿತಿ ಇದ್ದರೆ ಅರ್ಧ ಕೆಲಸ ಆದಂತೆ’ ಸುದ್ದಿಯಿಂದ ಉಚಿತ ಮಾಹಿತಿ-ಖಚಿತ ಸೇವಾ ಕೇಂದ್ರ

`ಸರಿಯಾದ ಮಾಹಿತಿ ಇದ್ದರೆ ಅರ್ಧ ಕೆಲಸ ಆದಂತೆ’ಎಂಬ ಮಾತಿದೆ. ಮಾಹಿತಿ ಇಲ್ಲದೆ ಇದ್ದರೆ ಕೆಲಸ ಹಾಳು ಎಂಬ ಮಾತನ್ನು ಅದಕ್ಕೆ ಸೇರಿಸಬೇಕು ಎಂದು ಹೇಳಲು ಬಯಸುತ್ತೇವೆ. 38 ವರ್ಷಗಳ ಹಿಂದೆ ಸುದ್ದಿ ಪತ್ರಿಕೆ ಪ್ರಾರಂಭಿಸಿದಾಗ ಫೋನ್ ಸಂಪರ್ಕವೇ ವಿರಳವಾಗಿದ್ದರೂ ಯಾರ ವಿಳಾಸಗಳೂ, ಅಲ್ಲಿಗೆ ದಾರಿಗಳು ಸ್ಪಷ್ಟವಾಗಿ ಸಿಗುತ್ತಿರಲಿಲ್ಲ. ಇಂದು ಮಾಹಿತಿ ಮೊಬೈಲ್‌ಗಳಲ್ಲಿವೆ. ಗೂಗಲ್‌ನಲ್ಲಿ ದೊರಕುತ್ತದೆ. ಅವುಗಳು ಪಟ್ಟಣಗಳಿಗೆ ಹೆಚ್ಚು ಸೀಮಿತವಾಗಿವೆ. ಸ್ಥಳೀಯ ಮಾಹಿತಿಗಳು ಇನ್ನೂ ಖಚಿತವಾಗಿ ಅದರಲ್ಲಿ ಲಭ್ಯವಾಗಿರುವುದಿಲ್ಲ. ಆದರೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳ ಸುದ್ದಿ ಮಾಹಿತಿ ಕೇಂದ್ರಗಳಲ್ಲಿ ಇಂದಿಗೂ ಜನರಿಗೆ ಬೇಕಾದ ಮಾಹಿತಿಗಳು ಲಭ್ಯವಿದೆ. ಅಂದು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪತ್ರಿಕೆಗಳೊಂದಿಗೆ ಮಾಹಿತಿ ಕೇಂದ್ರಗಳನ್ನೂ ಪ್ರಾರಂಭಿಸಿದ್ದೆವು. ಜನರಿಗೆ ಬೇಕಾದ ಮಾಹಿತಿ, ವಿಳಾಸ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಬಹಳ ಜನರು ಅದರ ಪ್ರಯೋಜನವನ್ನು ಪಡೆದಿದ್ದಾರೆ. ಸುದ್ದಿ ಪತ್ರಿಕೆ ಮತ್ತು ಸುದ್ದಿ ಮಾಧ್ಯಮ ಇಂದಿಗೂ ಮಾಹಿತಿ ಆಧಾರಿತವಾಗಿ ಬೆಳೆದಿದೆ. ಇಲಾಖೆಗಳ ಮಾಹಿತಿ, ಅಧಿಕಾರಿಗಳ ಕಾರ್ಯಕ್ರಮ, ದಿನನಿತ್ಯದ ಕಾರ್ಯಕ್ರಮಗಳು, ಉದ್ಯೋಗ, ಶಿಕ್ಷಣ, ಪೇಟೆಧಾರಣೆ ತಾಲೂಕಿನ ಎಲ್ಲಾ ಮಾಹಿತಿಗಳು ಸುದ್ದಿ ಮಾಹಿತಿ ಕೇಂದ್ರದಲ್ಲಿ ದೊರೆಯುತ್ತದೆ. ವೈದ್ಯರ, ಆಸ್ಪತ್ರೆಗಳ, ಲ್ಯಾಬೋರೇಟರಿಗಳ, ಮೆಡಿಕಲ್ ಶಾಪ್‌ಗಳ, ಆಂಬ್ಯುಲೆನ್ಸ್ ಹೀಗೆ ಆರೋಗ್ಯಕ್ಕೆ ಸಂಬಂಧಿಸಿದ, ಇಂಜಿನಿಯರ್, ಮೇಸ್ತ್ರಿ, ಕಲ್ಲು, ಹೊಗೆ, ಹಾರ್ಡ್‌ವೇರ್ ಹೀಗೆ ಕನ್‌ಸ್ಟ್ರಕ್ಷನ್‌ಗೆ ಸಂಬಂಧಿಸಿದ, ಶಾಮಿಯಾನ, ಜನರೇಟರ್, ಕೆಮರಾ, ಕ್ಯಾಟರಿಂಗ್, ಜವುಳಿ ಬಟ್ಟೆ, ಹೊಟೇಲ್, ವಸತಿಗೃಹ, ಕಲ್ಯಾಣ ಮಂಟಪ ಹೀಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದ, ನರ್ಸರಿ, ಗೊಬ್ಬರ, ಕೃಷಿ ಉತ್ಪನ್ನಗಳ, ಕೃಷಿ ಕಸುಬುದಾರರ ಹೀಗೆ ಕೃಷಿಗೆ ಸಂಬಂಧಿಸಿದ, ದೇವಸ್ಥಾನ, ಚರ್ಚ್, ಮಸೀದಿ ಮೊದಲಾದ ಧಾರ್ಮಿಕ ಸ್ಥಳಗಳ, ಪ್ರೇಕ್ಷಣೀಯ ಸ್ಥಳಗಳ, ಶಿಕ್ಷಣ ಸಂಸ್ಥೆಗಳ, ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ, ವಕೀಲರ, ವಾಹನ ಮಳಿಗೆಗಳ, ಗ್ಯಾರೇಜುಗಳ, ಯಾವುದೇ ಉದ್ದಿಮೆಯ, ಕಸುಬುದಾರರ ಮಾಹಿತಿಗಳು ಉಚಿತವಾಗಿ ಸುದ್ದಿ ಮಾಹಿತಿ ಕೇಂದ್ರದಲ್ಲಿ ಲಭ್ಯವಿರುತ್ತದೆ. ಆ ವಿಶ್ವಾಸಪೂರ್ಣ ಮಾಹಿತಿಗಳನ್ನು ಖಚಿತ ಸೇವೆಯ ಕಡೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಕೃಷಿಕರಿಗೆ ಅದರ ಮೊದಲ ಆಧ್ಯತೆಯೆಂದು ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ. ತಾಲೂಕಿನ ಮೂಲೆ ಮೂಲೆಗಳಲ್ಲಿಯೂ ಕೃಷಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹದೊಂದಿಗೆ ಅವರಿಗೆ ಬೇಕಾದ ಮಾಹಿತಿ, ಸೇವೆ, ಮಾರಾಟದ ವ್ಯವಸ್ಥೆಯನ್ನು ಒದಗಿಸುವ ಕೆಲಸ ನಡೆಯುತ್ತಿದೆ. ಅದರ ಭಾಗವಾಗಿ ಬೆಂಗಳೂರಿನ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಕರಿಗೆ ಬೇಕಾದ ಮಾಹಿತಿ ಸಂಗ್ರಹಿಸಿದ್ದೇವೆ. ಇದೀಗ ನೆಟ್ಟಣದ ಕಿದುವಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸುದ್ದಿ ಉಚಿತ ಮಾಹಿತಿ ಕೇಂದ್ರದ ಸ್ಟಾಲ್ ಕೆಲಸ ಮಾಡುತ್ತಿದೆ. ಅಲ್ಲಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಜನರಿಗೆ ಪತ್ರಿಕೆ ಮತ್ತು ಚಾನೆಲ್ ಮೂಲಕ ನೀಡುತ್ತಿದ್ದೇವೆ. ಅದೇ ರೀತಿ ಅಲ್ಲಿ ಬರುವ ಜನರಿಗೆ ಅಗತ್ಯವುಳ್ಳ ತಾಲೂಕಿನ ಮತ್ತು ಜಿಲ್ಲೆಯ ಮಾಹಿತಿಗಳನ್ನು ಒದಗಿಸುತ್ತಿದ್ದೇವೆ.

ಸುಳ್ಯದಲ್ಲಿ ಇದೇ 26 ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಸುದ್ದಿಯ ಉಚಿತ ಮಾಹಿತಿ ಮತ್ತು ಸಹಾಯವಾಣಿ ಕೇಂದ್ರ ಕೆಲಸ ಮಾಡಲಿದೆ. ಅಲ್ಲಿಗೆ ಉದ್ಯೋಗ ಬಯಸಿ ಬರುವ ವಿದ್ಯಾರ್ಥಿಗಳಿಗೆ, ಉದ್ಯೋಗ ನೀಡಲು ಬರುವ ಕಂಪೆನಿಗಳಿಗೆ ಅವಶ್ಯಕವುಳ್ಳ ಇತರ ಮಾಹಿತಿಯನ್ನು ನೀಡಲಿದ್ದೇವೆ. ಇದೇ ಡಿ. 16ರಿಂದ 18ರವರೆಗೆ ನಡೆಯಲಿರುವ ಕೃಷಿ ಮೇಳದಲ್ಲಿಯೂ ಸುದ್ದಿ ಮಾಹಿತಿ ಮತ್ತು ಸಹಾಯವಾಣಿ ಕೇಂದ್ರ ಕಾರ್ಯಾಚರಿಸಲಿದೆ. ಆ ಮೂಲಕ ಜನರ ಮಾಹಿತಿಯ ಕೊರತೆಯ ಸಮಸ್ಯೆಗಳಿಗೆ ಸಣ್ಣ ಪರಿಹಾರ ಅವರ ಯಶಸ್ಸಿಗೆ ಸಣ್ಣ ಕೊಡುಗೆ ನೀಡುವ ಪ್ರಯತ್ನ ನಡೆಸಲಿದ್ದೇವೆ. ಜನರು ಸುದ್ದಿಯ ಮಾಹಿತಿ ಹಾಗೂ ಸೇವಾ ಕೇಂದ್ರದ ಪ್ರಯೋಜನ ಪಡೆದು ಸುಗಮ ಜೀವನ ನಡೆಸಲಿ ಎಂಬುದು ಸುದ್ದಿಯ ಆಶಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.