ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ “ಕಾನೂನು ವಿದ್ಯಾಭ್ಯಾಸ ಪರಿಚಯ” ಕಾರ್ಯಾಗಾರ

0

ಸಾಧನೆಗೆ ಸ್ಪಷ್ಟ ಗುರಿ, ಪ್ರಯತ್ನ ಅವಶ್ಯ: ವಿಜಯನಾರಾಯಣ ಕೆ.ಎಂ

ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಬೇಕಾದ ಎಲ್ಲಾ ರೀತಿಯ ಅವಕಾಶಗಳು ನಮ್ಮ ಮಹಾವಿದ್ಯಾಲಯದಲ್ಲಿ ಮೌಲ್ಯಯುತ ಶಿಕ್ಷಣ ವ್ಯವಸ್ಥೆಯಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ ಎಂ ಹೇಳಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಕಾನೂನು ವಿದ್ಯಾಭ್ಯಾಸ ಪರಿಚಯ ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಯುವ ಜನತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಜ್ಞಾನ, ಕೌಶಲ್ಯ, ನೈಪುಣ್ಯತೆ ಅಗತ್ಯ. ಪ್ರತಿಯೊಬ್ಬರಿಗೊ ಉತ್ತಮ ಕಲಿಕೆಗೆ ಸಂಪೂರ್ಣ ಅವಕಾಶವಿರುತ್ತದೆ. ಅದನ್ನು ಗುರುತಿಸಿ ಸದ್ಬಳಕೆ ಮಾಡಿಕೊಳ್ಳುವ ನೈಪುಣ್ಯತೆ ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಿವರಾಮ್ ಶರ್ಮಾ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಗುರಿ ಹೊಂದಿದ್ದಲ್ಲಿ ಬದುಕಿನಲ್ಲಿ ಯಶಸ್ಸು, ಕೀರ್ತಿ ಸಂಪಾದಿಸಬಹುದು. ಕ್ರಿಯಾಶೀಲತೆ ಮತ್ತು ಚೈತನ್ಯ ಯುವ ಜನತೆಗೆ ಅಗತ್ಯ. ಅಂತಹ ಎಲ್ಲಾ ಗುಣ ಸಾಮರ್ಥ್ಯಗಳನ್ನು ಬೆಳೆಸಿಕೊಂಡು, ಇಂದಿನಿಂದಲೇ ಕಠಿಣ ಪ್ರಯತ್ನಗಳ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಜ್ಯೋತಿ ರಾವ್, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ಉಪಸ್ಥಿತರಿದ್ದರು. ಪ್ರಥಮ ಬಿ.ಎ. ಎಲ್.ಎಲ್.ಬಿ ಹಾಗೂ ಎಲ್.ಎಲ್.ಬಿ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಪ್ರಾಂಶುಪಾಲರಾದ ಅಕ್ಷತಾ ಎ.ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದ್ದು, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಭಾಷಿಣಿ ಜೆ ವಂದಿಸಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಪ್ರಾರ್ಥಿಸಿ, ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಂಧ್ಯಾ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಇಂದಿನ ಅನಿವಾರ್ಯವಾಗಿರುವ ಮೌಲ್ಯಯುತ ಶಿಕ್ಷಣವು ಮಾನವನ ಅಂತರಂಗದಲ್ಲಿ ಹುದುಗಿರುವ ಸಂಪತ್ತು. ಮೌಲ್ಯಯುತ ಶಿಕ್ಷಣ ಪ್ರತಿಯೊಂದು ಸಮಾಜದ ಮಕ್ಕಳಿಗೆ ಜ್ಞಾನ, ತಿಳಿವಳಿಕೆ ಮತ್ತು ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಅವರು ಉತ್ತಮ ನಾಗರಿಕರಾಗಲು ಕೆಲವು ಗುಣಗಳನ್ನು ಬೆಳೆಸಲು ಅಪೇಕ್ಷಿಸುತ್ತದೆ. ಶಿಕ್ಷಣದ ಮೂಲಕ ಕಲಿಸುವ ನೈತಿಕತೆಯು ಅವರ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ. ಅಂತಹ ಮೌಲ್ಯಯುತವಾದ ಕಾನೂನು ಶಿಕ್ಷಣವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಸತತವಾಗಿ ನೀಡುತ್ತಿದ್ದು, ನೂತನವಾಗಿ ಸೇರ್ಪಡೆಗೊಂಡಿರುವ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

ವಿಜಯನಾರಾಯಣ ಕೆ.ಎಂ. ಸಂಚಾಲಕರು
ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು

LEAVE A REPLY

Please enter your comment!
Please enter your name here