ಅಧ್ಯಕ್ಷ, ಪದಾಧಿಕಾರಿಗಳು ಅಧಿಕಾರದಲ್ಲಿರುವಾಗಲೇ ಯಾವುದೇ ಚುನಾವಣಾ ಕ್ರಮ ಕೈಗೊಳ್ಳದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ 8 ಜನ ಸಭೆ ಸೇರಿ 6 ಪದಾಧಿಕಾರಿಗಳ ಆಯ್ಕೆ…!

0

ಅನಧಿಕೃತ ಆಯ್ಕೆ-ರಾಜ್ಯ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಿಂದ ತಡೆ

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಮತ್ತು ಇತರ ಪದಾಧಿಕಾರಿಗಳು ಅಧಿಕಾರದಲ್ಲಿರುವ ನಡುವೆಯೇ ಪತ್ರಿಕಾ ಭವನದಲ್ಲಿ ನ.19ರಂದು ಆ ಸಂಘದ 8 ಮಂದಿ ಸದಸ್ಯರು ಸೇರಿಕೊಂಡು ಚುನಾವಣೆ ಪ್ರಯುಕ್ತ ನಡೆಸಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಸಂಘದ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಲ್ಲಿ ಸಭೆ ನಡೆಸಿ 6 ಮಂದಿಯನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡಿರುವ ವಿಲಕ್ಷಣ ಘಟನೆ ನಡೆದಿದೆ. ಅಲ್ಲದೆ ಆಯ್ಕೆ ಘೋಷಿಸಿಕೊಂಡಿರುವ ತಂಡ ನಮ್ಮದು ಸ್ವತಂತ್ರ ಸಂಸ್ಥೆ ಯಾವುದೇ ಸಂಘದ ಅಧೀನದಲ್ಲಿಲ್ಲ ಎಂದು ಹೇಳಿಕೊಂಡಿದೆ.

ಈ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘ ತಡೆ ನೀಡಿದೆ. ಅನಧಿಕೃತವಾಗಿ ನಡೆಸಿರುವ ಪದಾಧಿಕಾರಿಗಳ ಆಯ್ಕೆಯನ್ನು ರಾಜ್ಯ ಮತ್ತು ಜಿಲ್ಲಾ ಸಂಘ ಒಪ್ಪುವುದಿಲ್ಲ ಎಂದು ಅದರ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಹಾಲಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರೇ ಈಗಲೂ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುತ್ತಾರೆ. ಅವರದೇ ನೇತೃತ್ವದಲ್ಲಿ ಸಭೆ ನಡೆದು ನೂತನ ಆಯ್ಕೆ ನಡೆಯಲಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಪುತ್ತೂರಿನ ಪತ್ರಿಕಾ ಭವನದಲ್ಲಿ ನ.19ರಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ 8ಜನರು ಸಭೆ ನಡೆಸಿ ಆ ಬಳಿಕ ಆಯ್ದ ಪತ್ರಕರ್ತರಿಗೆ ಈ ಕೆಳಗಿನ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು ‘ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆ ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಆಗ್ರಹದ ಮೇರೆಗೆ ಹಿರಿಯ ಸದಸ್ಯ ಐ.ಬಿ. ಸಂದೀಪ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಹಲವು ಸಮಯಗಳಿಂದ ಅತಂತ್ರವಾಗಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಸದಸ್ಯರ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಐ.ಬಿ. ಸಂದೀಪ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕದ ಕುಮಾರ್ ಕಲ್ಲಾರೆ, ಕಾರ್ಯದರ್ಶಿಯಾಗಿ ನ್ಯೂಸ್ 18 ಕನ್ನಡ ವರದಿಗಾರ ಅಜಿತ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ರಾಜೇಶ್ ಪಟ್ಟೆ, ಖಜಾಂಚಿಯಾಗಿ ದೈಜಿವರ್ಲ್ಡ್ ಚಾನಲ್ ವರದಿಗಾರ ಕೃಷ್ಣಪ್ರಸಾದ್ ಬಲ್ನಾಡು ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿಗಳಾದ ನರಸಿಂಹ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ಪತ್ರಿಕಾ ಕಛೇರಿಯ ಮೆನೇಜರ್ ಆಗಿ ವಿ.ಫೋರ್ ವರದಿಗಾರ ಪ್ರವೀಣ್ ಕುಮಾರ್ ಬೊಳುವಾರು ಅವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ವೆಬ್‌ಸೈಟ್‌ನಲ್ಲಿ ವರದಿಗಳ ಪ್ರಸಾರ:

ಬಳಿಕ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಯ ಕುರಿತು ಕೆಲವು ವೆಬ್‌ಸೈಟ್‌ಗಳಲ್ಲಿ ವರದಿ ಪ್ರಕಟವಾಗಿತ್ತು. ಅದರ ಬೆನ್ನಿಗೇ ಇನ್ನು ಕೆಲವು ವೆಬ್‌ಸೈಟ್‌ಗಳಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ರಾಜ್ಯ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘ ತಡೆ ನೀಡಿದೆ ಎಂದು ವರದಿ ಪ್ರಕಟಿವಾಗಿತ್ತು. ಪುತ್ತೂರು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಗೆ ತಡೆ, ಕೇವಲ 4 ಗಂಟೆ ಮಾತ್ರ ಅಧಿಕಾರ ಅನುಭವಿಸಿದ ಪತ್ರಕರ್ತ ಪದಾಧಿಕಾರಿಗಳು, ಕೇವಲ 8 ಸದಸ್ಯರು ಸೇರಿಕೊಂಡು ಚುನಾವಣೆ ಪ್ರಕ್ರಿಯೆ-ಸ್ವಯಂಘೋಷಿತ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗೆ ಭಾರೀ ಮುಖಭಂಗ, ಶ್ರವಣ್ ಕುಮಾರ್ ನಾಳ ಅವರೇ ಅಧ್ಯಕ್ಷರಾಗಿ ಮುಂದುವರಿಕೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧಾರ ಎಂಬ ಒಕ್ಕಣೆಯೊಂದಿಗೆ ವೆಬ್‌ಸೈಟ್ ವರದಿ ಮಾಡಿತ್ತು. ಕೇವಲ 8 ಸದಸ್ಯರು ಸೇರಿಕೊಂಡು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆ ನಡೆಸಿದ್ದರಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಡೆ ನೀಡಿದ್ದು, ಈ ಚುನಾವಣಾ ಪ್ರಕ್ರಿಯೆಯೇ ಅಸಿಂಧು ಎಂದು ಘೋಷಿಸಿದೆ. ಈ ಮೂಲಕ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ಪ್ರಮುಖ ಜವಾಬ್ದಾರಿ ವಹಿಸಿಕೊಂಡ ಸಂದೀಪ್, ಅಜಿತ್, ಪ್ರಸಾದ್ ನೇತೃತ್ವದ ತಂಡ ಸಂಘದ ಇತಿಹಾಸದಲ್ಲೇ ಕೇವಲ 4 ಗಂಟೆ ಮಾತ್ರ ಅಽಕಾರ ಅನುಭವಿಸಿದಂತಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೌಪ್ಯವಾಗಿ ನಡೆದ ಚುನಾವಣಾ ಸಭೆ:

ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಒಟ್ಟು 22 ಈ ಹಿಂದಿನ ಸದಸ್ಯರು ಹಾಗೂ 17 ಹೊಸ ಸದಸ್ಯರು ಸೇರಿದಂತೆ ಒಟ್ಟು 39 ಸದಸ್ಯರಿದ್ದಾರೆ. ಈ ಎಲ್ಲಾ ಸದಸ್ಯರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮುಂದಿನ ತಿಂಗಳು ಪುತ್ತೂರು ಹಾಗೂ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಚುನಾವಣೆಗೆ ಸಿದ್ದತೆ ನಡೆಸಿತ್ತು. ಒಂದು ವೇಳೆ ಚುನಾವಣೆ ನಡೆದರೆ ಪುತ್ತೂರು ಪತ್ರಿಕಾಭವನದಲ್ಲಿ ಅವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 8 ಸದಸ್ಯರು ಸೇರಿಕೊಂಡು ಜಿಲ್ಲಾ, ರಾಜ್ಯ ಸಂಘಕ್ಕೆ ಹಾಗೂ ಹಿರಿಯ ಪತ್ರಕರ್ತರಿಗೆ ಮಾಹಿತಿಯೂ ನೀಡದೆ ಗೌಪ್ಯವಾಗಿ ಚುನಾವಣೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿತ್ತು. ಕರ್ನಾಟಕ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೈಲಾದಂತೆ ಸಂಘದ ನಿರ್ಧೇಶನವನ್ನು ಮೀರಿ ನಡೆಯುವ ಪತ್ರಕರ್ತರ ಸದಸ್ಯತ್ವವು ರದ್ದುಗೊಳ್ಳುತ್ತದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದದ ಸದಸ್ಯರು ಬೇರೊಂದು ಸಂಘ ರಚಿಸುವಂತಿಲ್ಲ ಹಾಗೂ ಸದಸ್ಯತ್ವ ಪಡೆಯುವಂತಿಲ್ಲ. ಪ್ರಸ್ತುತ ಅನಧಿಕೃತವಾಗಿ ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಸದಸ್ಯತ್ವವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅನರ್ಹಗೊಳಿಸುವ ಸಾಧ್ಯತೆ ಇದೆ. ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆ ನಡೆಯುವವರೆಗೆ ಹಾಲಿ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಶ್ರವಣ್ ಕುಮಾರ್ ನಾಳ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ, ಹಾಲಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ನೇತೃತ್ವದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸಭೆಗಳು ಮಾತ್ರ ಅಧಿಕೃತ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದ್ದಾರೆ ಎಂದು ವೆಬ್‌ಸೈಟ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ವೈರಲ್ ಆದ ಪರ-ವಿರೋಧ ಹೇಳಿಕೆಗಳು:

ಈ ರೀತಿಯ ಪರ ಮತ್ತು ವಿರೋಧ ರೀತಿಯ ವರದಿಗಳು, ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘ ತಡೆ ನೀಡಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರು ನೀಡಿದ ಹೇಳಿಕೆ ಮತ್ತು ನಮ್ಮದು ಸ್ವತಂತ್ರ ಸಂಸ್ಥೆ, ಯಾವುದೇ ಸಂಘಗಳೊಂದಿಗೆ ನಮ್ಮ ಸಂಘ ಮರ್ಜ್ ಆಗಿಲ್ಲ ಎಂದು ಐ.ಬಿ. ಸಂದೀಪ್ ಕುಮಾರ್ ನೀಡಿದ್ದ ಹೇಳಿಕೆಯೂ ವ್ಯಾಪಕ ವೈರಲ್ ಆಗಿತ್ತು. ಈ ಮಧ್ಯೆ, ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಯ ಕುರಿತು ವರದಿ ಪ್ರಕಟಿಸದೇ ಇರುವುದಕ್ಕೆ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ತಡೆ ನೀಡಿದೆ ಎಂದು ವರದಿ ಮಾಡಿದ್ದಕ್ಕೆ ಅಧ್ಯಕ್ಷ ಸಂದೀಪ್ ಕುಮಾರ್ ಐ.ಬಿ. ಮತ್ತು ಉಚ್ಚಾಟಿತ ಉಪಾಧ್ಯಕ್ಷ ಅನಿಶ್ ಕುಮಾರ್ ಅವರು ವೆಬ್‌ಸೈಟ್ ಸಂಸ್ಥೆಯ ಮುಖ್ಯಸ್ಥರಿಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ ನಂತರ ತರಾಟೆಗೊಳಗಾಗಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಒಟ್ಟು ಈ ಬೆಳವಣಿಗೆಯಿಂದಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ಹೈಡ್ರಾಮ ಮುಂದುವರಿದಿದ್ದು ಸರಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನ ಮತ್ತೆ ಎಲ್ಲರ ಕೇಂದ್ರಬಿಂದುವಾಗಿದೆ.

ಒಟ್ಟು ಘಟನೆಯ ಹಿನ್ನೆಲೆ : ಪತ್ರಕರ್ತರ ಸಂಘದ ಮಹಾಸಭೆ-ಚುನಾವಣೆ ಮುಂದೂಡಿಕೆಯಾಗಿತ್ತು…..:

ಈ ಹಿಂದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಜು. 9ರಂದು ಸಭೆ ನಿಗದಿಯಾಗಿತ್ತು. ಪತ್ರಕರ್ತರ ಸಂಘದ ಲೆಕ್ಕಪತ್ರ ಸರಿಯಾಗಿ ಇಲ್ಲ ಮತ್ತು ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಕಾನೂನು ಪ್ರಕಾರ ನಡೆಯುತ್ತಿಲ್ಲ ಎಂದು ಸದಸ್ಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಾಸಭೆ ಮತ್ತು ಚುನಾವಣಾ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ನಂತರ ಲೆಕ್ಕಪತ್ರ ಪರಿಶೀಲನೆಗಾಗಿ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಸದಸ್ಯ ಉದಯ ಕುಮಾರ್ ಯು.ಎಲ್.ರವರನ್ನು ನೇಮಕ ಮಾಡಲಾಗಿತ್ತು. ಲೆಕ್ಕಪತ್ರ ಪರಿಶೀಲನೆಯ ಕಾರ್ಯ ನಡೆಯುತ್ತಿದ್ದಂತೆಯೇ ಮತ್ತೆ ಚುನಾವಣೆ ನಡೆಸಲು ಕೆಲವು ಸದಸ್ಯರು ಸಿದ್ಧತೆ ನಡೆಸಿದ್ದರು. ಮತ್ತೆ ಸದಸ್ಯರಿಂದ ಆಕ್ಷೇಪ ಬಂದಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಪಡೀಲ್ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿದ್ದರು. ಆ ಬಳಿಕ ಪತ್ರಕರ್ತರ ಸಂಘದ ಕೆಲವು ಸದಸ್ಯರು ಸಂಶುದ್ದೀನ್ ಸಂಪ್ಯರವರನ್ನು ಉಪಚುನಾವಣಾಧಿಕಾರಿ ಎಂದು ಘೋಷಿಸಿಕೊಂಡು ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಿ ಪತ್ರಿಕಾ ಭವನದಲ್ಲಿ ನಾಮಪತ್ರ ಸ್ವೀಕಾರಕ್ಕೆ ಮುಂದಾಗಿದ್ದಾಗ ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ಕಾನೂನು ಬಾಹಿರವಾಗಿ ಮತ್ತು ಅನಧಿಕೃತವಾಗಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ ಎಂದು ತೀರ್ಮಾನಿಸಿ ಇಡೀ ಚುನಾವಣಾ ಪ್ರಕ್ರಿಯೆಯನ್ನು ರದ್ದು ಪಡಿಸಿದ್ದರು. ಬಳಿಕ ತೆರೆ ಮರೆಯಲ್ಲಿ ಕೆಲವು ಚಟುವಟಿಕೆ ನಡೆಯುತ್ತಿತ್ತು. ಈ ವಿವಾದ ತಾರಕಕ್ಕೇರುವುದನ್ನು ಗಮನಿಸಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರ ಏಷ್ಯಾ ಒಕ್ಕೂಟದ ಅಧ್ಯಕ್ಷ ಮದನ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಪತ್ರಿಕಾ ಭವನಕ್ಕೆ ಭೇಟಿ ನೀಡಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಚುನಾವಣೆ ನಡೆಸಲಾಗುವುದು ಎಂದು ಅವರು ಅಂದು ಘೋಷಿಸಿದ್ದರು. ಅಲ್ಲದೆ, ಪುತ್ತೂರು ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಸಲು ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್.ಅವರಿಗೆ ಜವಾಬ್ದಾರಿ ನೀಡಿದ್ದರು. ಬಳಿಕ ರಾಜ್ಯಾಧ್ಯಕ್ಷರ ಸೂಚನೆಯಂತೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಇಬ್ರಾಹಿಂ ಅಡ್ಕಸ್ಥಳ, ಪುಷ್ಪರಾಜ್ ಬಿ.ಯನ್, ಆರಿಫ್ ಪಡುಬಿದ್ರಿ, ಭರತ್‌ರಾಜ್ ಮತ್ತು ರಾಜೇಶ್ ಪೂಜಾರಿ ಅವರು ಪುತ್ತೂರು ಪತ್ರಿಕಾ ಭವನಕ್ಕೆ ಭೇಟಿ ನೀಡಿ ಸಂಘದ ಸದಸ್ಯರ ಅಭಿಪ್ರಾಯ ಆಲಿಸಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನೇತೃತ್ವದ ಸದಸ್ಯರು ಸಭೆಗೆ ಹಾಜರಾಗಿದ್ದರು. ಕಾರ್ಯದರ್ಶಿ ಸಂದೀಪ್ ಕುಮಾರ್ ನೇತೃತ್ವದ ಸದಸ್ಯರು ಗೈರಾಗಿದ್ದರು. ನಂತರ ರಾಜ್ಯ ಮತ್ತು ಜಿಲ್ಲಾ ಸಂಘದ ಪದಾಽಕಾರಿಗಳು ಸಮಾಲೋಚನೆ ನಡೆಸಿ ಪುತ್ತೂರು ಸಂಘಕ್ಕೆ ಡಿಸೆಂಬರ್ 2ನೇ ವಾರದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದ್ದರು. ಈ ಮಧ್ಯೆ ಇದೀಗ ಸಂದೀಪ್ ಕುಮಾರ್ ನೇತೃತ್ವದ ಸದಸ್ಯರು ಸೇರಿ ಪದಾಧಿಕಾರಿಗಳ ಆಯ್ಕೆ ನಡೆಸಿದ್ದಾರೆ. ಶ್ರವಣ್ ಕುಮಾರ್ ನಾಳರವರು ಇದನ್ನು ವಿರೋಧಿಸಿದ್ದು ಪತ್ರಕರ್ತರ ಸಂಘಕ್ಕೆ ಅನಧಿಕೃತವಾಗಿ ಆಯ್ಕೆ ನಡೆಸಲಾಗಿದೆ. ಈ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಪತ್ರಕರ್ತರ ಸಂಘ ತಡೆ ನೀಡಿದೆ. ಮುಂದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆಯ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮತ್ತಷ್ಟು ಕುತೂಹಲ ಸೃಷ್ಠಿಸಿದೆ.

ನಮ್ಮದು ಸ್ವತಂತ್ರ ಸಂಸ್ಥೆ-ಯಾವುದೇ ಸಂಘಗಳೊಂದಿಗೆ ಮರ್ಜ್ ಆಗಿಲ್ಲ-ಸಂದೀಪ್ ಕುಮಾರ್

 

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಣೆಯಾದ ಬಳಿಕ ಸ್ಥಳೀಯ ವೆಬ್‌ಸೈಟೊಂದು ನಡೆಸಿದ ಚಿಟ್‌ಚಾಟ್‌ನಲ್ಲಿ ಮಾತನಾಡಿದ ಐ.ಬಿ.ಸಂದೀಪ್ ಕುಮಾರ್ ಅವರು,ನಮ್ಮ ಸಂಘ ಯಾವುದೇ ಸಂಘಗಳೊಂದಿಗೆ ಮರ್ಜ್ ಆಗಿಲ್ಲ.ನಮ್ಮದು ರಾಜ್ಯ ಸಂಘ ಹುಟ್ಟುವ ಮೊದಲೇ ಹುಟ್ಟಿದ ಸ್ವತಂತ್ರ ಸಂಸ್ಥೆ.ನಮ್ಮ ಸಂಘದ ಕೆಲವರಿಗೆ ರಾಜ್ಯ ಸಂಘವು ಸದಸ್ಯತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಬಂದಾಗ ಅವರಿಗೆ ಗೌರವ ಕೊಡುವ ಕೆಲಸ ಮಾಡಿದ್ದೇವೆ. ಜಿಲ್ಲಾ ಸಂಘದವರು ಬಂದಾಗಲೂ ಅವರಿಗೆ ಗೌರವ ನೀಡಿದ್ದೇವೆ. ಈ ಮಾತುಕತೆ ಕೇವಲ ಔಪಚಾರಿಕತೆಯ ಚೌಕಟ್ಟನ್ನು ಮಾತ್ರ ಹೊಂದಿದೆ ಎಂದು ಹೇಳಿದ್ದಾರೆ.‌

ಹಣ ದುರುಪಯೋಗದ ಕುರಿತು ವೆಬ್‌ಸೈಟ್ ವರದಿಗಾರ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಂದೀಪ್ ಕುಮಾರ್, ಕೋತಿ ಬೆಣ್ಣೆ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಈ ಆರೋಪ. ಸಂಘದ ಅಧ್ಯಕ್ಷನಾಗಿದ್ದವನೊಬ್ಬ ಮಾಡಿದ ಕಿತಾಪತಿ ಇದು.ಸಂಘದ ಕಚೇರಿಯನ್ನು ಸುಂದರಗೊಳಿಸುವ ಸಂದರ್ಭದ ಸಮರ್ಪಕ ಲೆಕ್ಕಾಚಾರ ನೀಡಿಲ್ಲ.ಮುಂದೆ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.ಅಧ್ಯಕ್ಷನಾಗಿದ್ದ ಒಬ್ಬನ ಕ್ಷುಲ್ಲಕ ಮಾನಸಿಕತೆಯಿಂದ ಸಂಘದ ಬಗ್ಗೆ ಅಪಪ್ರಚಾರ ನಡೆಸುವ ಕಾರ್ಯ ನಡೆಯಿತು.ಸಂಘದ ಗೌರವಾನ್ವಿತ ಸದಸ್ಯರ ಬಗ್ಗೆ ಲೋಕಲ್ ಪತ್ರಿಕೆಯಲ್ಲಿ ಬರೆಯಿಸುವ ಕೀಳು ಮಟ್ಟದ ವ್ಯವಸ್ಥೆ ಆಗಿತ್ತು ಎಂದು ಹೇಳಿದ್ದಾರೆ.

ಪುತ್ತೂರು ಸಂಘದ ಪದಾಧಿಕಾರಿಗಳ ಆಯ್ಕೆಗೆ ರಾಜ್ಯ ಸಂಘ ತಡೆ ನೀಡಿದೆ-ಶ್ರವಣ್ ಕುಮಾರ್

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ಕುರಿತು ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರನ್ನು ಸಂಪರ್ಕಿಸಿದಾಗ, ಇದೊಂದು ತಮಾಷೆಗಾಗಿ ಮಾಡಿರುವ ನಾಟಕವಾಗಿರಬಹುದು ಅಥವಾ ಅವ್ಯವಹಾರ ಮತ್ತು ಬ್ಲ್ಯಾಕ್ ಮೇಲ್ ಮುಂದುವರಿಸಲು ಸಂಘವನ್ನು ಮುಖ್ಯವಾಗಿ ಪತ್ರಿಕಾಭವನವನ್ನು ವಶಪಡಿಸಿಕೊಳ್ಳುವ ಹುನ್ನಾರ ಇರಬಹುದು ಎಂದು ಪ್ರತಿಕ್ರಿಯಿಸಿದ್ದಾರಲ್ಲದೆ, ಈಗಲೂ ನಾನೇ ಅಧ್ಯಕ್ಷ,ನನ್ನ ನೇತೃತ್ವದಲ್ಲಿಯೇ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದೆ ಎಂದು ಹೇಳಿದ್ದಾರೆ. ರಾಜ್ಯಪತ್ರಕರ್ತರ ಸಂಘ ತಡೆ ನೀಡಿದೆ.8 ಜನರ ಗುಂಪು ಸೇರಿ ನಡೆಸಿದ ಚುನಾವಣೆಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ.ಈ ಬಗ್ಗೆ ಸ್ವಯಂಘೋಷಿತವಾಗಿ ಯಾರೋ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿದೆ.ಯಾರೂ ಗೊಂದಲ ಪಡುವ ಅಗತ್ಯ ಇಲ್ಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ ಜಿಲ್ಲಾ ವಾರ್ತಾ ಅಧಿಕಾರಿ: 8050793904, ಶ್ರವಣ್‌ಕುಮಾರ್ ನಾಳ: 9972717201(ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ), ಶ್ರೀನಿವಾಸ ಇಂದಾಜೆ: 9844060543 (ಜಿಲ್ಲಾಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ)ಶಿವಾನಂದ ತಗಡೂರು: 9845087374 (ರಾಜ್ಯಾಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ) ಎಂದು ಶ್ರವಣ್ ಕುಮಾರ್ ಪ್ರಕಟಣೆ ನೀಡಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

LEAVE A REPLY

Please enter your comment!
Please enter your name here