ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾ| ಘಟಕಕ್ಕೆ ದ.5ರಂದು ಚುನಾವಣೆ

0

ನ.24: ಪತ್ರಿಕಾ ಭವನದಲ್ಲಿ ಮತದಾರರ ಪಟ್ಟಿ ಪ್ರಕಟ ನ.25: ಮತದಾರರ ಅಂತಿಮ ಪಟ್ಟಿ ಘೋಷಣೆ ನ.26-29: ನಾಮಪತ್ರ ಸಲ್ಲಿಕೆಗೆ ಅವಕಾಶ ನ.29: ನಾಮಪತ್ರ ಪರಿಶೀಲನೆ ನ.29: ನಾಮಪತ್ರ ವಾಪಸ್ ಪಡೆಯಲು ಕೊನೇಯ ದಿನ,ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟ

[box type=”info” bg=”#” color=”#” border=”#” radius=”8″]ಚುನಾವಣಾ ವೇಳಾಪಟ್ಟಿ
ನ.24:ಚುನಾವಣಾ ಅಧಿಸೂಚನೆ, ಮತದಾರರ ಪಟ್ಟಿ ಪ್ರಕಟಣೆ ನ.25:ಮತದಾರರ ಅಂತಿಮ ಪಟ್ಟಿ ಪ್ರಕಟ ನ.26-29:ನಾಮಪತ್ರ ಸಲ್ಲಿಕೆ(ಬೆಳಿಗ್ಗೆ 11ರಿಂದ ಅಪರಾಹ್ನ 1 ಗಂಟೆಯವರೆಗೆ). ನ.29:ನಾಮಪತ್ರ ಪರಿಶೀಲನೆ ಮತ್ತು ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟ. ನ.29:ನಾಮಪತ್ರ ವಾಪಾಸು ಪಡೆಯುವ ಕೊನೆಯ ದಿನ (ಅಪರಾಹ್ನ 1 ಗಂಟೆಯ ಒಳಗೆ). ನ.29:ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ.[/box]

ಚುನಾವಣೆ: ದ.5ರ ಬೆಳಿಗ್ಗೆ 11ರಿಂದ 2 ಗಂಟೆಯವರೆಗೆ.
ಮತ ಎಣಿಕೆ: ದ.5 ಮಧ್ಯಾಹ್ನ 3 ಗಂಟೆಯಿಂದ.

 

ಪುತ್ತೂರು:ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆ.ಯು.ಡಬ್ಲೂ.ಜೆ.)ದ ಪುತ್ತೂರು ತಾಲೂಕು ಘಟಕದ 2022-2025ನೇ ಸಾಲಿನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5ರಂದು ಚುನಾವಣೆ ನಿಗದಿಯಾಗಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಘಟಕಕ್ಕೆ ಚುನಾವಣೆ ನಡೆಸಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯ ಪ್ರಕಾರ ನ.23ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಬಳಿ ವಾರ್ತಾ ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5ರಂದು ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು ಅದೇ ದಿನ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ.ಚುನಾವಣಾ ಪ್ರಕ್ರಿಯೆಗಳು ಪತ್ರಿಕಾ ಭವನದಲ್ಲಿಯೇ ನಡೆಯಲಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದಿರುವ 36 ಮಂದಿ ಪುತ್ತೂರು ತಾಲೂಕು ಸಂಘದಲ್ಲಿ ಸದಸ್ಯರಾಗಿದ್ದಾರೆ.ಈ ಪೈಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು 26 ಸದಸ್ಯರು ಅವಕಾಶ ಪಡೆದಿದ್ದಾರೆ. ಪತ್ರಕರ್ತರ ಸಂಘದ ಒಂದು ಅಧ್ಯಕ್ಷ ಸ್ಥಾನ, ಒಂದು ಪ್ರಧಾನ ಕಾರ್ಯದರ್ಶಿ, ಎರಡು ಕಾರ್ಯದರ್ಶಿ, ಎರಡು ಉಪಾಧ್ಯಕ್ಷ, ಒಂದು ಖಜಾಂಜಿ ಮತ್ತು ಕಾರ್ಯಕಾರಿಣಿಯ ಎಂಟು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ಎರಡು ಸಾವಿರ ರೂ., ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಖಜಾಂಜಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ತಲಾ 15೦೦ ರೂ ಮತ್ತು ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ತಲಾ 5೦೦ ರೂ. ಠೇವಣಿ ಇರಿಸಬೇಕಿದೆ. ನಾಮಪತ್ರ ಹಿಂಪಡೆದವರನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಠೇವಣಿ ಹಣ ಮರುಪಾವತಿ ಮಾಡಲಾಗುವುದಿಲ್ಲ.

ಒಬ್ಬ ಅಭ್ಯರ್ಥಿಯು ಪದಾಧಿಕಾರಿ ಹುದ್ದೆ ಅಥವಾ ಕಾರ್ಯಕಾರಿ ಸಮಿತಿ ಸದಸ್ಯತ್ವ ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಸ್ಪರ್ಧಿಸಬಹುದು.ಸ್ಪರ್ಧಿಸುವವರು ಮತ್ತು ಮತದಾನ ಮಾಡುವ ಸದಸ್ಯರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರನ್ನು ಹೊಂದಿರಬೇಕು.ಪ್ರತಿಯೊಂದು ನಾಮಪತ್ರದಲ್ಲಿಯೂ ಸೂಚನೆ, ಸದಸ್ಯರಿಂದ ಅನುಮೋದನೆ ಪಡೆದಿರುವುದು ಅವಶ್ಯಕ. ಚುನಾವಣೆಗೆ ಸ್ಪರ್ಧಿಸುವವರು ಯಾವುದೇ ರಾಜಕೀಯ ಪಕ್ಷದ ಪಾಥಮಿಕ ಸದಸ್ಯತ್ವವನ್ನಾಗಲಿ, ಅಧಿಕಾರದ ಹುದ್ದೆಗಳನ್ನು ಹೊಂದಿರಬಾರದು.ಮತದಾನ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಂತರವಾಗಿ ಎರಡು ಅವಧಿ(2021-22 ಮತ್ತು 2022-23)ಯಲ್ಲಿ ಸದಸ್ಯತ್ವವನ್ನು ಹೊಂದಿರಬೇಕು.

ಚುನಾವಣಾ ತಂಡ ನಿಯೋಜನೆ: ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಸೂಚನೆಯ ಪ್ರಕಾರ ಚುನಾವಣಾ ತಂಡವನ್ನು ನಿಯೋಜಿಸಲಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಅವರು ಚುನಾವಣಾ ಅಧಿಕಾರಿಯಾಗಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪ್ಪಳ್ಳಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಽಕಾರಿ ಪುಷ್ಪರಾಜ್ ಬಿ.ಎನ್.ಅವರು ಚುನಾವಣಾ ಉಸ್ತುವಾರಿಯಾಗಿ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಚುನಾವಣಾ ಮೇಲುಸ್ತುವಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.ಚುನಾವಣಾ ವೀಕ್ಷಕರಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕಾರ್ಯಕಾರಿ ಸಮಿತಿ ಸದಸ್ಯರಾದ ಮುಹಮ್ಮದ್ ಆರಿಫ್ ಪಡುಬಿದ್ರೆ,ಭರತ್‌ರಾಜ್ ಉಪಾಧ್ಯಕ್ಷ ರಾಜೇಶ್ ಕೆ.ಪೂಜಾರಿ ಹಾಗೂ ಚುನಾವಣಾ ನೋಡಲ್ ಅಧಿಕಾರಿಯಾಗಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಅವರು ಕಾರ್ಯನಿರ್ವಹಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ (ಮೊ.೯೪೪೮೫೨೯೯೭೦) ಮತ್ತು ಸಹಾಯಕ ಚುನಾವಣಾಧಿಕಾರಿ ಗಂಗಾಧರ ಕಲ್ಲಪಳ್ಳಿ (ಮೊ.೯೪೪೮೭೨೫೪೪೨)ಅವರನ್ನು ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಈ ಚುನಾವಣೆಯ ಕೇಂದ್ರ ಬಿಂದು ಪತ್ರಿಕಾ ಭವನ? ಯಾರ ಪಾಲಾಗಲಿದೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕಕ್ಕೆ ಚುನಾವಣೆ ನಿಗದಿಯಾಗುವುದರೊಂದಿಗೆ ಪುತ್ತೂರಿನ ಪತ್ರಿಕಾ ಭವನ ಮುಂದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡುವಂತಾಗಿದೆ. ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮತ್ತು ಇತರ ಪದಾಧಿಕಾರಿಗಳು ಅಧಿಕಾರದಲ್ಲಿರುವ ನಡುವೆಯೇ ನ.19ರಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ 8 ಮಂದಿ ಐ.ಬಿ.ಸಂದೀಪ್ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಅವರಲ್ಲಿ 6 ಮಂದಿಯನ್ನು ಸಂಘದ ಪದಾಧಿಕಾರಿಗಳೆಂದು ಘೋಷಿಸಿಕೊಂಡಿದ್ದಾರೆ ಮತ್ತು ಅವರ ಸಂಘದ ಚಟುವಟಿಕೆಗಳಿಗೆ ಖ್ಯಾತ ವಕೀಲ ಬಿ.ನರಸಿಂಹಪ್ರಸಾದ್ ಅವರನ್ನು ಕಾನೂನು ಸಲಹೆಗಾರರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮದು ಸ್ವತಂತ್ರ ಸಂಸ್ಥೆ,ನಾವು ಯಾವುದೇ ಸಂಘದ ಅಧೀನದಲ್ಲಿ ಇಲ್ಲ ಎಂದು ಹೇಳಿಕೊಂಡು ಜಿಲ್ಲಾ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ ಇಂದಾಜೆಯವರಿಗೆ ಆ ಬಗ್ಗೆ ಪತ್ರ ಬರೆದಿದ್ದಾರೆ. ಪತ್ರಿಕಾ ಭವನವೂ ಸದ್ಯ ಈ ತಂಡದ ವಶದಲ್ಲಿದ್ದು ಅಲ್ಲಿ ಸಂಗ್ರಹವಾಗಿರುವ ಪತ್ರಿಕಾಗೋಷ್ಠಿಯ ಮತ್ತಿತರ ಹಣವನ್ನು ಇದೇ ತಂಡ ಅನುಭವಿಸಿಕೊಂಡು ಬರುತ್ತಿದೆ. ಈ ತಂಡದ ಕೆಲವರು ಪತ್ರಿಕಾ ಭವನವನ್ನು ದುರುಪಯೋಗಪಡಿಸಿಕೊಂಡಿರುವುದು, ಹಣದ ಲೆಕ್ಕಾಚಾರದಲ್ಲಿ ಅವ್ಯವಹಾರ ನಡೆದಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿರುವ ಪುತ್ತೂರು ತಾಲೂಕು ಘಟಕಕ್ಕೆ ಅಧಿಕೃತವಾಗಿ ಚುನಾವಣೆ ನಿಗದಿಯಾಗಿದೆ. (ಈ ಸಂಘಕ್ಕೆ ಕಾನೂನು ಸಲಹೆಗಾರರು ಯಾರೆಂದು ತಿಳಿದುಬಂದಿಲ್ಲ.) ಹಲವಾರು ಹೈಡ್ರಾಮಾಗಳಿಗೆ ಕಾರಣವಾಗಿರುವ ಪುತ್ತೂರಿನ ಪತ್ರಿಕಾ ಭವನ ಈ ಎರಡು ಸಂಘಗಳ ಪೈಕಿ ಇನ್ನು ಮುಂದೆ ಯಾವ ಸಂಘದವರ ಪಾಲಾಗಲಿದೆ ಎನ್ನುವ ಸಹಜ ಕುತೂಹಲ ಸಾರ್ವಜನಿಕರಲ್ಲಿದೆ. ಈ ಚುನಾವಣೆ ಸುಗಮವಾಗಿ ನಡೆಯಲಿದೆಯೇ? ಅಡ್ಡಿ ಆತಂಕಗಳು ಎದುರಾಗಲಿದೆಯೇ? ಎಂಬ ಪ್ರಶ್ನೆಯೂ ಜನರಲ್ಲಿದೆ.

LEAVE A REPLY

Please enter your comment!
Please enter your name here